13 ವರ್ಷದ ಮಗು ಅಷ್ಟು ದೊಡ್ಡ ಸಿಕ್ಸ್ ಬಾರಿಸಲು ಸಾಧ್ಯವೇ? ವೈಭವ್ ಸೂರ್ಯವಂಶಿ ಮೇಲೆ ಮತ್ತೆ ವಯಸ್ಸು ಮರೆಮಾಚಿದ ಆರೋಪ
ಅಂಡರ್ 19 ಏಷ್ಯಾಕಪ್ ಪಂದ್ಯಾವಳಿಯಲ್ಲಿ ವೈಭವ್ ಸೂರ್ಯವಂಶಿ ಅಮೋಘ ಪ್ರದರ್ಶನ ನೋಡಿದ ಪಾಕಿಸ್ತಾನದ ಮಾಜಿ ವೇಗಿ ಜುನೈದ್ ಖಾನ್, ಭಾರತದ ಯುವ ಕ್ರಿಕೆಟಿಗನ ನಿಜವಾದ ವಯಸ್ಸನ್ನು ಪ್ರಶ್ನಿಸಿದ್ದಾರೆ.
ಭಾರತ ಅಂಡರ್ 19 ತಂಡದ ಬ್ಯಾಟರ್ ವೈಭವ್ ಸೂರ್ಯವಂಶಿ, ಇತ್ತೀಚೆಗೆ ಮುಕ್ತಾಯಗೊಂಡ ಅಂಡರ್ 19 ಏಷ್ಯಾಕಪ್‌ನ ಕೆಲವು ಪಂದ್ಯಗಳಲ್ಲಿ ಅಬ್ಬರಿಸಿದ್ದರು. ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪಾಲಾದ ಬಳಿಕ, ವಿಶ್ವದಾದ್ಯಂತ ಅವರು ಸುದ್ದಿಯಲ್ಲಿದ್ದಾರೆ. ಆದರೆ, ಸೂರ್ಯವಂಶಿ ಈಗ ಮತ್ತೊಮ್ಮೆ ವಯಸ್ಸಿನ ವಂಚನೆಯ ಆರೋಪ ಎದುರಿಸುತ್ತಿದ್ದಾರೆ. ಯುಎಇಯಲ್ಲಿ ಮುಕ್ತಾಯಗೊಂಡ ಅಂಡರ್ 19 ಏಷ್ಯಾಕಪ್ ಪಂದ್ಯಾವಳಿಯಲ್ಲಿ ಅಬ್ಬರಿಸಿದ್ದ ವೈಭವ್ ಕುರಿತಾಗಿ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜುನೈದ್ ಖಾನ್ ಅವರು ವಯಸ್ಸು ಮರೆಮಾಚಿದ ಆರೋಪ ಹೊರಿಸಿದ್ದಾರೆ. ಈ ಕುರಿತು ಒಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಏಷ್ಯಾಕಪ್ ಪಂದ್ಯಾವಳಿಯಲ್ಲಿ ಸೂರ್ಯವಂಶಿ ಭಾರತದ ಪರ ಜಂಟಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ ಅವರು 176 ರನ್ ಗಳಿಸಿದರು. ಇವರೊಂದಿಗೆ ಮತ್ತೋರ್ವ ಆರಂಭಿಕ ಪಾಲುದಾರ ಆಯುಷ್ ಮಹಾತ್ರೆ ಕೂಡಾ ಅಷ್ಟೇ ರನ್ ಬಾರಿಸಿದ್ದರು. ಆತಿಥೇಯ ಯುಎಇ ವಿರುದ್ಧ ಅಜೇಯ 76 ರನ್ ಗಳಿಸಿದ್ದು, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 67 ರನ್ ಗಳಿಸಿದ್ದು ಸೇರಿದಂತೆ ವೈಭವ್ ಎರಡು ಅರ್ಧಶತಕಗಳನ್ನೂ ಬಾರಿಸಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಸೂರ್ಯವಂಶಿ ಅವರ ಅರ್ಧಶತಕದ ವಿಡಿಯೊ ತುಣುಕನ್ನು ಜುನೈದ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 13ರ ಹರೆಯದ ಆಟಗಾರ 5 ಸ್ಫೋಟಕ ಸಿಕ್ಸರ್ ಹಾಗೂ 6 ಬೌಂಡರಿ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದರಲ್ಲಿ ಒಂದು ಬೃಹತ್ ಸಿಕ್ಸರ್ ಕೂಡಾ ಸೇರಿತ್ತು. ಪಾಕಿಸ್ತಾನದ ಮಾಜಿ ವೇಗಿ ಭಾರತದ ಬ್ಯಾಟಿಂಗ್ ಪ್ರತಿಭೆಯ ನಿಜವಾದ ವಯಸ್ಸನ್ನು ಪ್ರಶ್ನಿಸಿದ್ದಾರೆ. “13 ವರ್ಷದ ಮಗು ನಿಜಕ್ಕೂ ಇಷ್ಟು ಉದ್ದದ ಸಿಕ್ಸರ್ ಹೊಡೆಯಬಹುದೇ?” ಎಂದು ಜುನೈದ್ ಪ್ರಶ್ನಿಸಿದ್ದಾರೆ.
ಮತ್ತೆ ವಯಸ್ಸಿನ ಪರೀಕ್ಷೆಗೆ ಒಳಗಾಗುತ್ತಾರಾ ವೈಭವ್?
ಕಳೆದ ತಿಂಗಳು ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಸೂರ್ಯವಂಶಿ ಪಾತ್ರರಾಗಿದ್ದರು. ಬಿಹಾರ ಮೂಲದ ಕ್ರಿಕೆಟಿಗನನ್ನು ರಾಜಸ್ಥಾನ್ ರಾಯಲ್ಸ್ ತಂಡವು 1.10 ಕೋಟಿ ರೂ.ಗೆ ಖರೀದಿಸಿದೆ. ಹರಾಜು ಮುಗಿದ ಕೆಲವೇ ದಿನಗಳಲ್ಲಿ ಸೂರ್ಯವಂಶಿಯ ನಿಜವಾದ ವಯಸ್ಸು 15 ಎಂಬ ವದಂತಿ ಹರಡಿತು. ಹೀಗಾಗಿ ವಯಸ್ಸು ಮರೆಮಾಚಿದ ಆರೋಪವನ್ನು ಹೊರಿಸಲಾಯಿತು. ಆದರೆ ತನ್ನ ಮಗ ತನ್ನ ವಯಸ್ಸನ್ನು ಖಚಿತಪಡಿಸಿಕೊಳ್ಳಲು ಐದು ವರ್ಷಗಳ ಹಿಂದೆ ಬಿಸಿಸಿಐನ ಮೂಳೆ ಪರೀಕ್ಷೆಗೆ ಒಳಗಾಗಿದ್ದಾನೆ ಎಂದು ಅವರ ತಂದೆ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ನಾವು ಯಾರಿಗೂ ಹೆದರಲ್ಲ
“ಆತ ಎಂಟೂವರೆ ವರ್ಷದವನಿದ್ದಾಗಲೇ ಮೊದಲ ಬಾರಿಗೆ ಬಿಸಿಸಿಐ ಮೂಳೆ ಪರೀಕ್ಷೆಗೆ ಹಾಜರಾಗಿದ್ದ. ವೈಭವ್ ಅದಾಗಲೇ ಭಾರತ ಅಂಡರ್ -19 ತಂಡದಲ್ಲಿ ಆಡಿದ್ದಾನೆ. ನಾವು ಯಾರಿಗೂ ಹೆದರುವುದಿಲ್ಲ. ಅವನು ಮತ್ತೆ ವಯಸ್ಸಿನ ಪರೀಕ್ಷೆಗೆ ಒಳಗಾಗಬಹುದು” ಎಂದಿದ್ದಾರೆ.
ಎಲ್ಲಾ ಆರೋಪಗಳನ್ನು ಮೀರಿಸಿ ಸೂರ್ಯವಂಶಿ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಲಿದ್ದಾರೆ. ನೂತನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಂದ ಮಾರ್ಗದರ್ಶನ ಪಡೆಯುವ ಅವಕಾಶವೂ ಸಿಗಲಿದೆ.