155/2ರಲ್ಲಿದ್ದ ಪಾಕ್, 191 ರನ್‌ ವೇಳೆಗೆ ಆಲೌಟ್‌; 36 ರನ್‌ ಅಂತರದಲ್ಲಿ 8 ವಿಕೆಟ್‌ ಕಳೆದುಕೊಂಡ ಬಾಬರ್‌ ಪಡೆ
ಕನ್ನಡ ಸುದ್ದಿ  /  ಕ್ರಿಕೆಟ್  /  155/2ರಲ್ಲಿದ್ದ ಪಾಕ್, 191 ರನ್‌ ವೇಳೆಗೆ ಆಲೌಟ್‌; 36 ರನ್‌ ಅಂತರದಲ್ಲಿ 8 ವಿಕೆಟ್‌ ಕಳೆದುಕೊಂಡ ಬಾಬರ್‌ ಪಡೆ

155/2ರಲ್ಲಿದ್ದ ಪಾಕ್, 191 ರನ್‌ ವೇಳೆಗೆ ಆಲೌಟ್‌; 36 ರನ್‌ ಅಂತರದಲ್ಲಿ 8 ವಿಕೆಟ್‌ ಕಳೆದುಕೊಂಡ ಬಾಬರ್‌ ಪಡೆ

India vs Pakistan ICC ODI World Cup 2023: ಏಕದಿನ ವಿಶ್ವಕಪ್‌ 2023ರ ಪಂದ್ಯದಲ್ಲಿ ಭಾರತ ವಿರುದ್ಧ ಉತ್ತಮ ಆರಂಭ ಪಡೆದ ಪಾಕಿಸ್ತಾ, 191 ರನ್‌ಗಳಿಗೆ ಆಲೌಟ್‌ ಆಗಿತ್ತು. ಭಾರತದ ಬೌಲಿಂಗ್‌ ಮ್ಯಾಜಿಕ್ ಹೇಗಿತ್ತು ನೋಡಿ.

ಭಾರತ ತಂಡದ ಆಟಗಾರರ ಸಂಭ್ರಮ
ಭಾರತ ತಂಡದ ಆಟಗಾರರ ಸಂಭ್ರಮ (PTI)

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್ 2023ರ (ICC Cricket World Cup 2023) ಮುಖಾಮುಖಿಯಲ್ಲಿ, ಪಾಕಿಸ್ತಾನ ವಿರುದ್ಧ (India vs Pakistan) ಭಾರತದ ಬೌಲರ್‌ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಟಾಸ್ ಗೆದ್ದು ಪಾಕಿಸ್ತಾನವನ್ನು ಬ್ಯಾಟಿಂಗ್‌ಗೆ ಇಳಿಸಿದ ನಾಯಕ ರೋಹಿತ್ ಶರ್ಮಾ (Rohit Sharma) ನಿರ್ಧಾರವನ್ನು ಸಂಪೂರ್ಣ ಸಮರ್ಥಿಸಿದ ಬೌಲರ್‌ಗಳು, ಬಾಬರ್‌ ಬಳಗವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ್ದಾರೆ.

ಉತ್ತಮ ಆರಂಭ ಪಡೆದ ಪಾಕಿಸ್ತಾನವು, ದಿಢೀರ್‌ ಕುಸಿತ ಕಂಡಿತು. ಪಾಕಿಸ್ತಾನ ತಂಡವು ಇನ್ನಿಂಗ್ಸ್ ಮಧ್ಯದಲ್ಲಿ ಅನಿರೀಕ್ಷಿತ ಕುಸಿತ ಎದುರಿಸಿತು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಭಾರತದ ಬೌಲರ್‌ಗಳನ್ನು ಎದುರಿಸಲು ಪರದಾಡಿದರು. ಒಂದು ಹಂತದಲ್ಲಿ 155 ರನ್‌ ವೇಳೆಗೆ ಕೇವಲ 2 ವಿಕೆಟ್‌ ಕಳೆದುಕೊಂಡಿದ್ದ ತಂಡ, ಕೆಲವೇ ನಿಮಿಷಗಳಲ್ಲಿ 191 ರನ್‌ ಆಗುವಷ್ಟರಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಕಳೆದುಕೊಂಡಿತು.

ಪಾಕ್‌ ಪರ ಆರಂಭಿಕ ಜೋಡಿಯಾದ ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್-ಉಲ್-ಹಕ್, ಮೊದಲ ವಿಕೆಟ್‌ಗೆ 41 ರನ್ ಪೇರಿಸಿದರು. 20 ರನ್‌ ಗಳಿಸಿದ್ದ ಶಫೀಕ್, ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಅವರ ಬೆನ್ನಲ್ಲೇ ಇಮಾಮ್ ಕೂಡಾ 36 ರನ್‌ ಗಳಿಸಿ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಕ್ಯಾಚ್‌ ನೀಡಿ ಔಟಾದರು.

ಅರ್ಧಶತಕದ ಜೊತೆಯಾಟ

ಪಾಕಿಸ್ತಾನ ತಂಡದ ಭರವಸೆಯ ಜೋಡಿಯಾದ ಬಾಬರ್ ಅಜಾಮ್ ಮತ್ತು ಮೊಹಮ್ಮದ್ ರಿಜ್ವಾನ್, ಭಾರತೀಯ ಬೌಲರ್‌ಗಳ ವಿರುದ್ಧ ಹಿಡಿತ ಸಾಧಿಸಿದರು. ಇವರಿಬ್ಬರೂ ತಂಡದ ಮೊತತ್ತವನ್ನು 150ರ ಗಡಿ ದಾಟಿಸಿದರು. ಅಪಾಯ ಅರಿತ ಕುಲ್ದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ‌, ಪಾಕ್‌ ವೇಗಕ್ಕೆ ಕಡಿವಾಣ ಹಾಕಲು ಬಂದರು. ಆಗ ನಡೆದಿದ್ದೇ ಭಾರತೀಯ ಬೌಲರ್‌ಗಳ ಆಟ.

50 ರನ್‌ ಗಳಿಸಿದ್ದ ಪಾಕಿಸ್ತಾನದ ನಾಯಕ ಬಾಬರ್‌ಗೆ ಸಿರಾಜ್ ಪೆವಿಲಿಯನ್‌ ದಾರಿ ತೋರಿಸಿದರು. ಅಷ್ಟರಲ್ಲೇ ಅವರು ರಿಜ್ವಾನ್‌ ಜೊತೆಗೂಡಿ 82 ರನ್‌ಗಳ ಜೊತೆಯಾಟವನ್ನು ನೀಡಿದ್ದರು. ಆ ಬಳಿಕ ಭಾರತದ ಮಾರಕ ವೇಗ ಮತ್ತು ಸ್ಪಿನ್ ಸಂಯೋಜನೆಗೆ ಪಾಕ್‌ ತತ್ತರಿಸಿತು.

ಸೌದ್ ಶಕೀಲ್ ಮತ್ತು ಇಫ್ತಿಕರ್ ಅಹ್ಮದ್ ಅವರನ್ನು ಒಂದಕಿ ಮೊತ್ತಕ್ಕೆ ಒಂದೇ ಓವರ್‌ನಲ್ಲಿ ಕುಲ್ದೀಪ್ ಯಾದವ್‌ ಪೆವಿಲಿಯನ್‌ ಕಳುಹಿಸಿದರು. 166 ರನ್‌ ಆಗುವಷ್ಟರಲ್ಲಿ ಪಾಕ್‌ ತಂಡ ಅರ್ಧದಷ್ಟು ಆಟಗಾರರನ್ನು ಕಳೆದುಕೊಂಡಿತು. ಈ ವೇಳೆ ವೇಗದ ಮ್ಯಾಜಿಕ್‌ ಪ್ರದರ್ಶಿಸಿದ ಬುಮ್ರಾ, 49 ರನ್ ಗಳಿಸಿದ್ದ ರಿಜ್ವಾನ್ ಅವರನ್ನು ಕ್ಲೀನ್‌ ಬೋಲ್ಡ್‌ ಮಾಡಿದರು. ಅವರ ಬೆನ್ನಲ್ಲೇ ಆಲ್‌ರೌಂಡರ್ ಶಾದಾಬ್ ಖಾನ್ ಕೂಡಾ 2 ರನ್ ಗಳಿಸಿ ಕ್ಲೀನ್‌ ಬೋಲ್ಡ್‌ ಆದರು. ಅಲ್ಲಿಗೆ ಬುಮ್ರಾ ಖಾತೆಗೆ ಎರಡನೇ ವಿಕೆಟ್ ಸೇರ್ಪಡೆಯಾಯ್ತು.

ಅಂತಿಮ ಮೂರು ವಿಕೆಟ್‌ಗಳನ್ನು ಪಾಂಡ್ಯ ಮತ್ತು ರವೀಂದ್ರ ಜಡೇಜಾ ಕಬಳಿಸಿದರು. ಅಲ್ಲಿಗೆ 42.5 ಓವರ್‌ಗಳಲ್ಲಿ ಪಾಕ್‌ ತಂಡ ಗಂಟುಮೂಟೆ ಕಟ್ಟಿತು. ಭಾರತದ ಪರ ಶಾರ್ದೂಲ್ ಠಾಕೂರ್ ಹೊರತುಪಡಿಸಿ ಎಲ್ಲ ಐವರು ಬೌಲರ್‌ಗಳು ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಎರಡು ಓವರ್‌ ಮಾತ್ರ ಎಸೆದ ಠಾಕೂರ್, 12 ರನ್‌ ಬಿಟ್ಟುಕೊಟ್ಟರು.

ಕೊನೆಯ 8 ವಿಕೆಟ್‌ಗಳನ್ನು ತಂಡವು ಕೇವಲ 36 ರನ್‌ಗಳ ಅಂತರದಲ್ಲಿ ಕಳೆದುಕೊಂಡಿರುವುದು ವಿಶೇಷ. ಅಲ್ಲದೆ ಪಾಕ್‌ ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ಸಿಕ್ಸರ್‌ ಕೂಡಾ ಸಿಡಿದಿಲ್ಲ.

Whats_app_banner