ಪಾಕಿಸ್ತಾನಕ್ಕೆ ಮತ್ತೆ ಬೆಂಡೆತ್ತಿದ್ದ ಆರ್ಸಿಬಿ ಮಾಜಿ ಆಟಗಾರ; ನ್ಯೂಜಿಲೆಂಡ್ಗೆ ಸತತ 2ನೇ ಗೆಲುವು
- New Zealand beat Pakistan: ಹ್ಯಾಮಿಲ್ಟನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸತತ ಎರಡನೇ ಗೆಲುವು ದಾಖಲಿಸಿದೆ. ಆ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0ರಲ್ಲಿ ಮುನ್ನಡೆ ಸಾಧಿಸಿದೆ.
- New Zealand beat Pakistan: ಹ್ಯಾಮಿಲ್ಟನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸತತ ಎರಡನೇ ಗೆಲುವು ದಾಖಲಿಸಿದೆ. ಆ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0ರಲ್ಲಿ ಮುನ್ನಡೆ ಸಾಧಿಸಿದೆ.
(1 / 8)
ತಾನು ಎದುರಿಸುತ್ತಿದ್ದ ಎಲ್ಲಾ ಟೀಕೆಗಳಿಗೆ ತಿರುಗೇಟು ನೀಡಲು ಬಾಬರ್ ಅಜಮ್ಗೆ ಅವಕಾಶವಿತ್ತು. ಪಾಕಿಸ್ತಾನದ ಮಾಜಿ ನಾಯಕ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡುವ ಮೂಲಕ ಉತ್ತರ ನೀಡಬಹುದಿತ್ತು. ಆದರೆ, ಆ ಅವಕಾಶವನ್ನು ಕೈಚೆಲ್ಲಿದರು. ಬ್ಯಾಟಿಂಗ್ ಮೂಲಕ ಅರ್ಧಶತಕ ಗಳಿಸಿದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. (AFP)
(2 / 8)
ಹ್ಯಾಮಿಲ್ಟನ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಪಾಕಿಸ್ತಾನ 21 ರನ್‌ಗಳಿಂದ ಸೋಲು ಕಂಡಿತು. 195 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ, 3 ಎಸೆತಗಳು ಬಾಕಿ ಇರುವಂತೆ 173 ರನ್‌ಗಳಿಗೆ ಆಲೌಟಾಯಿತು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
(3 / 8)
ಕೊನೆಯ 4 ಓವರ್‌ಗಳಲ್ಲಿ ಪಾಕಿಸ್ತಾನಕ್ಕೆ 59 ರನ್‌ಗಳ ಅಗತ್ಯ ಇತ್ತು. ಆಗಿನ್ನೂ ಬಾಬರ್ ಕ್ರೀಸ್ನಲ್ಲೇ ಇದ್ದರು. ಆದರೆ ಇಷ್ಟು ರನ್ ಚೇಸ್ ಮಾಡುವುದು ನಿಜಕ್ಕೂ ಕಠಿಣವಾಗಿತ್ತು. ಶಾಹೀನ್ ಶಾ ಅಫ್ರಿದಿ, ಬಾಬರ್ ಜೊತೆಗಿದ್ದರು. ಇಬ್ಬರು ಸೇರಿ ಮಿಚೆಲ್ ಸ್ಯಾಂಟ್ನರ್ ಓವರ್ನಲ್ಲಿ 17 ರನ್ ಗಳಿಸಿ ಫೈಟ್ ನೀಡಲು ಮುಂದಾದರು. ಆದರೆ, 18ನೇ ಓವರ್ನಲ್ಲಿ ಬಾಬರ್ ಔಟಾದ ಬೆನ್ನಲ್ಲೇ ಪಾಕ್ ಗೆಲುವಿನ ಆಸೆ ಕಮರಿತು.
(4 / 8)
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್, ಭರ್ಜರಿ ಆರಂಭ ಪಡೆಯಿತು. ಈ ಪಂದ್ಯದಲ್ಲೂ ಫಿನ್ ಅಲೆನ್, ಪಾಕಿಸ್ತಾನದ ಬೌಲರ್ಗಳ ಬೆವರಿಳಿಸಿದರು. ಡೆವೊನ್ ಕಾನ್ವೆ (20 ರನ್) ಜೊತೆ ಸೇರಿ ಮೊದಲ ವಿಕೆಟ್‌ಗೆ 31 ಎಸೆತಗಳಲ್ಲಿ 59 ರನ್ ಕಲೆ ಹಾಕಿದರು. ಆದರೆ ಫಿನ್ ಅಲೆನ್ ಬೆಂಕಿ-ಬಿರುಗಾಳಿ ಬ್ಯಾಟಿಂಗ್ ನಡೆಸಿದರು.
(5 / 8)
ಸತತ ವಿಕೆಟ್ಗಳ ನಡುವೆಯೂ ಮಿಂಚಿದ ಆರ್ಸಿಬಿ ಮಾಜಿ ಆಟಗಾರ ಫಿನ್ ಅಲೆನ್, ಬೌಂಡರಿ-ಸಿಕ್ಸರ್ಗಳ ಸುರಿಮಳೆಗೈದರು. 41 ಎಸೆತಗಳಲ್ಲಿ 5 ಸಿಕ್ಸರ್, 7 ಬೌಂಡರಿ ಸಹಿತ 74 ರನ್ ಗಳಿಸಿದರು. ಇದು ಅವರ ನಾಲ್ಕನೇ ಟಿ20 ಅರ್ಧಶತಕ. ಕೇನ್ ವಿಲಿಯಮ್ಸನ್ 26 ರನ್, ಡೇರಿಲ್ ಮಿಚೆಲ್ 17, ಗ್ಲೆನ್ ಫಿಲಿಪ್ಸ್ 13, ಚಾಪ್ಮನ್ 4, ಸ್ಯಾಂಟ್ನರ್ 25 ರನ್ ಗಳಿಸಿದರು. ಅಂತಿಮವಾಗಿ ಕಿವೀಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 194 ರನ್ ಕಲೆ ಹಾಕಿತು. ಪಾಕ್ ಪರ ಹ್ಯಾರಿಸ್ ರೌಫ್ 3 ವಿಕೆಟ್ ಪಡೆದರು.
(6 / 8)
195 ರನ್‌ಗಳ ಗುರಿ ಬೆನ್ನಟ್ಟಿದ ಪಾಕ್, ಆರಂಭಿಕ ಡಬಲ್ ಆಘಾತ ಅನುಭವಿಸಿತು. ಸಯಿಮ್ ಅಯುಬ್ 1, ಮೊಹಮ್ಮದ್ ರಿಜ್ವಾನ್ 7 ರನ್ ಗಳಿಸಿ ಬೇಗನೆ ಔಟಾದರು. 10 ರನ್‌ಗಳಿಗೆ ಆರಂಭಿಕರು ನಿರ್ಗಮಿಸಿದರು. ಆ ಬಳಿಕ ಬಾಬರ್ ಅಜಮ್ ಮತ್ತು ಫಖಾರ್ ಜಮಾನ್ ಅದ್ಭುತ ಪ್ರದರ್ಶನ ನೀಡಿದರು. 3ನೇ ವಿಕೆಟ್‌ಗೆ ಈ ಜೋಡಿ 87 ರನ್ ಜೊತೆಯಾಟವಾಡಿತು.
(7 / 8)
ಫಖಾರ್ 25 ಎಸೆತಗಳಲ್ಲಿ 5 ಸಿಕ್ಸರ್, 3 ಬೌಂಡರಿ ಸಹಿತ 50 ರನ್ ಗಳಿಸಿ ಔಟಾದರೆ, ಬಾಬರ್ 43 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಿತ 66 ರನ್ ಗಳಿಸಿದರು. ಇವರ ಅದ್ಭುತ ಆಟದ ನಂತರ ಪಾಕಿಸ್ತಾನ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದರು.
(8 / 8)
ಇಫ್ತಿಕಾರ್ ಅಹ್ಮದ್ 4, ಅಜಮ್ ಖಾನ್ 2, ಅಮೀರ್ ಜಮಲ್ 9, ಶಾಹೀನ್ ಅಫ್ರಿದಿ 22, ಅಬ್ಬಾಸ್ ಅಫ್ರಿದಿ 7 ರನ್, ಉಸಾಮ ಮಿರ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಮತ್ತೊಂದೆಡೆ ಆ್ಯಡಂ ಮಿಲ್ನೆ 4 ವಿಕೆಟ್ ಉರುಳಿಸಿ ಪಾಕ್ ಕುಸಿತಕ್ಕೆ ಕಾರಣರಾದರು. ಟಿಮ್ ಸೌಥಿ, ಬೆನ್ ಸಿಯರ್ಸ್, ಇಶ್ ಸೋಧಿ ತಲಾ 2 ವಿಕೆಟ್ ಪಡೆದರು. ಇದರೊಂದಿಗೆ ಕಿವೀಸ್ 21 ರನ್‌ಗಳಿಂದ ಗೆದ್ದು ಬೀಗಿತು.
ಇತರ ಗ್ಯಾಲರಿಗಳು