ಸುನಿಲ್ ಗವಾಸ್ಕರ್ ಪಾದ ಮುಟ್ಟಿ ಗೌರವಿಸಿದ ನಿತೀಶ್ ಕುಮಾರ್ ತಂದೆ; ಭಾರತ ಕ್ರಿಕೆಟ್‌ಗೆ ನೀವು ವಜ್ರವನ್ನೇ ಕೊಟ್ಟಿದ್ದೀರಿ ಎಂದ ದಿಗ್ಗಜ
ಸುನಿಲ್ ಗವಾಸ್ಕರ್ ಪಾದ ಮುಟ್ಟಿ ಆಶೀರ್ವಾದ ಪಡೆದ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ ಮುತ್ಯಾಲ ರೆಡ್ಡಿ ಅವರನ್ನು, ದಿಗ್ಗಜ ಕ್ರಿಕೆಟಿಗ ತಬ್ಬಿಕೊಂಡಿದ್ದಾರೆ. ಅಲ್ಲದೆ ರೆಡ್ಡಿ ಅವರ ಕ್ರಿಕೆಟ್ ವೃತ್ತಿಜೀವನದ ಮೇಲೆ ಇಟ್ಟ ನಂಬಿಕೆಗೆ ಧನ್ಯವಾದ ಅರ್ಪಿಸಿದ್ದಾರೆ.
ನವೆಂಬರ್ ತಿಂಗಳ ಕೊನೆಯಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯ ಪರ್ತ್‌ನಲ್ಲಿ ಆರಂಭವಾದಾಗ, ಭಾರತದ ಆಡುವ ಬಳಗದಲ್ಲಿ ನಿತೀಶ್ ಕುಮಾರ್ ರೆಡ್ಡಿ ಸ್ಥಾನ ಪಡೆದರು. ಅವರನ್ನು ಪ್ಲೇಯಿಂಗ್ ಇಲೆವೆನ್‌ಗೆ ಆಯ್ಕೆ ಮಾಡಿದ್ದು, ಭಾರತದ ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಅವರಿಗೆ ಇಷ್ಟವಾಗಿರಲಿಲ್ಲ. ಅಲ್ಲಿಂದ ಈಗ ಒಂದು ತಿಂಗಳ ಅಂತರದಲ್ಲಿ ದಿಗ್ಗಜ ಕ್ರಿಕೆಟಿಗ ತಮ್ಮ ಮಾತನ್ನು ಹಿಂತೆಗೆದುಕೊಳ್ಳುವಂತಾಗಿದೆ. ಸರಣಿಯ ನಾಲ್ಕನೇ ಪಂದ್ಯವಾದ ಬಾಕ್ಸಿಂಗ್ ಟೇ ಟೆಸ್ಟ್‌ನಲ್ಲಿ ಆಂಧ್ರ ಪ್ರದೇಶದ ಆಲ್‌ರೌಂಡರ್ ದಾಖಲೆಯ, ಐತಿಹಾಸಿಕ ಶತಕ ಬಾರಿಸಿದ್ದಾರೆ. ಈ ಸೆಂಚುರಿಯ ಪ್ರಾಮುಖ್ಯತೆ ಎಷ್ಟು ಎಂಬುದು ಭಾರತೀಯರಿಗೆ ಗೊತ್ತಿದೆ. ಭಾರತ ತಂಡಕ್ಕೆ ಮರುಜೀವ ಕೊಟ್ಟ ದಾಖಲೆಯ ಶತಕವು, ನಿತೀಶ್ ಕುಮಾರ್ ವೃತ್ತಿಜೀವನಕ್ಕೆ ಒಂದು ದೊಡ್ಡ ತಿರುವು ಕೊಡುವುದರಲ್ಲಿ ಅನುಮಾನವೇ ಇಲ್ಲ.
189 ಎಸೆತಗಳಲ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 114 ರನ್ ಗಳಿಸಿದ ರೆಡ್ಡಿ, ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್‌ನಲ್ಲಿ ಎಂಟು ಅಥವಾ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಗಳಿಸಿದ ಗರಿಷ್ಠ ಸ್ಕೋರ್ ಇದಾಗಿದೆ. ಭಾರತದ ಪರ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ರೆಡ್ಡಿ ಪಾತ್ರರಾದರು.
ಎಂಸಿಜಿಯಲ್ಲಿ ಭಾರತ ತಂಡದ ಅಗ್ರ ಕ್ರಮಾಂಕದ ಆಟಗಾರರು ಕಳಪೆ ಪ್ರದರ್ಶನ ನೀಡಿದ ನಂತರ, ನಿತೀಶ್ ಶತಕವು ತಂಡವನ್ನು ಫಾಲೊ ಆನ್‌ನಿಂದ ರಕ್ಷಿಸಿತು. ನಿತೀಶ್ ಐತಿಹಾಸಿಕ ಸಾಧನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಪಂದ್ಯದ ವೀಕ್ಷಕ ವಿವರಣೆ ಕೊಡುತ್ತಿದ್ದ ಗವಾಸ್ಕರ್ ಕಾಮೆಂಟರ್ ಪ್ಯಾನೆಲ್‌ನಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿದರು.
ದೇಶ-ವಿದೇಶಗಳಲ್ಲಿ ನಿತೀಶ್ ನಾಮ ಜಪ
ಇದೀಗ ಎಲ್ಲೆಡೆ ನಿತೀಶ್ ಕುಮಾರ್ ಹೆಸರು ಸದ್ದು ಮಾಡುತ್ತಿದೆ. ಶತಕ ಸಿಡಿಸಿದ ಮರುದಿನವೂ ಪಂದ್ಯದ ಅಧಿಕೃತ ಪ್ರಸಾರದ ಸಂಸ್ಥೆ ಸ್ಟಾರ್ ಸ್ಪೋರ್ಟ್ಸ್ ಊಟದ ವಿರಾಮದ ಸಮಯದಲ್ಲಿ ರೆಡ್ಡಿ ಅವರ ದಾಖಲೆಯಾಟವನ್ನು ಸ್ಮರಿಸುತ್ತಿದೆ. ಈ ನಡುವೆ ನಿತೀಶ್ ತಂದೆ ಹಾಗೂ ಅವರು ಕುಟುಂಬವು ದಿಗ್ಗಜ ಕ್ರಿಕೆಟಿಗರಾದ ರವಿ ಶಾಸ್ತ್ರಿ ಮತ್ತು ಗವಾಸ್ಕರ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ನಿತೀಶ್ ತಂದೆ ಮುತ್ಯಾಲ ರೆಡ್ಡಿ, ಗವಾಸ್ಕರ್ ಪಾದ ಸ್ಪರ್ಶಿಸಿ ನಮಸ್ಕರಿಸಿದ್ದಾರೆ.
ಗವಾಸ್ಕರ್ ಕಾಲಿಗೆ ಬಿದ್ದು ನಮಸ್ಕರಿಸಿದ ಮುತ್ಯಾಲ ರೆಡ್ಡಿ
ಮುತ್ಯಾಲ ಅವರನ್ನು ತಬ್ಬಿಕೊಂಡ ಭಾರತದ ತಂಡದ ಮಾಜಿ ನಾಯಕ, ಅವರು ಮಾಡಿದ ತ್ಯಾಗ ಮತ್ತು ರೆಡ್ಡಿ ಅವರ ಕ್ರಿಕೆಟ್ ವೃತ್ತಿಜೀವನದ ಮೇಲೆ ಇಟ್ಟ ನಂಬಿಕೆಗೆ ಧನ್ಯವಾದ ಅರ್ಪಿಸಿದರು.
“ಅವರು ಎಷ್ಟು ತ್ಯಾಗ ಮಾಡಿದ್ದಾರೆ ಎಂಬುದು ನಮಗೆ ತಿಳಿದಿದೆ. ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ನಿಮ್ಮಿಂದಾಗಿ, ಇಂದು ನನ್ನ ಕಣ್ಣಂಚಲ್ಲಿ ನೀರು ಜಿನುಗುತ್ತಿದೆ. ನಿಮ್ಮಿಂದಾಗಿ ಭಾರತಕ್ಕೆ ವಜ್ರ ಸಿಕ್ಕಿದೆ, ಭಾರತೀಯ ಕ್ರಿಕೆಟ್‌ಗೆ ವಜ್ರ ಸಿಕ್ಕಿದೆ” ಎಂದು ಗವಾಸ್ಕರ್ ಹಾಡಿ ಹೊಗಳಿದ್ದಾರೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.