ಆಡೋದು ಕಮ್ಮಿ ಮಾತಾಡೋದೆ ಜಾಸ್ತಿ; ವಿರಾಟ್‌ ಕೊಹ್ಲಿ ನೋಡಿ ಬಾಬರ್ ಕಲೀಬೇಕು ಎಂದ ಪಾಕಿಸ್ತಾನ ಮಾಜಿ ಕ್ರಿಕೆಟಿಗ
ಕನ್ನಡ ಸುದ್ದಿ  /  ಕ್ರಿಕೆಟ್  /  ಆಡೋದು ಕಮ್ಮಿ ಮಾತಾಡೋದೆ ಜಾಸ್ತಿ; ವಿರಾಟ್‌ ಕೊಹ್ಲಿ ನೋಡಿ ಬಾಬರ್ ಕಲೀಬೇಕು ಎಂದ ಪಾಕಿಸ್ತಾನ ಮಾಜಿ ಕ್ರಿಕೆಟಿಗ

ಆಡೋದು ಕಮ್ಮಿ ಮಾತಾಡೋದೆ ಜಾಸ್ತಿ; ವಿರಾಟ್‌ ಕೊಹ್ಲಿ ನೋಡಿ ಬಾಬರ್ ಕಲೀಬೇಕು ಎಂದ ಪಾಕಿಸ್ತಾನ ಮಾಜಿ ಕ್ರಿಕೆಟಿಗ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಯೂನಿಸ್ ಖಾನ್, ಬಾಬರ್ ಅಜಾಮ್‌ ಕಳಪೆ ಫಾರ್ಮ್‌ ಕುರಿತು ಮಾತನಾಡಿದ್ದಾರೆ. ನಾಯಕತ್ವಕ್ಕಿಂತ ದೇಶವೇ ಮುಖ್ಯ ಎಂದಿರುವ ಅವರು, ಭಾರತೀಯ ಕ್ರಿಕೆಟಿಗ ವಿರಾಟ್‌ ಕೊಹ್ಲಿ ನೋಡಿ ಕಲಿಯುವಂತೆ ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ನೋಡಿ ಬಾಬರ್ ಅಜಮ್ ಕಲೀಬೇಕು ಎಂದ ಪಾಕಿಸ್ತಾನ ಮಾಜಿ ಕ್ರಿಕೆಟಿಗ‌ ಯೂನಿಸ್ ಖಾನ್
ವಿರಾಟ್‌ ಕೊಹ್ಲಿ ನೋಡಿ ಬಾಬರ್ ಅಜಮ್ ಕಲೀಬೇಕು ಎಂದ ಪಾಕಿಸ್ತಾನ ಮಾಜಿ ಕ್ರಿಕೆಟಿಗ‌ ಯೂನಿಸ್ ಖಾನ್ (ICC)

ಪಾಕಿಸ್ತಾನ ಕ್ರಿಕೆಟ್‌ ತಂಡ ಕೆಲವು ತಿಂಗಳುಗಳಿಂದ ಪ್ರಮುಖ ಸರಣಿ ಹಾಗೂ ಪಂದ್ಯಾವಳಿಗಳಲ್ಲಿ ಗೆಲುವು ಒಲಿಸಿಕೊಳ್ಳಲು ಹೆಣಗಾಡುತ್ತಿದೆ. ಮುಖ್ಯವಾಗಿ ಈ ಸೋಲು ನಾಯಕ ಬಾಬರ್ ಅಜಾಮ್ ಮೇಲೆ ನೇರ ಪರಿಣಾಮ ಬೀರುತ್ತಿದೆ. ವಿಶ್ವದ ಪ್ರಬಲ ಬ್ಯಾಟರ್‌ಗಳಲ್ಲಿ ಒಬ್ಬರಾದ ಬಾಬರ್, ಕ್ರಿಕೆಟ್ ವೃತ್ತಿಜೀವನದ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದಾರೆ. ಬ್ಯಾಟಿಂಗ್‌ ಮಾತ್ರವಲ್ಲದೆ ನಾಯಕನಾಗಿಯೂ ಪ್ರಭಾವ ಬೀರಲು ಹೆಣಗಾಡುತ್ತಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ, ತನ್ನದೇ ತವರಲ್ಲಿ ಪಾಕಿಸ್ತಾನ ಅಚ್ಚರಿಯ ರೀತಿಯಲ್ಲಿ ಮುಗ್ಗರಿಸಿತು. ಸರಣಿಯಲ್ಲಿ ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಬಲಗೈ ಬ್ಯಾಟರ್‌ ಕನಿಷ್ಠ ಒಂದು ಅರ್ಧಶತಕ ಗಳಿಸಲು ವಿಫಲರಾದರು. ಪರಿಣಾಮ ತಂಡ ಕೂಡಾ 2-0 ಅಂತರದಲ್ಲಿ ವೈಟ್‌ವಾಶ್‌ ಮುಖಭಂಗಕ್ಕೆ ತುತ್ತಾಯಿತು.

ಈ ವರ್ಷದ ಜೂನ್ ತಿಂಗಳಲ್ಲಿ ನಡೆದ ಟಿ20 ವಿಶ್ವಕಪ್ ವೇಳೆ ಕ್ರಿಕೆಟ್‌ ಶಿಶು ಯುಎಸ್ಎ ವಿರುದ್ಧ ಆಘಾತಕಾರಿ ಸೋಲು ಕಂಡಿದ್ದ ಪಾಕ್‌, ಆ ಬಳಿಕ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧವೂ ನಿರಾಶೆ ಅನುಭವಿಸಿತು. ಗುಂಪು ಹಂತದಿಂದಲೇ ಟೂರ್ನಿಯಿಂದ ನಿರ್ಗಮಿಸಿದ್ದು, ವ್ಯಾಪಕ ಟೀಕೆಗಳಿಗೆ ಕಾರಣವಾಯ್ತು. ನಿರಂತರ ವೈಫಲ್ಯ ಹಾಗೂ ನಾಯಕ ಫಾರ್ಮ್ ಕಳೆದುಕೊಂಡಿರುವುದಕ್ಕೆ, ಪಾಕ್‌ ಅಭಿಮಾನಿಗಳು ಹಾಗೂ ಮಾಜಿ ಆಟಗಾರರಿಂದ ತಂಡವು ವ್ಯಾಪಕ ಟೀಕೆಗೆ ಒಳಗಾಗಿದೆ. ಇದೇ ವೇಳೆ ಅನೇಕರು ನಾಯಕನಾಗಿ ಬಾಬರ್ ಸ್ಥಾನವನ್ನು ಮತ್ತೆ ಪ್ರಶ್ನಿಸುತ್ತಿದ್ದಾರೆ.

2009ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಚಾಂಪಿಯನ್‌ ಪಟ್ಟದತ್ತ ಮುನ್ನಡೆಸಿದ್ದ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಬ್ಯಾಟರ್‌ ಯೂನಿಸ್ ಖಾನ್, ಇದೀಗ ಬಾಬರ್ ಕಳಪೆ ಫಾರ್ಮ್‌ ಕುರಿತು ಮಾತನಾಡಿದ್ದಾರೆ.

ಬಾಬರ್‌ ಕ್ರಿಕೆಟ್‌ನತ್ತ ಮಾತ್ರವೇ ಗಮನ ಹರಿಸಬೇಕು

ಬಾಬರ್ ಅವರನ್ನು 2019ರಲ್ಲಿ ಪಾಕ್ ತಂಡದ ನಾಯಕನನ್ನಾಗಿ ಮಾಡಲಾಯಿತು. ಆ ಸಮಯದಲ್ಲಿ ತಂಡದ ಅತ್ಯುತ್ತಮ ಬ್ಯಾಟರ್ ಆಗಿದ್ದ ಬಾಬರ್‌, ಈಗ ತಮ್ಮ ಆಟದ ಮೇಲೆ ಗಮನ ಹರಿಸಬೇಕಾಗಿದೆ ಎಂದು ಯೂನಿಸ್‌ ಹೇಳಿದ್ದಾರೆ. ಬಾಬರ್ ತನ್ನ ಫಾರ್ಮ್ ಮರಳಿ ಪಡೆಯಲು ಗೊಂದಲ ಹಾಗೂ ಬಾಹ್ಯ ಒತ್ತಡಗಳಿಂದ ದೂರವಿರಬೇಕು. ತಮ್ಮ ಆಟದತ್ತ ಮಾತ್ರವೇ ಗಮನ ಹರಿಸಬೇಕು ಎಂದು ಯೂನಿಸ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

"ಬಾಬರ್‌ಗೆ ನನ್ನ ಏಕೈಕ ಸಲಹೆಯೆಂದರೆ, ಅವರು ತಮ್ಮ ಕ್ರಿಕೆಟ್‌ನತ್ತ ಮಾತ್ರವೇ ಗಮನ ಹರಿಸಬೇಕು. ಅವರು ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕು. ಬಾಬರ್ ಅಜಾಮ್ ಆ ಸಮಯದಲ್ಲಿ ಅತ್ಯುತ್ತಮ ಆಟಗಾರರಾಗಿದ್ದ ಕಾರಣಕ್ಕೆ ಅವರನ್ನು ತಂಡದ ನಾಯಕನನ್ನಾಗಿ ಮಾಡಲಾಯಿತು. ತಂಡದ ಅತ್ಯುತ್ತಮ ಆಟಗಾರ ನಾಯಕನಾಗಿರಬೇಕು ಎಂದು ನಿರ್ಧಾರ ತೆಗೆದುಕೊಂಡಾಗ ನಾನು ಕೂಡಾ ಇದ್ದೆʼ ಎಂದು ಯೂನಿಸ್ ಖಾನ್ ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಆಡೋದು ಕಡಿಮೆ, ಮಾತೇ ಜಾಸ್ತಿ

“ಬಾಬರ್ ಸೇರಿದಂತೆ ಇತರ ಪ್ರಮುಖ ಆಟಗಾರರು ಮೈದಾನದಲ್ಲಿ ಸರಿಯಾದ ಪ್ರದರ್ಶನ ನೀಡಿದರೆ, ಫಲಿತಾಂಶ ಏನಾಗಲಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗುತ್ತದೆ. ಹಮಾರೆ ಪ್ಲೇಯರ್ಸ್ ಖೇಲ್ತೆ ಕಮ್, ಬೋಲ್ಟೆ ಜ್ಯಾದಾ ಹೈ. (ನಮ್ಮ ಆಟಗಾರರು ಪ್ರದರ್ಶನಕ್ಕಿಂತ ಹೆಚ್ಚು ಮಾತನಾಡುತ್ತಾರೆ ಎಂಬುದನ್ನು ನಾನು ಗಮನಿಸಿದ್ದೇನೆ)” ಎಂದು ಯೂನಿಸ್ ಹೇಳಿದ್ದಾರೆ.

ಕೊಹ್ಲಿಯನ್ನು ನೋಡಿ ಕಲಿಯಿರಿ

ಜಾಗತಿಕ ಕ್ರಿಕೆಟ್‌ ಐಕಾನ್‌ ವಿರಾಟ್ ಕೊಹ್ಲಿಯನ್ನು ನೋಡಿ ಬಾಬರ್‌ ಕಲಿಯಬೇಕು ಎಂದು ಯೂನಿಸ್‌ ಹೇಳಿದ್ದಾರೆ. ನಾಯಕತ್ವದಿಂದ ಹೊರಬರುವ ಮೂಲಕ ಹಳೆಯ ಫಾರ್ಮ್ ಅನ್ನು ಮರಳಿ ಪಡೆಯುವತ್ತ ಭಾರತದ ಸ್ಟಾರ್ ಆಟಗಾರ ಗಮನ ಹರಿಸಿದರು. ಈ ಕುರಿತು ಯೂನಿಸ್ ಒತ್ತಿ ಹೇಳಿದ್ದಾರೆ.

“ವಿರಾಟ್‌ ಕೊಹ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಸಾಧಿಸಿದ್ದಾರೆ. ನಾಯಕತ್ವ ಒಂದು ಸಣ್ಣ ವಿಷಯ. ಆದರೆ ಕಾರ್ಯಕ್ಷಮತೆ ತುಂಬಾ ಮುಖ್ಯ. ವಿರಾಟ್ ಕೊಹ್ಲಿಯನ್ನು ನೋಡಿ. ಅವರು ತಮ್ಮದೇ ಆದ ನಿಲುವಿನ ಮೇಲೆ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದರು. ಈಗ ಅವರು ವಿಶ್ವದಾದ್ಯಂತ ಹಲವು ದಾಖಲೆಗಳನ್ನು ಮುರಿಯುತ್ತಿದ್ದಾರೆ. ದೇಶಕ್ಕಾಗಿ ಆಡುವುದು ಪ್ರಮುಖ ಆದ್ಯತೆಯಾಗಿರಬೇಕು ಎಂಬುದನ್ನು ಕೊಹ್ಲಿ ತೋರಿಸಿದ್ದಾರೆ,” ಎಂದು ಅವರು ಹೇಳಿದರು.