ರೋಹಿತ್, ಕೊಹ್ಲಿ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳ್ತಾರಾ ಮೊಹಮ್ಮದ್ ಶಮಿ? ಮಾಧ್ಯಮ ವರದಿಗೆ ವೇಗಿ ಸ್ಪಷ್ಟನೆ
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ, ತಮ್ಮ ಟೆಸ್ಟ್ ಭವಿಷ್ಯದ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ತಾನು ಸದ್ಯ ನಿವೃತ್ತಿ ಘೋಷಿಸಲ್ಲ ಎಂಬುದನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಖುದ್ದು ಅವರೇ ಸ್ಪಷ್ಟಪಡಿಸಿದ್ದಾರೆ.

ಆರ್ ಅಶ್ವಿನ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದಾರೆ. ಅವರ ಬೆನ್ನಲ್ಲೇ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡಾ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳುವ ಸಾಧ್ಯತೆ ಇದೆ ಎಂದ ಮಾಧ್ಯಮಕ್ಕೆ ಶಮಿ ತರಾಟೆಗೆ ತೆಗೆದುಕೊಂಡಿದ್ದಾರೆ. ಐಪಿಎಲ್ 2025ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡುತ್ತಿರುವ ಶಮಿ, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಕುರಿತು ಬರೆದು ಪೋಸ್ಟ್ ಮಾಡಿದ್ದಾರೆ. ಕ್ರಿಕೆಟ್‌ನ ದೀರ್ಘ ಸ್ವರೂಪದಲ್ಲಿ ಮತ್ತಷ್ಟು ಕಾಲ ಆಡಲಿದ್ದು, ಶೀಘ್ರದಲ್ಲೇ ಎಲ್ಲಿಯೂ ಹೋಗುವುದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಸುದೀರ್ಘ ಸ್ವರೂಪದಿಂದ ಹಿಂದೆ ಸರಿದ ನಂತರ ಶಮಿ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳುವ ಸಾಧ್ಯತೆಯಿದೆ ಎಂದು ವೇಗದ ಬೌಲರ್ ಅನ್ನು ಗುರಿಯಾಗಿಸಿಕೊಂಡ ವರದಿ ಹೇಳಿತ್ತು. ಆದರೆ ಅದಕ್ಕೆ ಖುದ್ದು ಶಮಿ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯ ಬಾರಿಗೆ ನೀಲಿ ಬಣ್ಣದ ಜೆರ್ಸಿಯಲ್ಲಿ ಕಾಣಿಸಿಕೊಂಡ ವೇಗಿ, ಮಾಧ್ಯಮ ವರದಿಯ ಸ್ಕ್ರೀನ್‌ಶಾಟ್ ಸಹಿತ ಸ್ಪಷ್ಟನೆ ಕೊಟ್ಟಿದ್ದಾರೆ. ಇಂಗ್ಲೀಷ್ ವೆಬ್‌ಸೈಟ್‌ನ ಸುದ್ದಿಯ ಶೀರ್ಷಿಕೆ ಹೀಗಿದೆ. “ಮೊಹಮ್ಮದ್ ಶಮಿ ನಿವೃತ್ತಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಂತರ ಟೆಸ್ಟ್ ಕ್ರಿಕೆಟ್‌ಗೆ ಭಾರತೀಯ ವೇಗಿ ವಿದಾಯ ಹೇಳುವ ಸಾಧ್ಯತೆ” ಎಂದು ಬರೆಯಲಾಗಿದೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಶಮಿ. “ತುಂಬಾ ಚೆನ್ನಾಗಿದೆ, ಮಹಾರಾಜ್. ಮೊದಲು ನೀವು ನಿಮ್ಮ ಕೆಲಸದಲ್ಲಿ ಉಳಿಯುವ ದಿನಗಳನ್ನು ಎಣಿಸಿ. ಆಮೇಲೆ ನಮ್ಮ ಬಗ್ಗೆ ಬರೆಯುವಿರಂತೆ. ಕೆಲವೊಮ್ಮೆ ಆದರೂ ಒಳ್ಳೆಯದನ್ನು ಹೇಳಬೇಕು. ಇದು ಈ ದಿನದ ಅತ್ಯಂತ ಕೆಟ್ಟ ಸ್ಟೋರಿ, ಕ್ಷಮಿಸಿ” ಎಂದು ಮೊಹಮ್ಮದ್ ಶಮಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ.
ಡಬ್ಲ್ಯುಟಿಸಿ ಫೈನಲ್ ಕೊನೆಯ ಪಂದ್ಯ
ಶಮಿ ಭಾರತ ಕ್ರಿಕೆಟ್ ತಂಡದ ಪರ 64 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 27.71ರ ಸರಾಸರಿಯಲ್ಲಿ 229 ವಿಕೆಟ್ ಪಡೆದಿದ್ದಾರೆ. ಜೂನ್ 2023ರಲ್ಲಿ ಓವಲ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪಂದ್ಯವು ಅವರ ಕೊನೆಯ ಟೆಸ್ಟ್ ಆಗಿತ್ತು.
ಭಾರತದಲ್ಲೇ ನಡೆದ 2023ರ ಏಕದಿನ ವಿಶ್ವಕಪ್‌ಲ್ಲಿ ಗಾಯಗೊಂಡ ನಂತರ ವೇಗಿ ಆಟದಿಂದ ಹೊರಗುಳಿದಿದ್ದರು. ಆದರೆ ಅಂತಿಮವಾಗಿ ಅವರು ಈ ವರ್ಷ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಭಾರತ ತಂಡಕ್ಕೆ ಮರಳಿದರು. ಆ ಬಳಿಕ ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಮ್ ಇಂಡಿಯಾ ಭಾಗವಾಗಿದ್ದರು.
ಐಪಿಎಲ್‌ನಲ್ಲಿ ಕಳಪೆ ಫಾರ್ಮ್
ಐಪಿಎಲ್ 2025ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಮೊಹಮ್ಮದ್ ಶಮಿ, ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಈವರೆಗೆ ಆಡಿದ ಒಂಬತ್ತು ಪಂದ್ಯಗಳಲ್ಲಿ ಕೇವಲ ಆರು ವಿಕೆಟ್ ಮಾತ್ರ ಪಡೆದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅವರನ್ನು ಎಸ್‌ಆರ್‌ಎಚ್ ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಡಲಾಗಿತ್ತು. 11.23ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿಕೊಂಡಿದ್ದಾರೆ. ಮೇ 17ರಂದು ಐಪಿಎಲ್ ಪುನರಾರಂಭಗೊಳ್ಳಲಿದ್ದು, ಸನ್‌ರೈಸರ್ಸ್ ಆಡುವ ಬಳಗದಲ್ಲಿ ಸ್ಥಾನ ಪಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.