ಚಾಂಪಿಯನ್ಸ್ ಟ್ರೋಫಿ ವಿವಾದ: ಪಾಕಿಸ್ತಾನ ಪ್ರಧಾನಿ ಮಧ್ಯ ಪ್ರವೇಶ, ಪಿಸಿಬಿ ಅಧ್ಯಕ್ಷನ ನಿರ್ಧಾರಕ್ಕೆ ಶ್ಲಾಘನೆ
Champions Trophy 2025: 2025ರ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ತಿಳಿಸಿದ್ದಾರೆ.
ಮುಂದಿನ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಆಯೋಜಿಸುವ ವಿಚಾರಕ್ಕೆ ಸಂಬಂಧಿಸಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ ಪಿಸಿಬಿ ಅಧ್ಯಕ್ಷ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಟೂರ್ನಿಯನ್ನು ಆಯೋಜಿಸುವುದಕ್ಕೆ ಸಂಬಂಧಿಸಿ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಈ ಸಮಸ್ಯೆ ಕೇವಲ ಹಣಕ್ಕೆ ಸಂಬಂಧಿಸಿದ್ದಲ್ಲ. ಆದರೆ, ಸಾರ್ವಜನಿಕರ ಭಾವನೆಯೂ ಆಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಅವರು ಪಿಸಿಬಿ ಮುಖ್ಯಸ್ಥರಿಗೆ ಸೂಚಿಸಿದಲ್ಲದೆ, ಪಾಕಿಸ್ತಾನ ಸ್ವಾಭಿಮಾನವನ್ನೂ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿರುವ ಭಾರತ, ಹೈಬ್ರಿಡ್ ಮಾದರಿಯಲ್ಲಿ ಆಡುವುದಾಗಿ ಒತ್ತಾಯಿಸಿತ್ತು. ಹಲವು ತಿಂಗಳುಗಳ ಕಾಲ ಸತಾಯಿಸಿದ್ದ ಪಾಕಿಸ್ತಾನ, ಇತ್ತೀಚೆಗೆ ಐಸಿಸಿ ಸಭೆಯಲ್ಲಿ ಕೆಲವು ಷರತ್ತುಗಳೊಂದಿಗೆ ಹೈಬ್ರಿಡ್ ಮಾದರಿಗೆ ಒಪ್ಪಿಗೆ ನೀಡಿದೆ. 2031ರ ತನಕ ಭಾರತ ಆಯೋಜಿಸುವ ಐಸಿಸಿ ಟೂರ್ನಿಗಳಿಗೆ ನಾವು ಸಹ ಹೈಬ್ರಿಡ್ ಮಾದರಿಯಲ್ಲೇ ಪಂದ್ಯಗಳನ್ನಾಡಲಿದ್ದೇವೆ ಎಂದು ಪಿಸಿಬಿ ಷರತ್ತು ವಿಧಿಸಿದೆ. ಆದರೆ ಪಿಸಿಬಿ, 2027ರ ತನಕ ಸಮ್ಮತಿ ನೀಡಿದ್ದು, ಉಳಿದ್ದದ್ದನ್ನು ಯೋಚಿಸುವುದಾಗಿ ತಿಳಿಸಿದೆ. 2025ರಲ್ಲಿ ಏಕದಿನ ವಿಶ್ವಕಪ್ಗೆ, 2026ರಲ್ಲಿ ಟಿ20 ವಿಶ್ವಕಪ್ಗೆ ಭಾರತ ಮತ್ತು ಶ್ರೀಲಂಕಾ ದೇಶಗಳು ಆತಿಥ್ಯ ವಹಿಸಲಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC)ನ ಉನ್ನತ ಮೂಲಗಳ ಪ್ರಕಾರ, ಎಲ್ಲಾ ಕ್ರಿಕೆಟ್ ಮಂಡಳಿಗಳು ಚಾಂಪಿಯನ್ಸ್ ಟ್ರೋಫಿಯನ್ನು 'ಹೈಬ್ರಿಡ್ ಮಾದರಿಯಲ್ಲಿ' ನಡೆಸಲು ಸಹಮತ ನೀಡಿವೆ. ಭಾರತದ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸುವ ನಿರೀಕ್ಷೆ ಇದೆ. ಜೊತೆಗೆ ಎಲ್ಲಾ ಕ್ರಿಕೆಟ್ ಮಂಡಳಿಗಳು 2027ರ ತನಕ ಹೈಬ್ರಿಡ್ ಮಾಡೆಲ್ಗೆ ತಾತ್ವಿಕವಾಗಿ ಒಪ್ಪಿಕೊಂಡಿವೆ. ಇದೀಗ ಪಾಕ್ ಪ್ರಧಾನಿಯನ್ನು ಭೇಟಿಯಾಗಿರುವ ಪಿಸಿಬಿ ಅಧ್ಯಕ್ಷ ನಖ್ವಿ ಅವರು ಸಭೆಯಲ್ಲಿ ನಡೆದ ಬೆಳವಣಿಗೆಗಳ ಕುರಿತು ವಿವರಿಸಿದ್ದಾರೆ. ಇದೇ ವೇಳೆ ಪಿಸಿಬಿಗೆ ಪ್ರಧಾನಿ ಸಂಪೂರ್ಣ ಬೆಂಬಲ ನೀಡಿದ್ದು, ಹೈಬ್ರಿಡ್ ಮಾದರಿ ಕುರಿತು ನಖ್ವಿ ತೆಗೆದುಕೊಂಡ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
ಪಿಸಿಬಿ ನಿಲುವಿನ ಬಗ್ಗೆ ಪಾಕ್ ಪ್ರಧಾನಿ ಹೇಳಿದ್ದೇನು?
ಟೂರ್ನಿಯನ್ನು ಆಯೋಜಿಸುವುದು ಕೇವಲ ಹಣಕ್ಕಾಗಿ ಅಲ್ಲ. ಪಾಕಿಸ್ತಾನವು ತನ್ನ ಸ್ವಾಭಿಮಾನ ಮತ್ತು ಹೆಮ್ಮೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿಭಾಯಿಸಬೇಕು ಎಂದು ಷರೀಫ್, ನಖ್ವಿಗೆ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಆಡಲು ಭಾರತ ನಿರಾಕರಿಸಿದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರಕರಣದಲ್ಲಿ ಪಿಸಿಬಿ ತೆಗೆದುಕೊಂಡ ನಿಲುವು ಎಲ್ಲಾ ಪಾಕಿಸ್ತಾನಿಗಳ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಸಭೆಯಲ್ಲಿ ನಖ್ವಿಗೆ ತಿಳಿಸಿದ್ದಾರೆ ಎಂದು ಜಿಯೋ ಟಿವಿ ವರದಿ ಮಾಡಿದೆ. ಚಾಂಪಿಯನ್ಸ್ ಟ್ರೋಫಿ ಸಂಬಂಧಿಸಿ ಯಾವುದೇ ನಿರ್ಧಾರ ಸರ್ಕಾರದೊಂದಿಗೆ ಸಮಾಲೋಚಿಸಿದ ಬಳಿಕವೇ ತೆಗೆದುಕೊಳ್ಳಲಾಗುವುದು ಎಂದು ನಖ್ವಿ ಹೇಳಿದ್ದಾರೆ.
ಶೆಹಬಾಜ್ ಷರೀಫ್ ಭೇಟಿಯಾಗಿದ್ದೇಕೆ ನಖ್ವಿ?
ಐಸಿಸಿ ಮುಂದೆ ಪಿಸಿಬಿ ಪ್ರಸ್ತಾಪಿಸಿದ ಪಾಲುದಾರಿಕೆ ಸೂತ್ರವನ್ನು ಸ್ವೀಕರಿಸಲು ಭಾರತೀಯ ಕ್ರಿಕೆಟ್ ಮಂಡಳಿ ಸಿದ್ಧವಿಲ್ಲದ ಕಾರಣ ಪಾಕಿಸ್ತಾನದ ಮುಂದಿನ ನಡೆಯ ಬಗ್ಗೆ ತಿಳಿಸಲು ನಖ್ವಿ ಪ್ರಧಾನಿಯನ್ನು ಭೇಟಿ ಮಾಡಿದ್ದಾರೆ ಎಂದು ಸರ್ಕಾರಕ್ಕೆ ಹತ್ತಿರದ ಮತ್ತೊಂದು ಮೂಲಗಳು ತಿಳಿಸಿವೆ. ಭಾರತವು ಪಾಕಿಸ್ತಾನದಲ್ಲಿ ಯಾವುದೇ ಐಸಿಸಿ ಪಂದ್ಯಾವಳಿಯನ್ನು ಆಡದಿದ್ದರೆ, ನೆರೆಯ ತಂಡವು ಯಾವುದೇ ಪಂದ್ಯಾವಳಿಗಾಗಿ ಭಾರತಕ್ಕೆ ಬರುವುದಿಲ್ಲ ಎಂಬ ಸೂತ್ರವನ್ನು ಬಿಸಿಸಿಐ ಒಪ್ಪಿಕೊಳ್ಳಬೇಕೆಂದು ಪಿಸಿಬಿ ಬಯಸಿದೆ. 2027ರವರೆಗೂ ಈ ಸೂತ್ರಕ್ಕೆ ಎಲ್ಲಾ ಮಂಡಳಿಗಳು ಒಪ್ಪಿವೆ.