Iftikhar Ahmed: ಭಾರತದೆದುರು ಆಡುವಾಗ ಬೀದಿ ಮಕ್ಕಳೊಂದಿಗೆ ಆಡಿದಂತೆ ಭಾಸವಾಗುತ್ತೆ; ಪಾಕ್ ಕ್ರಿಕೆಟಿಗನ ಹೇಳಿಕೆ ಎನ್ನಲಾದ ಟ್ವೀಟ್ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  Iftikhar Ahmed: ಭಾರತದೆದುರು ಆಡುವಾಗ ಬೀದಿ ಮಕ್ಕಳೊಂದಿಗೆ ಆಡಿದಂತೆ ಭಾಸವಾಗುತ್ತೆ; ಪಾಕ್ ಕ್ರಿಕೆಟಿಗನ ಹೇಳಿಕೆ ಎನ್ನಲಾದ ಟ್ವೀಟ್ ವೈರಲ್

Iftikhar Ahmed: ಭಾರತದೆದುರು ಆಡುವಾಗ ಬೀದಿ ಮಕ್ಕಳೊಂದಿಗೆ ಆಡಿದಂತೆ ಭಾಸವಾಗುತ್ತೆ; ಪಾಕ್ ಕ್ರಿಕೆಟಿಗನ ಹೇಳಿಕೆ ಎನ್ನಲಾದ ಟ್ವೀಟ್ ವೈರಲ್

Iftikhar Ahmed: ತಾನು ಹೇಳಿರುವಂತೆ ಸೃಷ್ಟಿಯಾದ ಹೇಳಿಕೆಗೆ ಸಂಬಂಧಿಸಿ ಟೀಕೆ ಗುರಿಯಾಗಿರುವ ಪಾಕಿಸ್ತಾನ ಬ್ಯಾಟ್ಸ್​​ಮನ್​ ಇಫ್ತಿಕಾರ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.

ಪಾಕಿಸ್ತಾನದ ಕ್ರಿಕೆಟಿಗ ಇಫ್ತಿಕಾರ್ ಅಹ್ಮದ್.
ಪಾಕಿಸ್ತಾನದ ಕ್ರಿಕೆಟಿಗ ಇಫ್ತಿಕಾರ್ ಅಹ್ಮದ್.

ಭಾರತದ (Team India) ವಿರುದ್ಧ ಕಣಕ್ಕಿಳಿಯುವುದು ಅಂದರೆ ಬೀದಿ ಮಕ್ಕಳೊಂದಿಗೆ ಆಟವಾಡಿದಂತೆ ಎಂದು ಪಾಕಿಸ್ತಾನದ ಕ್ರಿಕೆಟಿಗ ಇಫ್ತಿಕರ್ ಅಹ್ಮದ್ (Iftikhar Ahmed) ಹೇಳಿದ್ದಾರೆ ಎನ್ನಲಾದ ಟ್ವೀಟ್​ ವೈರಲ್​ ಆಗುತ್ತಿದೆ. ಈ ಟ್ವೀಟ್​​​ನಿಂದ ಭಾರಿ ಸುದ್ದಿಯಲ್ಲಿರುವ ಇಫ್ತಿಕರ್​, ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಅವರು ಈ ಟ್ವೀಟ್​​ಗೆ ಪ್ರತಿಕ್ರಿಯಿಸಿದ್ದು, ಇದು ಸತ್ಯಕ್ಕೆ ದೂರದ ಮಾತು. ಹೀಗೆಯೇ ನಾನು ಹೇಳಿಯೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಸಾರಾಸಗಟಾಗಿ ಅಲ್ಲಗಳೆದಿರುವ 32 ವರ್ಷದ ಆಟಗಾರ ಇದೀಗ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ಯಾವುದೇ ವೃತ್ತಿಪರ ಕ್ರಿಕೆಟಿಗರು ಇಂತಹ ಅವಹೇಳನಕಾರಿ ಹೇಳಿಕೆ ನೀಡುವುದಿಲ್ಲ ಎಂದು ಅಹ್ಮದ್ ಒತ್ತಿ ಹೇಳಿದ್ದಾರೆ. ಮತ್ತು ದ್ವೇಷವನ್ನು ಹರಡಲು ಕಾರಣವಾದ ಅಭಿಮಾನಿಯನ್ನು ಖಂಡಿಸಿದ್ದಾರೆ. ಇಂತಹ ವ್ಯಕ್ತಿಯ ಕ್ರಮಕೈಗೊಳ್ಳಲು ಆಗ್ರಹವನ್ನೂ ವ್ಯಕ್ತಪಡಿಸಿದ್ದಾರೆ.

ವೈರಲ್​ ಆದ ಟ್ವೀಟ್​​​ನಲ್ಲಿ ಏನಿದೆ?

ನವಾಜ್​ ಎಂಬ ಎಕ್ಸ್​ (ಟ್ವಿಟರ್​​​) ಖಾತೆಯಲ್ಲಿ ಈ ಪೋಸ್ಟ್​ ಮಾಡಲಾಗಿದೆ. ತಮ್ಮ ಹೆಸರಿನ ಮುಂದೆ ಪಾಕಿಸ್ತಾನದ ಧ್ವಜವು ಇದೆ. ಬ್ಲ್ಯೂಟಿಕ್ ಹೊಂದಿರುವ ಈ ಖಾತೆಯಲ್ಲಿ ಭಾರತದ ವಿರುದ್ಧ ಪಂದ್ಯ ಆಡಿದಾಗಲೆಲ್ಲಾ ನಾವು ಬೀದಿ ಮಕ್ಕಳೊಂದಿಗೆ ಆಡುವಂತೆ ಭಾಸವಾಗುತ್ತದೆ ಎಂದು ಇಫ್ತಿಕಾರ್ ಅಹ್ಮದ್ ನೀಡಿರುವ ಹೇಳಿಕೆ ಎನ್ನುವಂತಿದೆ. ಇದರಿಂದ ಇಫ್ತಿಕಾರ್​ ವಿರುದ್ಧ ಟೀಕೆಗೆ ಗುರಿಯಾಗಿದ್ದಾರೆ.

ಇಫ್ತಿಕಾರ್ ಅಹ್ಮದ್ ಸ್ಪಷ್ಟನೆ ಏನು?

ತಾನು ನೀಡಿರುವ ಹೇಳಿಕೆಯಂತೆ ಬಿಂಬಿತವಾದ ಟ್ವೀಟ್​​ಗೆ ಖಡಕ್​ ಆಗಿ ಪ್ರತಿಕ್ರಿಯಿಸಿದ ಇಫ್ತಿಕಾರ್​, ಸುಳ್ಳು ಸುದ್ದಿ ಹರಡುವವರ ಕ್ರಮಕ್ಕೆ ಆಗ್ರಹಿಸಿದ್ದಾರೆ. ನಾನು ಎಂದಿಗೂ ಈ ರೀತಿಯ ಹೇಳಿಕೆ ನೀಡಿಲ್ಲ. ಎಂತಹ ಹೇಳಿಕೆ ನೀಡಬೇಕೆಂಬ ಅರಿವು ನನಗೂ ಇದೆ. ವಾಸ್ತವವಾಗಿ ಯಾವುದೇ ವೃತ್ತಿಪರ ಕ್ರಿಕೆಟಿಗರು ಇಂತಹ ಹೇಳಿಕೆಯನ್ನು ನೀಡುವುದಿಲ್ಲ. ದಯವಿಟ್ಟು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ.

ಅಲ್ಲದೆ, ದ್ವೇಷವನ್ನು ಹರಡುವಂತಹ ಟ್ವೀಟ್ ಮಾಡಿರುವ ಈ ವ್ಯಕ್ತಿ ವಿರುದ್ಧ ರಿಪೋರ್ಟ್ ಮಾಡಿ. ಎಲಾನ್ ಮಸ್ಕ್​​ ದಯವಿಟ್ಟು ಈ ಖಾತೆಯನ್ನು ನಿಷೇಧಿಸಿ. ಬ್ಲೂ ಟಿಕ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಇಫ್ತಿಕಾರ್ ಟ್ವೀಟ್ ಮಾಡಿದ್ದಾರೆ. ಸುಳ್ಳು ಸುದ್ದಿ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ಇಫ್ತಿಕಾರ್​, ಅಭಿಮಾನಿಗಳಲ್ಲಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಏಷ್ಯಾಕಪ್, ವಿಶ್ವಕಪ್​​ಗೆ ಇಫ್ತಿಕಾರ್​​ ತಯಾರಿ

ಪ್ರಸ್ತುತ, ಇಫ್ತಿಕಾರ್ ಮುಂಬರುವ ಏಷ್ಯಾ ಕಪ್‌ ಮತ್ತು ಏಕದಿನ ವಿಶ್ವಕಪ್​ ಟೂರ್ನಿ​ಗೆ ತಯಾರಿ ನಡೆಸುತ್ತಿದ್ದಾರೆ. ಈ ಬಾರಿ ಶ್ರೀಲಂಕಾ ಮತ್ತು ಪಾಕಿಸ್ತಾನ ಜಂಟಿ ಆತಿಥ್ಯದಲ್ಲಿ ಏಷ್ಯಾಕಪ್ ನಡೆಯಲಿದೆ. ಈ ಟೂರ್ನಿಯು ಆಗಸ್ಟ್ 30 ರಂದು ಪ್ರಾರಂಭವಾಗಲಿದ್ದು, ಸೆಪ್ಟೆಂಬರ್​ 2ರಂದು ಬಾಬರ್ ಅಜಮ್ ನೇತೃತ್ವದ ಮೆನ್ ಇನ್ ಗ್ರೀನ್ ತಂಡವು, ಭಾರತ ವಿರುದ್ದ ಸೆಣಸಾಟ ನಡೆಸಲು ಸಜ್ಜಾಗಿದೆ.

ಸಾಂಪ್ರದಾಯಿಕ ಎದುರಾಳಿ ತಂಡಗಳಾದ ಪಾಕ್-ಭಾರತ ಪಲ್ಲೆಕೆಲೆಯಲ್ಲಿ ಸೆಣಸಾಟ ನಡೆಸಲಿವೆ. ಲೀಗ್​​ ಹಂತ ಮುಕ್ತಾಯದ ನಂತರ ಈ ಉಭಯ ತಂಡಗಳು ಸೂಪರ್-4 ಹಂತದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಒಂದು ವೇಳೆ ಉಭಯ ತಂಡಗಳು ಫೈನಲ್ ಪ್ರವೇಶಿಸಿದರೂ ಸೆಪ್ಟೆಂಬರ್ 17ರಂದು ಕೊಲಂಬೊದಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಬಿಗ್ ಹಿಟ್ಟರ್ ಎಂದೇ ಹೆಸರು ಪಡೆದ ಇಫ್ತಿಕಾರ್, ಪಾಕಿಸ್ತಾನ ತಂಡದ ಪ್ರಮುಖ ಬ್ಯಾಟ್ಸ್​ಮನ್​. ಮಧ್ಯಮ ಕ್ರಮಾಂಕದ ಆಸ್ತಿ ಎಂದು ಹೇಳಲಾಗುತ್ತದೆ. ಪ್ರಸ್ತುತ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್ (LPL) 2023 ಆವೃತ್ತಿಯಲ್ಲಿ ಕೊಲಂಬೊ ಸ್ಟ್ರೈಕರ್‌ ತಂಡವನ್ನು ಪ್ರತಿನಿಧಿಸಿ ಅಮೋಘ ಪ್ರದರ್ಶನ ನೀಡಿದ್ದರು. ಅವರ ಅದ್ಭುತ ಆಟದ ಹೊರತಾಗಿಯೂ ಕೊಲೊಂಬೊ ಪ್ಲೇಆಫ್‌ಗಳಿಗೆ ಅರ್ಹತೆ ಪಡೆಯಲಿಲ್ಲ.

Whats_app_banner