ಕಿವೀಸ್ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್‌ಗೆ ಕೋವಿಡ್ ದೃಢ; ಪಾಕ್ ವಿರುದ್ಧದ ಎರಡನೇ ಟಿ20 ಪಂದ್ಯಕ್ಕೂ ಡೌಟ್
Mitchell Santner: ಕ್ರಿಕೆಟ್ ಲೋಕಕ್ಕೆ ಮತ್ತೆ ಕೋವಿಡ್ ಕಾಲಿಟ್ಟಿದೆ. ಕಿವೀಸ್ ಕ್ರಿಕೆಟಿಗ ಮಿಚೆಲ್ ಸ್ಯಾಂಟ್ನರ್‌ಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ನ್ಯೂಜಿಲ್ಯಾಂಡ್ ತಂಡದ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್‌ಗೆ (Mitchell Santner) ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ 31 ವರ್ಷದ ಆಟಗಾರ ಪಾಕಿಸ್ತಾನದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಡಿಲ್ಲ.
ಜನವರಿ 12ರ ಶುಕ್ರವಾರ ಆಕ್ಲೆಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಪಾಕ್ ವಿರುದ್ಧ ಕಿವೀಸ್ 46 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡವು ನ್ಯೂಜಿಲ್ಯಾಂಡ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಡೇರಿಲ್ ಮಿಚೆಲ್ ಕೇವಲ 27 ಎಸೆತಗಳಲ್ಲಿ 61 ರನ್ ಗಳಿಸುವುದರೊಂದಿಗೆ ಆತಿಥೇಯರು 8 ವಿಕೆಟ್ ಕಳೆದುಕೊಂಡು 226 ರನ್ ಗಳಿಸಿದರು. ಗುರಿ ಬೆನ್ನಟ್ಟಿದ ಪಾಕ್ ಕೇವಲ180 ರನ್‌ಗಳಿಗೆ ಆಲೌಟ್ ಆಯ್ತು.
ನ್ಯೂಜಿಲೆಂಡ್ ಕ್ರಿಕೆಟ್ (NZC) ಮಂಡಳಿಯು ಸ್ಯಾಂಟ್ನರ್ ಆರೋಗ್ಯದ ಕುರಿತ ಅಪ್ಡೇಟ್ ನೀಡಿದೆ. ಅವರ ಹೋಟೆಲ್ ಕೋಣೆಯಲ್ಲಿ ಪ್ರತ್ಯೇಕವಾಗಿ ಇರುವುದಾಗಿ ತಿಳಿಸಿದೆ. ಮುಂದೆ ನಡೆಯಲಿರುವ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಅವರೇ ಹ್ಯಾಮಿಲ್ಟನ್‌ಗೆ ಪ್ರಯಾಣಿಸಲಿದ್ದಾರೆ ಎಂದು ಘೋಷಿಸಿದೆ.
ಇದನ್ನೂ ಓದಿ | ಕೊಹ್ಲಿಗೆ ಅಸಾಧ್ಯ ಯಾವುದೂ ಇಲ್ಲ, ಆತ ಏನಾದರೂ ಸಾಧಿಸಬಲ್ಲ; ಶತಕಗಳ ಶತಕದ ಬಗ್ಗೆ ವಿಂಡೀಸ್ ದಿಗ್ಗಜ ವಿಶ್ವಾಸ
“ಕೋವಿಡ್ ಪಾಸಿಟಿವ್ ದೃಢವಾದ ನಂತರ ಪಾಕಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಿಂದ ಮಿಚ್ ಸ್ಯಾಂಟ್ನರ್ ಈಡನ್ ಪಾರ್ಕ್‌ಗೆ ಪ್ರಯಾಣಿಸುವುದಿಲ್ಲ. ಮುಂಬರುವ ದಿನಗಳಲ್ಲಿ ಅವರ ಆರೋಗ್ಯದ ಮೇಲ್ವಿಚಾರಣೆ ಮುಂದುವರೆಸಲಾಗುತ್ತದೆ. ಅವರೂ ಏಕಾಂಗಿಯಾಗಿ ಹ್ಯಾಮಿಲ್ಟನ್‌ಗೆ ಹೋಗಲಿದ್ದಾರೆ,” ಎಂದು ಕ್ರಿಕೆಟ್ ಮಂಡಳಿಯು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ.
ನ್ಯೂಜಿಲ್ಯಾಂಡ್ ತಂಡದ ಪ್ರಮುಖ ಆಲ್‌ರೌಂಡರ್ ಆಗಿರುವ ಸ್ಯಾಂಟ್ನರ್, 64 ಟಿ20 ಇನ್ನಿಂಗ್ಸ್‌ಗಳಲ್ಲಿ 16.94 ಸರಾಸರಿಯಲ್ಲಿ ಒಂದು ಅರ್ಧಶತಕ ಸಹಿತ 610 ರನ್ ಗಳಿಸಿದ್ದಾರೆ. 93 ಪಂದ್ಯಗಳಲ್ಲಿ 105 ವಿಕೆಟ್‌ಗಳನ್ನೂ ಪಡೆದಿದ್ದಾರೆ.
ಸ್ಯಾಂಟ್ನರ್ ಅನುಪಸ್ಥಿತಿಯಲ್ಲಿ ಆಡಂ ಮಿಲ್ನೆ 7ನೇ ಕ್ರಮಾಂಕದಲ್ಲಿ ಆಡಿದರು. ಕಿವೀಸ್ ಪರ ಡೇರಿಲ್ ಮಿಚೆಲ್ ಅಬ್ಬರದ ಇನ್ನಿಂಗ್ಸ್ ಆಡಿದರು. ನಾಯಕ ಕೇನ್ ವಿಲಿಯಮ್ಸನ್ ಕೂಡಾ 42 ಎಸೆತಗಳಲ್ಲಿ 57 ರನ್ ಗಳಿಸಿದರು. ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ಡೆವೊನ್ ಕಾನ್ವೇ ಡಕೌಟ್ ಆದರು. ಆ ನಂತರ ಫಿನ್ ಅಲೆನ್ ನ್ಯೂಜಿಲ್ಯಾಂಡ್ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟರು. ಅಲೆನ್ 15 ಎಸೆತಗಳಲ್ಲಿ 35 ರನ್ ಗಳಿಸುವ ಮೂಲಕ ತಂಡವು ಮೊದಲ ಐದು ಓವರ್‌ಗಳಲ್ಲಿ 50 ರನ್ ಗಳಿಸುವಂತೆ ಮಾಡಿದರು.
ಇದನ್ನೂ ಓದಿ | ಕ್ರಿಕೆಟ್ ಇತಿಹಾಸದಲ್ಲೇ ಮೊದಲು; ಬಿಬಿಎಲ್ ಆಡಲು ಹೆಲಿಕಾಪ್ಟರ್ನಲ್ಲಿ ಬಂದ ಡೇವಿಡ್ ವಾರ್ನರ್, ವಿಡಿಯೋ
ವಿಲಿಯಮ್ಸನ್ ಮತ್ತು ಮಿಚೆಲ್ ಮೂರನೇ ವಿಕೆಟ್‌ಗೆ 78 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ವಿಲಿಯಮ್ಸನ್ ಅಂತಿಮವಾಗಿ ಅಬ್ಬಾಸ್ ಅಫ್ರಿದಿಗೆ ವಿಕೆಟ್ ಒಪ್ಪಿಸಿದರು. ಸಿಡಿಲಬ್ಬರ ಮುಂದುವರೆಸಿದ ಮಿಚೆಲ್ ಅಂತಿಮವಾಗಿ 17ನೇ ಓವರ್‌ನಲ್ಲಿ ಶಾಹೀನ್ ಅಫ್ರಿದಿ ಎಸೆತದಲ್ಲಿ ಔಟಾದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ನಾಲ್ಕು ಸ್ಫೋಟಕ ಸಿಕ್ಸರ್ ಸಿಡಿಸಿದರು.