ಬ್ಯಾಟಿಂಗ್ ಮರೆತರೇ ಭಾರತದ ಬ್ಯಾಟರ್ಸ್, ಐವರು ಡಕೌಟ್; ಅತಿಯಾದ ಆತ್ಮವಿಶ್ವಾಸ ಎಂದು ಬೆಂಡೆತ್ತಿದ ನೆಟ್ಟಿಗರು
ಕನ್ನಡ ಸುದ್ದಿ  /  ಕ್ರಿಕೆಟ್  /  ಬ್ಯಾಟಿಂಗ್ ಮರೆತರೇ ಭಾರತದ ಬ್ಯಾಟರ್ಸ್, ಐವರು ಡಕೌಟ್; ಅತಿಯಾದ ಆತ್ಮವಿಶ್ವಾಸ ಎಂದು ಬೆಂಡೆತ್ತಿದ ನೆಟ್ಟಿಗರು

ಬ್ಯಾಟಿಂಗ್ ಮರೆತರೇ ಭಾರತದ ಬ್ಯಾಟರ್ಸ್, ಐವರು ಡಕೌಟ್; ಅತಿಯಾದ ಆತ್ಮವಿಶ್ವಾಸ ಎಂದು ಬೆಂಡೆತ್ತಿದ ನೆಟ್ಟಿಗರು

India vs New Zealand 1st Test: ನ್ಯೂಜಿಲೆಂಡ್ ವಿರುದ್ಧದ ಟೀಮ್ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್​​ನಲ್ಲಿ 46 ರನ್​ಗಳಿಗೆ ಆಲೌಟ್ ಆಗಿದೆ. ನ್ಯೂಜಿಲೆಂಡ್ ಬೌಲರ್​​ಗಳ ಅಬ್ಬರಕ್ಕೆ ನಲುಗಿದ ಭಾರತ ಕೆಟ್ಟ ದಾಖಲೆ ಬರೆಯಿತು.

ಬ್ಯಾಟಿಂಗ್ ಮರೆತರೆ ಭಾರತದ ಬ್ಯಾಟರ್ಸ್, ಐವರು ಡಕೌಟ್; ಅತಿಯಾದ ಆತ್ಮವಿಶ್ವಾಸ ಎಂದು ಬೆಂಡೆತ್ತಿದ ನೆಟ್ಟಿಗರು
ಬ್ಯಾಟಿಂಗ್ ಮರೆತರೆ ಭಾರತದ ಬ್ಯಾಟರ್ಸ್, ಐವರು ಡಕೌಟ್; ಅತಿಯಾದ ಆತ್ಮವಿಶ್ವಾಸ ಎಂದು ಬೆಂಡೆತ್ತಿದ ನೆಟ್ಟಿಗರು

ಭಾರತ ಮತ್ತು ನ್ಯೂಜಿಲೆಂಡ್ (Indian Cricket Team) ನಡುವಿನ ಮೊದಲ ಟೆಸ್ಟ್ ಪಂದ್ಯವು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಪಂದ್ಯದ ಆರಂಭಿಕ ಮೊದಲ ದಿನವು ಮಳೆಯ ಕಾರಣ ರದ್ದುಗೊಂಡ ಕಾರಣ ಇಂದು (2ನೇ ದಿನದಾಟ ಅಕ್ಟೋಬರ್​ 17ರ ಗುರುವಾರ) ಟಾಸ್ ಗೆದ್ದು ಭಾರತ ತಂಡ, ಬ್ಯಾಟಿಂಗ್ ಆರಂಭಿಸಿತು. ಬಾಂಗ್ಲಾದೇಶ ವಿರುದ್ಧ ಸರಣಿ ಗೆದ್ದಿದ್ದ ರೋಹಿತ್​ ಪಡೆ, ಬೃಹತ್ ಮೊತ್ತದ ನಿರೀಕ್ಷೆಯಲ್ಲಿತ್ತು. ಆದರೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿದ್ದು, 50ರೊಳಗೆ ಕುಸಿದು ಟೆಸ್ಟ್​​ನಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದಿದೆ. ಆಟಗಾರರ ಕಳಪೆ ಪ್ರದರ್ಶನಕ್ಕೆ ಅತಿಯಾದ ಆತ್ಮವಿಶ್ವಾಸ ಕಾರಣ ಎಂದು ನೆಟ್ಟಿಗರು ಮಹಾಮಂಗಳಾರತಿ ಮಾಡಿದ್ದಾರೆ.

ತವರಿನ ಮೈದಾನದಲ್ಲಿ ತಾವೇ ಡಾನ್​ಗಳೆಂದು ಬೀಗುತ್ತಿದ್ದ ಭಾರತದ ಬ್ಯಾಟರ್​​ಗಳು, ನ್ಯೂಜಿಲೆಂಡ್ ಬೌಲರ್​​ಗಳ ಅಬ್ಬರದ ಸ್ವಿಂಗ್ ದಾಳಿಗೆ ತತ್ತರಿಸಿ ಹೋದರು. ಕಳೆದ 2 ದಿನಗಳಿಂದ ಮಳೆ ಬಿದ್ದಿದ್ದರಿಂದ ಮತ್ತು ಮೋಡ ಕವಿದ ವಾತಾವರಣ ಕಾರಣ ಪಿಚ್​​ನಲ್ಲಿ ಚೆಂಡು ಹೆಚ್ಚು ಸ್ವಿಂಗ್ ಆಗಿದೆ. ಹಾಗಾಗಿ ವಿಕೆಟ್​ಗಳ ಸುರಿಮಳೆ ಹರಿದಿದೆ. ಮ್ಯಾಟ್ ಹೆನ್ರಿ, ವಿಲಿಯಂ ಒರೂರ್ಕೆ ದಾಳಿಗೆ ಐವರು ಡಕೌಟ್ ಆಗಿದ್ದಾರೆ. ನಾಯಕ ರೋಹಿತ್​ ಶರ್ಮಾ ಬಿಟ್ಟರೆ 9 ಮಂದಿ ಇವರಿಬ್ಬರ ಬೌಲಿಂಗ್​ನಲ್ಲಿ ಔಟಾದರು.​ 16 ಎಸೆತಗಳಲ್ಲಿ 2 ರನ್ ಗಳಿಸಿದ ರೋಹಿತ್, ಸೌಥಿಗೆ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 9 ಎಸೆತಗಳಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು.

ಶುಭ್ಮನ್ ಗಿಲ್ ಬದಲಿಗೆ ತಂಡಕ್ಕೆ ಬಂದ ಸರ್ಫರಾಜ್ ಖಾನ್ ಕೂಡ ಸ್ಕೋರ್‌ಕಾರ್ಡ್‌ಗೆ ಯಾವುದೇ ಕೊಡುಗೆ ನೀಡಲಿಲ್ಲ. ಡೆವೊನ್ ಕಾನ್ವೆ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. 10 ರನ್​ಗಳೊಳಗೆ ಬೇಗನೇ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ, ಆರಂಭಿಕ ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ ಚೇತರಿಕೆ ನೀಡಲು ಮುಂದಾದರು. ಆದರೆ, ಇಬ್ಬರು ಎರಡಂಕಿ ಸ್ಕೋರ್ ದಾಟಿದ ಬೆನ್ನಲ್ಲೇ ಔಟಾದರು. ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಶೂನ್ಯಕ್ಕೆ ನಿರ್ಗಮಿಸಿದರು. ಕುಲ್ದೀಪ್ ಯಾದವ್ 2, ಜಸ್ಪ್ರೀತ್ ಬುಮ್ರಾ 1 ರನ್ ಗಳಿಸಿ ಔಟಾದರು. ನೋಡ ನೋಡುತ್ತಿದ್ದಂತೆಯೇ 31.2 ಓವರ್​​ಗಳಲ್ಲಿ 46ಕ್ಕೆ ಕುಸಿತ ಕಂಡಿತು.

ನ್ಯೂಜಿಲೆಂಡ್​ನ ಮ್ಯಾಟ್ ಹೆನ್ರಿ 13.2 ಓವರ್​​ಗಳಲ್ಲಿ 3 ಮೇಡಿನ್ ಸಹಿತ 15 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದರು. ಸರ್ಫರಾಜ್, ಪಂತ್, ಜಡೇಜಾ, ಅಶ್ವಿನ್, ಕುಲ್ದೀಪ್​ ಅವರನ್ನು ಬಲಿ ಪಡೆದರು. ವಿಲಿಯಂ ಒರೂರ್ಕೆ ಅವರು 12 ಓವರ್​​ಗಳಲ್ಲಿ 6 ಮೇಡಿನ್ ಸಹಿತ 22 ರನ್ ಬಿಟ್ಟುಕೊಟ್ಟು 4 ವಿಕೆಟ್ ಉರುಳಿಸಿದರು. ಯಶಸ್ವಿ ಜೈಸ್ವಾಲ್, ಕೊಹ್ಲಿ, ರಾಹುಲ್, ಬುಮ್ರಾ ಅವರನ್ನು ಔಟ್ ಮಾಡಿದರು. ಟಿಮ್ ಸೌಥಿ 6 ಓವರ್​​ಗಳಲ್ಲಿ 8 ರನ್ ನೀಡಿ 1 ವಿಕೆಟ್ ಪಡೆದರು.

ಟೆಸ್ಟ್‌ನಲ್ಲಿ ಭಾರತ ತಂಡದ ಅತ್ಯಂತ ಕಡಿಮೆ ಮೊತ್ತ

36 - ಆಸ್ಟ್ರೇಲಿಯಾ ವಿರುದ್ಧ, ಅಡಿಲೇಡ್, 2020

42 - ಇಂಗ್ಲೆಂಡ್‌ ವಿರುದ್ಧ, ಲಾರ್ಡ್ಸ್, 1974

46 - ನ್ಯೂಜಿಲೆಂಡ್‌ ವಿರುದ್ಧ , ಬೆಂಗಳೂರು, 2024

58 - ಆಸ್ಟ್ರೇಲಿಯಾ ವಿರುದ್ಧ, ಬ್ರಿಸ್ಬೇನ್, 1947

58 - ಇಂಗ್ಲೆಂಡ್‌ ವಿರುದ್ಧ, ಮ್ಯಾಂಚೆಸ್ಟರ್, 1952

ಅತಿಯಾದ ಆತ್ಮವಿಶ್ವಾಸ ಎಂದ ನೆಟ್ಟಿಗರು

ಭಾರತೀಯ ಬ್ಯಾಟರ್​ಗಳ ಹೀನಾಯ ಪ್ರದರ್ಶನದ ವಿರುದ್ಧ ಭಾರತದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ಯಾಟರ್​​ಗಳು ಬ್ಯಾಟಿಂಗ್ ಮರೆತಿದ್ದಾರೆ ಎಂದು ಕಿಚಾಯಿಸಿದ್ದಾರೆ. ಮಳೆ ಕಾರಣ ಪಿಚ್ ಕಂಡಿಷನ್ ಹೇಗಿದೆ ಎಂದು ಗೊತ್ತಿದ್ದರೂ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಏನಿತ್ತು ಎಂದು ಸಾಕಷ್ಟು ಮಂದಿ ರೋಹಿತ್​ಗೆ ಪ್ರಶ್ನಿಸಿದ್ದಾರೆ. 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಯನ್ನು ಕಣಕ್ಕಿಳಿಸುವ ಬದಲಿಗೆ ಕೆಎಲ್ ರಾಹುಲ್​ಗೆ ಅವಕಾಶ ನೀಡಬೇಕಿತ್ತು ಎಂದು ಕೇಳಿದ್ದಾರೆ. ಇದೆಂತಹ ಕ್ಯಾಪ್ಟನ್ಸಿ ಎಂದು ಕಿಡಿಕಾರಿದ್ದಾರೆ.

Whats_app_banner