ನಿರಂತರ ಮಳೆಗೆ ಪಾಕಿಸ್ತಾನ-ಬಾಂಗ್ಲಾದೇಶ ಪಂದ್ಯ ಆಹುತಿ; ಗೆಲುವೇ ಕಾಣದೆ ಅಭಿಯಾನ ಮುಗಿಸಿದ ತಂಡಗಳಿಗೆ ಸಿಗುವ ಮೊತ್ತವಿದು!
ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಮಳೆಯಿಂದ ರದ್ದಾಗಿದೆ. ಆದರೂ ಎರಡು ತಂಡಗಳು ಎಷ್ಟು ಮೊತ್ತ ಬಹುಮಾನ ಮೊತ್ತ ಪಡೆಯುತ್ತವೆ? ಇಲ್ಲಿದೆ ವಿವರ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಪಾಕಿಸ್ತಾನ-ಬಾಂಗ್ಲಾದೇಶ ನಡುವಿನ ಪಂದ್ಯ ನಿರಂತರ ಮಳೆಯಿಂದ ರದ್ದಾಗಿದೆ. ರಾವಲ್ಪಿಂಡಿ ಕ್ರಿಕೆಟ್ ಮೈದಾನದಲ್ಲಿ ನಡೆಯಬೇಕಿದ್ದ ಈ ಪಂದ್ಯ ಮಳೆ ಕಾರಣ ಟಾಸ್ ಪ್ರಕ್ರಿಯೆ ನಡೆಯದೆಯೇ ಕೊನೆಗೊಂಡಿದೆ. ಇದರೊಂದಿಗೆ ಹಾಲಿ ಚಾಂಪಿಯನ್ ಪಾಕಿಸ್ತಾನ, 1996ರ ನಂತರ ಅಂದರೆ 29 ವರ್ಷಗಳ ಬಳಿಕ ಐಸಿಸಿ ಪಂದ್ಯಾವಳಿಗೆ ಆತಿಥ್ಯ ವಹಿಸಿ ಗೆಲುವೇ ಕಾಣದೇ ಟೂರ್ನಿಯಿಂದ ಹೊರಬಿದ್ದಿದೆ. ಇತ್ತ ಎದುರಾಳಿಯಾಗಿದ್ದ ಬಾಂಗ್ಲಾ ಕೂಡ ಗೆಲುವಿಲ್ಲದೆ ಅಭಿಯಾನ ಮುಗಿಸಿದೆ. ಈ ಎರಡೂ ತಂಡಗಳು ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿದ್ದವು. ಹೀಗಾಗಿ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದ್ದವು. ಕೊನೆಯ ಪಂದ್ಯದಲ್ಲಿ ಗೆದ್ದು ಮರ್ಯಾದೆ ಕಾಪಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದ ತಂಡಗಳ ಕನಸಿಗೆ ಮಳೆಯು ತಣ್ಣೀರು ಎರಚಿದೆ.
ಬಾಂಗ್ಲಾದೇಶ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಪಾಕಿಸ್ತಾನ ಗೆಲ್ಲುತ್ತದೆ ಎಂಬ ಲೆಕ್ಕಾಚಾರದಲ್ಲಿ ಅವರ ಅಭಿಮಾನಿಗಳಿದ್ದರು. ಆದರೆ ಇದು ತೀವ್ರ ನಿರಾಸೆ ಉಂಟು ಮಾಡಿತು. ಇದರ ಹೊರತಾಗಿಯೂ ಪಾಕಿಸ್ತಾನವು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನಿಂದ ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆಯಲಿದೆ. ಗ್ರೂಪ್ ಎ ಅಂಕಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನ ಪಡೆದಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನ, ಟೂರ್ನಿಯಲ್ಲಿ 7ನೇ ಅಥವಾ 8ನೇ ಸ್ಥಾನದಲ್ಲಿ ಅಭಿಯಾನ ಮುಗಿಸುವ ಸಾಧ್ಯತೆ ಇದೆ. ಏಷ್ಯಾದ ರಾಷ್ಟ್ರಗಳು ಒಂದೇ ಒಂದು ಪಂದ್ಯವನ್ನೂ ಗೆಲ್ಲದಿದ್ದರೂ ಕೋಟಿ ಕೋಟಿ ರೂಪಾಯಿ ಬಹುಮಾನ ಪಡೆಯಲಿವೆ? ಅದು ಹೇಗೆ? ಇಲ್ಲಿದೆ ವಿವರ.
ಬಾಂಗ್ಲಾ ಮತ್ತು ಪಾಕ್ ತಂಡಕ್ಕೆ ಸಿಕ್ಕಿದ್ದೆಷ್ಟು?
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಐಸಿಸಿಯಿಂದ ಸುಮಾರು 2.37 ಕೋಟಿ ರೂ.ಗಳ ಬಹುಮಾನದ ಮೊತ್ತ ಪಡೆಯಲಿವೆ. ಈ ಎರಡೂ ತಂಡಗಳು 7ನೇ ಮತ್ತು 8ನೇ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಈ ಸ್ಥಾನಿಗಳಿಗೆ ಐಸಿಸಿ 1.40 ಮಿಲಿಯನ್ ಡಾಲರ್ (ಸುಮಾರು 1.22 ಕೋಟಿ ರೂಪಾಯಿ) ಬಹುಮಾನ ಮೊತ್ತ ಘೋಷಿಸಿದೆ. ಮತ್ತೊಂದೆಡೆ ಪಂದ್ಯ ಗೆಲ್ಲುವ ತಂಡಕ್ಕೆ 34000 (ಸುಮಾರು 30 ಲಕ್ಷ) ಯುಎಸ್ ಡಾಲರ್ ಸಿಗಲಿದೆ. ಪಾಕ್, ಬಾಂಗ್ಲಾ ಪಂದ್ಯ ರದ್ದುಗೊಂಡ ಕಾರಣ ಈ ಮೊತ್ತವನ್ನು (17,000 ಡಾಲರ್) ಸಮನಾಗಿ ಎರಡೂ ತಂಡಗಳಿಗೆ ವಿತರಿಸಲಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೆ ಐಸಿಸಿ, ತಲಾ 1,25,000 ಡಾಲರ್ ಪ್ರತ್ಯೇಕ ಬಹುಮಾನವನ್ನು ಘೋಷಿಸಿತ್ತು. ಇದು ಸುಮಾರು ಒಂದು ಕೋಟಿ ರೂಪಾಯಿ. ಹೀಗಾಗಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಕ್ರಿಕೆಟ್ ತಂಡಗಳು ಒಟ್ಟು 2.37 ಕೋಟಿ ರೂ ಪಡೆಯಲಿವೆ. ಆತಿಥ್ಯ ವಹಿಸಿದ ಪಾಕಿಸ್ತಾನಕ್ಕೆ ಸಿಗುವ ಮೊತ್ತವೂ ವಿಭಿನ್ನವಾಗಿರುತ್ತದೆ.
1996ರ ಬಳಿಕ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮೊದಲ ಜಾಗತಿಕ ಕ್ರಿಕೆಟ್ ಟೂರ್ನಿ ಇದಾಗಿದ್ದು, ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ಪಂದ್ಯಗಳು ನಡೆಯುತ್ತಿವೆ. ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವ ಕಾರಣ ಭಾರತದ ಪಂದ್ಯಗಳು ದುಬೈನಲ್ಲಿ ನಡೆಯುತ್ತಿವೆ. ಈ ವರ್ಷದ ಟೂರ್ನಮೆಂಟ್ನಲ್ಲಿ 8 ತಂಡಗಳನ್ನು ತಲಾ 4 ತಂಡಗಳಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೆಮಿಫೈನಲ್ಗೆ ಪ್ರವೇಶಿಸುತ್ತವೆ. ಭಾರತ ಮತ್ತು ನ್ಯೂಜಿಲೆಂಡ್ 'ಎ' ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸಿದ್ದರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಹೊರಗುಳಿದಿವೆ. 'ಬಿ' ಗುಂಪಿನಿಂದ ಇಂಗ್ಲೆಂಡ್ ಹೊರಗುಳಿದಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ತಂಡಗಳು ಪ್ರಸ್ತುತ ಸೆಮಿಫೈನಲ್ ರೇಸ್ನಲ್ಲಿವೆ.
