ಮತ್ತೆ ಕ್ಯಾಪ್ಟನ್ ಮಾಡೋಕೆ ಬಾಬರ್ ಅಜಮ್ ಏನೂ ಎಂಎಸ್ ಧೋನಿ ಅಲ್ಲ; ಲೈವ್ ಟಿವಿಯಲ್ಲಿ ಪಾಕ್ ಆಟಗಾರರ ಕಿತ್ತಾಟ
ಪಾಕಿಸ್ತಾನದ ಆರಂಭಿಕ ಆಟಗಾರ ಅಹ್ಮದ್ ಶೆಹಜಾದ್, ಪಿಸಿಬಿ ವಿರುದ್ಧ ಕಿಡಿಕಾರಿದ್ದಾರೆ. ಬಾಬರ್ ಅಜಮ್ ಅವರನ್ನು ಮತ್ತೆ ನಾಯಕನಾಗಿ ಕರೆತರಲು ಆತನೇನು ಎಂಎಸ್ ಧೋನಿ ಅಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಆರಂಭಿಕ ಆಟಗಾರರಾದ ಅಹ್ಮದ್ ಶೆಹಜಾದ್ ಮತ್ತು ಇಮಾಮ್-ಉಲ್-ಹಕ್, ಬಾಬರ್ ಅಜಮ್ ನಾಯಕತ್ವ ಕುರಿತು ನೇರಪ್ರಸಾರದಲ್ಲೇ ಗಂಭೀರ ಚರ್ಚೆ ನಡೆಸಿದ್ದಾರೆ. ಬಾಬರ್ ನಾಯಕತ್ವದಲ್ಲಿ ಪಾಕಿಸ್ತಾನ ಕ್ರಿಕೆಟ್ ಏನಾಗಿದ ಎಂಬ ಕುರಿತು ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿದ ಆಟಗಾರರು, ಪಿಸಿಬಿ ವಿರುದ್ಧವೂ ಟೀಕಿಸಿದ್ದಾರೆ. ಪಾಕಿಸ್ತಾನದ ಚಾನೆಲ್ ಜಿಯೋ ಟಿವಿಯಲ್ಲಿ (Geo TV) ನಡೆದ ಟಿ20 ವಿಶ್ವಕಪ್ ಸಂಬಂಧಿಸಿದ ಕಾರ್ಯಕ್ರಮದಲ್ಲಿ, ರಾಷ್ಟ್ರೀಯ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಾಗ ಬಾಬರ್ ಅಜಮ್ ಪಕ್ಷಪಾತ ಮಾಡುತ್ತಾರೆಯೇ ಎಂದು ಶೆಹಜಾದ್ ಅವರಲ್ಲಿ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಬಲಗೈ ಬ್ಯಾಟರ್ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಬಾಬರ್ ಅಜಮ್ ಅವರನ್ನು ಟಿ20 ವಿಶ್ವಕಪ್ ಪಂದ್ಯಾವಳಿಗಿಂತ ಕೆಲವೇ ವಾರಗಳಿಗಿಂತ ಮುಂಚಿತವಾಗಿ ವೈಟ್-ಬಾಲ್ ತಂಡ ನಾಯಕನಾಗಿ ಮರುನೇಮಕ ಮಾಡಿದ್ದಕ್ಕಾಗಿ ಶೆಹಜಾದ್ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ವಾಗ್ದಾಳಿ ನಡೆಸಿದರು.
“ಬಾಬರ್ ಅಜಮ್ ಸುದೀರ್ಘ ಅವಧಿಯಿಂದ ಪಾಕ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆಟಗಾರರು ದೀರ್ಘಕಾಲದಿಂದ ಫಾರ್ಮ್‌ನಲ್ಲಿಲ್ಲ. ಇದು ಚೆನ್ನಾಗಿ ಕಾಣುತ್ತಿಲ್ಲ. ಆಟಗಾರರು ಆಡಿದ ಪಂದ್ಯಗಳ ಸಂಖ್ಯೆಯನ್ನು ಗಮನಿಸಿದರೆ, ಅವರು ಇಷ್ಟು ದಿನಗಳ ಕಾಲ ತಂಡದಲ್ಲಿ ಆಡಲು ಸಮರ್ಥರಲ್ಲ ಎಂಬುದು ಅರ್ಥವಾಗುತ್ತದೆ. ಒಂದು ವೇಳೆ ತಂಡದಲ್ಲಿ ಬೇರೆ ಯಾವುದೇ ನಾಯಕ ಇದ್ದಿದ್ದರೆ, ಅವರು ಖಂಡಿತವಾಗಿಯೂ 35ರಿಂದ 40 ಪಂದ್ಯಗಳವರೆಗೆ ತಂಡದಲ್ಲಿದ್ದು ಇದೇ ಆಟಗಾರರನ್ನು ಮುನ್ನಡೆಸುತ್ತಿರಲಿಲ್ಲ. ಅವರು ತಮ್ಮ ಬಗ್ಗೆ ಯೋಚಿಸಬೇಕಿತ್ತು” ಎಂದು ಅವರು ಹೇಳಿದರು.
“ನಾವು ದ್ವಿಪಕ್ಷೀಯ ಸರಣಿ ಗೆಲ್ಲಲು ಕ್ರಿಕೆಟ್ ಆಡುತ್ತಿಲ್ಲ. ಐಸಿಸಿ ಪಂದ್ಯಾವಳಿಗಳನ್ನು ಗೆಲ್ಲುವ ಸಲುವಾಗಿ ಆಡುತ್ತೇವೆ. ಕಳೆದ 4-5 ವರ್ಷಗಳಲ್ಲಿ ನಾವು ಯಾವುದಾದರೂ ಟೂರ್ನಿ ಗೆದ್ದಿದ್ದೇವಾ? ಗೆದ್ದಿಲ್ಲ ಎಂದಾದರೆ, ಕಳೆದ 4-5 ವರ್ಷಗಳಿಂದ ಕ್ರಿಕೆಟ್ ಅನ್ನು ನಿರ್ವಹಿಸುತ್ತಿರುವ ಏಜೆಂಟ್‌ನೊಂದಿಗೆ ಪ್ರತ್ಯೇಕ ಗುಂಪು ಕೆಲಸ ಮಾಡುತ್ತಿದೆ ಎಂದು ನಾನು ಹೇಳಬಲ್ಲೆ,” ಶೆಹಜಾದ್ ಹೇಳಿದ್ದಾರೆ.
ಪಾಕಿಸ್ತಾನ ತಂಡದಲ್ಲಿರುವ ಈಗಿನ ಆಟಗಾರರು ಸರ್ಫರಾಜ್ ಅಹ್ಮದ್ ಅವರ ನಾಯಕತ್ವದಲ್ಲಿ ಪದಾರ್ಪಣೆ ಮಾಡಿದ್ದಾರೆ ಎಂದು ಶೆಹಜಾದ್‌ಗೆ ತಿಳಿಸಿದಾಗ, ಅದಕ್ಕೆ ಅವರ ಉತ್ತರ ಭಿನ್ನವಾಗಿತ್ತು. ಸರ್ಫರಾಜ್ ಅಹ್ಮದ್ ನಾಯಕತ್ವದಲ್ಲಿ ಪಾಕಿಸ್ತಾನವು 2017ರ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು ಎಂದು ಹೇಳಿದರು. ಆದರೆ, ಬಾಬರ್ ಯಾವುದೇ ಐಸಿಸಿ ಪಂದ್ಯಾವಳಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂದರು.
ಬಾಬರ್ ಏನೂ ಧೋನಿ ಅಲ್ವಲ್ಲ
“ಸರ್ಫರಾಜ್ ಅಹ್ಮದ್ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾರೆ. ಅವರನ್ನು ಸಮರ್ಥಿಸಬಹುದು. ಇವರು (ಬಾಬರ್) ಕೂಡಾ ಗೆದ್ದು ಸಮರ್ಥನೆ ನೀಡಲಿ. ಬಾಬರ್ ಅನ್ನು ಮಧ್ಯದಲ್ಲಿ ನಾಯಕತ್ವದಿಂದ ಕೆಳಗಿಳಿಸಿ ಮತ್ತೆ ಮರಳಿ ಕರೆತರಲಾಯಿತು. ಬಾಬರ್ ಏನಾದರೂ ಎಂಎಸ್ ಧೋನಿ ಆಗಿದ್ದರೆ ಮತ್ತೆ ನಾಯಕನ ಪಟ್ಟ ನೀಡುವುದರಲ್ಲಿ ಅರ್ಥವಿತ್ತು. ಆದರೆ ಬಾಬರ್ ಹಾಗಲ್ಲ. ಶಾಹೀನ್ ಅಫ್ರಿದಿ ವಿಚಾರವಾಗಿ ಈ ರೀತಿ ನಡೆದುಕೊಂಡದ್ದು ತಪ್ಪು. ಅವರನ್ನು ಕೇವಲ ಎರಡು ಪಂದ್ಯಗಳಿಗೆ ನಾಯಕನನ್ನಾಗಿ ಮಾಡಿ ನಂತರ ತೆಗೆದುಹಾಕಲಾಯ್ತು. ಅದು ಸರಿಯಲ್ಲ” ಎಂದು ಶೆಹಜಾದ್ ಪಿಸಿಬಿ ವಿರುದ್ಧ ಗುಡುಗಿದ್ದಾರೆ.
ಟಿ20 ವಿಶ್ವಕಪ್ 2024ರ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧದ ಪಂದ್ಯ ಮಳೆಯಿಂದ ರದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ಹೆಚ್ಚಿದ ಒತ್ತಡ