ಕೆಎಲ್ ರಾಹುಲ್ ಅಥವಾ ರಿಷಭ್ ಪಂತ್ ಅಲ್ಲ; ಭಾರತದ ಮುಂದಿನ ಟೆಸ್ಟ್ ನಾಯಕ ಯಾರಾಗಬೇಕೆಂದು ವಿವರಿಸಿದ ನವಜೋತ್ ಸಿಂಗ್
Navjot Singh Sidhu : ಭಾರತದ ಮುಂದಿನ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಯಾರಾಗಬೇಕು ಎಂಬುದಕ್ಕೆ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ಉತ್ತರ ಕೊಟ್ಟಿದ್ದಾರೆ.
ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ನಾಯಕರಲ್ಲಿ ರೋಹಿತ್ ಶರ್ಮಾ (Rohit Sharma) ಕೂಡ ಒಬ್ಬರು. ಮೂರು ಫಾರ್ಮೆಟ್ಗಳಲ್ಲೂ ನಾಯಕನಾಗಿ ಮಿಂಚುತ್ತಿದ್ದಾರೆ. ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲದಿದ್ದರೂ ಅತ್ಯಂತ ಯಶಸ್ಸು ಕಂಡಿದ್ದಾರೆ. ಜೂನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ರೋಹಿತ್ ಅವರೇ ನಾಯಕನಾಗಿರಲಿದ್ದಾರೆ. ಆದರೆ, ಅದಕ್ಕೂ ಮುನ್ನ 17ನೇ ಆವೃತ್ತಿಯ ಐಪಿಎಲ್ ಮಧ್ಯೆಯೇ ಭಾರತ ತಂಡದ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ಎದ್ದಿವೆ.
ಟೆಸ್ಟ್ ಕ್ರಿಕೆಟ್ ನಾಯಕತ್ವದ ಬದಲಾವಣೆ ಕೂಗು ಮತ್ತೊಮ್ಮೆ ಎದ್ದಿದ್ದು, ಯಾರಿಗೆ ಅವಕಾಶ ನೀಡಬೇಕು ಎನ್ನುವುದರ ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ. ಈಗಾಗಲೇ ರೋಹಿತ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಹಾಗಾಗಿ ಅವರನ್ನೇ ರೋಹಿತ್ ನಂತರ ವೈಟ್ ಬಾಲ್ ಕ್ರಿಕೆಟ್ ನಾಯಕನಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಟೆಸ್ಟ್ ಕ್ರಿಕೆಟ್ ನಾಯಕತ್ವದ ಆಯ್ಕೆಯು ಕಷ್ಟವಾಗಿದೆ.
ಭಾರತದ ಟೆಸ್ಟ್ ನಾಯಕನನ್ನು ಆರಿಸಿದ ನವಜೋತ್ ಸಿಂಗ್
ಆದರೆ ಈ ಕಷ್ಟದ ಆಯ್ಕೆಯನ್ನು ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ಸುಲಭಗೊಳಿಸಿದ್ದಾರೆ. ಭಾರತದ ಮುಂದಿನ ಟೆಸ್ಟ್ ನಾಯಕ ಯಾರಾಗಬೇಕು ಎಂಬುದಕ್ಕೆ ಉತ್ತರ ಕೊಟ್ಟಿದ್ದಾರೆ. ಭಾರತದ ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗಿ ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ. ಬುಮ್ರಾ ಅವರು ಪ್ರಸ್ತುತ ರೆಡ್ ಬಾಲ್ ತಂಡದ ಉಪನಾಯಕರಾಗಿದ್ದು, ಅವರೇ ಮುಂದಿನ ಟೆಸ್ಟ್ ನಾಯಕನಾದರೆ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೀವು ಟೆಸ್ಟ್ ಕ್ರಿಕೆಟ್ ನೋಡಿದರೆ, ಬಿಸಿಸಿಐ ಮುಂಚಿತವಾಗಿ ಯೋಜನೆ ರೂಪಿಸಿದೆ. ಜಸ್ಪ್ರೀತ್ ಬುಮ್ರಾ ಅವರು ಮತ್ತೊಬ್ಬ ಅಸಾಧಾರಣ ಹೀರೋ. ನಾವು ವಿರಾಟ್ ಕೊಹ್ಲಿ, ಎಂಎಸ್ ಧೋನಿ ಬಗ್ಗೆ ಸಾಕಷ್ಟು ಮಾತನಾಡುತ್ತೇವೆ. ಆದರೆ ಜಸ್ಪ್ರೀತ್ ಬುಮ್ರಾ ಅವರು ನಿರೀಕ್ಷೆಗಳನ್ನು ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ. ಗಾಯದಿಂದ ಹೇಗೆ ಮರಳಿದ್ದಾರೆ ಎಂಬುದನ್ನು ನೋಡಿ. ಚೆಂಡಿನ ಮೂಲಕ ಮಿಂಚಿದ್ದು, ಅವರು ತಮ್ಮ ಪುನರಾಗಮನದ ಮಾತನಾಡುವಂತೆ ಮಾಡಿದ್ದಾರೆ ಎಂದು ಸಿಧು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
ಬುಮ್ರಾ ಅರ್ಹರು ಎಂದ ಸಿಧು
ಬುಮ್ರಾ ಸ್ವಾಭಾವಿಕವಾಗಿ ಉಪನಾಯಕನಾಗಿದ್ದು, ಜಸ್ಪ್ರೀತ್ ಬುಮ್ರಾ ಅವರನ್ನು ಟೆಸ್ಟ್ ಪಂದ್ಯದ ನಾಯಕರನ್ನಾಗಿ ಮಾಡಬಹುದು. ಇದನ್ನು ಮುಂಚಿತವಾಗಿಯೇ ಹೇಳುತ್ತಿದ್ದೇನೆ. ನಾಯಕನ ಬಗ್ಗೆ ನಿರ್ಧರಿಸಲು ಹಲವು ವಿಷಯಗಳು ಎದುರಾಗುತ್ತದೆ. ಆದರೆ, ಬುಮ್ರಾ ಇಂಗ್ಲೆಂಡ್‌ನಲ್ಲಿ ನಾಯಕತ್ವ ವಹಿಸಿದ ಅನುಭವ ಹೊಂದಿದ್ದಾರೆ. ಅವರು ಟೆಸ್ಟ್ ನಾಯಕತ್ವಕ್ಕೆ ಅರ್ಹರು ಎಂದು ಸಿಧು ಸೇರಿಸಿದ್ದಾರೆ.
ಜುಲೈ 2022ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಭಾರತವನ್ನು ಮುನ್ನಡೆಸಿದ್ದರು. ಕಳೆದ ವರ್ಷ ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಮೆನ್ ಇನ್ ಬ್ಲೂ ತಂಡವನ್ನು ಮುನ್ನಡೆಸಿದ್ದ 30 ವರ್ಷದ ವೇಗಿ, ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ವೇಗಿಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿರುವ 36 ಪಂದ್ಯಗಳಲ್ಲಿ 20.7 ಸರಾಸರಿಯಲ್ಲಿ 159 ವಿಕೆಟ್ ಪಡೆದಿದ್ದಾರೆ.
ಬುಮ್ರಾ ಹೊರತಾಗಿ ಕೆಎಲ್ ರಾಹುಲ್ ಮೂರು ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ರಿಷಭ್ ಪಂತ್ ಟೆಸ್ಟ್ ನಾಯಕತ್ವ ವಹಿಸದಿದ್ದರೂ ಭಾರತದ ಅತ್ಯುತ್ತಮ ಟೆಸ್ಟ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ವಿರಾಟ್ ಕೊಹ್ಲಿ ಏಳು ವರ್ಷಗಳ ಕಾಲ ಟೆಸ್ಟ್ ನಾಯಕತ್ವ ವಹಿಸಿದ್ದರು. ಅವರು ಅಧಿಕಾರದಿಂದ ಕೆಳಗಿಳಿದ ನಂತರ ರೋಹಿತ್ ಮಾರ್ಚ್ 2022 ರಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದರು.