ಅಖ್ತರ್ ಟು ಅಫ್ರಿದಿ; ಚಾಂಪಿಯನ್ ಟೀಮ್ ಇಂಡಿಯಾಗೆ ವಿಶೇಷವಾಗಿ ಶುಭಕೋರಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗರು
Pakistan cricket: ಭಾರತ ತಂಡವು ಟಿ20 ವಿಶ್ವಕಪ್ ಗೆದ್ದ ನಂತರ ಶಾಹಿದ್ ಅಫ್ರಿದಿ ಅವರಿಂದ ಹಿಡಿದು ಶೋಯೆಬ್ ಅಖ್ತರ್ ಅವರೆಗೂ ಪಾಕಿಸ್ತಾನದ ಕ್ರಿಕೆಟಿಗರು ಹೇಗೆಲ್ಲಾ ಶುಭಕೋರಿದ್ದಾರೆ ನೋಡಿ.

'ದಕ್ಷಿಣ ಆಫ್ರಿಕಾ ತಂಡದ ಕುರಿತು ಸಹಾನುಭೂತಿ ತೋರಬೇಕು. ಏಕೆಂದರೆ ಭಾರತ ತಂಡವು ವಿಶ್ವಕಪ್ ಗೆಲ್ಲುತ್ತಿದೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಐಸಿಸಿ ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭವಿಷ್ಯ ನುಡಿದಿದ್ದರು. ಅದರಂತೆ ಭಾರತವು ಐಸಿಸಿ ಟಿ20 ವಿಶ್ವಕಪ್ 2024 ಫೈನಲ್ನಲ್ಲಿ ರೋಹಿತ್ ಮತ್ತು ತಂಡವು ಸೌತ್ ಆಫ್ರಿಕಾ ತಂಡವನ್ನು ಸೋಲಿಸಿದ ನಂತರ ಅಖ್ತರ್ನಿಂದ ಶಾಹಿದ್ ಅಫ್ರಿದಿವರೆಗೆ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗರು ರೋಹಿತ್ ಪಡೆಯನ್ನು ಅಭಿನಂದಿಸಿದ್ದಾರೆ.
ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಅಂತಿಮ ಓವರ್ನ ಥ್ರಿಲ್ಲರ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ಗಳಿಂದ ಸೋಲಿಸುವ ಮೂಲಕ ಭಾರತವು 11 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಿತು. ಫೈನಲ್ನಲ್ಲಿ ಹಾರ್ದಿಕ್ ಪಾಂಡ್ಯ ಮ್ಯಾಚ್ ವಿನ್ನಿಂಗ್ ಓವರ್ ಎಸೆದರು. ಅದಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ ಪ್ರಚಂಡ ಬೌಲಿಂಗ್ ನಡೆಸಿದರು. ಭಾರತದ ಐತಿಹಾಸಿಕ ಗೆಲುವಿನ ನಂತರ, ಪಾಕಿಸ್ತಾನದ ವೇಗದ ಬೌಲರ್ ಅಖ್ತರ್ ಭಾರತದ ನಾಯಕ ರೋಹಿತ್ ಅವರನ್ನು ವಿಶೇಷವಾಗಿ ಶ್ಲಾಘಿಸಿದ್ದಾರೆ.
ರೋಹಿತ್ ಅವರ ಭಾವನಾತ್ಮಕ ಕ್ಷಣವನ್ನು ಅಖ್ತರ್ ಅವರು ಎಕ್ಸ್ನಲ್ಲಿ ತಮ್ಮ ಇತ್ತೀಚಿನ ಪೋಸ್ಟ್ಗಳಲ್ಲಿ ನೆನಪಿಸಿಕೊಂಡಿದ್ದಾರೆ. 'ರೋಹಿತ್ ಶರ್ಮಾ ಭಾವನೆಗಳು ನಿಜವಾಗಿಯೂ ಉನ್ನತವಾಗಿವೆ. ಭಾರತ ತಂಡ ಗೆಲ್ಲಲು ಅರ್ಹವಾಗಿವೆ. ಅವರಿಗೆ ಅನೇಕ, ಅನೇಕ ಅಭಿನಂದನೆಗಳು. ಕಳೆದ ವರ್ಷ ಏಕದಿನ ವಿಶ್ವಕಪ್ನಲ್ಲಿ ಸೋತಿದ್ದ ಭಾರತ ಈ ಟ್ರೋಫಿ ಗೆಲ್ಲಲು ನಿಜವಾಗಲೂ ಅರ್ಹರು. ಇದನ್ನು ಈ ಹಿಂದೆಯೂ ಹೇಳಿದ್ದೇನೆ. ಕೊನೆಗೂ ಗೆದ್ದರು. ರೋಹಿತ್ ಶರ್ಮಾ ಇದ್ದಲ್ಲಿಯೇ ಮಲಗಿ ಆನಂದಭಾಷ್ಪ ಸುರಿಸಿದರು. ಇದು ಗೆಲುವಿನ ಅರ್ಥವನ್ನು ಸೂಚಿಸುತ್ತದೆ ಎಂದಿದ್ದಾರೆ.
ಪಾಕಿಸ್ತಾನದ ಮಾಜಿ ನಾಯಕ ಅಫ್ರಿದಿ ಕೂಡ ರೋಹಿತ್ ಅವರನ್ನು ಶ್ಲಾಘಿಸಿದ್ದಾರೆ, ಸ್ಮರಣೀಯ ಗೆಲುವಿಗಾಗಿ ಭಾರತಕ್ಕೆ ಅಭಿನಂದನೆಗಳು. ಈ ಟ್ರೋಫಿ ಗೆಲ್ಲಲು ರೋಹಿತ್ ಸಂಪೂರ್ಣ ಅರ್ಹರು. ಅವರು ಅಸಾಧಾರಣ ನಾಯಕರು. ವಿರಾಟ್ ಕೊಹ್ಲಿ ಯಾವಾಗಲೂ ಬಿಗ್ ಮ್ಯಾಚ್ ಪ್ಲೇಯರ್. ಬುಮ್ರಾ ನಿಸ್ಸಂದೇಹವಾಗಿ ವಿಶ್ವದ ಅತ್ಯುತ್ತಮ ಬೌಲರ್. ಹಾರ್ಡ್ ಲಕ್ ಸೌತ್ ಆಫ್ರಿಕಾ. ಟೂರ್ನಿಯಲ್ಲಿ ಅದ್ಭುತವಾಗಿ ಆಡಿದರು ಎಂದು ಅಫ್ರಿದಿ ಹೇಳಿದ್ದಾರೆ.
ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದ ನಂತರ ಭಾರತದ ಬ್ಯಾಟಿಂಗ್ ಐಕಾನ್ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20ಐ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಇವರ ಬೆನ್ನಲ್ಲೇ ರವೀಂದ್ರ ಜಡೇಜಾ ಕೂಡ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್ನಿಂದ ಹಿಂದೆ ಸರಿದರು. ರೋಹಿತ್, ಕೊಹ್ಲಿ ಭಾರತದ 2ನೇ ವಿಶ್ವಕಪ್ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಐಸಿಸಿ ವಿಶ್ವ ಟಿ20 2024ರ ಆವೃತ್ತಿಯಲ್ಲಿ ಭಾರತ ತಂಡ ಸೋಲಿಲ್ಲದ ಏಕೈಕ ತಂಡವಾಗಿ ಉಳಿದಿದೆ. ವಿರಾಟ್ ಕೊಹ್ಲಿ 76 ರನ್ ಗಳಿಸಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಲು ನೆರವಾದರು.
ಇನ್ನಷ್ಟು ಟಿ20 ವಿಶ್ವಕಪ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
