ಇದು ಬೆಂಗಳೂರು ಪಿಚ್ ಅಲ್ಲ, ಕಳಪೆ ಫಾರ್ಮ್ ಬೆನ್ನಲ್ಲೇ ವಿರಾಟ್ ಕೊಹ್ಲಿ ಎಚ್ಚರಿಸಿದ ಪಾಕಿಸ್ತಾನದ ಮಾಜಿ ನಾಯಕ
Virat Kohli: ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಕುರಿತು ಪ್ರತಿಕ್ರಿಯಿಸಿದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್, ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ಪಿಚ್, ಬೆಂಗಳೂರಿನ ಚಿನ್ನಸ್ವಾಮಿ ಮೈದಾನದ ಪಿಚ್‌ನಂತೆ ಇಲ್ಲ ಎಂದು ಕೊಹ್ಲಿಗೆ ಎಚ್ಚರಿಸಿದ್ದಾರೆ.
ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಫಾರ್ಮ್ ತೀರಾ ಕಳಪೆಯಾಗಿದೆ. ವಿಶ್ವದ ಅತ್ಯುತ್ತಮ ಬ್ಯಾಟರ್ ಫಾರ್ಮ್ ಸಮಸ್ಯೆಯಿಂದ ಬ್ಯಾಟ್ ಬೀಸಲು ಹೆಣಗಾಡುತ್ತಿದ್ದಾರೆ. ಬಲಗೈ ಬ್ಯಾಟರ್ ಈವರೆಗೆ ಟೂರ್ನಿಯಲ್ಲಿ ಆಡಿದ 7 ಇನ್ನಿಂಗ್ಸ್‌ಗಳಲ್ಲಿ ಕೇವಲ 75 ರನ್ ಮಾತ್ರ ಗಳಿಸಿದ್ದಾರೆ. ಇದರಲ್ಲಿ ಎರಡು ಬಾರಿ ಡಕೌಟ್ ಆಗಿ ನಿರಾಶೆ ಮೂಡಿಸಿದ್ದಾರೆ. ಕೊನೆಯದಾಗಿ ಗಯಾನಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿಯೂ ಕೊಹ್ಲಿ ತಮ್ಮ ಕಳಪೆ ಫಾರ್ಮ್ ಅನ್ನು ಮುಂದುವರೆಸಿದರು. ನಿರ್ಣಾಯಕ ಪಂದ್ಯದಲ್ಲಿ ಎಸೆತಕ್ಕೊಂದರಂತೆ 9 ರನ್ ಗಳಿಸಿ ವಿಫಲರಾದರು. ಭಾರತದ ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ರೀಸ್ ಟೋಪ್ಲಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಟೀಮ್ ಇಂಡಿಯಾ ಮಾಜಿ ನಾಯಕ ಔಟಾದ ಕುರಿತು ಪ್ರತಿಕ್ರಿಯಿಸಿದ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್, ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ಪಿಚ್, ಬೆಂಗಳೂರಿನ ಚಿನ್ನಸ್ವಾಮಿ ಮೈದಾನದ ಪಿಚ್‌ನಂತಿಲ್ಲ ಎಂದು ಕೊಹ್ಲಿಗೆ ನೆನಪಿಸಿದ್ದಾರೆ. ಉದ್ಯಾನನಗರಿಯ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಮೇಲ್ಮೈ ಬ್ಯಾಟಿಂಗ್ ಸ್ನೇಹಿಯಾಗಿದೆ. ಈ ಮೈದಾನ ಕೊಹ್ಲಿಗೆ ತವರು ಮೈದಾನವದ್ದಂತೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಕೊಹ್ಲಿಗೆ ಚಿನ್ನಸ್ವಾಮಿ ಅಂಗಳವೆಂದರೆ ಭಾರಿ ಇಷ್ಟ. ಹೀಗಾಗಿ ಬೆಂಗಳೂರಿನಲ್ಲಿ ಆಡಿದಂತೆ ವಿಂಡೀಸ್ ಪಿಚ್‌ನಲ್ಲಿ ಆಡಲು ಆಗಲ್ಲ ಎಂದು ಅವರು ಹೇಳಿದ್ದಾರೆ.
ಇದು ಬೆಂಗಳೂರು ಪಿಚ್ ಅಲ್ಲ
“ವಿರಾಟ್ ಕೊಹ್ಲಿ ಯೋಜಿಸಿದಂತೆ ಆಡಲು ಆಗಿಲ್ಲ. ಇದು ಬೆಂಗಳೂರಿನ ಪಿಚ್ ಅಲ್ಲ. ವಿಂಡೀಸ್ ಪಿಚ್ ವಿಭಿನ್ನವಾಗಿದೆ. ಈ ಮೇಲ್ಮೈಯಲ್ಲಿ ಚೆಂಡನ್ನು ಹೊಡೆಯುವುದು ಅಷ್ಟು ಸುಲಭವಲ್ಲ. ಇಡೀ ತಂಡದ ಒಟ್ಟು ಮೊತ್ತವೇ 171 ರನ್. ಇದು ಅಷ್ಟು ಸುಲಭವಲ್ಲ. ಬ್ಯಾಟರ್‌ಗಳಿಗೆ ಇಲ್ಲಿ ಬ್ಯಾಟ್ ಬೀಸುವುದು ತುಂಬಾ ಕಷ್ಟ,” ಎಂದು ರಶೀದ್ ಲತೀಫ್ ಹೇಳಿದರು.
ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ಆಡದಿದ್ದರೂ, ನಾಯಕ ರೋಹಿತ್ ಶರ್ಮಾ ಅಮೋಘ ಆಟ ಪ್ರದರ್ಶನ ನೀಡಿದರು. ಸತತ ಅರ್ಧಶತಕದೊಂದಿಗೆ ತಮ್ಮ ಶ್ರೇಷ್ಠ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 41 ಎಸೆತಗಳಲ್ಲಿ 92 ರನ್ ಗಳಿಸಿದ್ದ ರೋಹಿತ್, ಇಂಗ್ಲೆಂಡ್ ವಿರುದ್ಧದ 39 ಎಸೆತಗಳಲ್ಲಿ 57 ರನ್ ಗಳಿಸಿ ಮಿಂಚಿದರು.
ವಿರಾಟ್ ಕಳಪೆ ಫಾರ್ಮ್ ಹೊರತಾಗಿಯೂ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲೂ ಅವರು ಆರಂಭಿಕರಾಗಿಯೇ ಕಣಕ್ಕಿಳಿಯಲಿದ್ದಾರೆ. ಈ ಕುರಿತು ಈಗಾಗಲೇ ನಾಯಕ ರೋಹಿತ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.
“ವಿರಾಟ್ ಒಬ್ಬ ಉತ್ತಮ ಗುಣಮಟ್ಟದ ಆಟಗಾರ. ನಿರ್ಣಾಯಕ ಪಂದ್ಯಗಳಲ್ಲಿ ಅವರ ಆಟದ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಕೊಹ್ಲಿಗೆ ಫಾರ್ಮ್ ಎಂದಿಗೂ ಸಮಸ್ಯೆಯಾಗಿಲ್ಲ. ಏಕೆಂದರೆ 15 ವರ್ಷಗಳಿಂದ ಕ್ರಿಕೆಟ್ ಆಡುತ್ತಾ ಬಂದಿರುವ ಅನುಭವಿ ಆಟಗಾರರಿಗೆ ಫಾರ್ಮ್ ಅನ್ನೋದು ಸಮಸ್ಯೆಯೇ ಅಲ್ಲ. ಅವರಲ್ಲಿ ಇರಾದೆ ಇದೆ. ಬಹುಶಃ ತಮ್ಮ ಆಟವನ್ನು ಅವರು ಫೈನಲ್ ಪಂದ್ಯಕ್ಕಾಗಿ ಉಳಿಸಿದ್ದಾರೆ,” ಎಂದು ರೋಹಿತ್ ಪಂದ್ಯದ ನಂತರದ ಸಂದರ್ಶನದಲ್ಲಿ ತಿಳಿಸಿದರು. ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯವರನ್ನು ಆಡಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರೋಹಿತ್, ಖಂಡಿತವಾಗಿ ಕೊಹ್ಲಿಯೇ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಅನುಭವಿ ಆಟಗಾರನಿಗೆ ಫಾರ್ಮ್ ಸಮಸ್ಯೆಯೇ ಅಲ್ಲ, ಫೈನಲ್ನಲ್ಲೂ ಕೊಹ್ಲಿಯೇ ಇನ್ನಿಂಗ್ಸ್ ಆರಂಭಿಸ್ತಾರೆ; ವಿರಾಟ್ಗೆ ರೋಹಿತ್ ಬೆಂಬಲ