2019ರ ಈ ದಿನ; ಆಸ್ಟ್ರೇಲಿಯಾ ನೆಲದಲ್ಲಿ ಇತಿಹಾಸ ನಿರ್ಮಿಸಿದ ಭಾರತ; ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಐತಿಹಾಸಿಕ ಸಾಧನೆ
2019ರ ಜನವರಿ 7ರಂದು ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡವು ಐತಿಹಾಸಿಕ ಸಾಧನೆ ಮಾಡಿತು. ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತು. ಭಾರತ ಕ್ರಿಕೆಟ್‌ನ ಮಹತ್ವದ ದಿನಕ್ಕೆ ಇಂದಿಗೆ 6 ವರ್ಷ ಪೂರ್ಣಗೊಂಡಿದೆ.
6 ವರ್ಷಗಳ ಹಿಂದೆ, ಅಂದರೆ 2019ರ ಈ ದಿನದಂದು (ಜನವರಿ 07) ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು ಆಸ್ಟ್ರೇಲಿಯಾದ ನೆಲದಲ್ಲಿ ಇತಿಹಾಸ ನಿರ್ಮಿಸಿತ್ತು. ಕಾಂಗರೂ ನಾಡಿನಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದು ಬೀಗಿತು. ಭಾರತೀಯ ಕ್ರಿಕೆಟ್ ತಂಡವು ಹಿಂದೆಂದೂ ಸಾಧಿಸದ ಸಾಧನೆಯನ್ನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಮಾಡಿತು. ನಾಲ್ಕು ಪಂದ್ಯಗಳ ಸರಣಿ 2-1 ಅಂತರದಿಂದ ಕೊನೆಗೊಂಡಿತು. ಸಿಡ್ನಿ ಟೆಸ್ಟ್ ಪಂದ್ಯದ ಅಂತಿಮ ದಿನದಂದು ನಿರಂತರ ಮಳೆಯಿಂದಾಗಿ ಭಾರತವು ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಳ್ಳುವುದಕ್ಕೆ ಹಿನ್ನಡೆಯಾಯ್ತು. ಆದರೆ ಸರಣಿ ಗೆದ್ದ ಭಾರತವು ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿತು.
2018ರ ಡಿಸೆಂಬರ್‌ನಲ್ಲಿ ಆರಂಭವಾದ, ಆ ಆವೃತ್ತಿಯ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾದವು. ಮೊದಲ ಮತ್ತು ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ, ಆಸ್ಟ್ರೇಲಿಯಾ ತಂಡ ಎರಡನೇ ಟೆಸ್ಟ್ ಗೆದ್ದಿತು. ಮಳೆಯಿಂದಾಗಿ ನಾಲ್ಕನೇ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತು. ವಿಶೇಷವೆಂದರೆ, ಈ ಸರಣಿ ಗೆಲುವು ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಮೊದಲ ಟೆಸ್ಟ್ ಸರಣಿ ವಿಜಯವಾಯ್ತು. ಈ ಮೈಲಿಗಲ್ಲನ್ನು ಸಾಧಿಸಿದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ತಂಡ ಪಾತ್ರವಾಯಿತು.
ಅಡಿಲೇಡ್ ಟೆಸ್ಟ್‌ನಲ್ಲಿ ಪೂಜಾರ ಅವರ ಮೊದಲ ಇನ್ನಿಂಗ್ಸ್ ಶತಕದ ನೆರವಿನಿಂದ ಭಾರತ 31 ರನ್‌ಗಳ ಭರ್ಜರಿ ಜಯ ಸಾಧಿಸಿತು. ಪರ್ತ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 146 ರನ್‌ಗಳ ಜಯ ಸಾಧಿಸುವ ಮೂಲಕ ಸರಣಿ ಸಮಬಲಗೊಳಿಸಿತು. ಮೆಲ್ಬೋರ್ನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 137 ರನ್‌ಗಳ ಭರ್ಜರಿ ಜಯಭೇರಿ ಬಾರಿಸಿತು. ಪಂದ್ಯದಲ್ಲಿ ಪೂಜಾರ ಶತಕ ಸಿಡಿಸಿದರೆ, ಬುಮ್ರಾ ಒಂಬತ್ತು ವಿಕೆಟ್ ಪಡೆದು ಮಿಂಚಿದರು.
ಸಿಡ್ನಿಯಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪೂಜಾರ ಮತ್ತು ಪಂತ್ ಅವರ ಶತಕಗಳ ನೆರವಿನಿಂದ ಭಾರತ 7 ವಿಕೆಟ್ ನಷ್ಟಕ್ಕೆ ಭರ್ಜರಿ 622 ರನ್ ಗಳಿಸಿತು. ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲುವ ಭೀತಿ ಎದುರಿಸಿತು. ಆದರೆ ಮಳೆಯಿಂದಾಗಿ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಭಾರತ ತಂಡದ ಸಾಂಘಿಕ ಹೋರಾಟ, ಯುವ ಆಟಗಾರರ ಕೆಚ್ಚೆದೆಯ ಹೋರಾಟ ಅಭಿಮಾನಿಗಳ ಮನಗೆದ್ದಿತು.
ಸರಣಿಯಲ್ಲಿ ಭಾರತೀಯರ ಪ್ರದರ್ಶನ
ಚೇತೇಶ್ವರ ಪೂಜಾರ: ಸರಣಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದವರು ಪೂಜಾರ. 74.42ರ ಸರಾಸರಿಯಲ್ಲಿ ಬ್ಯಾಟ್ ಬೀಸಿ 521 ರನ್ ಗಳಿಸಿದ ಅವರು ಆಸ್ಟ್ರೇಲಿಯಾ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಸರಣಿಯಲ್ಲಿ ಮೂರು ಶತಕಗಳು ಸಿಡಿದವು. ಸಿಡ್ನಿ ಟೆಸ್ಟ್‌ನಲ್ಲಿ 193 ರನ್ ಗಳಿಸಿದರು. ಆದರೆ ದ್ವಿಶತಕ ಸಾಧ್ಯವಾಗಲಿಲ್ಲ.
ಜಸ್ಪ್ರೀತ್ ಬುಮ್ರಾ: 17ರ ಸರಾಸರಿಯಲ್ಲಿ 21 ವಿಕೆಟ್‌ಗಳನ್ನು ಪಡೆದರು. ಮೆಲ್ಬೋರ್ನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಬುಮ್ರಾ ಅವರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಬಂತು. ಮೊದಲ ಇನ್ನಿಂಗ್ಸ್‌ನಲ್ಲಿ 33 ರನ್ ಬಿಟ್ಟುಕೊಟ್ಟು 6 ಪ್ರಮುಖ ವಿಕೆಟ್ ಪಡೆದರು.
ರಿಷಭ್ ಪಂತ್: ಸಿಡ್ನಿ ಟೆಸ್ಟ್‌ನಲ್ಲಿ ಅಜೇಯ 159 ರನ್ ಗಳಿಸುವ ಮೂಲಕ ಯುವ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾದರು. ಸರಣಿಯಲ್ಲಿ ಒಟ್ಟು 350 ರನ್‌ಗಳೊಂದಿಗೆ ಪೂಜಾರ ನಂತರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಭಾರತೀಯನಾದರು.
ಮೊಹಮ್ಮದ್ ಶಮಿ: ಬಂಗಾಳದ ವೇಗಿ ಸರಣಿಯನ್ನು 16 ವಿಕೆಟ್ ಕಬಳಿಸಿದರು. ಇದರಲ್ಲಿ ಒಂದು ಬಾರಿ ಐದು ವಿಕೆಟ್ ಸಾಧನೆಯೂ ಸೇರಿದೆ.
ವಿರಾಟ್ ಕೊಹ್ಲಿ ಯಶಸ್ವಿ ನಾಯಕ
ಈ ಸರಣಿ ಗೆಲುವು ಭಾರತೀಯ ಕ್ರಿಕೆಟ್‌ನಲ್ಲಿ ಮಹತ್ವದ ಕ್ಷಣವಾಯ್ತು. ಪೂಜಾರ ನೇತೃತ್ವದ ಬಲಿಷ್ಠ ಬ್ಯಾಟಿಂಗ್, ಬುಮ್ರಾ ನೇತೃತ್ವದ ಪ್ರಬಲ ವೇಗದ ಬೌಲಿಂಗ್ ಘಟಕ ಮತ್ತು ಕೊಹ್ಲಿಯ ಆಕ್ರಮಣಕಾರಿ ನಾಯಕತ್ವದ ಸಂಯೋಜನೆಯೇ ಈ ಗೆಲುವಿಗೆ ಕಾರಣ. ಈ ವಿಜಯವು 2020-21ರ ಪ್ರವಾಸದಲ್ಲಿ ಆಸ್ಟ್ರೇಲಿಯಾದಲ್ಲಿ ಮತ್ತೊಂದು ಸರಣಿ ಗೆಲುವಿಗೆ ಪ್ರೇರಣೆಯಾಯ್ತು. ವಿರಾಟ್ ಕೊಹ್ಲಿ ಭಾರತ ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ ಎನ್ನುವುದಕ್ಕೆ ಉತ್ತಮ ನಿದರ್ಶನವಾಯ್ತು.