ವಿರಾಟ್ ಕೊಹ್ಲಿಗಿಂತ ಉಮರ್ ಅಕ್ಮಲ್ ಅಂಕಿ-ಅಂಶ ಉತ್ತಮವಾಗಿದೆ; ಅವರಂತೆ ನಮ್ಮಲ್ಲಿ ಪಿಆರ್ ಕಂಪನಿ ಇಲ್ಲ ಎಂದ ಕಮ್ರಾನ್
ವಿರಾಟ್ ಕೊಹ್ಲಿ ವಿರುದ್ಧ ಕಮ್ರಾನ್ ಅಕ್ಮಲ್ ಅನಗತ್ಯ ಚರ್ಚೆ ಹುಟ್ಟುಹಾಕಿದ್ದಾರೆ. ಭಾರತೀಯ ಕ್ರಿಕೆಟಿಗನಂತೆ ತಮ್ಮ ಸಹೋದರ ಉಮರ್ ಅಕ್ಮಲ್ ತಮ್ಮ ಅಂಕಿ-ಅಂಶಗಳನ್ನು ಹಂಚಿಕೊಳ್ಳಲು ಪಿಆರ್ ಕಂಪನಿ ಹೊಂದಿಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ.
ಉಮರ್ ಅಕ್ಮಲ್ ತಮ್ಮ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಬಳಿಕ ಅವರ ಫಿಟ್ನೆಸ್ ಕುರಿತು ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಇದಕ್ಕೆ ವ್ಯಾಪಕ ಟೀಕೆಗಳು ಕೂಡಾ ಕೇಳಿ ಬಂದಿವೆ. ಈ ನಡುವೆ ಅವರನ್ನು ಸಹೋದರ ಕಮ್ರಾನ್ ಅಕ್ಮಲ್ ಬೆಂಬಲಿಸಿ ಮಾತನಾಡಿದ್ದಾರೆ. ಟಿ20 ವಿಶ್ವಕಪ್ ಅಂಕಿ-ಅಂಶಗಳ ಕುರಿತು ಮಾತನಾಡಿದ ಕಮ್ರಾನ್, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಗಿಂತ ಉಮರ್ ಅಕ್ಮಲ್ ಅಂಕಿ-ಅಂಶಗಳು ಉತ್ತಮವಾಗಿದೆ ಎಂದು ಹೇಳಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಮಾಜಿ ಆಟಗಾರ, ಕೊಹ್ಲಿಯಂತೆ ನಮ್ಮಲ್ಲಿ ಪ್ರಚಾರಕ್ಕೆಂದು ಪಿಆರ್ ಕಂಪನಿ ಇಲ್ಲ ಎಂದು ಅತಿರೇಕದ ಮಾತುಗಳನ್ನಾಡಿದ್ದಾರೆ.
ಕಮ್ರಾನ್ ಎಆರ್‌ವೈ ನ್ಯೂಸ್ ಜೊತೆಗಿನ ಸಂಭಾಷಣೆಯಲ್ಲಿ ಮಾತನಾಡಿರುವ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜಾಗತಿಕ ಕ್ರಿಕೆಟ್‌ನಲ್ಲಿ ಕೊಹ್ಲಿಯ ಸ್ಥಾನಮಾನದ ಹತ್ತಿರ ಉಮರ್ ಬರದಿದ್ದರೂ, ಅವರ ಸ್ಟ್ರೈಕ್ ರೇಟ್ ಭಾರತದ ಸ್ಟಾರ್ ಆಟಗಾರನಿಗಿಂತ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಕೂಡಾ ಕೊಹ್ಲಿಗಿಂತ ಉತ್ತಮವಾಗಿದೆ ಎಂದು ಹೇಳಿದ್ದಾರೆ.
“ನನಗೆ ನಿನ್ನೆಯಷ್ಟೇ ಅಂಕಿ-ಅಂಶಗಳು ಸಿಕ್ಕವು. ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿಗಿಂತ ಉಮರ್ ಉತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ,” ಎಂದು ಕಮ್ರಾನ್ ಹೇಳಿದ್ದಾರೆ. ಪ್ರದರ್ಶನ ಮತ್ತು ಅವರ ಜನಪ್ರಿಯತೆಯ ವಿಷಯಕ್ಕೆ ಬಂದಾಗ ವಿರಾಟ್ ಕೊಹ್ಲಿಯ ಕಿರು ಬೆರಳಿಗೂ ಉಮ್ರಾನ್ ಸಮನಲ್ಲ. ಆದರೆ ಕೊಹ್ಲಿಗಿಂತ ಉಮರ್ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿಗಿಂತ ವೈಯಕ್ತಿಕ ಗರಿಷ್ಠ ಸ್ಕೋರ್ ಗಳಿಸಿದ್ದಾರೆ" ಎಂದು ಅಕ್ಮಲ್ ಹೇಳಿದ್ದಾರೆ.
ಕಮ್ರಾನ್ ಹೇಳಿಕೆಗೂ ವಾಸ್ತವಕ್ಕೂ ವ್ಯತ್ಯಾಸವಿದೆಯೇ?
ಕಮ್ರಾನ್ ಹೇಳಿರುವಂತೆ ಟಿ20 ವಿಶ್ವಕಪ್‌ಗಳಲ್ಲಿ ಸ್ಟ್ರೈಕ್ ರೇಟ್ ನೋಡುವುದಾದರೆ, ಉಮರ್ (132.42)ಗಿಂತ ಕೊಹ್ಲಿ (130.52) ಸ್ಟ್ರೈಕ್ ರೇಟ್ ಸ್ವಲ್ಪ ಕಡಿಮೆಯೇ ಇದೆ. ಇದೇ ವೇಳೆ ಪಾಕಿಸ್ತಾನದ ಅನುಭವಿ ಕ್ರಿಕೆಟಿಗನ ವೈಯಕ್ತಿಕ ಗರಿಷ್ಠ ಮೊತ್ತ ಕೂಡಾ ಹೆಚ್ಚಿದೆ. 35 ವರ್ಷದ ಭಾರತೀಯ ಆಟಗಾರ 2022ರಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 89 ರನ್ ಗಳಿಸಿದ್ದರು. ಅಕ್ಮಲ್ 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ 94 ರನ್ ಗಳಿಸಿರುವುದು ಅವರ ಗರಿಷ್ಠ ಸ್ಕೋರ್ ಆಗಿದೆ.
ಪಿಆರ್ ಕಂಪನಿ ಇಲ್ಲ
ಇದೇ ವೇಳೆ ವಿರಾಟ್ ಕೊಹ್ಲಿ ವಿರುದ್ಧ ಕಟು ವಾಗ್ದಾಳಿ ನಡೆಸಿದ ಕಮ್ರಾನ್, ಭಾರತದ ಶ್ರೇಷ್ಠ ಆಟಗಾರನಂತೆ, ಉಮರ್ ತಮ್ಮ ಅಂಕಿಅಂಶಗಳು ಮತ್ತು ಪ್ರದರ್ಶನಗಳ ಕುರಿತು ಪ್ರಚಾರ ಗಿಟ್ಟಿಸಿಕೊಳ್ಳಲು ಪಿಆರ್ ಕಂಪನಿ ಹೊಂದಿಲ್ಲ ಎಂದು ಹೇಳಿದ್ದಾರೆ.
“ನಮ್ಮಲ್ಲಿ ಪಿಆರ್ ಕಂಪನಿಗಳಿಲ್ಲದ ಕಾರಣ ನಾವು ನಮ್ಮ ಅಂಕಿ-ಅಂಶಗಳು ಮತ್ತು ಪ್ರದರ್ಶನಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದಿಲ್ಲ. ಒಂದು ವೇಳೆ ಈ ಅಂಕಿಅಂಶಗಳು ಭಾರತದ 15 ಆಟಗಾರರ ಹೆಸರಿನಲ್ಲಿದ್ದಿದ್ದರೆ, ಈ ಹೊತ್ತಿಗೆ ಬಿರುಗಾಳಿ ಎದ್ದಿರುತ್ತಿತ್ತು. ವಿರಾಟ್ ಕೊಹ್ಲಿಯನ್ನು ದೊಡ್ಡ ಆಟಗಾರ ಎಂದು ಕೊಂಡಾಡಿದರೂ ನನಗೆ ಆಶ್ಚರ್ಯವಾಗುವುದಿಲ್ಲ,” ಎಂದು ಟೀಕಿಸಿದ್ದಾರೆ.
ಟಿ20 ವಿಶ್ವಕಪ 2024ರಲ್ಲಿ ಪಾಕ್ ತಂಡವು ಈಗಾಗಕೇ ಗುಂಪು ಹಂತದಲ್ಲೇ ಹೊರಬಿದ್ದಿದೆ. ಯುಎಸ್ಎ ಹಾಗೂ ಭಾರತದ ವಿರುದ್ಧ ಸೋತ ತಂಡವು ಭಾನುವಾರ ಫ್ಲೋರಿಡಾದಲ್ಲಿ ಐರ್ಲೆಂಡ್ ವಿರುದ್ಧ ಆಡಲಿದೆ.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ಕಠಿಣ ಕ್ರಮಕ್ಕೆ ಪಿಸಿಬಿ ಚಿಂತನೆ; ಬಾಬರ್, ರಿಜ್ವಾನ್ ಸೇರಿ ಪ್ರಮುಖ ಆಟಗಾರರ ವೇತನ ಕಡಿತ!