Aaqib Javed: ಆ ಒಂದು ಕಾರಣದಿಂದ ಭಾರತವನ್ನು ಪಾಕಿಸ್ತಾನ ಸೋಲಿಸುತ್ತದೆ; ಅಕಿಬ್ ಜಾವೆದ್
Aaqib Javed: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಅಕಿಬ್ ಜಾವೆದ್ ಆ ಒಂದು ಕಾರಣದಿಂದ ಭಾರತದ ವಿರುದ್ಧ ಪಾಕಿಸ್ತಾನ ಜಯಭೇರಿ ಬಾರಿಸಲಿದೆ. ಭಾರತವನ್ನು ಸೋಲಿಸಲು ಪಾಕಿಸ್ತಾನಕ್ಕೆ ಉತ್ತಮ ಅವಕಾಶ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ (ODI World Cup 2023) ರೋಹಿತ್ ಶರ್ಮಾ (Rohit Sharma) ನಾಯಕತ್ವದ ಟೀಮ್ ಇಂಡಿಯಾ (Team India) ಭರ್ಜರಿ ಸಿದ್ಧತೆ ನಡೆಸುತ್ತಿದೆ. ಕ್ರಿಕೆಟ್ ಲೋಕವೇ ಭಾರತ-ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಉಭಯ ದೇಶಗಳ ನಡುವಿನ ಈ ಪಂದ್ಯವನ್ನು ಮಿನಿ ಯುದ್ಧವೆಂದೇ ಭಾವಿಸಲಾಗಿದೆ. ಭಾರತದ ಮಾಜಿ ಕ್ರಿಕೆಟಿಗರು ಪಾಕಿಸ್ತಾನ ವಿರುದ್ಧ ಗೆಲ್ಲಲೇಬೇಕು ಎನ್ನುತ್ತಿದ್ದರೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಭಾರತದ ವಿರುದ್ಧ ಜಯಿಸಲೇಬೇಕು ಎನ್ನುತ್ತಿದ್ದಾರೆ.
ಪಾಕ್ ಇತಿಹಾಸ ಬರೆಯಲಿದೆ!
ಇದರ ನಡುವೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಅಕೀಬ್ ಜಾವೆದ್ (Aaqib Javed) ಆ ಒಂದು ಕಾರಣದಿಂದ ಭಾರತದ ವಿರುದ್ಧ ಪಾಕಿಸ್ತಾನ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತವನ್ನು ಸೋಲಿಸಲು ಪಾಕಿಸ್ತಾನಕ್ಕೆ ಉತ್ತಮ ಅವಕಾಶ ಇದೆ. ಆ ಮೂಲಕ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಭಾರತವನ್ನು ಸೋಲಿಸುವ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಹೇಳಿದ್ದಾರೆ. ಪಾಕ್ ತಂಡ ಅತ್ಯಂತ ಬಲಿಷ್ಠವಾಗಿದೆ. ಐಸಿಸಿ ಏಕದಿನ ವಿಶ್ವಕಪ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರತವನ್ನು ಮಣಿಸಿ ಪಾಕ್ ಚರಿತ್ರೆ ಬರೆಯಲಿದೆ ಎಂದು ಮಾಜಿ ಕ್ರಿಕೆಟಿಗ ಸಲಹೆ ನೀಡಿದ್ದಾರೆ.
ಭಾರತದ ಆಟಗಾರರಿಗೆ ಗಾಯದ ಸಮಸ್ಯೆ
ಸದ್ಯ ಪಾಕಿಸ್ತಾನ ತಂಡವು ಅದ್ಬುತವಾಗಿದೆ. ನಿರಂತರ ಉತ್ತಮ ಪ್ರದರ್ಶನ ತೋರುತ್ತಿದೆ. ತಂಡವು ಹೆಚ್ಚು ಸಮತೋಲಿತವಾಗಿದ್ದು, ಆಟಗಾರರ ವಯಸ್ಸಿನ ಗ್ರಾಫ್ ಕೂಡ ಉತ್ತಮವಾಗಿದೆ ಎಂಬುದು ನನ್ನ ಅಭಿಪ್ರಾಯ. ಭಾರತ ತಂಡದಲ್ಲಿ ಹೇಳಿಕೊಳ್ಳೋಕೆ ದೊಡ್ಡ ದೊಡ್ಡ ಹೆಸರುಗಳೇ ಇದ್ದರೂ, ಅವರ ಫಿಟ್ನೆಸ್ ಮತ್ತು ಫಾರ್ಮ್ ನಿರೀಕ್ಷಿತವಾಗಿಲ್ಲ ಎಂದು ಭಾರತವನ್ನು ಟೀಕಿಸಿದ ಪಾಕ್ ದಿಗ್ಗಜ, ಇದು ಪಾಕಿಸ್ತಾನ ತಂಡಕ್ಕೆ ದೊಡ್ಡ ಲಾಭ ಎಂದು ಟೀಕಿಸಿದ್ದಾರೆ. ಸದ್ಯ ಭಾರತ ತಂಡಕ್ಕೆ ಹೊಸ ಆಟಗಾರರೇ ಗಟ್ಟಿ ಎಂದು ಹೇಳಿದ್ದಾರೆ.
ಭಾರತದ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಫಿಟ್ನೆಸ್ ವರದಿ ಶೀಘ್ರದಲ್ಲೇ ಬಿಸಿಸಿಐ, ಟೀಮ್ ಇಂಡಿಯಾ ಸೆಲೆಕ್ಟರ್ಸ್ ಕೈ ಸೇರಲಿದೆ. ಆ ಬಳಿಕವೇ ಭಾರತ ತಂಡದ ಸಂಯೋಜನೆ ಪೂರ್ಣಗೊಳ್ಳಲಿದೆ. ಮಧ್ಯಮ ಕ್ರಮಾಂಕದ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಸಂಪೂರ್ಣ ಫಿಟ್ ಆದರೆ ಭಾರತದ ಪಾಲಿಗೆ ಪರ ಎನ್ನಲಾಗುತ್ತಿದೆ. ಅವರು ಸಂಪೂರ್ಣ ಫಿಟ್ನೆಸ್ ಜೊತೆಗೆ ಮರಳುವ ನಿರೀಕ್ಷೆ ಇದೆ. ಈ ಇಬ್ಬರು ಏಕದಿನ ವಿಶ್ವಕಪ್ ಮತ್ತು ಏಷ್ಯಾಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ.
ಬಾಬರ್ ಪ್ರದರ್ಶನ ಸ್ಥಿರ ಎಂದ ಮಾಜಿ ವೇಗಿ
ವಿರಾಟ್ ಕೊಹ್ಲಿ ಕುರಿತು ಮಾತನಾಡಿದ ಪಾಕಿಸ್ತಾನದ ಮಾಜಿ ವಿಶ್ವಕಪ್ ವಿಜೇತ ವೇಗಿ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಬಾಬರ್ ಅವರಷ್ಟು (Babar Azam) ಸ್ಥಿರವಾಗಿಲ್ಲ ಎಂದು ಹೇಳಿದ್ದಾರೆ. ರೋಹಿತ್ ಶರ್ಮಾ ಮುಂದೆ ಎಷ್ಟು ದಿನ ಆಡಲಿದ್ದಾರೆ? ಕೊಹ್ಲಿಯನ್ನು ಬಾಬರ್‌ನೊಂದಿಗೆ ಹೋಲಿಸಿದರೆ, ಅವರು ಒಂದು ಬಾರಿ ಅತ್ಯುತ್ತಮವಾಗಿ ಆಡುತ್ತಾರೆ ಮತ್ತು ಆ ನಂತರ ಫಾರ್ಮ್ ಕಳೆದುಕೊಳ್ಳುತ್ತಾರೆ. ಅವರು ಬಾಬರ್‌ನಂತೆ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿಯೇ ಈ ಬಾರಿಯ ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಮತ್ತೊಮ್ಮೆ ಸೋಲಿಸಲು ಪಾಕಿಸ್ತಾನಕ್ಕೆ ಉತ್ತಮ ಅವಕಾಶ ಎಂದು ಹೇಳುತ್ತಿದ್ದೇನೆ ಎಂದು ಅವರು ಹೇಳಿದರು.