ಪಿಸಿಬಿ ದೂರಿಗೆ ಸ್ಪಂದಿಸಿದ ಐಸಿಸಿ; ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಹೋಟೆಲ್ ಬದಲಿಸಲು ಕಾರಣವೇನು?
Pakistan Cricket Team: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡವು ತಾವು ತಂಗಿದ್ದ ಹೋಟೆಲ್ ಅನ್ನು ಬದಲಾವಣೆ ಮಾಡಿದೆ.
ಕ್ರಿಕೆಟ್ ಶಿಶು ಅಮೆರಿಕ ವಿರುದ್ಧ ಅವಮಾನಕರ ಸೋಲನುಭವಿಸಿ ವಿಶ್ವದ ಮಟ್ಟದಲ್ಲಿ ತೀವ್ರ ಮುಖಭಂಗಕ್ಕೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ನಲ್ಲಿ ಜೂನ್ 9ರ ಭಾನುವಾರ ಟೀಮ್ ಇಂಡಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಹೋಟೆಲ್ ಬದಲಿಸಿದೆ. ಮತ್ತೊಂದೆಡೆ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಸುಲಭವಾಗಿ ಮಣಿಸಿದ ಟೀಮ್ ಇಂಡಿಯಾ, ಇದೀಗ ಬಾಬರ್ ತಂಡದ ಸವಾಲಿಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಭಾರತ ತಂಡದ ವಿರುದ್ಧದ ಪಂದ್ಯಕ್ಕೂ ಮುನ್ನ ತಾನು ವಾಸ್ತವ್ಯ ಹೂಡಿದ್ದ ಹೋಟೆಲ್ನಿಂದ ಬೇರೆಡೆಗೆ ಪಾಕಿಸ್ತಾನ ಕ್ರಿಕೆಟ್ ತಂಡ ಶಿಫ್ಟ್ ಆಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನೀಡಿದ ದೂರಿಗೆ ಸ್ಪಂದಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC), ಈ ನಿರ್ಧಾರ ಕೈಗೊಂಡಿದೆ. ಏಕೆಂದರೆ ತಮ್ಮ ತಂಡವು ಹೋಟೆಲ್ನಿಂದ ಮೈದಾನಕ್ಕೆ ತೆರಳಲು ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಬೇಕಿದೆ ಎಂದು ಪಿಸಿಬಿ, ಐಸಿಸಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಐಸಿಸಿ ಪಾಕ್ ತಂಡವನ್ನು ಸ್ಥಳಾಂತರಿಸಿದೆ.
ಮೈದಾನದ ಸಮೀಪದ ಹೋಟೆಲ್ಗೆ ಪಾಕ್ ಸ್ಥಳಾಂತರ
ಇಂಡೋ-ಪಾಕ್ ಪಂದ್ಯವು ಹೆಚ್ಚು ಲಾಭ ತಂದುಕೊಡುವ ಕಾರಣ ಐಸಿಸಿ ಓಗೊಟ್ಟಿದೆ. ಅದರಂತೆ ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಸಮೀಪ ಇರುವ ಹೋಟೆಲ್ಗೆ ಪಾಕ್ ತಂಡವನ್ನು ಸ್ಥಳಾಂತರಿಸಲಾಗಿದೆ. ಹೀಗಾಗಿ ಈ ಮೈದಾನಕ್ಕೆ ಐದತ್ತು ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದೆ. ಇದಕ್ಕೂ ಮೊದಲು ತಂಡವು ವೆಸ್ಟ್ಬರಿಯಲ್ಲಿರುವ ಲಾಂಗ್ ಐಲ್ಯಾಂಡ್ ಕ್ರೀಡಾಂಗಣದ ಸಮೀಪದಲ್ಲಿದ್ದರು. ಅಲ್ಲಿಯೇ ಅಭ್ಯಾಸ ನಡೆಸಲು ಅವಕಾಶ ಕಲ್ಪಿಸಲಾಗಿತ್ತು.
ಎಪಿ ಪ್ರಕಾರ, ಪಿಸಿಬಿಯ ಮೂಲವೊಂದು ಈ ಬದಲಾವಣೆ ಕುರಿತು ದೃಢಪಡಿಸಿದೆ. ಆಟಗಾರರ ವಿಶ್ರಾಂತಿ ಮತ್ತು ಪಂದ್ಯಕ್ಕೆ ಸಿದ್ಧತೆ ನಡೆಸಲು ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಸಲುವಾಗಿ ಈ ಮಹತ್ವದ ಕೈಗೊಳ್ಳಲಾಗಿದೆ. ಜೂನ್ 9ರ ಭಾನುವಾರ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಅಮೆರಿಕ ವಿರುದ್ಧ ಸೋತಿರುವ ಪಾಕಿಸ್ತಾನ ತಂಡವು ಭರ್ಜರಿ ಸಿದ್ಧತೆ ಮಾಡಿಕೊಂಡು ಹೀನಾಯ ಸೋಲಿನಿಂದ ಕಂಬ್ಯಾಕ್ ಮಾಡಲು ಈ ಯೋಜನೆ ರೂಪಿಸಿಕೊಂಡಿದೆ.
ಮೂಲಸೌಕರ್ಯಗಳ ಬಗ್ಗೆ ಶ್ರೀಲಂಕಾ ಕಳವಳ
ನ್ಯೂಯಾರ್ಕ್ ನಗರದಲ್ಲಿ ತನ್ನ ಗುಂಪು ಪಂದ್ಯಗಳನ್ನು ಆಡುತ್ತಿರುವ ಭಾರತ ತಂಡವು ಕ್ರೀಡಾಂಗಣದಿಂದ ಹತ್ತು ನಿಮಿಷಗಳಲ್ಲಿ ತಲುಪುವ ಹೋಟೆಲ್ನಲ್ಲಿ ಉಳಿದುಕೊಂಡಿದೆ. ಇದು ಭಾರತ ತಂಡಕ್ಕೆ ಹೆಚ್ಚಿನ ಲಾಭ ತಂದುಕೊಡುತ್ತಿದೆ. ಪ್ರಯಾಣದ ಅವಧಿಯನ್ನು ಕಡಿತಗೊಂಡು ಹೆಚ್ಚೆಚ್ಚು ಅಭ್ಯಾಸ ನಡೆಸಲು ಸಾಧ್ಯವಾಗುತ್ತದೆ. ಮತ್ತೊಂದೆಡೆ ಶ್ರೀಲಂಕಾ ತಂಡವು ತಮ್ಮ ವಸತಿ ಸೌಕರ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 77 ರನ್ಗಳಿಗೆ ಆಲೌಟ್ ಆದ ನಂತರ ಶ್ರೀಲಂಕಾ ತಾವು ತಮ್ಮ ಹೋಟೆಲ್ನಿಂದ ಕ್ರೀಡಾಂಗಣಕ್ಕೆ ಒಂದು ಗಂಟೆಗೂ ಹೆಚ್ಚು ಕಾಲ ಪ್ರಯಾಣ ನಡೆಸಬೇಕಿದೆ. ಇದು ಕೂಡ ನಮ್ಮ ಸೋಲಿಗೆ ಕಾರಣವಾಗಿದೆ ಎಂದು ದೂರಿದೆ. ಇದೀಗ ಪಾಕ್ ಸಹ ಇದೇ ಕಳವಳವನ್ನು ವ್ಯಕ್ತಪಡಿಸಿದೆ. ಪ್ರಸ್ತುತ ಪಾಕ್ ತಂಡದ ಮನವಿಗೆ ಸ್ಪಂದಿಸಿದ ಐಸಿಸಿ, ಶ್ರೀಲಂಕಾ ತಂಡಕ್ಕೆ ನೆರವಿಗೆ ಇನ್ನೂ ಧಾವಿಸಿಲ್ಲ ಎನ್ನಲಾಗಿದೆ.
ಡಲ್ಲಾಸ್ನಲ್ಲಿ ಜೂನ್ 6ರ ಗುರುವಾರ ನಡೆದ 'ಎ' ಗುಂಪಿನ ಪಂದ್ಯದಲ್ಲಿ ಆತಿಥೇಯ ಅಮೆರಿಕ ವಿರುದ್ಧ ಪಾಕಿಸ್ತಾನ ತಂಡ ಹೀನಾಯ ಸೋಲು ಕಂಡಿತು. ಸೂಪರ್ ಓವರ್ನಲ್ಲಿ ಅಮೆರಿಕ 5 ರನ್ಗಳಿಂದ ಗೆದ್ದು ಇತಿಹಾಸ ನಿರ್ಮಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಪೇರಿಸಿತು. ಯುಎಸ್ಎ ಕೂಡ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಹಾಗಾಗಿ ಸೂಪರ್ ಓವರ್ ಮೊರೆ ಹೋಗಲಾಗಿತ್ತು. ಆಗ ಯುಎಸ್ 18, ಪಾಕ್ 13 ರನ್ ಗಳಿಸಿತು.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ