ಹಸನ್ ನವಾಜ್ ಚೊಚ್ಚಲ ಶತಕ, ಕೊನೆಗೂ ಜಯ ಕಂಡ ಪಾಕಿಸ್ತಾನ; ಬೃಹತ್ ಮೊತ್ತ ಪೇರಿಸಿದರೂ ನ್ಯೂಜಿಲೆಂಡ್ಗೆ 9 ವಿಕೆಟ್ ಸೋಲು
ಈಡನ್ ಪಾರ್ಕ್ನಲ್ಲಿ ಶುಕ್ರವಾರ (ಮಾರ್ಚ್ 21) ನಡೆದ ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ 2-1 ಮುನ್ನಡೆ ಸಾಧಿಸಿದೆ.

ಸತತ ಸೋಲುಗಳಿಂದ ಕಂಗೆಟ್ಟಿದ್ದ ಪಾಕಿಸ್ತಾನ ತಂಡ ಕೊನೆಗೂ ಜಯದ ಹಳಿಗೆ ಮರಳಿದೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಪಾಕ್ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸುವುದರೊಂದಿಗೆ ಸರಣಿ ಕೈ ತಪ್ಪುವುದನ್ನು ರಕ್ಷಿಸಿಕೊಂಡಿದೆ. ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಸೋಲಿಗೆ ಶರಣಾಗಿದ್ದ ಪ್ರವಾಸಿಗರು, ಮೂರನೇ ಪಂದ್ಯದಲ್ಲಿ ಪುನರಾಗಮನ ಮಾಡುವ ಮೂಲಕ 2-1 ಹಿನ್ನಡೆ ಅನುಭವಿಸಿದೆ. ಆದರೆ ಉಳಿದ 2 ಪಂದ್ಯಗಳಲ್ಲಿ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 19.5 ಓವರ್ಗಳಲ್ಲಿ 204 ರನ್ಗೆ ಆಲೌಟ್ ಆಯಿತು. ಪಾಕಿಸ್ತಾನ 16 ಓವರ್ಗಳಲ್ಲೇ 1 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ಅದ್ಭುತ ಶತಕ ಸಿಡಿಸಿದ ಹಸನ್ ನವಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 205 ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಆರಂಭಿಕ ಜೋಡಿ ಮೊಹಮ್ಮದ್ ಹ್ಯಾರಿಸ್ ಮತ್ತು ಹಸನ್ ನವಾಜ್ ಮೊದಲ ವಿಕೆಟ್ಗೆ 74 ರನ್ಗಳ ಜತೆಯಾಟ ನೀಡಿದರು. 20 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ 41 ರನ್ ಗಳಿಸಿ ಉತ್ತಮ ಭದ್ರ ಬುನಾದಿ ಹಾಕಿಕೊಟ್ಟಿದ್ದ ಹ್ಯಾರಿಸ್ನನ್ನು 6ನೇ ಓವರ್ನಲ್ಲಿ ಜೇಕಬ್ ಡಫಿ ಹೊರದಬ್ಬಿದರು.
ನವಾಜ್ ಚೊಚ್ಚಲ ಶತಕ
ಇದಾದ ಬಳಿಕ ಬ್ಯಾಟಿಂಗ್ಗಿಳಿದ ನಾಯಕ ಸಲ್ಮಾನ್ ಆಘಾ ಅವರು ಹಸನ್ ನವಾಜ್ ಜತೆಗೂಡಿ ಇನ್ನಿಂಗ್ಸ್ ಅನ್ನು ನಿಭಾಯಿಸಿದ್ದು ಮಾತ್ರವಲ್ಲ, ಇಬ್ಬರೂ ಬ್ಯಾಟರ್ಗಳು ವೇಗವಾಗಿ ರನ್ ಕಲೆ ಹಾಕುವ ಮೂಲಕ ಗಮನ ಸೆಳೆದರು. ಅಂತಿಮವಾಗಿ ಪಾಕಿಸ್ತಾನ 16 ಓವರ್ಗೆ 1 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಿತು. ಹಸನ್ 45 ಎಸೆತಗಳಲ್ಲಿ 10 ಬೌಂಡರಿ ಮತ್ತು 7 ಸಿಕ್ಸರ್ ಬಾರಿಸಿ 105 ರನ್ ಗಳಿಸಿ ಅಜೇಯರಾಗಿ ಉಳಿದರು. ಇದು ಅವರ ಮೂರನೇ ಪಂದ್ಯವಾಗಿದ್ದು, ಚೊಚ್ಚಲ ಶತಕದೊಂದಿಗೆ ದಾಖಲೆಯ ಗೆಲುವಿಗೆ ಕಾರಣಕರ್ತರಾದರು. ನಾಯಕ ಸಲ್ಮಾನ್ 31 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ ಅಜೇಯ 51 ರನ್ ಗಳಿಸಿದರು. ಜೇಕಬ್ ಡಫಿ ಏಕೈಕ ವಿಕೆಟ್ ಪಡೆದರು.
ಚಾಪ್ಮನ್ ಶತಕ ವಂಚಿತ, ನ್ಯೂಜಿಲೆಂಡ್ ಭರ್ಜರಿ ಮೊತ್ತ
ಇದಕ್ಕೂ ಮುನ್ನ ಟಾಸ್ ಗೆದ್ದ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ, ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಬ್ಯಾಟಿಂಗ್ಗೆ ಇಳಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆಯದೆ ಮೊದಲ ಓವರ್ನಲ್ಲಿ ಫಿನ್ ಅಲೆನ್ (ಶೂನ್ಯ) ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಮಾರ್ಕ್ ಚಾಪ್ಮನ್ ಬಿರುಗಾಳಿಯ ಶೈಲಿಯಲ್ಲಿ ಬ್ಯಾಟಿಂಗ್ ಆರಂಭಿಸಿದರು. ಟಿಮ್ ಸೀಫರ್ಟ್ ಅವರೊಂದಿಗೆ 2ನೇ ವಿಕೆಟ್ಗೆ 40 ರನ್ಗಳ ಜೊತೆಯಾಟ ಹಂಚಿಕೊಂಡರು. 5ನೇ ಓವರ್ನಲ್ಲಿ ಹ್ಯಾರಿಸ್ ರೌಫ್, ಟಿಮ್ ಸೀಫರ್ಟ್ (19 ರನ್) ಅವರನ್ನು ಔಟ್ ಮಾಡುವ ಮೂಲಕ ಪಾಲುದಾರಿಕೆ ಮುರಿದರು. 2 ವಿಕೆಟ್ ಪತನದ ಹೊರತಾಗಿಯೂ, ಡ್ಯಾರಿಲ್ ಮಿಚೆಲ್ ಮತ್ತು ಚಾಪ್ಮನ್ ವೇಗವಾಗಿ ರನ್ ಗಳಿಸುವುದನ್ನು ಮುಂದುವರಿಸಿದರು. ಇವರಿಬ್ಬರು 3ನೇ ವಿಕೆಟ್ ಗೆ 55 ರನ್ ಸೇರಿಸಿದರು.
10ನೇ ಓವರ್ನಲ್ಲಿ ಡ್ಯಾರಿಲ್ ಮಿಚೆಲ್ ಅವರನ್ನು ಔಟ್ ಮಾಡುವ ಮೂಲಕ ಶದಾಬ್ ಖಾನ್ ಜೊತೆಯಾಟ ಕೊನೆಗೊಳಿಸಿದರು. ಡ್ಯಾರಿಲ್ ಮಿಚೆಲ್ 11 ಎಸೆತಗಳಲ್ಲಿ 17 ರನ್ ಗಳಿಸಿದರು. ಶತಕದತ್ತ ಸಾಗುತ್ತಿದ್ದ ಮಾರ್ಕ್ ಚಾಪ್ಮನ್ ಅವರನ್ನು 13ನೇ ಓವರ್ನಲ್ಲಿ ಶಾಹೀನ್ ಶಾ ಅಫ್ರಿದಿ ಔಟ್ ಮಾಡಿ ನ್ಯೂಜಿಲೆಂಡ್ಗೆ ದೊಡ್ಡ ಹೊಡೆತ ನೀಡಿದರು. ಚಾಪ್ಮನ್ 44 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿ 94 ರನ್ ಗಳಿಸಿ ಶತಕ ವಂಚಿತರಾದರು. ಜಿಮ್ಮಿ ನೀಶಮ್ (3), ಮಿಚೆಲ್ ಹೇ (9) ಮತ್ತು ಕೈಲ್ ಜೇಮಿಸನ್ (ಶೂನ್ಯ) ಬೇಗನೇ ಔಟಾದರು. 19ನೇ ಓವರ್ನಲ್ಲಿ ನಾಯಕ ಮೈಕೆಲ್ ಬ್ರೇಸ್ವೆಲ್ (31 ರನ್) ಹ್ಯಾರಿಸ್ ರೌಫ್ ಬೌಲಿಂಗ್ನಲ್ಲಿ ಪೆವಿಲಿಯನ್ ಸೇರಿದರು. ರೌಫ್ 3, ಶಾಹೀನ್ ಅಫ್ರಿದಿ, ಅಬ್ರಾರ್ ಅಹ್ಮದ್, ಅಬ್ಬಾಸ್ ಅಫ್ರಿದಿ ತಲಾ 2 ವಿಕೆಟ್ ಕಿತ್ತರು.
