ಇಂಗ್ಲೆಂಡ್ ಟಿ20 ಸರಣಿಯಿಂದ ಹೊರಬಿದ್ದ ನಿತೀಶ್ ರೆಡ್ಡಿ; 2 ಪಂದ್ಯಗಳಿಗಿಲ್ಲ ರಿಂಕು ಸಿಂಗ್; ಇಬ್ಬರು ಬದಲಿ ಆಟಗಾರರ ನೇಮಕ
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಿಂದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಹೊರಗುಳಿದಿದ್ದಾರೆ. ರಿಂಕು ಸಿಂಗ್ ಎರಡನೇ ಮತ್ತು ಮೂರನೇ ಟಿ 20 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಿಂದ ಭಾರತ ತಂಡದ ಪ್ರಮುಖ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ (Nitish Kumar) ಹೊರಬಿದ್ದಿದ್ದಾರೆ. ಅಭ್ಯಾಸದ ಸಮಯದಲ್ಲಿ ಬೆನ್ನುನೋವಿಗೆ ಒಳಗಾದ ಅವರು, ಚೆನ್ನೈನಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯಕ್ಕೆ ಮುಂಚಿತವಾಗಿ ತಂಡದಿಂದಲೇ ಹೊರಗುಳಿದಿದ್ದಾರೆ. ಹೀಗಾಗಿ ಎರಡನೇ ಪಂದ್ಯಕ್ಕೆ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. “ಫಿಟ್‌ನೆಸ್ ನಿರ್ವಹಣೆಗಾಗಿ ನಿತೀಶ್ ರೆಡ್ಡಿ ಅವರನ್ನು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಕಳುಹಿಸಲಾಗಿದೆ” ಎಂದು ಬಿಸಿಸಿಐ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವೇಳೆ ಎಡಗೈ ಬ್ಯಾಟರ್ ರಿಂಕು ಸಿಂಗ್ ಕೂಡಾ ಆಂಗ್ಲರ ವಿರುದ್ಧದ 2 ಹಾಗೂ 3ನೇ ಟಿ20 ಪಂದ್ಯದಿಂದ ಹೊರಗುಳಿಯಲಿದ್ದಾರೆ. ಜನವರಿ 22ರಂದು ಮೊದಲ ಟಿ20 ಪಂದ್ಯದ ಸಮಯದಲ್ಲಿ ಫೀಲ್ಡಿಂಗ್ ಮಾಡುವಾಗ ರಿಂಕುಗೆ ಬೆನ್ನುನೋವು ಕಾಣಿಸಿಕೊಂಡಿತ್ತು. ಸದ್ಯ ಅವರು ಸುಧಾರಿಸುತ್ತಿದ್ದಾರೆ. ಅಲ್ಲದೆ ಬಿಸಿಸಿಐ ವೈದ್ಯಕೀಯ ತಂಡವು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಇಂಗ್ಲೆಂಡ್ ವಿರುದ್ಧದ ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳಿಂದ ಹೊರಗಿಡಲಾಗಿದೆ.
ಬಿಸಿಸಿಐ ಆಯ್ಕೆ ಸಮಿತಿಯು ಸದ್ಯ ಶಿವಂ ದುಬೆ ಮತ್ತು ರಮಣ್‌ದೀಪ್ ಸಿಂಗ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಂಡಿದೆ. ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೂರನೇ ಟಿ20 ಸಮಯದಲ್ಲಿ ಅವರು ತಂಡ ಸೇರಿಕೊಳ್ಳಲಿದ್ದಾರೆ. ಜನವರಿ 28ರಂದು ಮೂರನೇ ಟಿ20 ಪಂದ್ಯ ನಡೆಯಲಿದೆ.
ಎರಡು ಬದಲಾವಣೆ
ಸದ್ಯ ಆಂಗ್ಲರ ವಿರುದ್ಧದ ಎರಡನೇ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ನಿತೀಶ್ ರೆಡ್ಡಿ ಹಾಗೂ ರಿಂಕು ಸಿಂಗ್ ಬದಲಿಗೆ ವಾಷಿಂಗ್ಟನ್ ಸುಂದರ್ ಹಾಗೂ ಧ್ರುವ್ ಜುರೆಲ್ ಅವರನ್ನು ಆಡುವ ಬಳಗಕ್ಕೆ ಆಯ್ಕೆ ಮಾಡಲಾಗಿದೆ. ಮೊಹಮ್ಮದ್ ಶಮಿ ಇನ್ನೂ ಅವಕಾಶ ಪಡೆದಿಲ್ಲ.
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡವು ಮತ್ತೆ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ವರ್ಷ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದಿದ್ದ ಟೀಮ್ ಇಂಡಿಯಾ, ಹೊಸ ವರ್ಷದಲ್ಲೂ ಸೀಮಿತ ಓವರ್‌ಗಳ ಸರಣಿಯಲ್ಲಿ ಅಬ್ಬರ ಮುಂದುವರೆಸಿದೆ.
ಮೊಣಕಾಲು ಗಾಯದಿಂದಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಹೊರಗುಳಿದಿದ್ದ ಮೊಹಮ್ಮದ್ ಶಮಿ, ಭಾರತ ತಂಡಕ್ಕೆ ಮರಳಿದ್ದಾರೆ. ಆದರೆ ಅವರನ್ನು ಆಡುವ ಬಳಗಕ್ಕೆ ಆಯ್ಕೆ ಮಾಡಿಲ್ಲ.
ಇಂಗ್ಲೆಂಡ್ ವಿರುದ್ದದ ಟಿ20 ಸರಣಿಗೆ ಭಾರತ ನವೀಕೃತ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಹರ್ಷಿತ್ ರಾಣಾ, ಅರ್ಷರ್ದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿವಂ ದುಬೆ, ರಮಣ್‌ದೀಪ್ ಸಿಂಗ್.
