ಎಂಸಿಜಿಯಲ್ಲಿ ನಿತೀಶ್ ರೆಡ್ಡಿ ಚೊಚ್ಚಲ ಶತಕ; ಮೈದಾನದಲ್ಲೇ ಕಣ್ಣೀರಿಟ್ಟ ತಂದೆ, ಭಾವುಕ ಕ್ಷಣದ ವಿಡಿಯೋ ಇಲ್ಲಿದೆ
Nitish Kumar Reddy Father: ಟೀಮ್ ಇಂಡಿಯಾ ಆಟಗಾರ ನಿತೀಶ್ ರೆಡ್ಡಿ ಅವರು ಎಂಸಿಜಿಯಲ್ಲಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಬೆನ್ನಲ್ಲೇ ಪಂದ್ಯ ವೀಕ್ಷಿಸುತ್ತಿದ್ದ ಅವರ ತಂದೆ ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ. ಅದರ ವಿಡಿಯೋ ಇಲ್ಲಿದೆ.
ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy) ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಬೆನ್ನಲ್ಲೇ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಮಧ್ಯೆಯೇ ಪಂದ್ಯ ವೀಕ್ಷಿಸುತ್ತಿದ್ದ ಅವರ ತಂದೆ ಭಾವುಕರಾಗಿ ಆನಂದಭಾಷ್ಪ ಸುರಿಸಿದ್ದಾರೆ. ನಿತೀಶ್, ಬೌಂಡರಿ ಸಿಡಿಸುವ ಮೂಲಕ ಸ್ಮರಣೀಯ ಶತಕ ಪೂರೈಸುತ್ತಿದ್ದಂತೆ ಅವರ ತಂದೆ ಮುತ್ಯಾಲ ರೆಡ್ಡಿ ಅವರು ಕಣ್ಣೀರು ಸುರಿಸುತ್ತಾ ಖುಷಿಯ ಅಲೆಯಲ್ಲಿ ತೇಲಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ತನ್ನ ಪ್ರಥಮ ಇನ್ನಿಂಗ್ಸ್ನಲ್ಲಿ 474 ರನ್ಗಳ ಬೃಹತ್ ಮೊತ್ತ ಕಲೆ ಹಾಕಿ ಆಲೌಟ್ ಆಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸುತ್ತಿರುವ ಟೀಮ್ ಇಂಡಿಯಾ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಯಶಸ್ವಿ ಜೈಸ್ವಾಲ್ 82 ರನ್ ಸಿಡಿಸಿ ಭರವಸೆ ಮೂಡಿಸಿದರಾದರೂ ರೋಹಿತ್ ಶರ್ಮಾ (3), ಕೆಎಲ್ ರಾಹುಲ್ (24), ವಿರಾಟ್ ಕೊಹ್ಲಿ (36), ರಿಷಭ್ ಪಂತ್ (28), ರವೀಂದ್ರ ಜಡೇಜಾ (17) ನಿರಾಸೆ ಮೂಡಿಸಿದರು. ಇದು ಭಾರತ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು. ಈ ಹಂತದಲ್ಲಿ ನಿತೀಶ್ ರೆಡ್ಡಿ ಮಿಂಚಿನ ಶತಕ ಬಾರಿಸಿ ತಂಡಕ್ಕೆ ಆಪತ್ಬಾಂದವರಾದರು.
ಮಗನ ಸ್ಮರಣೀಯ ಶತಕಕ್ಕೆ ಅಪ್ಪ ಕಣ್ಣೀರು
ನಿತೀಶ್ ರೆಡ್ಡಿ ಬ್ಯಾಟಿಂಗ್ ಮಾಡಲು ಬಂದಾಗ ಭಾರತ 191ಕ್ಕೆ 6 ವಿಕೆಟ್ ಕಳೆದುಕೊಂಡಿತ್ತು. ಅದಾಗಲೇ ತಂಡವು ಸಂಕಷ್ಟದಲ್ಲಿತ್ತು. ಆಗ ಜೊತೆಗಿದ್ದ ರವೀಂದ್ರ ಜಡೇಜಾ ಸಹ ಕೈ ಹಿಡಿಯಲಿಲ್ಲ. ಜಡ್ಡು ಔಟಾಗಿದ್ದು ಇನ್ನಷ್ಟು ಒತ್ತಡ ಹೆಚ್ಚಿಸಿತು. ಈ ಹಂತದಲ್ಲಿ ವಾಷಿಂಗ್ಟನ್ ಸುಂದರ್, ರೆಡ್ಡಿ ಜೊತೆಯಾದರು. ಆಸೀಸ್ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದರು. ಜವಾಬ್ದಾರಿಯುತ ಆಟದ ಜೊತೆಗೆ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ಕೊಟ್ಟರು. ಹೀಗಾಗಿ ಈ ಜೋಡಿ 8ನೇ ವಿಕೆಟ್ಗೆ 128 ರನ್ಗಳ ಪಾಲುದಾರಿಕೆ ನೀಡಿತು. ರೆಡ್ಡಿ ಶತಕದ ಅಂಚಿಗೆ ಬಂದಿದ್ದಾಗ ಅರ್ಧಶತಕ ಸಿಡಿಸಿದ್ದ ವಾಷಿಂಗ್ಟನ್ ಸುಂದರ್ ಔಟಾದರು.
ಮತ್ತೊಂದು ಆಘಾತ ಏನೆಂದರೆ ಸುಂದರ್ ಬೆನ್ನಲ್ಲೇ ಜಸ್ಪ್ರೀತ್ ಬುಮ್ರಾ ಸಹ ವಿಕೆಟ್ ಒಪ್ಪಿಸಿಬಿಟ್ಟರು. ಇದರೊಂದಿಗೆ ಭಾರತ ತಂಡದ ಕೊನೆಯ ವಿಕೆಟ್ ಮಾತ್ರವೇ ಉಳಿದಿತ್ತು. ಆಗ ಕ್ಷಣಕ್ಷಣಕ್ಕೂ ಟೆನ್ಶನ್ ಶುರುವಾಗಿತ್ತು. ಈ ಹಂತದಲ್ಲಿ ಪರಿಸ್ಥಿತಿಯನ್ನು ಅದ್ಭುತವಾಗಿ ನಿಭಾಯಿಸಿದ ಮೊಹಮ್ಮದ್ ಸಿರಾಜ್, ನಿತೀಶ್ ರೆಡ್ಡಿಗೆ ಸ್ಟ್ರೈಕ್ ಬಿಟ್ಟುಕೊಟ್ಟರು. ಕೊನೆಯ ವಿಕೆಟ್ ವೇಳೆ ನಿತೀಶ್ ರೆಡ್ಡಿ 115ನೇ ಓವರ್ನ 3ನೇ ಎಸೆತದಲ್ಲಿ ಬೌಂಡರಿ ಸಿಡಿಸುವ ಮೂಲಕ ಚೊಚ್ಚಲ ಶತಕ ಪೂರೈಸಿದರು. 171 ಎಸೆತಗಳಲ್ಲಿ ನೂರು ದಾಟಿದ ಬೆನ್ನಲ್ಲೇ ಮಗ ಬಾಹುಬಲಿ ಸ್ಟೈಲ್ನಲ್ಲಿ ಸಂಭ್ರಮಿಸಿದರೆ, ಅತ್ತ ಪ್ರೇಕ್ಷಕರ ಮಧ್ಯೆ ಅಪ್ಪ ಕಣ್ಣೀರು ಹಾಕುತ್ತಿದ್ದರು. ಈ ವಿಡಿಯೋ ವೈರಲ್ ಆಗಿದೆ.
ಭಾರತ 385/9, 116 ರನ್ಗಳ ಹಿನ್ನಡೆ
ಟೀಮ್ ಇಂಡಿಯಾ ಮೂರನೇ ದಿನದ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 358 ರನ್ ಪೇರಿಸಿದೆ. 176 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಿತ 105 ರನ್ ಸಿಡಿಸಿ ಅಜೇಯರಾಗಿ ಉಳಿದಿರುವ ನಿತೀಶ್ ಮತ್ತು ಅಜೇಯ 2 ರನ್ ಸಿಡಿಸಿರುವ ಮೊಹಮ್ಮದ್ ಸಿರಾಜ್ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವಾಷಿಂಗ್ಟನ್ ಸುಂದರ್ 162 ಎಸೆತಗಳಲ್ಲಿ 50 ರನ್ ಬಾರಿಸಿ ಅಮೂಲ್ಯ ಕೊಡುಗೆ ನೀಡಿದರು. ಭಾರತ ತಂಡ ಇನ್ನೂ 116 ರನ್ಗಳ ಹಿನ್ನಡೆಯಲ್ಲಿದೆ.