IPL: ಪ್ರತಿ ಓವರ್‌ಗೆ 2 ಬೌನ್ಸರ್‌, DRS ಬದಲಿಗೆ SRS,‌ ಸ್ಟಾಪ್‌ಕ್ಲಾಕ್‌ ಇಲ್ಲ; ಐಪಿಎಲ್ 2024ರ ಹೊಸ ನಿಯಮಗಳು ಹೀಗಿವೆ
ಕನ್ನಡ ಸುದ್ದಿ  /  ಕ್ರಿಕೆಟ್  /  Ipl: ಪ್ರತಿ ಓವರ್‌ಗೆ 2 ಬೌನ್ಸರ್‌, Drs ಬದಲಿಗೆ Srs,‌ ಸ್ಟಾಪ್‌ಕ್ಲಾಕ್‌ ಇಲ್ಲ; ಐಪಿಎಲ್ 2024ರ ಹೊಸ ನಿಯಮಗಳು ಹೀಗಿವೆ

IPL: ಪ್ರತಿ ಓವರ್‌ಗೆ 2 ಬೌನ್ಸರ್‌, DRS ಬದಲಿಗೆ SRS,‌ ಸ್ಟಾಪ್‌ಕ್ಲಾಕ್‌ ಇಲ್ಲ; ಐಪಿಎಲ್ 2024ರ ಹೊಸ ನಿಯಮಗಳು ಹೀಗಿವೆ

IPL 2024 New Rules: ಐಪಿಎಲ್ 2024ರ ಹೊಸ ಆವೃತ್ತಿಯಲ್ಲಿ ಕೆಲವೊಂದು ನಿಯಮಗಳಲ್ಲಿ ಬದಲಾವಣೆಯಾಗಲಿವೆ. ಕಳೆದ ಆವೃತ್ತಿಯಲ್ಲಿ ಅನುಸರಿಸಲಾದ ನಿಯಮಗಳು ಈ ಬಾರಿ ಬದಲಾಗಿವೆ. ಸ್ಮಾರ್ಟ್‌ ರಿಪ್ಲೈ ಸಿಸ್ಟಮ್‌, ಎರಡು ಬೌನ್ಸರ್‌ ಸೇರಿದಂತೆ ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಬದಲಾದ ನಿಯಮಗಳು ಹೀಗಿವೆ.

ಐಪಿಎಲ್ 2024ರ ಹೊಸ ನಿಯಮಗಳು ಹೀಗಿವೆ
ಐಪಿಎಲ್ 2024ರ ಹೊಸ ನಿಯಮಗಳು ಹೀಗಿವೆ (IPL)

ಇಂಡಿಯನ್ ಪ್ರೀಮಿಯರ್ ಲೀಗ್‌ 2024ರ ಆವೃತ್ತಿಯಲ್ಲಿ ಕೆಲವೊಂದು ಹೊಸ ನಿಯಮಗಳನ್ನು ನೋಡಬಹುದು. ಬೌಲರ್‌ಗಳು ಪ್ರತಿ ಓವರ್‌ನಲ್ಲಿ ಎರಡು ಬೌನ್ಸರ್‌ಗಳನ್ನು ಎಸೆಯುವ ಅವಕಾಶ ನೀಡಲಾಗಿದೆ. ಈ ಹಿಂದೆ ಓವರ್‌ ಒಂದರಲ್ಲಿ ಕೇವಲ ಒಂದು ಶಾರ್ಟ್‌ ಬಾಲ್‌ ಎಸೆಯಲು ಮಾತ್ರ ಅವಕಾಶವಿತ್ತು. ಈ ಬಾರಿಯ ಐಪಿಎಲ್‌ನಲ್ಲಿ ಫೀಲ್ಡಿಂಗ್‌ ಮಾಡುವ ತಂಡದ ಬೌಲರ್‌ಗಳಿಗೆ ಇಲ್ಲಿ ಅವಕಾಶ ಹೆಚ್ಚಿದೆ. ಆರಂಭದಲ್ಲಿ, 2023-24ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಈ ನಿಯಮವನ್ನು ಬಿಸಿಸಿಐ ಪರಿಚಯಿಸಿತು. ಟಿ20 ಪಂದ್ಯಗಳಲ್ಲಿ ಒಂದು ಶಾರ್ಟ್‌ ಬಾಲ್‌ ಎಸೆತದ ಐಸಿಸಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಇದೇ ವೇಳೆ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಪ್ರತಿ ಓವರ್‌ನಲ್ಲಿ ಎರಡು ಬೌನ್ಸರ್‌ಗಳನ್ನು ಎಸೆಯಲು ಅನುಮತಿ ಇದೆ.

ಪಂದ್ಯಗಳ ಸಮಯದಲ್ಲಿ ಸ್ಟಂಪಿಂಗ್‌ಗಾಗಿ ಮೇಲ್ಮನವಿ ಸಲ್ಲಿಸಿದಾಗ ಕ್ಯಾಚ್ ಅನ್ನು ಪರಿಶೀಲಿಸುವ ನಿಯಮವನ್ನು ಉಳಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ. ಈ ನಿರ್ಧಾರವು ಐಸಿಸಿ ನಿಯಮಗಳಿಂದ ಭಿನ್ನ. ಐಸಿಸಿ ನಿಯಮಗಳ ಪ್ರಕಾರ, ಆನ್-ಫೀಲ್ಡ್ ಅಂಪೈರ್ ಸ್ಟಂಪಿಂಗ್ ಮನವಿ ಬಂದಾಗ, ಸ್ಟಂಪಿಗ್‌ ಮತ್ರವೇ ಪರಿಶೀಲಿಸುತ್ತಾರೆ. ಕ್ಯಾಚ್‌ ಪರಿಶೀಲನೆ ಮಾಡುವುದಿಲ್ಲ. ಸ್ಟಂಪಿಂಗ್ ನಿರ್ಧಾರವನ್ನು ಅಂತಿಮಗೊಳಿಸುವುದಕ್ಕೂ ಮುನ್ನ, ವಿಕೆಟ್‌ ಕೀಪರ್ ಕ್ಯಾಚ್‌ ಪಡೆದಿದ್ದಾರೆಯೇ ಎಂಬುದನ್ನು ಪರಿಶೀಲನೆ ಮಾಡುವ ಅವಕಾಶವನ್ನು ಸೇರಿಸುವ ಮೂಲಕ, ಬಿಸಿಸಿಐ ಇನ್ನಷ್ಟು ನಿಖರ ತೀರ್ಮಾನವನ್ನು ಖಚಿತಪಡಿಸಿದೆ.

ಈ ಬಾರಿಯೂ ಪ್ರತಿ ತಂಡಗಳು ಎರಡು ವಿಮರ್ಶೆ (reviews) ಅವಕಾಶಗಳನ್ನು ಉಳಿಸಿಕೊಳ್ಳುತ್ತವೆ. ಜೊತೆಗೆ ವೈಡ್ ಮತ್ತು ನೋ ಬಾಲ್‌ಗಳನ್ನು ಕೂಡಾ ಮತ್ತೊಮ್ಮೆ ಪರಿಶೀಲಿಸುವ ಅವಕಾಶ ಪಡೆಯುತ್ತವೆ. ಈ ನಿಯಮವನ್ನು ಕಳೆದ ವರ್ಷದ ಆವೃತ್ತಿಯಲ್ಲಿ ಪರಿಚಯಿಸಲಾಗಿತ್ತು.‌

ಹೊಸ ಸ್ಟಾಪ್‌ಕ್ಲಾಕ್‌ ನಿಯಮ ಇಲ್ಲ

ಸ್ಟಾಪ್ ಕ್ಲಾಕ್ ನಿಯಮವನ್ನು ಅಳವಡಿಸಿಕೊಳ್ಳದಿರಲು ಬಿಸಿಸಿಐ ನಿರ್ಧರಿಸಿದೆ. ಇತ್ತೀಚೆಗಷ್ಟೇ ಐಸಿಸಿ ಹೊಸ ಸ್ಟಾಪ್‌ಕ್ಲಾಕ್‌ ನಿಯಮ ಪರಿಚಯಿಸಿತು. ಮುಂಬರುವ ಜೂನ್‌ ತಿಂಗಳಿಂದ ವೈಟ್ ಬಾಲ್ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸ್ಟಾಪ್‌ ಕ್ಲಾಕ್‌ ನಿಯಮ ಕಡ್ಡಾಯವಿರಲಿದೆ. ಸಮಯಕ್ಕೆ ಸರಿಯಾಗಿ ಪಂದ್ಯಗಳನ್ನು ನಡೆಸುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗುತ್ತಿದೆ. ಆದರೆ, ಐಪಿಎಲ್‌ನಲ್ಲಿ ಈ ನಿಯಮ ಆರಂಭಿಸುವ ಕುರಿತು ಬಿಸಿಸಿಐ ಖಚಿತಪಡಿಸಿಲ್ಲ.

ಡಿಆರ್‌ಎಸ್‌ ಬದಲಿಗೆ ಸ್ಮಾರ್ಟ್ ರಿಪ್ಲೇ ಸಿಸ್ಟಮ್

ಈ ಬಾರಿಯ ಟೂರ್ನಿಯಲ್ಲಿ ಡಿಆರ್‌ಎಸ್‌ ಬದಲಿಗೆ ಸ್ಮಾರ್ಟ್ ರಿಪ್ಲೇ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಅಂಪೈರ್‌ಗಳ ನಿರ್ಧಾರದ ವೇಗ ಮತ್ತು ನಿಖರತೆಯನ್ನು ಹೆಚ್ಚಿಸಲು, ಟಿವಿ ಅಂಪೈರ್ ಈಗ ಒಂದೇ ಕೋಣೆಯಲ್ಲಿ ಕುಳಿತು ಪಕ್ಕದಲ್ಲಿ ಕುಳಿತಿರುವ ಹಾಕ್-ಐ ವ್ಯವಸ್ಥೆಯ ವೇಗವಾಗಿ ನಿರ್ಧಾರಕ್ಕೆ ಬರುತ್ತಾರೆ. ಈ ವಿಧಾನದಲ್ಲಿ ಡಿಆರ್‌​​ಎಸ್‌​​ನಂತೆ ಯಾವುದೇ ಗೊಂದಲಗಳು ಆಗದಂತೆ ಅಂತಿಮ ತೀರ್ಪು ಪ್ರಕಟವಾಗಲಿದೆ.

ಇದನ್ನೂ ಓದಿ | Explained: ಐಪಿಎಲ್​ನಲ್ಲಿ ಡಿಆರ್​​ಎಸ್ ಬದಲಿಗೆ ಸ್ಮಾರ್ಟ್ ರಿಪ್ಲೆ ಸಿಸ್ಟಂ; ಎಸ್​ಆರ್​ಎಸ್ ಹೇಗೆ ಕೆಲಸ ಮಾಡುತ್ತದೆ?

ಈ ಹಿಂದೆ ಇದ್ದ ಡಿಆರ್‌ಎಸ್‌ನಂತೆ ಇಲ್ಲೂ ಆನ್‌ ಫೀಲ್ಡ್​ ಅಂಪೈರ್ 3ನೇ ಅಂಪೈರ್‌​ಗೆ ಮೇಲ್ಮನವಿ ಸಲ್ಲಿಸುತ್ತಾರೆ. ಆದರೆ, ಇಲ್ಲಿ ಥರ್ಡ್‌ ಅಂಪೈರ್‌ಗೆ ಇನ್‌​​ಪುಟ್ ಸಿಗುವವರೆಗೂ ಕಾಯಬೇಕಿಲ್ಲ. ಅದರ ಬದಲಾಗಿ ಹೊಸ ತಂತ್ರಜ್ಞಾನದ ಮೂಲಕ ವೇಗವಾಗಿ ತೀರ್ಪು ನೀಡಲಾಗುತ್ತದೆ. ಹೊಸ ತಂತ್ರಜ್ಞಾನವುಳ್ಳ ಹಾಕ್​-ಐ ಅಪರೇಟ್‌​ಗಳ ನೆರವಿನಿಂದ ತಕ್ಷಣವೇ ಥರ್ಡ್‌ ಅಂಪೈರ್ ತೀರ್ಪು ಕೊಡಬಹುದು. ಮೈದಾನದ ಸುತ್ತಲೂ ವಿವಿಧ ಭಾಗಗಳಲ್ಲಿ ಇರಿಸಲಾಗಿರುವ ಹಾಕ್-ಐ ತಂತ್ರಜ್ಞಾನದ ಎಂಟು ಹೈಸ್ಪೀಡ್ ಕ್ಯಾಮರಾಗಳು ಈ ನಿಖರ ತೀರ್ಪಿಗೆ ನೆರವಾಗಲಿದೆ.

ಹೈಸ್ಪೀಡ್​ ಕ್ಯಾಮರಾಗಳಿಂದ ದೃಶ್ಯದ ತ್ವರಿತ ವಿಶ್ಲೇಷಣೆ ಮತ್ತು ವೇಗವಾಗಿ ಚಿತ್ರಗಳನ್ನು ಒದಗಿಸಲು ಟಿವಿ ಅಂಪೈರ್ ಜೊತೆಗೆ ಇಬ್ಬರು ಹಾಕ್-ಐ ಆಪರೇಟರ್‌​ಗಳನ್ನು ನಿಯೋಜಿಸಿರಲಾಗುತ್ತದೆ. ಥರ್ಡ್ ಅಂಪೈರ್ ಮತ್ತು ಹಾಕ್​-ಐ ಆಪರೇಟರ್‌​​ಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಿದ್ದ ಟಿವಿ ಪ್ರಸಾರಕರು ಈ ನೂತನ ಪದ್ದತಿಯಲ್ಲಿ ಅಗತ್ಯವಿರುವುದಿಲ್ಲ. ಅದರ ಬದಲಾಗಿ, ಹಾಕ್​-ಐ ಆಪರೇಟರ್‌​​​ಗಳು ಸ್ಪ್ಲಿಟ್-ಸ್ಕ್ರೀನ್‌ ಮೂಲಕ ವಿಮರ್ಷೆಯ ಪರಿಶೀಲನೆ ನಡೆಸುತ್ತಾರೆ. ಬಂದ ಇನ್‌ಪುಟ್‌ ಬಳಸಿಕೊಂಡು ಬೇಗನೆ ನಿರ್ಧಾರ ಪ್ರಕಟಿಸುತ್ತಾರೆ.

Whats_app_banner