ನಿತೀಶ್ ರೆಡ್ಡಿ ಕ್ರಿಕೆಟ್ ವೃತ್ತಿಬದುಕಿಗೆ ಬೆನ್ನೆಲುಬಾಗಿ ನಿಲ್ಲಲು ತಂದೆ ಮಾಡಿದ್ದು ಅದೆಂಥಾ ತ್ಯಾಗ; ಅಂದು ಟೀಕಿಸಿದವರಿಂದ ಇಂದು ಚಪ್ಪಾಳೆ
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಿತೀಶ್ ಕುಮಾರ್ ರೆಡ್ಡಿ ಶತಕ ಸಿಡಿಸಿದರು. ಇದು ಅವರ ತಂದೆ ಮುತ್ಯಾಲ ರೆಡ್ಡಿ ಖುಷಿಯನ್ನು ಇಮ್ಮಡಿಯಾಗಿಸಿದೆ. ಕ್ರಿಕೆಟಿಗನಾಗಿ ಮಗ ವೃತ್ತಿಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವ ಅಪ್ಪನ ಆಸೆ ನೆರವೇರಿದೆ. ಇದರ ಹಿಂದೆ ಅವರ ತ್ಯಾಗವೂ ಇದೆ.
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಕರ್ಷಕ ಶತಕ ಸಿಡಿಸಿದ ನಿತೀಶ್ ಕುಮಾರ್ ರೆಡ್ಡಿ, ಜಾಗತಿಕ ಮಟ್ಟದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಆಲ್‌ರೌಂಡರ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಸೆಂಚುರಿ ಸಾಧನೆ ಮಾಡಿದ್ದಾರೆ. ಅದರ ಬೆನ್ನಲ್ಲೇ ಆಂಧ್ರಪ್ರದೇಶದ 21 ವರ್ಷದ ಆಟಗಾರನ ಮನೆ ಹಾಗೂ ಕುಟುಂಬದಲ್ಲಿ ಹೊಸ ವರ್ಷದ ಸಂಭ್ರಮ ಶುರುವಾಗಿದೆ. ತುಂಬಿದ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕುಳಿತಿದ್ದ ಅಪ್ಪ ಮುತ್ಯಾಲ ರೆಡ್ಡಿ ಖುಷಿ ಇಮ್ಮಡಿಯಾಗಿದೆ. ಮಗನಿಗಾಗಿ ತನ್ನಿಂದ ಸಾಧ್ಯವಿರುವ ಎಲ್ಲಾ ತ್ಯಾಗಗಳನ್ನು ಮಾಡಿದ್ದ ತಂದೆ, ತಮ್ಮ ತ್ಯಾಗಗಳಿಗಿಂತ ದುಪ್ಪಟ್ಟು ಗೌರವವನ್ನು ಸಂಪಾದಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಒಂದು ಹಂತದಲ್ಲಿ ಭಾರತ ತಂಡ ಸಂಕಷ್ಟದಲ್ಲಿತ್ತು. ರಿಷಭ್ ಪಂತ್ ಔಟಾದ ನಂತರ ಭಾರತದ ಮೊತ್ತ 191/6 ಮಾತ್ರವೇ ಆಗಿತ್ತು. ಈ ವೇಳೆ ತಂಡದ ರಕ್ಷಣೆಗೆ ನಿಂತ ರೆಡ್ಡಿ, ಆಸ್ಟ್ರೇಲಿಯಾದ ಕಠಿಣ ಪರಿಸ್ಥಿತಿಯಲ್ಲಿ ಹೆಚ್ಚು ಅನುಭವವಿಲ್ಲದಿದ್ದರೂ ಸಮರ್ಥವಾಗಿ ಬ್ಯಾಟ್ ಬೀಸಿದರು. ತಂಡವನ್ನು ಫಾಲೊ ಆನ್‌ನಿಂದ ಪಾರು ಮಾಡುವ ಜೊತೆಗೆ ಶತಕ ಸಿಡಿಸಿ ಮಿಂಚಿದರು.
ಮುತ್ಯಾಲ ರೆಡ್ಡಿ ತ್ಯಾಗ
ನಿತೀಶ್ ಅವರ ಅಪೂರ್ವ ಸಾಧನೆಯ ಹಿಂದೆ ತಂದೆಯ ಶ್ರಮವಿದೆ. ತ್ಯಾಗವಿದೆ, ವರ್ಷಗಳ ತಪಸ್ಸಿದೆ. ಎಂಸಿಜಿ ಅಂಗಣದಲ್ಲಿ ಮಗ ಶತಕ ಸಾಧನೆ ಮಾಡಿದಾಗ, ಸ್ಟೇಡಿಯಂನ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಆ ವ್ಯಕ್ತಿ ಪುಟ್ಟ ಮಕ್ಕಳಂತೆ ಚಪ್ಪಾಳೆ ತಟ್ಟಿ ಕುಣಿದು ಸಂಭ್ರಮಿಸಿದರು. ತಮ್ಮ ಮಗ ದೊಡ್ಡ ಕ್ರಿಕೆಟಿಗನಾಗಬೇಕು, ಎಲ್ಲೆಡೆ ಗುರುತಿಸಿಕೊಳ್ಳಬೇಕು ಎಂಬ ಕನಸು ನನಸಾದಾಗ, ತಮಗರಿವಿಲ್ಲದಂತೆ ಕಣ್ಣಂಚಲ್ಲಿ ನೀರು ಜಿನುಗಿತು. ದೇವರಿಗೆ ಧನ್ಯವಾದ ಅರ್ಪಿಸಿದ ಅಪ್ಪನತ್ತ ಕ್ಯಾಮೆರಾಗಳು ಜೂಮ್ ಹಾಕಿದವು.
ತಮ್ಮ ಮಗನ ಬೆನ್ನೆಲುಬಾಗಿ ನಿಂತಿರುವ ಅಪ್ಪ, ಆತನಿಗಾಗಿ ಮಹತ್ವದ ತ್ಯಾಗವನ್ನೇ ಮಾಡಿದ್ದರು. ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿದ್ದ ನಿತೀಶ್‌ಗೆ, ಟೀಮ್ ಇಂಡಿಯಾ ಪರ ಆಡುವ ಕನಸು. ನಿತೀಶ್‌ಗೆ ಇನ್ನೂ 12 ಅಥವಾ 13 ವರ್ಷ ವಯಸ್ಸಾಗಿದ್ದಾಗ, ಕ್ರಿಕೆಟ್ ವೃತ್ತಿಜೀವನದ ಮೇಲೆ ಗಮನ ಹರಿಸುವ ಸಲುವಾಗಿ ಆತನೊಂದಿಗೆ ಇರಬೇಕಾದ ಅಗತ್ಯವಿತ್ತು. ಹೀಗಾಗಿ ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ ಕೆಲಸವನ್ನು ತೊರೆದು ಮಗನ ಬೆನ್ನಿಗೆ ನಿಂತರು. ರಾಜಸ್ಥಾನಕ್ಕೆ ಪೋಸ್ಟಿಂಗ್ ಆಗಿದ್ದರೂ, ಕೆಲಸ ಬೇಡವೆಂದು ಆಂಧ್ರಪ್ರದೇಶದಲ್ಲೇ ಉಳಿದರು. ಆ ಸಮಯದಲ್ಲಿ ಸಂಬಂಧಿಕರು, ಆಪ್ತರೆಲ್ಲರೂ ಮುತ್ಯಾಲ ನಿರ್ಧಾರವನ್ನು ಪ್ರಶ್ನಿಸಿದ್ದರು. ಆದರೆ, ತನ್ನ ಮಗನ ಮೇಲೆ ಅಚಲ ನಂಬಿಕೆ ಇಟ್ಟಿದ್ದ ತಂದೆ, ಹೆಜ್ಜೆ ಹೆಜ್ಜೆಗೂ ಆತನನ್ನು ಬೆಂಬಲಿಸಿದರು. ಅದರ ಫಲಿತಾಂಶ ಇಂದು ಎಲ್ಲರ ಕಣ್ಣ ಮುಂದಿದೆ.
ಸನ್‌ರೈಸರ್ಸ್ ಹೈದರಾಬಾದ್ ಪರ ಐಪಿಎಲ್‌ನಲ್ಲಿ ಅಬ್ಬರಿಸಿ ಟೀಮ್ ಇಂಡಿಯಾ ಕಾಲಿಟ್ಟಿದ್ದ ನಿತೀಶ್, ಇದೀಗ ಎಂಸಿಜಿಯಲ್ಲಿ ಟೆಸ್ಟ್ ಶತಕ ಸಿಡಿಸಿದ್ದಾರೆ. ಅಂದು ತಮ್ಮ ತಂದೆಯ ನಿರ್ಧಾರವನ್ನು ಟೀಕಿಸಿದ್ದವರಿಗೆ ಇಂದು ನಿತೀಶ್ ಅವರೇ ಮುಂದೆ ನಿಂತು ಉತ್ತರ ಕೊಟ್ಟಿದ್ದಾರೆ.
“ಎಲ್ಲಾ ಟೀಕೆಗಳ ನಡುವೆ, ನನ್ನ ತಂದೆ ಮಾತ್ರ ಮಗ ದೊಡ್ಡ ಸಾಧನೆ ಮಾಡಲಿದ್ದಾನೆ ಎಂದು ನಂಬಿದ್ದರು. ಅವರ ಬಗ್ಗೆ ಅಪಹಾಸ್ಯ ಮಾಡುವ ಜನರು ಈಗ ನನ್ನನ್ನು ಹೊಗಳುವ ಸಲುವಾಗಿ ನನ್ನ ತಂದೆಗೆ ಕರೆ ಮಾಡುತ್ತಾರೆ. ನನ್ನನ್ನು ಮತ್ತು ನನ್ನ ತಂದೆಯನ್ನು ಊಟಕ್ಕೆ ಕರೆಯುತ್ತಾರೆ. ಅಂದು ಕಳೆದುಕೊಂಡಿದ್ದ ಗೌರವವನ್ನು ನನ್ನ ತಂದೆ ಈಗ ಮರಳಿ ಪಡೆಯುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ,” ಎಂದು ನಿತೀಶ್ ಹೇಳುತ್ತಾರೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.
kannada.hindustantimes.com/astrology/yearly-horoscope