ರಿಜ್ವಾನ್ 122, ಸಲ್ಮಾನ್ 134; ದಕ್ಷಿಣ ಆಫ್ರಿಕಾ ಎದುರು 353 ರನ್ ಚೇಸ್ ಮಾಡಿ ಗೆದ್ದ ಪಾಕಿಸ್ತಾನ, ದಾಖಲೆಯೊಂದಿಗೆ ಫೈನಲ್ ಪ್ರವೇಶ
Pakistan vs South Africa: ಕರಾಚಿಯ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ತ್ರಿಕೋನ ಸರಣಿಯ ಕೊನೆಯ ಲೀಗ್ ಪಂದ್ಯದಲ್ಲಿ ಸೌತ್ ಆಫ್ರಿಕಾ ನೀಡಿದ್ದ 353 ರನ್ಗಳ ಗುರಿಯನ್ನು ಚೇಸ್ ಮಾಡಿದ ಪಾಕಿಸ್ತಾನ ದಾಖಲೆ ಬರೆದಿದೆ.

ಮೊಹಮ್ಮದ್ ರಿಜ್ವಾನ್ (122) ಮತ್ತು ಸಲ್ಮಾನ್ ಆಘಾ (134) ಅವರ ಸ್ಫೋಟಕ ಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ಗಳಿಂದ ಗೆದ್ದು ತ್ರಿಕೋನ ಸರಣಿಯಲ್ಲಿ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಸೌತ್ ಆಫ್ರಿಕಾ ತಂಡವು ನೀಡಿದ್ದ 353 ರನ್ಗಳ ಬೃಹತ್ ಬೆನ್ನಟ್ಟಿ ಐತಿಹಾಸಿಕ ದಾಖಲೆ ನಿರ್ಮಿಸಿರುವ ಪಾಕಿಸ್ತಾನ, ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಫೆಬ್ರವರಿ 14ರಂದು ಎದುರಿಸಲಿದೆ.
ಸೌತ್ ಆಫ್ರಿಕಾದ ಕಠಿಣ ಬೌಲಿಂಗ್ ನಡುವೆಯೂ ಬೃಹತ್ ಗುರಿ ಚೇಸ್ನೊಂದಿಗೆ ಚೇಸಿಂಗ್ನಲ್ಲಿ ನಾವು ಕೂಡ ಸಮರ್ಥರೇ ಎಂಬುದನ್ನು ಸಾಬೀತುಪಡಿಸಿದೆ. ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನದ ಪಾಲಿಗೆ ಇದು ಅತಿ ಚೇಸಿಂಗ್. ತವರಿನಲ್ಲೇ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಈ ಭರ್ಜರಿ ಗೆಲುವು ರಿಜ್ವಾನ್ ಪಡೆಗೆ ದೊಡ್ಡ ಬೂಸ್ಟ್ ಸಿಕ್ಕಂತಾಗಿದೆ.
ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಜರುಗಿದ ತ್ರಿಕೋನ ಸರಣಿಯ ಕೊನೆಯ ಲೀಗ್ ಪಂದ್ಯದಲ್ಲಿ ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿತ್ತು. ಲೀಗ್ನಲ್ಲಿ ಆಡಿದ್ದ ತಲಾ ಒಂದೊಂದು ಸೋತಿದ್ದ ಎರಡೂ ತಂಡಗಳು ಅಂತಿಮ ಸುತ್ತಿಗೆ ಪ್ರವೇಶಿಸಲು ಜಯದ ನಗೆ ಬೀರಬೇಕಿತ್ತು. ಆದರೆ ಫೈನಲ್ ನಿರೀಕ್ಷೆಯಲ್ಲಿದ್ದ ದಕ್ಷಿಣ ಆಫ್ರಿಕಾ ಕನಸನ್ನು ಮೊಹಮ್ಮದ್ ರಿಜ್ವಾನ್ ಮತ್ತು ಸಲ್ಮಾನ್ ಆಘಾ ಭಗ್ನಗೊಳಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 352 ರನ್ಗಳ ಬೃಹತ್ ಮೊತ್ತ ಪೇರಿಸಿತು. ನಾಯಕ ಟೆಂಬಾ ಬವುಮಾ 82, ಮ್ಯಾಥ್ಯೂ ಬ್ರೀಟ್ಜ್ಕೆ 83, ಹೆನ್ರಿಚ್ ಕ್ಲಾಸೆನ್ 87 ರನ್ ಸಿಡಿಸಿದರು. ಈ ಗುರಿ ಬೆನ್ನಟ್ಟಿದ ಪಾಕ್ 49 ಓವರ್ಗಳಲ್ಲೇ 4 ವಿಕೆಟ್ ನಷ್ಟಕ್ಕೆ 355 ರನ್ ಗಳಿಸಿತು.
ರಿಜ್ವಾನ್-ಸಲ್ಮಾನ್ ಜುಗಲ್ಬಂದಿ
ದೊಡ್ಡ ಮೊತ್ತವನ್ನು ಚೇಸ್ ಮಾಡಿದ ಪಾಕಿಸ್ತಾನ ನೂರರೊಳಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 10.4 ಓವರ್ಗಳಲ್ಲಿ 91ಕ್ಕೆ 3 ಆಗಿತ್ತು. ಫಖಾರ್ ಜಮಾನ್ 41, ಬಾಬರ್ ಅಜಮ್ 28, ಸೌದ್ ಶಕೀಲ್ 15 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಹಾಗಾಗಿ ಸೋಲುವುದು ಪಕ್ಕಾ ಎಂದು ಕೆಲವರು ಅಂದಾಜು ಮಾಡಿದ್ದರು. ಆಗ ಜೊತೆಯಾಗಿದ್ದೇ ಮೊಹಮ್ಮದ್ ರಿಜ್ವಾನ್ ಮತ್ತು ಸಲ್ಮಾನ್ ಆಘಾ.
ಈ ಜೋಡಿ ರಕ್ಷಣಾತ್ಮಕ ಆಟದ ಜೊತೆಗೆ ದಕ್ಷಿಣ ಆಫ್ರಿಕಾ ಬೌಲರ್ಗಳ ವಿರುದ್ಧ ದಿಟ್ಟ ಹೋರಾಟ ನಡೆಸಿದರು. ಗೆಲುವಿನ ಕನಸು ಹೊಂದಿದ್ದ ದಕ್ಷಿಣ ಆಫ್ರಿಕಾಗೆ ಈ ಇಬ್ಬರ ಜುಗಲ್ಬಂದಿ ಮುಳ್ಳಾಯಿತು. ನಾಲ್ಕನೇ ಮುರಿಯದ 260 ರನ್ಗಳ ಪಾಲುದಾರಿಕೆ ಒದಗಿಸಿದರು. ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸಿ ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ ಮಾಡಿದ ರಿಜ್ವಾನ್ ಮತ್ತು ಆಘಾ ಸ್ಫೋಟಕ ಶತಕ ಸಿಡಿಸಿ ಮಿಂಚಿದರು.
ರಿಜ್ವಾನ್ 128 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಿತ ಅಜೇಯ 122 ರನ್ ಚಚ್ಚಿದರೆ, ಸಲ್ಮಾನ್ 103 ಎಸೆತಗಳಲ್ಲಿ 16 ಬೌಂಡರಿ, 2 ಸಿಕ್ಸರ್ ಸಹಾಯದಿಂದ 134 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಗೆಲುವಿಗೆ ಇನ್ನೆರೆಡು ರನ್ ಬೇಕಿದ್ದ ಅವಧಿಯಲ್ಲಿ ಸಲ್ಮಾನ್ ಆಘಾ ಔಟಾದರು. ಆರಂಭದಲ್ಲಿ ಮುನ್ನಡೆ ಸಾಧಿಸಿದ ಸೌತ್ ಆಫ್ರಿಕಾ ಬೌಲರ್ಸ್, ಮಧ್ಯಮ ಮತ್ತು ಕೊನೆಯ ಓವರ್ಗಳಲ್ಲಿ ಮೇಲುಗೈ ಸಾಧಿಸಲು ವಿಫಲರಾದರು.
ಪಾಕಿಸ್ತಾನ ಚೇಸಿಂಗ್ ದಾಖಲೆ
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನದ ಅತಿ ಹೆಚ್ಚು ಮೊತ್ತ ಚೇಸ್ ಮಾಡಿದ ಐತಿಹಾಸಿಕ ದಾಖಲೆಗೆ ಪಾತ್ರವಾಯಿತು. 2022ರಲ್ಲಿ ಆಸ್ಟ್ರೇಲಿಯಾ ವಿರುದ್ಧ 349 ರನ್ ಚೇಸ್ ಮಾಡಿದ್ದು ಇದುವರೆಗಿನ ದಾಖಲೆಯಾಗಿತ್ತು.
353 ರನ್ - ಸೌತ್ ಆಫ್ರಿಕಾ ವಿರುದ್ಧ, 2025
349 ರನ್ - ಆಸ್ಟ್ರೇಲಿಯಾ ವಿರುದ್ಧ, 2022
345 ರನ್ - ಶ್ರೀಲಂಕಾ ವಿರುದ್ಧ, 2023
337 ರನ್ - ನ್ಯೂಜಿಲೆಂಡ್ ವಿರುದ್ಧ, 2023
