ಕನ್ನಡ ಸುದ್ದಿ  /  Cricket  /  No Jasprit Bumrah Kl Rahul And Devdutt Padikkal Akash Deep Debut Here Is India Probable Playing 11 For Ranchi Test Prs

ಬುಮ್ರಾ, ರಾಹುಲ್ ಔಟ್-ಮತ್ತೊಬ್ಬ ಕನ್ನಡಿಗ, ಆರ್​ಸಿಬಿ ಆಟಗಾರ ಪದಾರ್ಪಣೆ; 4ನೇ ಟೆಸ್ಟ್​ಗೆ ಭಾರತದ ಸಂಭಾವ್ಯ ತಂಡ

India Probable Playing 11 For Ranchi Test : ಇಂಗ್ಲೆಂಡ್ ಎದುರಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರಿ ಬದಲಾವಣೆಯಾದ ಕಾರಣ ಭಾರತ ತಂಡದ ಆಡುವ 11ರ ಬಳಗದಲ್ಲಿ ಯಾರಿಗೆಲ್ಲಾ ಅವಕಾಶ ಸಿಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

4ನೇ ಟೆಸ್ಟ್​ಗೆ ಭಾರತದ ಪ್ಲೇಯಿಂಗ್ XI
4ನೇ ಟೆಸ್ಟ್​ಗೆ ಭಾರತದ ಪ್ಲೇಯಿಂಗ್ XI (AP)

ಮೊದಲ ಪಂದ್ಯದಲ್ಲಿ ಸೋತು ಉಳಿದೆರಡರಲ್ಲಿ ಗೆದ್ದಿರುವ ಟೀಮ್ ಇಂಡಿಯಾ (Team India), ನಾಲ್ಕನೇ ಟೆಸ್ಟ್​ನಲ್ಲೂ ಜಯಭೇರಿ ಬಾರಿಸಿ ಸರಣಿಯನ್ನು ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆದರೆ ಪ್ರಮುಖ ಪಂದ್ಯಕ್ಕೆ ಸ್ಟಾರ್​ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಮತ್ತೊಂದೆಡೆ ಇನ್ನೂ ಫಿಟ್ ಆಗದ ಕೆಎಲ್ ರಾಹುಲ್ (KL Rahul) ಈ ಪಂದ್ಯದಿಂದಲೂ ಹೊರಬಿದ್ದಿದ್ದಾರೆ. ಇನ್ನು ಬುಮ್ರಾ ಬದಲಿಯಾಗಿ ಮುಕೇಶ್ ಕುಮಾರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

4ನೇ ಟೆಸ್ಟ್​ ಪಂದ್ಯಕ್ಕೆ ಭಾರಿ ಬದಲಾವಣೆಯಾದ ಕಾರಣ ಆಡುವ 11ರ ಬಳಗದಲ್ಲಿ ಯಾರಿಗೆಲ್ಲಾ ಅವಕಾಶ ಸಿಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಸಿಕ್ಕ ಅವಕಾಶದಲ್ಲಿ ಕೆಲವರು ವೈಫಲ್ಯ ಅನುಭವಿಸಿದರೆ, ಕೆಲವರು ಮಿಂಚಿನ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಆರ್​ಸಿಬಿ ವೇಗಿ ಆಕಾಶ್ ದೀಪ್, ಕನ್ನಡಿಗ ದೇವದತ್ ಪಡಿಕ್ಕಲ್ ಪದಾರ್ಪಣೆ ಸಾಧ್ಯತೆ ಇದೆ. ಆದರೆ ರಜತ್ ಪಾಟೀದಾರ್​ರನ್ನು ಕೈಬಿಡುವ ನಿರೀಕ್ಷೆ ಇದೆ.

ಪಡಿಕ್ಕಲ್, ಆಕಾಶ್ ಪದಾರ್ಪಣೆ, ರಜತ್ ಡ್ರಾಪ್?

ದೇಶೀಯ ಕ್ರಿಕೆಟ್​ನಲ್ಲಿ ಧೂಳೆಬ್ಬಿಸಿದ ಹಿನ್ನೆಲೆ ತಂಡದಲ್ಲಿ ಸ್ಥಾನ ಪಡೆದ ರಜತ್ ಪಾಟೀದಾರ್ ಸಿಕ್ಕ ಅವಕಾಶವನ್ನು ಕೈಚೆಲ್ಲಿದರು. ಎರಡು ಮತ್ತು ಮೂರನೇ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ತೀವ್ರ ನಿರಾಸೆ ಮೂಡಿಸಿದರು. ಕಣಕ್ಕಿಳಿದ ನಾಲ್ಕೂ ಇನ್ನಿಂಗ್ಸ್​​ಗಳಲ್ಲಿ 46 ರನ್ ಗಳಿಸಿದ್ದಾರೆ. ಹೀಗಾಗಿ ಅವರನ್ನು ಕೈಬಿಡಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಬದಲಿಗೆ ದೇವದತ್ ಪಡಿಕ್ಕಲ್​ಗೆ ಅವಕಾಶ ಕೊಟ್ಟು ನೋಡಲು ಚಿಂತನೆ ನಡೆಸಿದೆ. ಇತ್ತೀಚೆಗೆ ದೇಶೀಯ ಕ್ರಿಕೆಟ್​ನಲ್ಲಿ ಶತಕಗಳ ಸರದಾರನಾಗಿರುವ ಪಡಿಕ್ಕಲ್, 4ನೇ ಟೆಸ್ಟ್​ನಲ್ಲಿ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

ಮತ್ತೊಂದೆಡೆ ಬುಮ್ರಾ ಬಿಡುಗಡೆಯಾದ ಕಾರಣ ಮತ್ತೊಬ್ಬ ವೇಗಿ ತಂಡಕ್ಕೆ ಅಗತ್ಯ ಇದೆ. ಬದಲಿಯಾಗಿ ಮುಕೇಶ್ ಕುಮಾರ್​ಗೆ ಮಣೆ ಹಾಕಲಾಗಿದ್ದರೂ ಆರ್​ಸಿಬಿ ವೇಗಿ ಆಕಾಶ್ ದೀಪ್​ಗೆ ಅವಕಾಶ ನೀಡಲು ಚರ್ಚೆ ನಡೆದಿದೆ. ಏಕೆಂದರೆ ಮುಕೇಶ್ ಕುಮಾರ್ ಎರಡನೇ ಟೆಸ್ಟ್​​ ಸಿರಾಜ್ ಬದಲಿಗೆ ತಂಡದಲ್ಲಿ ಅವಕಾಶ ಪಡೆದಿದ್ದರು. ಆದರೆ ಹೆಚ್ಚು ರನ್ ಚಚ್ಚಿಸಿಕೊಂಡಿದ್ದರು. ಹೀಗಾಗಿ ಈ ಬಾರಿ ಅವರನ್ನು ತಂಡದಿಂದ ಹೊರಗಿಡುವ ಸಾಧ್ಯತೆ ಇದೆ. ಆಕಾಶ್ ದೀಪ್ ಟೆಸ್ಟ್​ ಕ್ರಿಕೆಟ್ ಡೆಬ್ಯೂ ಮಾಡುವ ನಿರೀಕ್ಷೆ ಇದೆ.

ಧ್ರುವ್ ಜುರೆಲ್ - ಸರ್ಫರಾಜ್ ಮಿಂಚು

ಮೂರನೇ ಟೆಸ್ಟ್ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಧ್ರುವ್ ಜುರೆಲ್ ಮತ್ತು ಸರ್ಫರಾಜ್ ಖಾನ್, ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ಅವಕಾಶ ಸಿಗುವುದು ಖಚಿತವಾಗಿದೆ. ಜುರೆಲ್ ವಿಕೆಟ್ ಕೀಪಿಂಗ್​ನಲ್ಲಿ ಚುರುಕುತನ ತೋರಿದರೆ, ಬ್ಯಾಟಿಂಗ್​ನಲ್ಲಿ ಕಣಕ್ಕಿಳಿದ ಒಂದು ಇನ್ನಿಂಗ್ಸ್​ನಲ್ಲಿ 46 ರನ್ ಬಾರಿಸಿದರು. ಇನ್ನು ಸರ್ಫರಾಜ್ ಎರಡೂ ಇನ್ನಿಂಗ್ಸ್​ಗಳಲ್ಲಿ 62, 68* ರನ್ ಗಳಿಸಿದರು. ಉಳಿದಂತೆ ಎಲ್ಲರೂ ತಂಡದಲ್ಲಿ ಆಡುವುದು ಖಚಿತವಾಗಿದೆ.

ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್​ ಆರಂಭಿಸಲಿದ್ದರೆ, ಶುಭ್ಮನ್ ಗಿಲ್ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್ ಸ್ಪಿನ್ನರ್​​ಗಳಾಗಿರಲಿದ್ದಾರೆ. ಕುಲ್ದೀಪ್ ಅದ್ಭುತ ಪ್ರದರ್ಶನ ನೀಡಿರುವ ಹಿನ್ನೆಲೆ ಅಕ್ಷರ್ ಪಟೇಲ್​ ಬೆಂಚ್ ಕಾಯಬೇಕಾಗುತ್ತದೆ. ಮತ್ತೊಬ್ಬ ವೇಗಿ ಮೊಹಮ್ಮದ್ ಸಿರಾಜ್ ಸಹ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದು, ಬೌಲಿಂಗ್​ ವಿಭಾಗವನ್ನು ಮುನ್ನಡೆಸಲಿದ್ದಾರೆ.

ನಾಲ್ಕನೇ ಟೆಸ್ಟ್​ಗೆ ಭಾರತದ ಸಂಭಾವ್ಯ ತಂಡ

ರೋಹಿತ್​ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ದೇವದತ್ ಪಡಿಕ್ಕಲ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.

ನಾಲ್ಕನೇ ಟೆಸ್ಟ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್.

(This copy first appeared in Hindustan Times Kannada website. To read more like this please logon to kannada.hindustantimes.com)