ODI World Cup Venus: ಕ್ರಿಕೆಟ್ ಶ್ರೀಮಂತ ಇತಿಹಾಸ ಇರುವ ಕೋಲ್ಕತ್ತದ ಈಡನ್ ಗಾರ್ಡನ್ಸ್ ಭಾರತದ ಅತ್ಯಂತ ಹಳೆಯ, 2ನೇ ಅತಿ ದೊಡ್ಡ ಸ್ಟೇಡಿಯಂ
ಕನ್ನಡ ಸುದ್ದಿ  /  ಕ್ರಿಕೆಟ್  /  Odi World Cup Venus: ಕ್ರಿಕೆಟ್ ಶ್ರೀಮಂತ ಇತಿಹಾಸ ಇರುವ ಕೋಲ್ಕತ್ತದ ಈಡನ್ ಗಾರ್ಡನ್ಸ್ ಭಾರತದ ಅತ್ಯಂತ ಹಳೆಯ, 2ನೇ ಅತಿ ದೊಡ್ಡ ಸ್ಟೇಡಿಯಂ

ODI World Cup Venus: ಕ್ರಿಕೆಟ್ ಶ್ರೀಮಂತ ಇತಿಹಾಸ ಇರುವ ಕೋಲ್ಕತ್ತದ ಈಡನ್ ಗಾರ್ಡನ್ಸ್ ಭಾರತದ ಅತ್ಯಂತ ಹಳೆಯ, 2ನೇ ಅತಿ ದೊಡ್ಡ ಸ್ಟೇಡಿಯಂ

ಐಸಿಸಿ ಏಕದಿನ ವಿಶ್ವಕಪ್ ಪಂದ್ಯಗಳು ನಡೆಯಲಿರುವ ಭಾರತದ ಸ್ಟೇಡಿಯಂಗಳ ಪೈಕಿ ಕೋಲ್ಕತ್ತದ ಈಡನ್ ಗಾರ್ಡನ್ಸ್ ಅತ್ಯಂತ ಹಳೆಯ ಸ್ಟೇಡಿಯಂ. ಶ್ರೀಮಂತ ಕ್ರಿಕೆಟ್ ಇತಿಹಾಸ ಹೊಂದಿರುವ ಈ ಕ್ರೀಡಾಂಗಣದ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ.

ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಕೋಲ್ಕತ್ತದ ಈಡನ್ ಗಾರ್ಡನ್ಸ್‌ ಸ್ಟೇಡಿಯಂನಲ್ಲಿ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.
ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಕೋಲ್ಕತ್ತದ ಈಡನ್ ಗಾರ್ಡನ್ಸ್‌ ಸ್ಟೇಡಿಯಂನಲ್ಲಿ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. (HT_PRINT)

ಕೋಲ್ಕತ್ತ (ಪಶ್ಚಿಮ ಬಂಗಾಳ): ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಕಾತುರದಿಂದ ಕಾಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023 ಅಕ್ಟೋಬರ್ 5 ರಿಂದ ಭಾರತದಲ್ಲಿ ಆರಂಭವಾಗುತ್ತಿದೆ. 10 ತಂಡಗಳು ಬಹು ನಿರೀಕ್ಷಿತ ಮಹಾ ಸಮರದಲ್ಲಿ ಭಾಗವಹಿಸುತ್ತಿವೆ.

ಈ ಹಿನ್ನೆಲೆಯಲ್ಲಿ ಐಸಿಸಿ ವಿಶ್ವಕಪ್ ತಂಡಗಳು, ಪಂದ್ಯಗಳು, ಕ್ರೀಡಾಂಗಣಗಳ ವೈಶಿಷ್ಟ್ಯಗಳು, ಹಿಂದಿನ ದಾಖಲೆಗಳು, ಹೆಚ್ಚು ರನ್ ಸಿಡಿಸಿದವರು, ಹೆಚ್ಚು ವಿಕೆಟ್ ಪಡೆದರು, ಅತ್ಯಂತ ರೋಚಕ ಕ್ಷಣಗಳು ಹೀಗೆ ವಿಶ್ವಕಪ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಕ್ರಿಕೆಟ್ ಅಭಿಮಾನಿಗಳಿಗೆ ನೀಡುವ ಪ್ರಯತ್ನವನ್ನು "ಹಿಂದೂಸ್ತಾನ ಟೈಮ್ಸ್ ಕನ್ನಡ" ವೆಬ್‌ಸೈಟ್ ಮಾಡುತ್ತಿದೆ.

ಇದರ ಭಾಗವಾಗಿ ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಇತಿಹಾಸದ ಬಗ್ಗೆ ಈ ಸ್ಟೋರಿಯಲ್ಲಿ ತಿಳಿಯೋಣ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತದಲ್ಲಿರುವ ಈಡನ್ ಗಾರ್ಡನ್ಸ್ ಶ್ರೀಮಂತ ಕ್ರಿಕೆಟ್ ಇತಿಹಾಸವನ್ನು ಹೊಂದಿದೆ. 1864ರಲ್ಲಿ ನಿರ್ಮಾಣವಾಗಿರುವ ಈ ಸ್ಟೇಡಿಯಂ ಭಾರತದ ಅತ್ಯಂತ ಹಳೆಯ ಮತ್ತು ಎರಡನೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಇನ್ನ ಜಾತಿಕ ಮಟ್ಟದಲ್ಲಿ ಮೂರನೇ ಅತಿ ದೊಡ್ಡ ಕ್ರೀಡಾಂಗಣ ಎಂಬ ಹಿರಿಮೆಯನ್ನು ಹೊಂದಿದೆ.

ಕ್ರೀಡಾಂಗಣಕ್ಕೆ ಈಡನ್ ಗಾರ್ಡನ್ಸ್ ಹೆಸರು ಬಂದಿದ್ದು ಹೇಗೆ?

ಭಾರತದ ದೊಡ್ಡ ಕ್ರೀಡಾಂಗಣದಲ್ಲಿ ಒಂದಾಗಿರುವ ಕೋಲ್ಕತ್ತದ ಈಡನ್ ಗಾರ್ಡನ್ಸ್ ಸ್ಟೇಡಿಯಂಗೂ ಗವರ್ನರ್ ಜನರಲ್ ಲಾರ್ಡ್ ಆಕ್ಲೆಂಡ್ ಅವರಿಗೆ ಅವಿನಾಭಾವ ಸಂಬಂಧವಿದೆ. ಜನರಲ್ ಆಕ್ಲೆಂಡ್ ಅವರು ತಮ್ಮ ಸಹೋದರಿಯರಾದ ಎಮಿಲಿ ಮತ್ತು ಫ್ಯಾನಿ ಈಡನ್ ಅವರ ಹೆಸರುಗಳನ್ನು ಈ ಸ್ಟೇಡಿಯಂಗೆ ಇಟ್ಟಿದ್ದಾರೆ. 50 ಎಕರೆಯ ವಿಶಾಲವಾದ ವಿಸ್ತೀರ್ಣದಲ್ಲಿರುವ ಈಡನ್ ಗಾರ್ಡನ್ಸ್‌ನಲ್ಲಿ ಸುಮಾರು 68,000 ಪ್ರೇಕ್ಷಕರು ಕೂರಬಹುದಾದ ಆಸನಗಳ ಸಾಮರ್ಥ್ಯವನ್ನು ಹೊಂದಿದೆ.

ರಾಣಿಯ ಪತಿಯಿಂದ ಉಡುಗೊರೆಯಾಗಿ ಸಿಕ್ಕ ಭೂಮಿ

ಈಡನ್ ಗಾರ್ಡನ್ಸ್ ಹೆಸರಿನ ಮೂಲವನ್ನು ಹುಡುಕುತ್ತಾ ಹೋದರೆ ಅಲ್ಲೊಂದು ಹೃದಯಸ್ಪರ್ಶಿ ಕಥೆಯೊಂದು ತೆರೆದುಕೊಳ್ಳುತ್ತದೆ. ರಾಣಿ ರಾಶ್ಮೋನಿಯಾ ಅವರ ಪತಿ ಬಾಬೂ ರಾಜ್‌ಚುಂದರ್ ದಾಸ್ ಅವರು ಮೂರನೇ ಪುತ್ರಿ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾಗ ಜನರಲ್ ಲಾರ್ಡ್ ಆಕ್ಲೆಂಡ್ ಅವರು ದಾಸ್ ಅವರ ಪುತ್ರಿಯನ್ನು ಮಾರಣಾಂತಿಕ ಕಾಯಿಲೆಯಿಂದ ರಕ್ಷಿಸುತ್ತಾರೆ. ಇದರ ಕೃತಜ್ಞತೆಗಾಗಿ ರಾಣಿಯ ಪತಿ ರಾಜ್‌ಚುಂದರ್ ದಾಸ್ ಅವರು ಲಾರ್ಡ್ ಆಕ್ಲೆಂಡ್ ಮತ್ತು ಅವರ ಸಹೋದರಿಯರಾದ ಎಮಿಲಿ ಮತ್ತು ಫ್ಯಾನಿ ಈಡನ್ ಅವರಿಗೆ ಭೂಮಿಯನ್ನು ಉಡುಗೊರೆಯಾಗಿ ನೀಡುತ್ತಾರೆ. ಇದರಿಂದಾಗಿ ಈ ಜಾಗಕ್ಕೆ ಈಡನ್ ಗಾರ್ಡನ್ಸ್ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಇತಿಹಾಸದ ಪುಟಗಳು ಹೇಳುತ್ತವೆ.

1987ರಲ್ಲಿ ಭಾರತ-ಪಾಕಿಸ್ತಾನ ನಡುವೆ ಮೊದಲ ಏಕದಿನ ಪಂದ್ಯಕ್ಕೆ ವೇದಿಕೆ

ಈಡನ್ ಗಾರ್ಡನ್ಸ್‌ನಲ್ಲಿ 1934ರಲ್ಲಿ ಮೊದಲ ಟೆಸ್ಟ್ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು. ಅಂದಿನಿಂದ ಇಂದಿನ ವರೆಗೆ ಭಾರತದ ಪ್ರಮುಖ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಒಂದಾಗಿ ಉಳಿದಿದೆ. 1987ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮೊದಲ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಇಲ್ಲಿ ಆಯೋಜಿಸಲಾಗಿತ್ತು.

1987, 1996 ಹಾಗೂ 2011ರ ಆವೃತ್ತಿಯ ವಿಶ್ವಕಪ್ ಪಂದ್ಯಗಳನ್ನೂ ಇಲ್ಲಿ ಆಯೋಜಿಸಲಾಗಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಹಲವು ದಾಖಲೆಗಳಿಗೆ ಈ ಸ್ಟೇಡಿಯಂ ಸಾಕ್ಷಿಯಾಗಿದೆ. ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ತವರು ಸ್ಟೇಡಿಯಂ ಕೂಡ ಇದೇ ಈಡನ್ ಗಾರ್ಡನ್ಸ್. 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಎರಡನೇ ಸೆಮಿ ಫೈನಲ್ ಸೇರಿ ಒಟ್ಟು ಆರು ಪಂದ್ಯಗಳು ಇಲ್ಲಿ ನಡೆಯಲಿವೆ.

ಅಕ್ಟೋಬರ್ 20 ರಂದು ನೆದರ್‌ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶ, ಅಕ್ಟೋಬರ್ 31 ರಂದು ಪಾಕಿಸ್ತಾನ-ಬಾಂಗ್ಲಾದೇಶ, ನವೆಂಬರ್ 5 ರಂದು ಭಾರತ-ಬಾಂಗ್ಲಾದೇಶ, ಹಾಗೂ ನವೆಂಬರ್ 11 ರಂದು ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನವೆಂಬರ್ 16 ರಂದು ವಿಶ್ವಕಪ್‌ನ ಎರಡನೇ ಸೆಮಿ ಫೈನಲ್ ಪಂದ್ಯ ಜರುಗಲಿದೆ.

Whats_app_banner