ಕನ್ನಡ ಸುದ್ದಿ  /  Cricket  /  Pakistan Ex Captain Babar Azam Beats Virat Kohli And Chris Gayle Becomes Quickest To 10000 Runs In T20s History Prs

Babar Azam: ಟಿ20ಯಲ್ಲಿ ವೇಗದ 10000 ರನ್; ಕೊಹ್ಲಿ, ಗೇಲ್, ವಾರ್ನರ್ ವಿಶ್ವದಾಖಲೆ ಮುರಿದ ಬಾಬರ್ ಅಜಮ್

Babar Azam : ಪಾಕಿಸ್ತಾನದ ಬಾಬರ್ ಅಜಮ್ ಅವರು ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ಟಿ20 ಯಲ್ಲಿ ವೇಗವಾಗಿ 10,000 ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಕೊಹ್ಲಿ, ಗೇಲ್, ವಾರ್ನರ್ ವಿಶ್ವದಾಖಲೆ ಮುರಿದ ಬಾಬರ್ ಅಜಮ್
ಕೊಹ್ಲಿ, ಗೇಲ್, ವಾರ್ನರ್ ವಿಶ್ವದಾಖಲೆ ಮುರಿದ ಬಾಬರ್ ಅಜಮ್ (AFP-ANI)

ಕರಾಚಿ: ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ (Babar Azam) ಫೆಬ್ರವರಿ 21ರಂದು (ಬುಧವಾರ) ಟಿ20 ಕ್ರಿಕೆಟ್​ನಲ್ಲಿ 10,000 ರನ್ ಪೂರೈಸಿದ ವೇಗದ ಬ್ಯಾಟ್ಸ್​​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಾಹೋರ್​​​ನಲ್ಲಿ ಕರಾಚಿ ಕಿಂಗ್ಸ್ ಮತ್ತು ಪೇಶಾವರ್ ಝಲ್ಮಿ (Karachi Kings vs Peshawar Zalmi) ನಡುವಿನ ಪಾಕಿಸ್ತಾನ ಸೂಪರ್ ಲೀಗ್ (Pakistan Super League 2024) ಆರನೇ ಪಂದ್ಯದಲ್ಲಿ ಗ್ರೀನ್ ಆರ್ಮಿಯ ಪ್ರಮುಖ ಬ್ಯಾಟ್ಸ್​​ಮನ್​ ಈ ಮೈಲಿಗಲ್ಲನ್ನು ಸಾಧಿಸಿದ್ದಾರೆ.

ಕೊಹ್ಲಿ, ಗೇಲ್ ದಾಖಲೆ ಮುರಿದ ಬಾಬರ್

ಲಾಹೋರ್​ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ಎದುರು ಪೇಶಾವರ ಝಲ್ಮಿ ನಾಯಕ ಬಾಬರ್ 51 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 72 ರನ್ ಗಳಿಸಿದ್ದಾರೆ. ಆದರೆ ಬಾಬರ್ ಹೋರಾಟದ ನಡುವೆಯೂ ಪೇಶಾವರ ಸೋಲು ಅನುಭವಿಸಿದೆ. ಕರಾಚಿ ಕಿಂಗ್ಸ್​ 16.5 ಓವರ್​ಗಳಲ್ಲೇ ಗೆಲುವಿನ ನಗೆ ಬೀರಿತು. ಆದರೆ ಈ 72 ರನ್ ಚಚ್ಚಿದ ಪಾಕ್ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಕ್ರಿಸ್​ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ.

ದಕ್ಷಿಣ ಆಫ್ರಿಕಾದ ತಬ್ರೈಜ್ ಶಮ್ಸಿ ಬೌಲಿಂಗ್​ನಲ್ಲಿ ಸಿಕ್ಸರ್​ನೊಂದಿಗೆ ಬಾಬರ್ ತಮ್ಮ ಅರ್ಧಶತಕ ಪೂರ್ಣಗೊಳಿಸಿದರು. ಎಲೈಟ್ ಪಟ್ಟಿಯಲ್ಲಿ ಬ್ಯಾಟಿಂಗ್ ಐಕಾನ್​ಗಳಾದ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಮತ್ತು ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿ ಬಾಬರ್ ಅಗ್ರಸ್ಥಾನಕ್ಕೇರಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಟಿ20 ಕ್ರಿಕೆಟ್​ನಲ್ಲಿ ವೇಗವಾಗಿ 10,000 ರನ್ ಗಳಿಸಿದ ಆಟಗಾರ ಎನಿಸಿದ್ದಾರೆ.

271 ಇನ್ನಿಂಗ್ಸ್​​ ಮೈಲಿಗಲ್ಲು ತಲುಪಿದ ಬಾಬರ್

ಬಾಬರ್ 271 ಇನ್ನಿಂಗ್ಸ್​​​ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಭಾರತದ ಮಾಜಿ ನಾಯಕ ಕೊಹ್ಲಿ 299 ಇನ್ನಿಂಗ್ಸ್​​​ಗಳಲ್ಲಿ 10 ಸಾವಿರ ರನ್ ಗಳಿಸಿದ್ದರು. ವೆಸ್ಟ್ ಇಂಡೀಸ್​​ನ ಸ್ಫೋಟಕ ಬ್ಯಾಟ್ಸ್​​ಮನ್​ ಕ್ರಿಸ್ ಗೇಲ್ 285 ಇನ್ನಿಂಗ್ಸ್​​​​ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದರು. ಅಲ್ಲದೆ, ಆಸ್ಟ್ರೇಲಿಯಾದ ಅನುಭವಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 303 ಇನ್ನಿಂಗ್ಸ್​​ಗಳಲ್ಲಿ 10,000 ಟಿ20 ರನ್​​ಗಳನ್ನು ಕಲೆ ಹಾಕಿದ್ದರು.

ಅತಿ ಹೆಚ್ಚು ಟಿ20 ರನ್ ಗಳಿಸಿದ ಬ್ಯಾಟ್ಸ್​ಮನ್ ಯಾರು?

ಚುಟುಕು ಕ್ರಿಕೆಟ್​​ನಲ್ಲಿ 10,000 ರನ್ ಪೂರೈಸಿದ 13ನೇ ಬ್ಯಾಟ್ಸ್​​ಮನ್ ಎಂಬ ಹೆಗ್ಗಳಿಕೆಗೆ ಬಾಬರ್ ಪಾತ್ರರಾಗಿದ್ದಾರೆ. ಪಿಎಸ್ಎಲ್​​ನಲ್ಲಿ 3,000 ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಮಲಿಕ್ ನಂತರ ಕಡಿಮೆ ಸ್ವರೂಪದಲ್ಲಿ 10 ಸಾವಿರ ಮೈಲಿಗಲ್ಲು ತಲುಪಿದ ಪಾಕಿಸ್ತಾನದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಟಿ20 ಕ್ರಿಕೆಟ್​​​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮಲಿಕ್ (13159 ರನ್) ಎರಡನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್​ನ ಸ್ಫೋಟಕ ಬ್ಯಾಟ್ಸ್ಮನ್ ಗೇಲ್ ಟಿ20 ಕ್ರಿಕೆಟ್​​​ನಲ್ಲಿ ಅತಿ ಹೆಚ್ಚು ರನ್ (14562) ಗಳಿಸಿದ್ದಾರೆ. ಕಿರನ್ ಪೊಲಾರ್ಡ್ 12738 ರನ್, ಅಲೆಕ್ಸ್ ಹೇಲ್ಸ್ 12209, ಡೇವಿಡ್ ವಾರ್ನರ್ 12065 , ವಿರಾಟ್ ಕೊಹ್ಲಿ 11994 ರನ್ ಕಲೆ ಹಾಕಿದ್ದಾರೆ.

IPL_Entry_Point