ಪಾಕಿಸ್ತಾನ ಕ್ರಿಕೆಟ್ನಲ್ಲಿ ಅಯೋಮಯ; ಮೂವರು ಕೋಚ್ಗಳ ಬೆನ್ನಲ್ಲೇ ಪಿಸಿಬಿ ಅಧ್ಯಕ್ಷ ರಾಜೀನಾಮೆ
Zaka Ashraf: ಜನವರಿ 19ರಂದು ಶುಕ್ರವಾರ ಲಾಹೋರ್‌ನಲ್ಲಿ ನಡೆದ ಮ್ಯಾನೇಜಿಂಗ್ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಝಾಕಾ ಅಶ್ರಫ್ ಅವರು ರಾಜೀನಾಮೆ ನೀಡಿದ್ದಾರೆ.
ಏನಾಗ್ತಿದೆ ಪಾಕಿಸ್ತಾನ ಕ್ರಿಕೆಟ್ನಲ್ಲಿ? ಒಂದೆಡೆ ಪಾಕಿಸ್ತಾನ ತಂಡ ಸತತ ಸೋಲುಗಳನ್ನು ಕಾಣುತ್ತಿದೆ. ಏಕದಿನ ವಿಶ್ವಕಪ್ ಬಳಿಕ ಆಡಿದ ಟೆಸ್ಟ್ ಮತ್ತು ಟಿ20 ಸೇರಿ ಸತತ 7 ಸೋಲುಗಳನ್ನು ಕಂಡಿದೆ. ಮತ್ತೊಂದೆಡೆ ಮಹತ್ವದ ಹುದ್ದೆಗಳಿಂದ ಎಲ್ಲರೂ ಕೆಳಗಿಳಿಯುತ್ತಿದ್ದಾರೆ. ಪಾಕ್ನ ಎನ್ಸಿಎನಲ್ಲಿದ್ದ ಮೂವರು ವಿದೇಶಿ ಕೋಚ್ಗಳು ರಾಜೀನಾಮೆ ಸಲ್ಲಿಸಿದ ಒಂದು ದಿನದ ಅವಧಿಯಲ್ಲಿ ಪಾಕ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಝಾಕಾ ಅಶ್ರಫ್ (Zaka Ashraf) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ಗೆ ದೊಡ್ಡ ಹೊಡೆತವಾಗಿದೆ. ಶುಕ್ರವಾರ (ಜನವರಿ 19ರಂದು) ಲಾಹೋರ್‌ನಲ್ಲಿ ನಡೆದ ಮ್ಯಾನೇಜಿಂಗ್ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಿದ ನಂತರ ಅಶ್ರಫ್ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದರು. ಅಶ್ರಫ್ ಕಳೆದ ವರ್ಷ ಜೂನ್‌ನಲ್ಲಿ ನಜಮ್ ಸೇಥಿ ಅವರಿಂದ ಪಿಸಿಬಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು. ಇದೇ ಸಭೆಯಲ್ಲಿ ತಮ್ಮನ್ನು ಬೆಂಬಲಿಸಿದ ಪಿಸಿಬಿ ಸದಸ್ಯರು ಮತ್ತು ಪ್ರಧಾನ ಮಂತ್ರಿ ಉಲ್-ಹಕ್ ಕಾಕರ್ಗೆ ಧನ್ಯವಾದ ಅರ್ಪಿಸಿದರು.
ಪಿಸಿಬಿಗೆ ಶುಭ ಕೋರಿದ ಅಶ್ರಫ್
ಸಭೆಯ ಕೊನೆಯಲ್ಲಿ ತಮ್ಮ ರಾಜೀನಾಮೆಯನ್ನು ಪ್ರಧಾನಿ ಅನ್ವರ್-ಉಲ್-ಹಕ್ ಕಾಕರ್ ಅವರಿಗೆ ಸಲ್ಲಿಸುತ್ತೇನೆ ಎಂದ ಅಶ್ರಫ್, ಪಿಸಿಬಿ ವಿಶ್ವಾಸ ಮತ್ತು ನಂಬಿಕೆಗೆ ಧನ್ಯವಾದ ಸಲ್ಲಿಸಿದ್ದಾರೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಕ್ರಿಕೆಟ್ ಸುಧಾರಣೆಗೆ ಶುಭ ಕೋರಿದ್ದಾರೆ. ಝಾಕಾ ಅಶ್ರಫ್ ನೇಮಕದ ನಂತರ ಪಾಕ್ ಯಾವುದೇ ಟ್ರೋಫಿಯನ್ನೂ ಗೆದ್ದಿಲ್ಲ. ಏಷ್ಯಾಕಪ್ ಫೈನಲ್ ಪ್ರವೇಶಿಸಲೂ ವಿಫಲವಾಯಿತು. ಏಕದಿನ ವಿಶ್ವಕಪ್ನಲ್ಲಿ ಲೀಗ್ನಲ್ಲೇ ಹೊರಬಿತ್ತು.
ಮೂವರು ಕೋಚ್ಗಳ ರಾಜೀನಾಮೆ
ಇದಕ್ಕೂ ಮುನ್ನ ಅಶ್ರಫ್ ಕೆಳಗಿಳಿಯುವುದಕ್ಕೂ ಮುನ್ನಾ ದಿನ ಲಾಹೋರ್‌ನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚ್ಗಳಾಗಿದ್ದ ಮಿಕ್ಕಿ ಆರ್ಥರ್ (Mickey Arthur), ಗ್ರಾಂಟ್ ಬ್ರಾಡ್‌ಬರ್ನ್ ಮತ್ತು ಆಂಡ್ರ್ಯೂ ಪುಟ್ಟಿಕ್ ಅವರು (Grant Bradburn Andrew Puttick) ತಮ್ಮ ಸ್ಥಾನಗಳಿಗೆ ಗುರುವಾರ (ಜನವರಿ 17) ರಾಜೀನಾಮೆ ನೀಡಿದ್ದಾರೆ. ಈ ಮೂವರು ಎನ್ಸಿಎಗೆ ಬರುವುದಕ್ಕೂ ಮುನ್ನ ಪಾಕ್ ರಾಷ್ಟ್ರೀಯ ತಂಡದ ಕೋಚ್ಗಳಾಗಿದ್ದರು.
ಪಾಕಿಸ್ತಾನ ತಂಡಕ್ಕೆ ಸತತ ಸೋಲು
ಏಕದಿನ ವಿಶ್ವಕಪ್ ಸೋಲಿನ ನಂತರ ಬಾಬರ್ ಅಜಮ್ ನಾಯಕತ್ವದಿಂದ ಕೆಳಗಿಳಿದರು. ನಂತರ ಶಾನ್ ಮಸೂದ್ (ಟೆಸ್ಟ್) ಮತ್ತು ಶಾಹೀನ್ ಅಫ್ರಿದಿ (ಟಿ20ಐ) ನಾಯಕನಾಗಿ ನೇಮಕಗೊಂಡರು. ಮಾಜಿ ನಾಯಕ ಮೊಹಮ್ಮದ್ ಹಫೀಜ್ ಅವರನ್ನು ಪಾಕಿಸ್ತಾನ ತಂಡದ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಏಕದಿನ ವಿಶ್ವಕಪ್ ನಂತರ ಸಂಪೂರ್ಣ ಕೋಚಿಂಗ್ ಸಿಬ್ಬಂದಿಯನ್ನೇ ಬದಲಿಸಲಾಗಿದೆ. ಸದ್ಯ ಆಸೀಸ್ ವಿರುದ್ಧ 3-0 ಅಂತರದಲ್ಲಿ ಟೆಸ್ಟ್ ಸರಣಿ ಸೋಲು, ನ್ಯೂಜಿಲೆಂಡ್ ವಿರುದ್ಧ ಈಗಾಗಲೇ ಆಡಿದ 4 ಟಿ20ಗಳಲ್ಲೂ ಸೋಲು ಅನುಭವಿಸಿದೆ.
ಪ್ರಸ್ತುತ ತಂಡದಲ್ಲಿರುವ ಕೋಚ್ಗಳು
ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ತಂಡದ ನಿರ್ದೇಶಕರಾಗಿದ್ದರು. ನಂತರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಮುಖ್ಯಕೋಚ್ ಪಾತ್ರವನ್ನು ವಹಿಸಿಕೊಂಡರು. ಆ್ಯಡಂ ಹೊಲಿಯೋಕ್ ಅವರನ್ನು ಸರಣಿಗೆ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿದ್ದು, ಉಮರ್ ಗುಲ್ ಮತ್ತು ಸಯೀದ್ ಅಜ್ಮಲ್ ಕ್ರಮವಾಗಿ ವೇಗದ ಬೌಲಿಂಗ್ ಮತ್ತು ಸ್ಪಿನ್ ಬೌಲಿಂಗ್‌ಗೆ ಬೌಲಿಂಗ್ ಕೋಚ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.