ಗ್ಲೆನ್ ಫಿಲಿಪ್ಸ್ ನೆನಪಿಸಿದ ಹ್ಯಾರಿಸ್ ರೌಫ್ ಕ್ಯಾಚ್; ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಚೆಂಡು ಪಡೆದ ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ಗ್ಲೆನ್ ಫಿಲಿಪ್ಸ್ ನೆನಪಿಸಿದ ಹ್ಯಾರಿಸ್ ರೌಫ್ ಕ್ಯಾಚ್; ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಚೆಂಡು ಪಡೆದ ವಿಡಿಯೋ ವೈರಲ್

ಗ್ಲೆನ್ ಫಿಲಿಪ್ಸ್ ನೆನಪಿಸಿದ ಹ್ಯಾರಿಸ್ ರೌಫ್ ಕ್ಯಾಚ್; ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಚೆಂಡು ಪಡೆದ ವಿಡಿಯೋ ವೈರಲ್

Haris Rauf: ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಫಿನ್ ಅಲೆನ್ ಅವರ ಅದ್ಭುತ ಕ್ಯಾಚ್ ಹಿಡಿದು ಅಚ್ಚರಿ ಮೂಡಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

ಗ್ಲೆನ್ ಫಿಲಿಪ್ಸ್ ನೆನಪಿಸಿದ ಹ್ಯಾರಿಸ್ ರೌಫ್ ಕ್ಯಾಚ್; ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಚೆಂಡು ಪಡೆದ ವಿಡಿಯೋ ವೈರಲ್
ಗ್ಲೆನ್ ಫಿಲಿಪ್ಸ್ ನೆನಪಿಸಿದ ಹ್ಯಾರಿಸ್ ರೌಫ್ ಕ್ಯಾಚ್; ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಚೆಂಡು ಪಡೆದ ವಿಡಿಯೋ ವೈರಲ್

ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರು ಹಿಡಿದ ಕ್ಯಾಚ್​ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ಫೆಂಟಾಸ್ಟಿಕ್ ಕ್ಯಾಚ್ ಹಿಡಿಯುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಪಾಕಿಸ್ತಾನದ ಆಟಗಾರರು ಕಳಪೆ ಫೀಲ್ಡಿಂಗ್​ಗೆ ಹೆಸರುವಾಸಿಯಾಗಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್​ಗೂ ಗುರಿಯಾಗಿದ್ದುಂಟು. ಆದರೆ ಇದೀಗ ಹ್ಯಾರಿಸ್ ರೌಫ್ ಪಡೆದಿರುವ ಕ್ಯಾಚ್​ ಕ್ರಿಕೆಟ್ ಪ್ರಿಯರನ್ನು ಹುಬ್ಬೇರಿಸುವಂತೆ ಮಾಡಿದೆ.

ನ್ಯೂಜಿಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ಐತಿಹಾಸಿಕ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 19.5 ಓವರ್​​ಗಳಲ್ಲಿ 204 ರನ್​ಗೆ ಆಲೌಟ್ ಆಯಿತು. ತಂಡದ ಪರ ಮಾರ್ಕ್​ ಚಾಪ್ಮನ್​ ಅವರು 94 ರನ್ ಗಳಿಸಿ ಶತಕ ವಂಚಿತರಾದರು. ಪಾಕಿಸ್ತಾನ 16 ಓವರ್​ಗಳಲ್ಲೇ 1 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಅದ್ಭುತ ಶತಕ ಸಿಡಿಸಿದ ಹಸನ್ ನವಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಹಸನ್ ನವಾಜ್ 45 ಎಸೆತಗಳಲ್ಲಿ 10 ಬೌಂಡರಿ, 7 ಸಿಕ್ಸರ್ ಸಹಿತ 105 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಗೆಲುವಿಗಿಂತ ಹೈಲೈಟ್ ಆಗಿದ್ದು ರೌಫ್ ಕ್ಯಾಚ್.

ಒಂದೇ ಕೈಯಲ್ಲಿ ಕ್ಯಾಚ್ ಪಡೆದ ಹ್ಯಾರಿಸ್ ರೌಫ್

ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಆರಂಭಿಕ ಓವರ್​​ನಲ್ಲೇ ವಿಕೆಟ್ ಹಿನ್ನಡೆ ಅನುಭವಿಸಿತು. ಶಾಹೀನ್ ಶಾ ಅಫ್ರಿದಿ ಅವರ ಬೌಲಿಂಗ್​ನಲ್ಲಿ ಎದುರಿಸಿದ ಐದನೇ ಎಸೆತದಲ್ಲಿ ಶಾರ್ಟ್​ ಫೈನ್ ಕಡೆಗೆ ಚೆಂಡನ್ನು ಬಾರಿಸಿದರು. ಅಲ್ಲಿದ್ದ ಹ್ಯಾರಿಸ್ ರೌಫ್ ಪಕ್ಷಿಯಂತೆ ಹಾರಿ ಒಂದೇ ಕೈಯಲ್ಲಿ ಚೆಂಡನ್ನು ಪಡೆಯುವ ಮೂಲಕ ಮೈದಾನದಲ್ಲಿದ್ದ ಪ್ರೇಕ್ಷಕರನ್ನು ದಂಗುಬಡಿಸಿದರು. ಅದ್ಭುತ ಕ್ಯಾಚ್ ಕಂಡು ಆರಂಭಿಕ ಆಟಗಾರ ಫಿನ್ ಅಲೆನ್ ಆಘಾತಕ್ಕೆ ಒಳಗಾದರು. ಕೊನೆಗೆ ನಗುತ್ತಾ ಮೈದಾನ ತೊರೆದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರೂ ಕೂಡ ಇದಕ್ಕೆ ಹೌಹಾರಿದ್ದಾರೆ.

ಹ್ಯಾರಿಸ್ ರೌಫ್ ಅವರ ಕ್ಯಾಚ್ ನೋಡಿದ ನೆಟ್ಟಿಗರು ನ್ಯೂಜಿಲೆಂಡ್ ಫೀಲ್ಡರ್ ಗ್ಲೆನ್ ಫಿಲಿಪ್ಸ್ ಅವರನ್ನು ನೆನಪಿಸಿಕೊಂಡಿದ್ದಾರೆ. ಗಮನಾರ್ಹವಾಗಿ, ಗ್ಲೆನ್ ಫಿಲಿಪ್ಸ್ ಇತ್ತೀಚೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂತಹದ್ದೇ ಮೂರು ಕ್ಯಾಚ್​​ಗಳನ್ನು ಪಡೆದಿದ್ದರು. ಮೊಹಮ್ಮದ್ ರಿಜ್ವಾನ್, ವಿರಾಟ್ ಕೊಹ್ಲಿ ಮತ್ತು ಶುಭ್ಮನ್ ಗಿಲ್ ಅವರ ಅದ್ಭುತ ಕ್ಯಾಚ್​ಗಳನ್ನು ಪಡೆದಿದ್ದರು. ಫಿಲಿಪ್ಸ್ ಅವರನ್ನು ಹಾರು ಪಕ್ಷಿ ಎಂದೇ ಕರೆಯುತ್ತಾರೆ. ಆದರೆ ಫಿಲಿಪ್ಸ್ ಅವರಂತೆಯೇ ಹ್ಯಾರಿಸ್ ಕ್ಯಾಚ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಇದು ಅವರ ವೃತ್ತಿಜೀವನದ ಅತ್ಯುತ್ತಮ ಕ್ಯಾಚ್ ಎಂದರೂ ತಪ್ಪಿಲ್ಲ.

ಸರಣಿಯಲ್ಲಿ ನ್ಯೂಜಿಲೆಂಡ್ ಮುನ್ನಡೆ

ಸತತ ಸೋಲುಗಳಿಂದ ಕಂಗೆಟ್ಟಿದ್ದ ಪಾಕಿಸ್ತಾನ ತಂಡ ಕೊನೆಗೂ ಜಯದ ಹಳಿಗೆ ಮರಳಿದೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಪಾಕ್​ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸುವುದರೊಂದಿಗೆ ಸರಣಿ ಕೈ ತಪ್ಪುವುದನ್ನು ರಕ್ಷಿಸಿಕೊಂಡಿದೆ. ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಸೋಲಿಗೆ ಶರಣಾಗಿದ್ದ ಪ್ರವಾಸಿಗರು, ಮೂರನೇ ಪಂದ್ಯದಲ್ಲಿ ಪುನರಾಗಮನ ಮಾಡುವ ಮೂಲಕ 2-1 ಹಿನ್ನಡೆ ಅನುಭವಿಸಿದೆ. ಆದರೆ ಉಳಿದ 2 ಪಂದ್ಯಗಳಲ್ಲಿ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner