ನಮ್ಮದಲ್ಲ, ಆತನದ್ದೇ ತಪ್ಪು; ರಚಿನ್ ರವೀಂದ್ರ ಅವರ ಗಂಭೀರ ಗಾಯಕ್ಕೆ ಅವರೇ ಕಾರಣ ಎಂದು ದೂಷಿಸಿದ ಪಾಕಿಸ್ತಾನ
Rachin Ravindra: ರಚಿನ್ ರವೀಂದ್ರ ಅವರ ಗಾಯಗೊಂಡಿರುವ ವಿಚಾರಕ್ಕೆ ಸಂಬಂಧಿಸಿ ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಮಾಜಿ ಕ್ರಿಕೆಟಿಗರು ಸಮರ್ಥಿಸಿಕೊಂಡಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಗೆ ಸಿದ್ಧತೆಯ ಭಾಗವಾಗಿ ಫೆಬ್ರವರಿ 8ರಂದು ಶನಿವಾರ ಆರಂಭವಾದ ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಫೀಲ್ಡಿಂಗ್ ನಡೆಸುವ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ನ್ಯೂಜಿಲೆಂಡ್ ಆಟಗಾರ ರಚಿನ್ ರವೀಂದ್ರ ಮೇಲೇಯೇ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಗಂಭೀರ ಆರೋಪ ಮಾಡಿದೆ. ಕ್ಯಾಚ್ ಹಿಡಿಯಲು ಯತ್ನಿಸಿದ ಅವಧಿಯಲ್ಲಿ ಫ್ಲಡ್ ಲೈಟ್ಗಳ ಸಮಸ್ಯೆ ಕಾರಣ ಚೆಂಡು ಹಣೆಗೆ ಬಡಿದಿತ್ತು. ಆಗ ತೀವ್ರ ರಕ್ತಸ್ರಾವವಾಗಿತ್ತು. ಇದರ ಬೆನ್ನಲ್ಲೇ ಪಿಸಿಬಿ ಭಾರೀ ವಿವಾದಕ್ಕೆ ಸಿಲುಕಿತ್ತು. ಇದೀಗ ತಮ್ಮನ್ನು ತಾವು ಸಮರ್ಥಿಸಿಕೊಂಡಿರುವ ಪಾಕಿಸ್ತಾನ ಮಾಜಿ ಕ್ರಿಕೆಟಿಗರು ನಮ್ಮದೇನು ತಪ್ಪಿಲ್ಲ, ರಚಿನ್ರದ್ದೇ ತಪ್ಪು ಎಂದು ಹೇಳಿದ್ದಾರೆ.
ಪಾಕಿಸ್ತಾನ ಬ್ಯಾಟಿಂಗ್ ನಡೆಸುತ್ತಿದ್ದಾಗ 38ನೇ ಓವರ್ನಲ್ಲಿ ರಚಿನ್ ಸ್ಕ್ವೇರ್ ಲೆಗ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಆಗ ಪಾಕ್ನ ಬ್ಯಾಟರ್ ಖುಷ್ದಿಲ್ ಶಾ ಬಾರಿಸಿದ ಸ್ವೀಪ್ ಶಾಟ್ ನೇರವಾಗಿ ರಚಿನ್ ಕಡೆಗೆ ಹೋಗಿದೆ. ಸುಲಭ ಮತ್ತು ಕ್ಲಿಯರ್ ಕ್ಯಾಚ್ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಚೆಂಡು ನೇರವಾಗಿ ಮುಖಕ್ಕೆ ಬಿತ್ತು. ತಕ್ಷಣವೇ ಕುಸಿದು ಬಿದ್ದರು. ಹಣೆಯಲ್ಲಿ ರಕ್ತವೂ ಹರಿಯುತ್ತಿತ್ತು. ಟವೆಲ್ ಮುಚ್ಚಿಕೊಂಡೇ ಮೈದಾನದ ತೊರೆದರು. ಇದು ಒಂದು ಕ್ಷಣ ಗಾಬರಿ ಉಂಟಾಗಿತ್ತು. ಆತಂಕವೂ ಹೆಚ್ಚಿಸಿತ್ತು. ಆದರೆ ನವೀಕರಣಗೊಂಡ ಮೈದಾನದಲ್ಲಿ ಫ್ಲಡ್ ಲೈಟ್ಗಳ ಸಮಸ್ಯೆ ಕಾರಣ ಚೆಂಡು ಬಂದ ದಾರಿಯನ್ನು ಅಂದಾಜಿಸಲು ವಿಫಲಗೊಂಡಿದ್ದಾರೆ ಎಂಬುದು ಸದ್ಯದ ಆರೋಪ.
ನ್ಯೂಜಿಲೆಂಡ್ ಆಟಗಾರನ ದುರಂತಕ್ಕೆ ಲಾಹೋರ್ನ ಗಡಾಫಿ ಕ್ರೀಡಾಂಗಣದ ಬೋರ್ಡ್ ಮತ್ತು ಫ್ಲಡ್ಲೈಟ್ಗಳ ಸಮಸ್ಯೆಯೇ ಕಾರಣ ಎಂದು ಅಭಿಮಾನಿಗಳು ಆರೋಪಗಳ ಸುರಿ ಮಳೆಗೈದಿದ್ದಾರೆ. ಮಾಜಿ ಕ್ರಿಕೆಟಿಗರೂ ಪಿಸಿಬಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಂದ್ಯದ ಹಿಂದಿನ ದಿನ ಕ್ರೀಡಾಂಗಣ ಅನಾವರಣ ಮಾಡಲಾಗಿತ್ತು. ಚಾಂಪಿಯನ್ಸ್ ಟ್ರೋಫಿಗಾಗಿ ತರಾತುರಿಯಲ್ಲಿ ಕ್ರೀಡಾಂಗಣವನ್ನು ಸಿದ್ಧಪಡಿಸಲಾಗಿದೆ. ಹಾಗಾಗಿ ಮೂಲಭೂತ ಅವಶ್ಯಕತೆಗಳ ಕೊರತೆ ಕಾಡುತ್ತಿದೆ. ಹೀಗಾಗಿ, ಪಾಕ್ನಿಂದ ಚಾಂಪಿಯನ್ಸ್ ಟ್ರೋಫಿ 2025 ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ವಿಶ್ವಮಟ್ಟದಲ್ಲಿ ಮುಖಭಂಗಕ್ಕೆ ಒಳಗಾಗಿರುವ ಪಾಕ್ ಆಟಗಾರರು ತಿರುಗೇಟು ನೀಡಿದ್ದಾರೆ.
ಬೆಲೆ ತೆತ್ತರು ಎಂದ ಸಲ್ಮಾನ್ ಬಟ್
ಈ ವರದಿಗೆ ಬಲವಾಗಿ ಪ್ರತಿಕ್ರಿಯಿಸಿದ ಪಾಕಿಸ್ತಾನ ಮಾಜಿ ನಾಯಕ ಸಲ್ಮಾನ್ ಬಟ್ ಅವರು ಪ್ರತಿಕ್ರಿಯಿಸಿ ರಚಿನ್ ಅವರ ಭೀಕರ ಗಾಯಕ್ಕೆ ಅವರೇ ಕಾರಣ ಎಂದಿದ್ದಾರೆ. ಆಲ್ರೌಂಡರ್ ಹಣೆಯ ಮೇಲೆ ಗಾಯವಾಗಿದೆ. ಅವರಿಗೆ ಹೊಲಿಗೆಗಳನ್ನೂ ಹಾಕಲಾಗಿದೆ. ಅವರ ಮೇಲ್ವಿಚಾರಣೆಯೂ ಮುಂದುವರಿದಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಅಧಿಕೃತ ಅಪ್ಡೇಟ್ ನೀಡಿದ್ದರ ಹೊರತಾಗಿಯೂ ಚೆಂಡನ್ನು ಅಂದಾಜಿಸಲು ವಿಫಲವಾದ ಕಾರಣ ಅದಕ್ಕೆ ಬೆಲೆ ತೆತ್ತಿದ್ದಾರೆ ಎಂದು ಸಲ್ಮಾನ್ ಭಟ್ ಅಮಾನವೀಯವಾಗಿ ಹೇಳಿಕೆ ನೀಡಿದ್ದಾರೆ. ಜನರಿಗೆ ಅರ್ಥವಾಗುವಂತೆ ಹೇಳುವ ಅಗತ್ಯ ಇಲ್ಲ. ಇದು ಅಪ್ರಸ್ತುತ. ಇವು ಇತ್ತೀಚೆಗೆ ಸ್ಥಾಪಿಸಲಾದ ಎಲ್ಇಡಿ ಲೈಟ್ಗಳು. ಇವು ಉತ್ತಮವಾಗಿವೆ ಎಂದಿದ್ದಾರೆ.
ಕಾಲು ಜಾರಿರಬಹುದು ಎಂದ ಮಾಜಿ ಕ್ರಿಕೆಟಿಗ
ಗಂಟೆಗೆ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ ಎಸೆತಗಳಲ್ಲಿ ನ್ಯೂಜಿಲೆಂಡ್ ಆಟಗಾರರು ಸಿಕ್ಸರ್ ಬಾರಿಸಿದಾಗ, ದೀಪಗಳು ಕೆಲಸ ಮಾಡುತ್ತಿರಲಿಲ್ಲವೇ? 70 ಮೀಟರ್ ದೂರದಲ್ಲಿ ನಿಂತಿದ್ದ ರಚಿನ್ ಚೆಂಡನ್ನು ಅಂದಾಜಿಸಲು ವಿಫಲವಾಗಿ ಕ್ಯಾಚ್ ಪಡೆಯಲು ವಿಫಲರಾದನು. ಅವರು ಉತ್ತಮ ಫೀಲ್ಡರ್. ಆದರೆ ಆ ಅವಧಿಯಲ್ಲಿ ಬಹುಶಃ ಅವರು ಕಾಲು ಜಾರಿರಬಹುದು ಎಂದು ಸಲ್ಮಾನ್ ಸ್ಥಳೀಯ ಸುದ್ದಿ ಚಾನೆಲ್ನಲ್ಲಿ ಹೇಳಿದ್ದಾರೆ. ಇದೇ ವೇಳೆ ಪಾಕಿಸ್ತಾನದ ಮತ್ತೊಬ್ಬ ಸುದ್ದಿ ನಿರೂಪಕನೊಬ್ಬ ಭಾರತ ಮತ್ತು ಇಂಗ್ಲೆಂಡ್ ನಡುವಿನ ಕಟಕ್ ಪಂದ್ಯದಲ್ಲಿ ಫ್ಲಡ್ಲೈಟ್ಗಳ ಸಮಸ್ಯೆ ಕಾರಣ 30 ನಿಮಿಷಗಳ ಕಾಲ ಪಂದ್ಯ ಸ್ಥಗಿತಗೊಂಡಿದ್ದನ್ನು ಉಲ್ಲೇಖಿಸಿದ್ದರು. ಪಿಸಿಬಿಯಂತೆ, ಬಿಸಿಸಿಐ ಕೂಡ ಸಾರ್ವಜನಿಕ ಹಿನ್ನಡೆಯನ್ನು ಎದುರಿಸಿತ್ತು.
ಕ್ರೀಡಾಂಗಣಗಳು ಸಿದ್ಧವಾಗಿಲ್ಲದ ಕಾರಣ ಪಾಕಿಸ್ತಾನವು ಚಾಂಪಿಯನ್ಸ್ ಟ್ರೋಫಿಯಂತಹ ದೊಡ್ಡ ಪಂದ್ಯಾವಳಿಯನ್ನು ಆಯೋಜಿಸಲು ಸಾಧ್ಯವಿಲ್ಲ ಎಂದು ಹೇಳವವರಿಗೆ ನಾನೊಂದು ಪ್ರಶ್ನೆ ಕೇಳುತ್ತೇನೆ. ಬಾರಾಬತಿ ಕ್ರೀಡಾಂಗಣದಲ್ಲಿ ಏನಾಯಿತು ಎಂಬುದರ ಬಗ್ಗೆ ನೀವು ಏನು ಹೇಳುತ್ತೀರಿ? ಅದೊಂದು ಸ್ಥಾಪಿತ ಕ್ರೀಡಾಂಗಣ ತಾನೆ. ಆದ್ದರಿಂದ, ಇಂತಹ ವಿಷಯಗಳು ಸಂಭವಿಸುವುದು ದೊಡ್ಡ ವಿಷಯಗಳಲ್ಲ. ರಚಿನ್ ಮುಖಕ್ಕೆ ಹೊಡೆದ ಮಾತ್ರಕ್ಕೆ ಪಿಸಿಬಿಯನ್ನು ದೂಷಿಸಬೇಕು ಎಂದರ್ಥವಲ್ಲ ಎಂದು ಪತ್ರಕರ್ತ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಪಾಕಿಸ್ತಾನದ ಮತ್ತೊಬ್ಬ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್ ಪಿಸಿಬಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
