ಬದಲಾಗದ ಪಾಕಿಸ್ತಾನ ತಂಡದ ಹಣೆಬರಹ; ನ್ಯೂಜಿಲೆಂಡ್ ವಿರುದ್ಧ 2ನೇ ಟಿ20ಐನಲ್ಲೂ ಸೋಲು, ಸರಣಿ ಕಳೆದುಕೊಳ್ಳುವ ಭೀತಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಬದಲಾಗದ ಪಾಕಿಸ್ತಾನ ತಂಡದ ಹಣೆಬರಹ; ನ್ಯೂಜಿಲೆಂಡ್ ವಿರುದ್ಧ 2ನೇ ಟಿ20ಐನಲ್ಲೂ ಸೋಲು, ಸರಣಿ ಕಳೆದುಕೊಳ್ಳುವ ಭೀತಿ

ಬದಲಾಗದ ಪಾಕಿಸ್ತಾನ ತಂಡದ ಹಣೆಬರಹ; ನ್ಯೂಜಿಲೆಂಡ್ ವಿರುದ್ಧ 2ನೇ ಟಿ20ಐನಲ್ಲೂ ಸೋಲು, ಸರಣಿ ಕಳೆದುಕೊಳ್ಳುವ ಭೀತಿ

ಡುನೆಡಿನ್‌ನಲ್ಲಿ ನಡೆದ 2ನೇ ಟಿ20ಐ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ತಂಡ 5 ವಿಕೆಟ್‌ಗಳಿಂದ ಪರಾಭವಗೊಂಡಿದ್ದು, ಐದು ಪಂದ್ಯಗಳ ಚುಟುಕು ಸರಣಿಯಲ್ಲಿ 2-0 ಅಂತರದಿಂದ ಹಿನ್ನಡೆ ಅನುಭವಿಸಿದೆ.

ಬದಲಾಗದ ಪಾಕಿಸ್ತಾನ ತಂಡದ ಹಣೆಬರಹ; ನ್ಯೂಜಿಲೆಂಡ್ ವಿರುದ್ಧ 2ನೇ ಟಿ20ಐನಲ್ಲೂ ಸೋಲು, ಸರಣಿ ಕಳೆದುಕೊಳ್ಳುವ ಭೀತಿ
ಬದಲಾಗದ ಪಾಕಿಸ್ತಾನ ತಂಡದ ಹಣೆಬರಹ; ನ್ಯೂಜಿಲೆಂಡ್ ವಿರುದ್ಧ 2ನೇ ಟಿ20ಐನಲ್ಲೂ ಸೋಲು, ಸರಣಿ ಕಳೆದುಕೊಳ್ಳುವ ಭೀತಿ (AFP)

ಪಾಕಿಸ್ತಾನ ತಂಡ ಸೋಲಿನ ಮೇಲೆ ಸೋಲು ಎದುರಿಸುತ್ತಿದೆ. ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20ಐ ಪಂದ್ಯದಲ್ಲೂ ಮುಗ್ಗರಿಸಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ತ್ರಿಕೋನ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ, ನಂತರ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧ​ ಸೋತಿದ್ದ ಪಾಕ್ ಪ್ರಸ್ತುತ ನಡೆಯುತ್ತಿರುವ ಚುಟುಕು ಸರಣಿಯಲ್ಲೂ ಶರಣಾಗತಿ ಮುಂದುವರೆಸಿದೆ. ಡುನೆಡಿನ್‌ನಲ್ಲಿ ನಡೆದ 2ನೇ ಟಿ20ಐ ಪಂದ್ಯದಲ್ಲಿ ಕಿವೀಸ್ ವಿರುದ್ಧ ಸಲ್ಮಾನ್ ಆಘಾ ಪಡೆ 5 ವಿಕೆಟ್‌ಗಳಿಂದ ಪರಾಭವಗೊಂಡಿದೆ. ಸತತ ಎರಡನೇ ಪಂದ್ಯದಲ್ಲೂ ಗೆದ್ದ ಮೈಕಲ್ ಬ್ರೇಸ್​ವೆಲ್ ಪಡೆ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಪಡೆದಿದೆ.

ಮಳೆ ಅಡ್ಡಿಪಡಿಸಿದ ಕಾರಣ ಈ ಟಿ20 ಪಂದ್ಯವನ್ನು ತಲಾ 15 ಓವರ್​ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮೈಕೆಲ್ ಬ್ರೇಸ್‌ವೆಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ತಂಡವು ಮೊದಲು ಬ್ಯಾಟಿಂಗ್ ಮಾಡಿ 9 ವಿಕೆಟ್ ಕಳೆದುಕೊಂಡು 135 ರನ್ ಗಳಿಸಲು ಸಾಧ್ಯವಾಯಿತು. ಪಾಕ್ ಪರ ನಾಯಕ ಸಲ್ಮಾನ್ ಅಲಿ ಅಘಾ 28 ಎಸೆತಗಳಲ್ಲಿ 46 ರನ್ ಗಳಿಸಿ ತ್ವರಿತ ಇನ್ನಿಂಗ್ಸ್ ಆಡಿದರೆ, ಉಪನಾಯಕ ಶದಾಬ್ ಖಾನ್ 14 ಎಸೆತಗಳಲ್ಲಿ 26 ರನ್, ಶಾಹೀನ್ ಶಾ ಅಫ್ರಿದಿ 14 ಬಾಲ್​ಗೆ 22 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಜೇಕಬ್ ಡಫಿ, ಬೆನ್ ಸಿಯರ್ಸ್, ಜೇಮ್ಸ್ ನೀಶಮ್ ಮತ್ತು ಇಶ್ ಸೋಧಿ ತಲಾ 2 ವಿಕೆಟ್ ಪಡೆದರು.

13.1 ಓವರ್​ಗಳಲ್ಲಿ ಗೆದ್ದುಬೀಗಿದ ನ್ಯೂಜಿಲೆಂಡ್

ನ್ಯೂಜಿಲೆಂಡ್ 136 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದಾಗ, ಮೊದಲ ಓವರ್‌ನಲ್ಲಿ ಒಂದೇ ಒಂದು ರನ್ ಗಳಿಸಲಿಲ್ಲ. ಇದರ ಹೊರತಾಗಿಯೂ, ತಂಡವು 13.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ನ್ಯೂಜಿಲೆಂಡ್ ಪರ ಟಿಮ್ ಸೀಫರ್ಟ್ 22 ಎಸೆತಗಳಲ್ಲಿ 45 ರನ್, ಫಿನ್ ಅಲೆನ್ 16 ಎಸೆತಗಳಲ್ಲಿ 38 ರನ್ ಗಳಿಸಿ ಮಿಂಚಿದರು. ಮಿಚೆಲ್ ಹೇ 16 ಎಸೆತಗಳಲ್ಲಿ 21 ರನ್ ಗಳಿಸಿದರು. ಪಾಕಿಸ್ತಾನ ಪರ ಹ್ಯಾರಿಸ್ ರೌಫ್ ಎರಡು ವಿಕೆಟ್ ಪಡೆದರೆ, ಮೊಹಮ್ಮದ್ ಅಲಿ, ಖುಸ್ದಿಲ್ ಶಾ ಮತ್ತು ಜಹಾನಾದ್ ಖಾನ್ ತಲಾ 1 ವಿಕೆಟ್ ಪಡೆದರು. ಸರಣಿಯ ಮೂರನೇ ಪಂದ್ಯ ಮಾರ್ಚ್ 21 ಶುಕ್ರವಾರ ಆಕ್ಲೆಂಡ್‌ನಲ್ಲಿ ನಡೆಯಲಿದೆ. ಆ ಪಂದ್ಯದಲ್ಲೂ ಪಾಕ್ ಗೆಲ್ಲದಿದ್ದರೆ, ಸರಣಿ ಕೈತಪ್ಪಲಿದೆ.

ಬದಲಾಗದ ಪಾಕಿಸ್ತಾನ ತಂಡದ ಹಣೆಬರಹ

ಪಾಕಿಸ್ತಾನ ತಂಡ ಹಣೆಬರಹವೇ ಬದಲಾಗುತ್ತಿಲ್ಲ. ನಾಯಕರು ಬದಲಾದರು, ಕೋಚ್​ಗಳು ಬದಲಾದರು, ಆಟಗಾರರು ಬದಲಾದರು, ಕ್ರಿಕೆಟ್ ಮಂಡಳಿ ಸದಸ್ಯರು ಬದಲಾದರು.. ಹೀಗಿದ್ದರೂ ತಂಡದ ಹಣೆಬರಹ ಬದಲಾಗಲಿಲ್ಲ. 2023ರ ಏಷ್ಯಾಕಪ್​ನಿಂದ ಇಲ್ಲಿಯ ತನಕ ಗೆದ್ದಿದ್ದೇ ಕಡಿಮೆ ಪಂದ್ಯಗಳಲ್ಲಿ. ಏಷ್ಯಾಕಪ್ ಕಳೆದುಕೊಂಡ ಪಾಕ್, ಅದೇ ವರ್ಷ ನಡೆದ ಏಕದಿನ ವಿಶ್ವಕಪ್​ನಲ್ಲೂ ಹೀನಾಯ ಪ್ರದರ್ಶನದೊಂದಿಗೆ ಟೂರ್ನಿಯಿಂದ ಹೊರಬಿತ್ತು. ಆ ಬಳಿಕ ನಡೆದ ಸರಣಿಗಳಲ್ಲೂ ಅಂದುಕೊಂಡಂತೆ ಪ್ರದರ್ಶನ ನೀಡಲಿಲ್ಲ. ಟಿ20 ವಿಶ್ವಕಪ್​ನಲ್ಲಿ ಅಮೆರಿಕ ವಿರುದ್ಧ ಸೋತಿದ್ದೂ ಸೇರಿದಂತೆ ಲೀಗ್​ನಲ್ಲೇ ಹೊರಬಿತ್ತು. ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲೂ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ತವರಿನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲೂ ಲೀಗ್​ನಲ್ಲೇ ಹೊರಬಿತ್ತು. ಟೆಸ್ಟ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಸರಣಿ, ಏಕದಿನದಲ್ಲಿ ಆಸ್ಟ್ರೇಲಿಯಾ, ಜಿಂಬಾಬ್ವೆ ವಿರುದ್ದ ಸರಣಿ, ಟಿ20ಯಲ್ಲಿ ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದಿದ್ದು ಬಿಟ್ಟರೆ, ಉಳಿದಂತೆ ಸತತ ಸೋಲುಗಳನ್ನು ಎದುರಿಸಿದೆ. ಇದೀಗ ಕಿವೀಸ್ ವಿರುದ್ಧ ಸರಣಿ ಕಳೆದುಕೊಳ್ಳುವ ಭೀತಿಗೆ ಸಿಲುಕಿದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner