ಅರ್ಧಶತಕದ ವೇಳೆ ಪುಷ್ಪ ಸ್ಟೈಲ್, ಶತಕ ಸಿಡಿಸಿದಾಗ ಬಾಹುಬಲಿ ಸ್ಟೈಲ್; ನಿತೀಶ್ ರೆಡ್ಡಿ ಸಂಭ್ರಮ ಹೀಗಿತ್ತು ನೋಡಿ
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ವೇಳೆ ಅರ್ಧಶತಕದ ಸಿಡಿಸಿದಾಗ ಪುಷ್ಪ ಸ್ಟೈಲ್ನಲ್ಲಿ, ಶತಕ ಸಿಡಿಸಿದಾಗ ಬಾಹುಬಲಿ ಸ್ಟೈಲ್ನಲ್ಲಿ ನಿತೀಶ್ ರೆಡ್ಡಿ ಸಂಭ್ರಮಿಸಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಆಸರೆಯಾದ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರು ಅರ್ಧಶತಕ ಮತ್ತು ಶತಕದ ವೇಳೆ ವಿಶೇಷವಾಗಿ ಸಂಭ್ರಮಿಸಿದ್ದಾರೆ. ಫಿಫ್ಟಿ ಬಾರಿಸಿದ್ದ ವೇಳೆ ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಅವರ ಪುಷ್ಪ ಸ್ಟೈಲ್ನಲ್ಲಿ ಮತ್ತು ಸೆಂಚುರಿ ಬಾರಿಸಿದ್ದ ಸಮಯದಲ್ಲಿ ಬಾಹುಬಲಿಯ ಪ್ರಭಾಸ್ ಸ್ಟೈಲ್ನಲ್ಲಿ ಸಂಭ್ರಮಿಸಿ ಗಮನ ಸೆಳೆದಿದ್ದಾರೆ. ಇದು ಸದ್ಯ ಸಖತ್ ಟ್ರೆಂಡ್ ಆಗುತ್ತಿದ್ದು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಟೆಸ್ಟ್ ಪಂದ್ಯದ 3ನೇ ದಿನದ ಅಂತ್ಯಕ್ಕೆ ಭಾರತ 9 ವಿಕೆಟ್ ನಷ್ಟಕ್ಕೆ 358 ರನ್ ಬಾರಿಸಿದೆ. ನಿತೀಶ್ ರೆಡ್ಡಿ ಅಜೇಯ 105 ರನ್ ಸಿಡಿಸಿ 4ನೇ ದಿನಕ್ಕೂ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇವರೊಂದಿಗೆ ಮೊಹಮ್ಮದ್ ಸಿರಾಜ್ ಕೂಡ ಇದ್ದಾರೆ. ಆದರೆ ನಿತೀಶ್ ಆಡಿದ ಆಟ ನಿಜಕ್ಕೂ ಅದ್ಬುತವಾಗಿತ್ತು. ತಂಡವು ಸಂಕಷ್ಟದಲ್ಲಿದ್ದ ಅವಧಿಯಲ್ಲಿ ಕ್ರೀಸ್ಗೆ ಬಂದ ರೆಡ್ಡಿ, ಮನಮೋಹಕ ಬ್ಯಾಟಿಂಗ್ನೊಂದಿಗೆ ಫಾಲೋ ಆನ್ನಿಂದ ಪಾರು ಮಾಡಿದರು. ಅಲ್ಲದೆ, ಬೃಹತ್ ಹಿನ್ನಡೆಯ ಮೊತ್ತವನ್ನು ಇಳಿಸುವಲ್ಲಿ ಯಶಸ್ವಿಯಾದರು.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ 21 ವರ್ಷದ ಬ್ಯಾಟರ್ ಮಿಚೆಲ್ ಸ್ಟಾರ್ಕ್ ಅವರ ಬೌಲಿಂಗ್ನಲ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಮೊದಲ ಟೆಸ್ಟ್ ಅರ್ಧಶತಕ ಪೂರೈಸಿದ್ರು. ಅರ್ಧಶತಕ ತಲುಪಿದ ತಕ್ಷಣವೇ ಇತ್ತೀಚೆಗೆ ಬಿಡುಗಡೆಯಾದ 'ಪುಷ್ಪ: ದಿ ರೈಸ್' ಚಿತ್ರದಿಂದ ಸ್ಫೂರ್ತಿ ಪಡೆದು ತಗ್ಗೋದೇ ಇಲ್ಲ ಎಂದು ಅದೇ ಸ್ಟೈಲ್ನಲ್ಲಿ ಸಂಭ್ರಮಿಸಿದರು. ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್ ಮಾಡಿದ್ದ ಸನ್ನೆಯನ್ನೇ ರೆಡ್ಡಿ ತನ್ನ ಬ್ಯಾಟ್ ಮೂಲಕ ಸಂಭ್ರಮಿಸಿದರು. ಇದನ್ನು ಗಮನಿಸಿದ ಸುನಿಲ್ ಗವಾಸ್ಕರ್, "ಓ... ಪುಷ್ಪಾ ಜುಕೇಗಾ ನಹೀ" ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಅರ್ಧಶತಕದ ನಂತರವೂ ತನ್ನ ಅದ್ಭುತ ಆಟವನ್ನು ಮುಂದುವರೆಸಿದ ಆಲ್ರೌಂಡರ್ ತಾನು ಎದುರಿಸಿದ 171ನೇ ಎಸೆತದಲ್ಲಿ ತಮ್ಮ ಚೊಚ್ಚಲ ಶತಕ ಪೂರೈಸಿದರು. ಸ್ಕಾಟ್ ಬೋಲ್ಯಾಂಡ್ ಎಸೆದ 115ನೇ ಓವರ್ನ 3ನೇ ಎಸೆತವನ್ನು ಬೌಂಡರಿ ಗೆರೆಗೆ ಮುಟ್ಟಿಸಿ ಸಂಭ್ರಮಿಸಿದರು. ಈ ವೇಳೆ ಬಾಹುಬಲಿ ವೇಳೆ ಪ್ರಭಾಸ್ ಶೈಲಿಯಲ್ಲಿ ಸಂಭ್ರಮಿಸಿ ಗಮನ ಸೆಳೆದಿದ್ದಾರೆ.
ಶತಕ ಸಿಡಿಸಿ ದಾಖಲೆ ಬರೆದ ನಿತೀಶ್ ರೆಡ್ಡಿ
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ನಿತೀಶ್ ರೆಡ್ಡಿ, ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಪರ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ದಿಗ್ಗಜ ಸಚಿನ್ ತೆಂಡೂಲ್ಕರ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 21 ವರ್ಷ 216ನೇ ದಿನದಲ್ಲಿ ನಿತೀಶ್ ಶತಕ ಸಿಡಿಸಿದ್ದು, ಆಸೀಸ್ನಲ್ಲಿ ಮೊದಲ ಟೆಸ್ಟ್ ಶತಕ ಬಾರಿಸಿದ ಮೂರನೇ ಕಿರಿಯ ಆಟಗಾರ. ಆಸೀಸ್ ನೆಲದಲ್ಲಿ ಭಾರತ ಪರ ಚೊಚ್ಚಲ ಟೆಸ್ಟ್ ಸೆಂಚುರಿ ಬಾರಿಸಿದ ಕಿರಿಯ ಆಟಗಾರ ಪಟ್ಟಿ ಇಲ್ಲಿದೆ.
18 ವರ್ಷ 256 ದಿನ: ಸಚಿನ್ ತೆಂಡೂಲ್ಕರ್, ಸಿಡ್ನಿ 1992
21 ವರ್ಷ 92 ದಿನ: ರಿಷಭ್ ಪಂತ್, ಸಿಡ್ನಿ 2019
21 ವರ್ಷ 216 ದಿನ: ನಿತೀಶ್ ರೆಡ್ಡಿ, ಮೆಲ್ಬೋರ್ನ್ 2024
22 ವರ್ಷ 46 ದಿನ: ದತ್ತು ಫಡ್ಕರ್, ಅಡಿಲೇಡ್ 1948
ಭಾರತದ ಮೊದಲ ಇನ್ನಿಂಗ್ಸ್
ಟೀಮ್ ಇಂಡಿಯಾ ಮೂರನೇ ದಿನದ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 358 ರನ್ ಪೇರಿಸಿದೆ. 176 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಿತ 105 ರನ್ ಸಿಡಿಸಿ ಅಜೇಯರಾಗಿ ಉಳಿದಿರುವ ನಿತೀಶ್ ಮತ್ತು ಅಜೇಯ 2 ರನ್ ಸಿಡಿಸಿರುವ ಮೊಹಮ್ಮದ್ ಸಿರಾಜ್ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವಾಷಿಂಗ್ಟನ್ ಸುಂದರ್ 162 ಎಸೆತಗಳಲ್ಲಿ 50 ರನ್ ಬಾರಿಸಿ ಅಮೂಲ್ಯ ಕೊಡುಗೆ ನೀಡಿದರು. ಭಾರತ ತಂಡ ಇನ್ನೂ 116 ರನ್ಗಳ ಹಿನ್ನಡೆಯಲ್ಲಿದೆ. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ಸ್ಕೋರ್ 474/10.