ಟಿ20 ವಿಶ್ವಕಪ್: ಉಗಾಂಡಾ ವಿರುದ್ಧ 9 ವಿಕೆಟ್ ಗೆಲುವು ಸಾಧಿಸಿದರೂ ನ್ಯೂಜಿಲ್ಯಾಂಡ್ ಕೈತಪ್ಪಿದ ಸೂಪರ್ 8 ಟಿಕೆಟ್
New Zealand vs Uganda: ಟಿ20 ವಿಶ್ವಕಪ್ 2024ರಲ್ಲಿ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಆರಂಭಿಕ ಎರಡು ಪಂದ್ಯಗಳಲ್ಲಿ ಸೋತ ನ್ಯೂಜಿಲ್ಯಾಂಡ್, 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ.

ಟಿ20 ವಿಶ್ವಕಪ್ 2024ರ ಟೂರ್ನಿಯಿಂದ ಈಗಾಗಲೇ ಹೊರಬಿದ್ದಿರುವ ನ್ಯೂಜಿಲ್ಯಾಂಡ್, ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದೆ. ಕೆಳ ಶ್ರೇಯಾಂಕದ ಉಗಾಂಡಾ ವಿರುದ್ಧ ಕಿವಿಸ್ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ಗೆಲುವಿನ ಲಯಕ್ಕೆ ಮರಳಿದರೂ, ಸೂಪರ್ 8 ಹಂತಕ್ಕೆ ಲಗ್ಗೆ ಇಡುವುದು ತಂಡಕ್ಕೆ ಸಾಧ್ಯವಾಗಿಲ್ಲ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಉಗಾಂಡ, ಕೇವಲ 40 ರನ್‌ಗಳಿಗೆ ಆಲೌಟ್ ಆಯ್ತು. ಬೌಲಿಂಗ್‌ನಲ್ಲಿ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಮತ್ತು ಅನುಭವಿ ವೇಗಿ ಟಿಮ್ ಸೌಥಿ ಅವರ ಆರ್ಭಟಕ್ಕೆ ತತ್ತರಿಸಿದ ಕ್ರಿಕೆಟ್ ಶಿಶುಗಳು 18.4 ಓವರ್‌ಗಳಲ್ಲಿ ಸರ್ಪತನ ಕಂಡಿತು. ಇದಕ್ಕೆ ಪ್ರತಿಯಾಗಿ ಕಿವಿಸ್, ಆರಂಭಿಕ ಆಟಗಾರ ಡೆವೊನ್ ಕಾನ್ವೇ ಆಟದ ನೆರವಿಂದ ಕೇವಲ 5.2 ಓವರ್‌ಗಳಲ್ಲಿ ಗುರಿ ತಲುಪಿಯು. ಆ ಮೂಲಕ ನ್ಯೂಜಿಲೆಂಡ್‌ಗೆ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿತು. ಕಾನ್ವೆ 22 ರನ್ ಗಳಿಸಿದೆ, ಫಿನ್ ಅಲೆನ್ 17 ಎಸೆತ ಎದುರಿಸಿ ಕೇವಲ 9 ರನ್ ಗಳಿಸಿ ಔಟಾದರು.
ಟೂರ್ನಿಯಲ್ಲಿ ಈ ಹಿಂದೆ ಅಫ್ಘಾನಿಸ್ತಾನ ಮತ್ತು ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಆರಂಭಿಕ ಎರಡು ಪಂದ್ಯಗಳನ್ನು ಸೋತ ನ್ಯೂಜಿಲ್ಯಾಂಡ್ ತಂಡವು, 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್‌ನಿಂದ ಹೊರಗುಳಿದಿದೆ.
ಅತ್ತ ಕಳೆದ ವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಉಗಾಂಡಾ ತಂಡ ಕೇವಲ 39 ರನ್ ಗಳಿಸಿತ್ತು. ಟೂರ್ನಿಯಲ್ಲಿ ಘಟಾನುಘಟಿ ತಂಡಗಳ ವಿರುದ್ಧ ಬ್ಯಾಟ್ ಬೀಸಲು ಪರದಾಡುತ್ತಿರುವ ತಂಡವು, ಬಲಿಷ್ಠ ನ್ಯೂಜಿಲ್ಯಾಂಡ್ ವಿರುದ್ಧವೂ ಅಲ್ಪಮೊತ್ತಕ್ಕೆ ಕುಸಿಯಿತು.
ಉಗಾಂಡ ಕಳಪೆ ಪ್ರದರ್ಶನ
ಉಗಾಂಡ ತಂಡವು ಪಂದ್ಯಾವಳಿಯಲ್ಲಿ 80 ರನ್ ಗಡಿ ದಾಟಿಲ್ಲ. ಆದರೂ ಪಪುವಾ ನ್ಯೂಗಿನಿಯಾ ವಿರುದ್ಧದ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ಗುಂಪು 'ಸಿ'ಯಿಂದ ಅಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಸೂಪರ್ 8 ಹಂತಕ್ಕೆ ಪ್ರವೇಶಿಸಿವೆ. ಅತ್ತ ಕಿವಿಸ್, ಉಗಾಂಡ ಹಾಗೂ ಪಪುವಾ ನ್ಯೂಗಿನಿಯಾ ತಂಡಗಳು ಎಲಿಮನೇಟ್ ಆಗಿವೆ.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ