ಎಸ್ಆರ್‌ಎಚ್ vs ಎಂಐ ಪಂದ್ಯದಲ್ಲಿ ಚಿಯರ್‌ ಗರ್ಲ್ಸ್‌ ಇರಲ್ಲ, ಪಟಾಕಿ ಸಿಡಿಸುವಂತಿಲ್ಲ; ಕಾರಣ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಎಸ್ಆರ್‌ಎಚ್ Vs ಎಂಐ ಪಂದ್ಯದಲ್ಲಿ ಚಿಯರ್‌ ಗರ್ಲ್ಸ್‌ ಇರಲ್ಲ, ಪಟಾಕಿ ಸಿಡಿಸುವಂತಿಲ್ಲ; ಕಾರಣ ಹೀಗಿದೆ

ಎಸ್ಆರ್‌ಎಚ್ vs ಎಂಐ ಪಂದ್ಯದಲ್ಲಿ ಚಿಯರ್‌ ಗರ್ಲ್ಸ್‌ ಇರಲ್ಲ, ಪಟಾಕಿ ಸಿಡಿಸುವಂತಿಲ್ಲ; ಕಾರಣ ಹೀಗಿದೆ

ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಸಂತಾಪ ಸೂಚಿಸಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್‌ ಪಂದ್ಯದಲ್ಲಿ ಆಟಗಾರರು ಮತ್ತು ಅಂಪೈರ್‌ಗಳು ಕಪ್ಪು ತೋಳುಪಟ್ಟಿ ಧರಿಸಿ ಆಡಲಿದ್ದಾರೆ.

ಎಸ್ಆರ್‌ಎಚ್ vs ಎಂಐ ಪಂದ್ಯದಲ್ಲಿ ಚಿಯರ್‌ ಗರ್ಲ್ಸ್‌ ಇರಲ್ಲ, ಪಟಾಕಿ ಸಿಡಿಸುವಂತಿಲ್ಲ (File)
ಎಸ್ಆರ್‌ಎಚ್ vs ಎಂಐ ಪಂದ್ಯದಲ್ಲಿ ಚಿಯರ್‌ ಗರ್ಲ್ಸ್‌ ಇರಲ್ಲ, ಪಟಾಕಿ ಸಿಡಿಸುವಂತಿಲ್ಲ (File) (AFP)

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು, ದೇಶ ಮಾತ್ರವಲ್ಲದೆ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಇದರ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡಾ ಐಪಿಎಲ್‌ ಸಂಬಂಧ ಕೆಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಮಂಗಳವಾರ (ಏ.22) ಮಧ್ಯಾಹ್ನ ಪ್ರವಾಸಿಗರು ತುಂಬಿದ್ದ ಸ್ಥಳದಲ್ಲಿ ಉಗ್ರರು ಗುಂಡು ಹಾರಿಸಿದ್ದು, ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ. 2019ರ ಪುಲ್ವಾಮಾ ದಾಳಿಯ ನಂತರ ಕಾಶ್ಮೀರ ಕಣಿವೆಯಲ್ಲಿ ನಡೆದ ಭೀಕರ ದಾಳಿ ಇದಾಗಿದೆ. ಇದು ದೇಶವನ್ನೇ ದುಃಖಕ್ಕೆ ತಳ್ಳಿದೆ.

ದುರ್ಘಟನೆ ಬೆನ್ನಲ್ಲೇ, ಇಂದು (ಬುಧವಾರ, ಏಪ್ರಿಲ್ 23) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯವು ಹೆಚ್ಚು ಸಂಭ್ರಮಾಚರಣೆ ಇಲ್ಲದೆ ನಡೆಯಲಿದೆ.

ಮಾರಣಾಂತಿಕ ಉಗ್ರ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸುವ ಸಲುವಾಗಿ, ಪಂದ್ಯ ಸಮಯದಲ್ಲಿ ಪಟಾಕಿ ಸಿಡಿಸದಿರಲು ಬಿಸಿಸಿಐ ನಿರ್ಧರಿಸಿದೆ. ಇದೇ ವೇಳೆ ಆಟಗಾರರು ಮತ್ತು ಅಂಪೈರ್‌ಗಳು ಕಪ್ಪುತೋಳು ಪಟ್ಟಿ ಧರಿಸಲಿದ್ದಾರೆ. ಈ ಕುರಿತು ಮೂಲಗಳು ಹಿಂದೂಸ್ತಾನ್ ಟೈಮ್ಸ್‌ಗೆ ಖಚಿತಪಡಿಸಿವೆ. ಇದೇ ವೇಳೆ ಪಂದ್ಯ ಆರಂಭವಾಗುವ ಮೊದಲು ಒಂದು ನಿಮಿಷ ಮೌನಾಚರಣೆ ಇರಲಿದೆ.

ಹೆಚ್ಚು ಸಂಭ್ರಮ ಇರಲಿಲ್ಲ

"ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲರ ಸ್ಮರಣಾರ್ಥ ಉಭಯ ತಂಡಗಳ ಆಟಗಾರರು ಕಪ್ಪು ಪಟ್ಟಿ ಧರಿಸಿ ಒಂದು ನಿಮಿಷ ಮೌನ ಆಚರಿಸಲಿದ್ದಾರೆ" ಎಂದು ಬಿಸಿಸಿಐ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ. “ಗೌರವ ಸೂಚಕವಾಗಿ ಎಂಐ ಹಾಗೂ ಎಸ್‌ಆರ್‌ಹೆಚ್ ನಡುವಿನ ಪಂದ್ಯದ ಸಮಯದಲ್ಲಿ ಯಾವುದೇ ಚಿಯರ್‌ಲೀಡರ್‌ಗಳು ಇರುವುದಿಲ್ಲ. ಯಾವುದೇ ಪಟಾಕಿ ಸಿಡಿಸಲಾಗುವುದಿಲ್ಲ,” ಎಂದು ಅವರು ಹೇಳಿದ್ದಾರೆ.

ಉಗ್ರ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಖ್ಯಾತ ಕ್ರಿಕೆಟಿಗರು ಭಯೋತ್ಪಾದನೆಯನ್ನು ಖಂಡಿಸಿದ್ದಾರೆ. ವಿರಾಟ್ ಕೊಹ್ಲಿ, ಗೌತಮ್‌ ಗಂಭೀರ್‌ ಹಾರ್ದಿಕ್ ಪಾಂಡ್ಯ ದುಃಖ ವ್ಯಕ್ತಪಡಿಸಿದ್ದಾರೆ.

ಪಹಲ್ಗಾಮ್ ನಲ್ಲಿ ಏನಾಯಿತು?

ಕಾಶ್ಮೀರ ಪೊಲೀಸರ ಪ್ರಕಾರ, ಕನಿಷ್ಠ ನಾಲ್ಕು ಭಯೋತ್ಪಾದಕರು ಪ್ರವಾಸಿಗರ ಮೇಲೆ ಹತ್ತಿರದಿಂದಲೇ ಗುಂಡು ಹಾರಿಸಿದರು. ಭಯೋತ್ಪಾದಕರು ಮುಖ್ಯವಾಗಿ ಪುರುಷ ಪ್ರವಾಸಿಗರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. “ಸುತ್ತಲೂ ಹಲವಾರು ಪ್ರವಾಸಿಗರು ಇದ್ದರು. ಆದರೆ ಭಯೋತ್ಪಾದಕರು ನಿರ್ದಿಷ್ಟವಾಗಿ ಪುರುಷ ಪ್ರವಾಸಿಗರನ್ನು ಗುರಿಯಾಗಿಸಿಕೊಂಡರು,” ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ. ಘಟನೆಯಲ್ಲಿ 28ಕ್ಕೂ ಹೆಚ್ಚು ಅಮಾಯಕರು ಸಾವನ್ನಪ್ಪಿದ್ದಾರೆ. ಕಾಶ್ಮೀರದ ಈ ದಾಳಿಯ ನಂತರ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾ ಭೇಟಿಯನ್ನು ಮೊಟಕುಗೊಳಿಸಿ ದೆಹಲಿಗೆ ಮರಳಿದ್ದಾರೆ.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.