ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಪಾಕಿಸ್ತಾನ ಪಂದ್ಯಕ್ಕೆ ಹೇಗಿರಲಿದೆ ನ್ಯೂಯಾರ್ಕ್‌ ಪಿಚ್; ಕ್ಯುರೇಟರ್‌ಗೂ ಗೊಂದಲವಿದೆ ಎಂದ ರೋಹಿತ್ ಶರ್ಮಾ

ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಹೇಗಿರಲಿದೆ ನ್ಯೂಯಾರ್ಕ್‌ ಪಿಚ್; ಕ್ಯುರೇಟರ್‌ಗೂ ಗೊಂದಲವಿದೆ ಎಂದ ರೋಹಿತ್ ಶರ್ಮಾ

India vs Pakistan: ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಟಿ20 ವಿಶ್ವಕಪ್‌ ರೋಚಕ ಹಣಾಹಣಿಗೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಪಂದ್ಯಕ್ಕೂ ಮುನ್ನ ಅಭಿಮಾನಿಗಳು ಮಾತ್ರವಲ್ಲದೆ ಉಭಯ ತಂಡಗಳ ಆಟಗಾರರಿಗೂ ದೊಡ್ಡ ಗೊಂದಲವಿದೆ. ಪಂದ್ಯದ ನಡೆಯುವ ನ್ಯೂಯಾರ್ಕ್‌ ಪಿಚ್‌ ಹೇಗಿರಲಿದೆ ಎಂಬುದೇ ಸದ್ಯದ ಕುತೂಹಲ.

ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಹೇಗಿರಲಿದೆ ನ್ಯೂಯಾರ್ಕ್‌ ಪಿಚ್
ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಹೇಗಿರಲಿದೆ ನ್ಯೂಯಾರ್ಕ್‌ ಪಿಚ್ (Surjeet Yadav)

ಯುಎಸ್‌ಎ ಸಹ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಪಂದ್ಯಾವಳಿ ಹಲವು ಕಾರಣಗಳಿಂದಾಗಿ ಭಾರತೀಯರಿಗೆ ನೀರಸವಾಗಿದೆ. ಅಮೆರಿಕ ಹಾಗೂ ಭಾರತೀಯ ಕಾಲಮಾನದ ಪ್ರಕಾರ ಪಂದ್ಯದ ಸಮಯದಲ್ಲಿ ವ್ಯತ್ಯಾಸ ಒಂದೆಡೆಯಾದರೆ, ನಿಧಾನಗತಿಯ ಪಿಚ್‌ಗಳಲ್ಲಿ ರನ್‌ ಹರಿದು ಬರುತ್ತಿಲ್ಲ ಎಂಬುದು ಎರಡನೇ ಕಾರಣ. ಅದರಲ್ಲೂ ವಿಶ್ವಕಪ್‌ ಪಂದ್ಯಾವಳಿಗಾಗಿಯೇ ನ್ಯೂಯಾರ್ಕ್‌ನಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ನಸ್ಸೌ ಕೌಂಟಿ ಕ್ರೀಡಾಂಗಣದ ಪಿಚ್‌ ಆಟಗಾರರಿಗೆ ದೊಡ್ಡ ಸಮಸ್ಯೆಯಾಗಿದೆ. ಇಲ್ಲಿ ತಂಡವೊಂದರ ಮೊತ್ತ 100 ರನ್‌ ಗಡಿ ದಾಟಿದರೆ ಅದೇ ದೊಡ್ಡದು ಎನಿಸಿದೆ. ಇತ್ತೀಚೆಗೆ ಈ ಮೈದಾನದಲ್ಲಿ ನಡೆದ ಪಂದ್ಯಗಳ ಬಳಿಕ ಆಟಗಾರರು ಪಿಚ್‌ ಸರಿಯಿಲ್ಲ ಎಂದು ದೂರಿದ್ದರು. ಇದೀಗ ಇದೇ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಬ್ಲಾಕ್‌ ಬಸ್ಟರ್‌ ಪಂದ್ಯ ನಡೆಯುತ್ತಿದೆ. ಹೀಗಾಗಿ ಉಭಯ ತಂಡಗಳ ಆಟಗಾರರಿಗೆ ಒಂದು ಕಳವಳವಾದರೆ. ಅಭಿಮಾನಿಗಳಿಗೂ ಚಿಂತೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಪಂದ್ಯಕ್ಕೂ ಮುಂಚಿತವಾಗಿ ನಸ್ಸೌ ಕೌಂಟಿ ಮೈದಾನದ ಪಿಚ್‌ ಕುರಿತು ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಏನನ್ನು ನಿರೀಕ್ಷಿಸಬಹುದು ಎಂದು ನನಗೆ ತಿಳಿದಿಲ್ಲ ಎಂದು ಶನಿವಾರ ಹೇಳಿದರು. ಏಕೆಂದರೆ ಮೈದಾನದ ಕ್ಯುರೇಟರ್ ಕೂಡಾ ಡ್ರಾಪ್-ಇನ್ ವಿಕೆಟ್‌ಗಳನ್ನು ಬಳಸುವುದರ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆ ಎಂದಿದ್ದಾರೆ. ಹೀಗಾಗಿ ಇಂದಿನ ಪಂದ್ಯ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ನ್ಯೂಯಾರ್ಕ್‌ನಲ್ಲಿ ನಡೆದ ಎಲ್ಲಾ ಪಂದ್ಯಗಳಲ್ಲಿ ಕಡಿಮೆ ಸ್ಕೋರ್‌ ದಾಖಲಾಗಿವೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತವು 100ಕ್ಕೂ ಮುಂಚಿತವಾಗಿ ಎದುರಾಳಿಯನ್ನು ಆಲೌಟ್‌ ಮಾಡಿತ್ತು. ಭಾರತದ ಪಂದ್ಯ ನಡೆದ ಬಳಿಕ ಪಿಚ್‌ ಹಾಗೂ ಮೈದಾನವನ್ನು ಅಪ್ಡೇಟ್‌ ಮಾಡಲಾಗುತ್ತಿದೆ ಎಂದು ಐಸಿಸಿ ಹೇಳಿತ್ತು. ಹೀಗಾಗಿ ಐರ್ಲೆಂಡ್‌ ಹಾಗೂ ಕೆನಡಾ ನಡುವಿನ ಪಂದ್ಯದಲ್ಲಿ ಪಿಚ್‌ ವರ್ತನೆ ತುಸು ಬದಲಾಗಿತ್ತು. ಆದರೆ, ಶನಿವಾರ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮತ್ತೆ ಬ್ಯಾಟ್‌ ಬೀಸಲು ತಿಣುಕಾಡಿದವು. ಹೀಗಾಗಿ ಭಾರತಕ್ಕೆ ಮತ್ತೆ ಗೊಂದಲ ಶುರುವಾಗಿದೆ.

“ನ್ಯೂಯಾರ್ಕ್ ನಮ್ಮ ತವರು ಮೈದಾನವಲ್ಲ. ನಾವು ಇಲ್ಲಿ ಎರಡು ಪಂದ್ಯಗಳನ್ನು ಮಾತ್ರ ಆಡಿದ್ದೇವೆ. ಇಲ್ಲಿನ ಪಿಚ್ ಸ್ವರೂಪದ ಬಗ್ಗೆ ನಮಗೆ ಹೆಚ್ಚಿನ ಅರಿವು ಇಲ್ಲ. ಈ ಪಿಚ್‌ ಒಂದೊಂದು ದಿನ ಒಂದೊಂದು ರೀತಿ ವಿಭಿನ್ನವಾಗಿ ವರ್ತಿಸುತ್ತದೆ. ಹೀಗಾಗಿ ಕ್ಯುರೇಟರ್ ಕೂಡ ಗೊಂದಲಕ್ಕೊಳಗಾಗಿದ್ದಾರೆ,” ಎಂದು ರೋಹಿತ್ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೂ ಮುನ್ನಾದಿನದಂದು ಹೇಳಿದ್ದಾರೆ.

ಶುಕ್ರವಾರ ನಡೆದ ಕೆನಡಾ ಮತ್ತು ಐರ್ಲೆಂಡ್ ನಡುವಿನ ಪಂದ್ಯದ ಟಾಸ್ ಪ್ರಕ್ರಿಯೆ ನಡೆಸಿದ ನಂತರ ಮಾತನಾಡಿದ್ದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ, “ಇಂದು ಪಿಚ್ ಉತ್ತಮವಾಗಿದೆ” ಎಂದು ಹೇಳಿದ್ದರು. ಅದರಂತೆಯೇ ಆ ಪಂದ್ಯದಲ್ಲಿ ಸಮತೋಲಿತವಾಗಿ ಕಂಡುಬಂತು.

ಇಂಡೋ-ಪಾಕ್‌ ಪಂದ್ಯದಲ್ಲಿ ಏನನ್ನು ನಿರೀಕ್ಷಿಸಬಹುದು?

ಇದೀಗ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ಪಿಚ್ ಹೆಚ್ಚು ಗಮನ ಸೆಳೆದಿದೆ. ಉಭಯ ತಂಡಗಳ ನಡುವೆ ಬಿರುಸಿನ ಪೈಪೋಟಿ ನಿರೀಕ್ಷೆ ಇದ್ದು, ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ಭಾರತ ಕಂಟಕವಾಗುತ್ತಾ ಎಂಬ ಕುತೂಹಲ ಎದ್ದಿದೆ. ಪಾಕ್‌ ತಂಡ ಸದ್ಯ ಬ್ಯಾಟಿಂಗ್‌ನಲ್ಲಿ ದುರ್ಬಲವಾಗಿದೆ. ಆದರೆ, ತಂಡದ ವೇಗದ ಬೌಲರ್‌ಗಳ ಬಳಗ ಉತ್ತಮವಾಗಿದೆ. ಶಾಹೀನ್ ಅಫ್ರಿದಿ ಜೊತೆಗೆ ಮೊಹಮ್ಮದ್ ಅಮೀರ್, ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ಭಾರತಕ್ಕೆ ಮಾರಕವಾಗುವ ಸಾಧ್ಯತೆ ಇದೆ. ಇದೇ ವೇಳೆ ನ್ಯೂಯಾರ್ಕ್‌ ಪಿಚ್‌ ವೇಗಿಗಳಿಗೆ ನೆರವಾಗುವುದು ಉಭಯ ತಂಡಗಳ ವೇಗಕ್ಕೆ ಬಲ ತುಂಬಲಿದೆ. ಪಂದ್ಯದಲ್ಲಿ ಪವರ್‌ಪ್ಲೇ ನಿರ್ಣಾಯಕವಾಗಿದೆ.

ಟಿ20 ವರ್ಲ್ಡ್‌ಕಪ್ 2024