ಕನ್ನಡ ಸುದ್ದಿ  /  Cricket  /  Pakistan News Pcb Waives Off 50 Per Cent Match Fee Fine Imposed On Azam Khan For Displaying Palestine Flag On Bat Jra

ಬ್ಯಾಟ್‌ನಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ; ಅಜಾಮ್‌ಗೆ ವಿಧಿಸಿದ್ದ ದಂಡ ಮನ್ನಾ ಮಾಡಿದ ಪಿಸಿಬಿ

Azam Khan: ಬ್ಯಾಟ್‌ನಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶಿಸಿದ್ದಕ್ಕಾಗಿ ಅಜಾಮ್‌ ಖಾನ್‌ಗೆ ವಿಧಿಸಿದ್ದ ಶೇಕಡಾ 50ರಷ್ಟು ಪಂದ್ಯ ಶುಲ್ಕವನ್ನು ಪಾಕ್‌ ಕ್ರಿಕೆಟ್‌ ಮಂಡಳಿಯು ಸಂಪೂರ್ಣವಾಗಿ ಮನ್ನಾ ಮಾಡಿದೆ.

ಅಜಾಮ್ ಖಾನ್‌
ಅಜಾಮ್ ಖಾನ್‌ (Getty Images)

ಪಾಕಿಸ್ತಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಟಿ20 ಚಾಂಪಿಯನ್‌ಶಿಪ್‌ ವೇಳೆ ಬ್ಯಾಟ್‌ನಲ್ಲಿ ಪ್ಯಾಲೆಸ್ತೀನ್ ಧ್ವಜ (Palestine flag) ಪ್ರದರ್ಶಿಸಿದ್ದಕ್ಕಾಗಿ ಅಜಾಮ್ ಖಾನ್‌ಗೆ (Azam Khan) ವಿಧಿಸಿದ್ದ‌ ದಂಡವನ್ನು ಪಿಸಿಬಿ ಮನ್ನಾ ಮಾಡಿದೆ. ವಿವಾದಾತ್ಮಕವಾಗಿ ಪ್ಯಾಲೆಸ್ತೀನ್ ಧ್ವಜವನ್ನು ಬ್ಯಾಟ್‌ನಲ್ಲಿ ಅಂಟಿಸಿದ್ದ ಅಜಾಮ್‌ಗೆ 50 ಶೇಕಡಾ ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಲಾಗಿತ್ತು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅದನ್ನು ಸಂಪೂರ್ಣವಾಗಿ ಮನ್ನಾ ಮಾಡಿದೆ.

ಪಾಕಿಸ್ತಾನದ ಮಾಜಿ ನಾಯಕ ಮೊಯಿನ್ ಖಾನ್ ಅವರ ಪುತ್ರ ಅಜಾಮ್ ಖಾನ್‌, ಪಂದ್ಯದ ವೇಳೆ ತಮ್ಮ ಬ್ಯಾಟ್‌ನಲ್ಲಿ‌ ಪ್ಯಾಲೆಸ್ತೀನ್ ಧ್ವಜದ ಸ್ಟಿಕ್ಕರ್ ಅಂಟಿಸಿದ್ದರು. ಅಲ್ಲದೆ ಅದನ್ನು ತೆಗೆಯಲು ನಿರಾಕರಿಸಿದ್ದರು. ಹೀಗಾಗಿ ಪಿಸಿಬಿ ಮ್ಯಾಚ್ ರೆಫರಿ, ಅಜಾಮ್ ಖಾನ್‌ ಪಂದ್ಯದ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಿದ್ದರು.

ಇದನ್ನೂ ಓದಿ | ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಸಿಕಂದರ್ ರಝಾ; ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಹ್ಯಾಟ್ರಿಕ್‌ ಸಾಧನೆ

ಪಂದ್ಯದ ವೇಳೆ ಅಂಪೈರ್‌ನ ಸೂಚನೆ ಅಥವಾ ನಿರ್ದೇಶನವನ್ನು ಅನುಸರಿಸದ ಕಾರಣದಿಂದ ವಿಕೆಟ್‌ ಕೀಪರ್ ಹಾಗೂ ಬ್ಯಾಟರ್, ಪಿಸಿಬಿ ನೀತಿ ಸಂಹಿತೆಯ ಆರ್ಟಿಕಲ್ 2.4 ಅನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಆದರೂ, ಪಿಸಿಬಿಯು ದಂಡವನ್ನು ಮನ್ನಾ ಮಾಡಿದೆ. ಸಂಪೂರ್ಣವಾಗಿ ಮನ್ನಾ ಮಾಡಲು ಪಿಸಿಬಿ ಯಾವುದೇ ಕಾರಣ ನೀಡಿಲ್ಲ. ಅಲ್ಲದೆ ಪಂದ್ಯಾವಳಿಯ ಉಳಿದ ಪಂದ್ಯಗಳಲ್ಲಿ ಆಡುವ ವೇಳೆ ಬ್ಯಾಟ್‌ನಿಂದ ಸ್ಟಿಕ್ಕರ್ ತೆಗೆಯುವ ಕುರಿತಾಗಿಯೂ ವಿವರ ನೀಡಿಲ್ಲ.

“ಪಂದ್ಯದ ಅಧಿಕಾರಿಗಳು ಅಜಾಮ್‌ ಖಾನ್‌ಗೆ ವಿಧಿಸಿದ ಶೇಕಡಾ 50ರಷ್ಟು ದಂಡವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪರಿಶೀಲಿಸಿದೆ. ಆ ಬಳಿಕ ಮನ್ನಾ ಮಾಡಿದೆ” ಎಂದು ಪಿಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ | Photos: ವಿವಾಹ ಜೀವನಕ್ಕೆ ಕಾಲಿಟ್ಟ ಇಮಾಮ್‌ ಉಲ್‌ ಹಕ್; ಸ್ನೇಹವೇ ನಮ್ಮ ಪ್ರೀತಿಗೆ ಅಡಿಪಾಯ ಎಂದ ಪಾಕ್‌ ಕ್ರಿಕೆಟಿಗ

ಆರಂಭದಲ್ಲಿ ದಂಡ ವಿಧಿಸಿದ‌ ಕಾರಣಕ್ಕೆ ಕ್ರಿಕೆಟ್ ಅಭಿಮಾನಿಗಳು ಮತ್ತು ನಾಗರಿಕರು ಪಿಸಿಬಿಯನ್ನು ವ್ಯಾಪಕವಾಗಿ ಟೀಕಿಸಿದ್ದರು. ಅದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿತು.

ಇತ್ತೀಚೆಗೆ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ವೇಳೆ ಪಾಕ್‌ ವಿಕೆಟ್‌ ಕೀಪರ್ ಹಾಗೂ ಬ್ಯಾಟರ್ ಮುಹಮ್ಮದ್ ರಿಜ್ವಾನ್ ಕೂಡ ಗಾಜಾದಲ್ಲಿ ಪ್ಯಾಲೆಸ್ತೀನ್ ಜನರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಆದರೆ ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಪರಿಗಣಿಸಿ ಐಸಿಸಿಯು ಯಾವುದೇ ದಂಡ ವಿಧಿಸಿರಲಿಲ್ಲ.