ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಶಿಫ್ಟ್​; ಹಬ್ಬಿರುವ ವದಂತಿಗಳಿಗೆ ಪಿಸಿಬಿ ಸ್ಪಷ್ಟನೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಶಿಫ್ಟ್​; ಹಬ್ಬಿರುವ ವದಂತಿಗಳಿಗೆ ಪಿಸಿಬಿ ಸ್ಪಷ್ಟನೆ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಶಿಫ್ಟ್​; ಹಬ್ಬಿರುವ ವದಂತಿಗಳಿಗೆ ಪಿಸಿಬಿ ಸ್ಪಷ್ಟನೆ

Pakistan Cricket Board: ಆತಿಥ್ಯ ವಹಿಸುವ 3 ಕ್ರೀಡಾಂಗಣಗಳಲ್ಲಿ ವಿಳಂಬವಾದ ನಿರ್ಮಾಣ ಕಾರ್ಯದಿಂದಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಅನ್ನು ದೇಶದಿಂದ ಸ್ಥಳಾಂತರಿಸಲಾಗುತ್ತದೆ ಎಂಬ ಊಹಾಪೋಹಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಳ್ಳಿಹಾಕಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಶಿಫ್ಟ್​; ಹಬ್ಬಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿದ ಪಿಸಿಬಿ
ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಶಿಫ್ಟ್​; ಹಬ್ಬಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿದ ಪಿಸಿಬಿ (X/@LoyalSachinFan)

ಬಹುನಿರೀಕ್ಷಿತಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಫೆಬ್ರವರಿ 19 ರಿಂದ ಅದ್ಧೂರಿ ಆರಂಭ ಪಡೆದುಕೊಳ್ಳಲಿದೆ. ಅಂದರೆ ಇವತ್ತಿಗೆ (ಜನವರಿ 11) ಸರಿಯಾಗಿ 38 ದಿನಗಳಿವೆ. ಆದರೆ ಕೆಲವೇ ದಿನಗಳು ಬಾಕಿ ಇರುವಾಗ ಮಹತ್ವದ ಟೂರ್ನಿಯು ಪಾಕಿಸ್ತಾನದಿಂದ ಸ್ಥಳಾಂತರ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿರುವ ಪಾಕಿಸ್ತಾನದ ಕ್ರಿಕೆಟ್ ಮೈದಾನಗಳ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಟೂರ್ನಿಯನ್ನು ಸ್ಥಳಾಂತರ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ಪಷ್ಟನೆ ನೀಡಿದೆ.

ಆತಿಥ್ಯ ವಹಿಸುವ 3 ಕ್ರೀಡಾಂಗಣಗಳಲ್ಲಿ ವಿಳಂಬವಾದ ನಿರ್ಮಾಣ ಕಾರ್ಯದಿಂದಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ದೇಶದಿಂದ ಸ್ಥಳಾಂತರಿಸಲಾಗುತ್ತದೆ ಎಂಬ ಊಹಾಪೋಹಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಳ್ಳಿಹಾಕಿದೆ. ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ಲಾಹೋರ್‌ನ ಗಡಾಫಿ ಕ್ರೀಡಾಂಗಣ ಮತ್ತು ಕರಾಚಿಯ ನ್ಯಾಷನಲ್ ಬ್ಯಾಂಕ್ ಸ್ಟೇಡಿಯಂನಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ನಡೆಯಲಿವೆ. ಆದರೆ ಮೈದಾನಗಳ ಕಾಮಗಾರಿ ಇನ್ನೂ ನಡೆಯುತ್ತಿರುವ ಚಿತ್ರಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

ಪಿಸಿಬಿ ಅಧಿಕಾರಿ ನೀಡಿದ ಸ್ಪಷ್ಟನೆ ಏನು?

ಟೂರ್ನಿ ಸ್ಥಳಾಂತರದ ಸುದ್ದಿಗಳನ್ನು ತಳ್ಳಿ ಹಾಕಿರುವ ಪಿಸಿಬಿ ಮೂಲಗಳು, ‘ಪ್ರಸಾರಕರು, ಸಂಘಟಕರು, ಅಧಿಕಾರಿಗಳು, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯೋಗವೇ ಪಾಕಿಸ್ತಾನದಲ್ಲಿ ಉಪಸ್ಥಿತಿ ಇದೆ. ನಿಗದಿಪಡಿಸಿದ ವೇಳಾಪಟ್ಟಿಯಂತೆಯೇ ಟೂರ್ನಿ ನಡೆಯಲಿದೆ’ ಎಂದು ಖಚಿತಪಡಿಸಿವೆ. ‘ಚಾಂಪಿಯನ್ಸ್ ಟ್ರೋಫಿಗಾಗಿ ಕ್ರೀಡಾಂಗಣಗಳ ನವೀಕರಣಕ್ಕೆ ಪಿಸಿಬಿ 12 ಶತಕೋಟಿ ಪಾಕಿಸ್ತಾನ ರೂಪಾಯಿ ಅಂದರೆ 370 ಕೋಟಿ (ಭಾರತೀಯ ಕರೆನ್ಸಿ) ಖರ್ಚು ಮಾಡಿದೆ’ ಎಂದು ಪಿಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ‘ಕಾಮಗಾರಿ ಅಪೂರ್ಣಗೊಂಡಿದೆ. ಟೂರ್ನಿ ಸ್ಥಳಾಂತರ ಮಾಡಲಾಗುವುದು ಎಂಬ ಸುದ್ದಿಗಳೆಲ್ಲಾ ಸತ್ಯಕ್ಕೆ ದೂರವಾದವು’ ಎಂದು ತಿಳಿಸಿದ್ದಾರೆ.

‘ನಮ್ಮ ಮಾಧ್ಯಮಗಳು ಸತ್ಯ ಏನೆಂಬುದನ್ನು ಪರಿಶೀಲಿಸದೆ ಇಂತಹ ಊಹಾಪೋಹದ ಸುದ್ದಿಗಳನ್ನು ಹಬ್ಬಿಸುತ್ತಿವೆ. ಇದು ಪಿಸಿಬಿ, ಐಸಿಸಿ, ಸರ್ಕಾರ, ವಾಣಿಜ್ಯ ಪಾಲುದಾರರು ಮತ್ತು ಅಭಿಮಾನಿಗಳ ನಡುವೆ ಗೊಂದಲವನ್ನು ಉಂಟು ಮಾಡುತ್ತಿದೆ. ಅಲ್ಲದೆ, ಈವೆಂಟ್‌ನ ಟಿಕೆಟ್ ಮತ್ತು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವಂತೆ ಮಾಡುತ್ತಿದೆ’ ಎಂದು ಅವರು ಹೇಳಿದ್ದಾರೆ. ‘ಸ್ಥಳೀಯ ವರದಿಗಾರರು ಅನುಮತಿ ಇಲ್ಲದೆ ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಿರ್ಮಾಣ ಕಾರ್ಯವನ್ನು ಚಿತ್ರೀಕರಿಸಿದ್ದಾರೆ. ನಕಾರಾತ್ಮಕವಾಗಿ ಸುದ್ದಿ ಪ್ರಕಟಿಸಿದ್ದಾರೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ನಿಗದಿಯಂತೆ ಚಾಂಪಿಯನ್ಸ್ ಟ್ರೋಫಿ ಆರಂಭ

‘ಸದ್ಯ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಕೂಲಂಕುಷವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅವರೇ ಮುಂದೆ ನಿಂತು ಕ್ರೀಡಾಂಗಣದ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ನಿಗದಿಯಂತೆ ನಡೆಯುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದು ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಕರಾಚಿಯ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನ ನವೀಕರಣ ವಿಳಂಬವಾಗಿದ್ದು, ಇಡೀ ಟೂರ್ನಿಯನ್ನು ದುಬೈಗೆ ಶಿಫ್ಟ್ ಮಾಡಲಾಗುತ್ತದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು.

Whats_app_banner