ಅಂಡರ್ 19 ಏಷ್ಯಾಕಪ್: ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ ಭಾರತ ಕಿರಿಯರ ತಂಡ; ಪಾಕ್‌ಗೆ 44 ರನ್‌ಗಳ ಗೆಲುವು
ಪಾಕಿಸ್ತಾನ ವಿರುದ್ಧ ಸೋಲಿನ ಬಳಿಕ ಅಂಡರ್ 19 ಏಷ್ಯಾಕಪ್ ಎ ಗುಂಪಿನ ಅಂಕಪಟ್ಟಿಯಲ್ಲಿ ಭಾರತ ತಂಡ ಮೂರನೇ ಸ್ಥಾನಕ್ಕೆ ಕುಸಿದಿದೆ. ಯುಎಇ ಹಾಗೂ ಪಾಕಿಸ್ತಾನ ಅಂಡರ್ 19 ತಂಡ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿವೆ. ಭಾರತ ಕಿರಿಯರ ತಂಡವು ಡಿಸೆಂಬರ್ 02ರಂದು ಜಪಾನ್ ವಿರುದ್ಧ ಸೆಣಸಲಿದೆ.
ಅಂಡರ್ 19 ಏಷ್ಯಾಕಪ್‌ನಲ್ಲಿ ಭಾರತ ಯುವ ತಂಡ ಸೋಲಿನೊಂದಿಗೆ ಅಭಿಯಾನ ಆರಂಭಿಸಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 44 ರನ್‌ಗಳ ಹೀನಾಯ ಸೋಲು ಕಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 7 ವಿಕೆಟ್ ಕಳೆದುಕೊಂಡು 281 ರನ್ ಗಳಿಸಿತು. ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡ 237 ರನ್‌ಗಳಿಗೆ ಆಲೌಟ್ ಆಯ್ತು.
ಪಾಕಿಸ್ತಾನ ಪರ ಅಬ್ಬರಿಸಿದ 19ರ ಹರೆಯದ ಶಹಜೈಬ್ ಖಾನ್, ಆಕರ್ಷಕ ಶತಕ ಸಿಡಿಸಿದರು. 147 ಎಸೆತಗಳನ್ನು ಎದುರಿಸಿ 159 ರನ್ ಬಾರಿಸಿದರು. ಇದರಲ್ಲಿ 5 ಬೌಂಡರಿ ಹಾಗೂ 10 ಸಿಕ್ಸರ್‌ಗಳು ಸೇರಿದ್ದವು. ಅಲ್ಲದೆ ಮೊದಲ ವಿಕೆಟ್‌ಗೆ ಉಸ್ಮಾನ್ ಖಾನ್ (60) ಜೊತೆಗೂಡಿ 160 ರನ್ ಪೇರಿಸಿದರು. ಮೊದಲ ವಿಕೆಟ್ ಪತನದ ಬಳಿಕ, ಪಾಕ್ ರನ್ ಗಳಿಕೆ ಕಡಿಮೆಯಾಯ್ತು. ಆರಂಭಿಕ ಆಟಗಾರರನ್ನು ಹೊರತುಪಡಿಸಿ ಮೊಹಮ್ಮದ್ ರಿಯಾಝುಲ್ಲಾ 27 ರನ್ ಗಳಿಸಿದರು. ಉಳಿದೆಲ್ಲಾ ಆಟಗಾರರು ಒಂದಂಕಿ ಮೊತ್ತಕ್ಕೆ ವಿಕೆಟ್ ಕೈಚೆಲ್ಲಿದರು.
ಬೃಹತ್ ಗುರಿ ಬೆನ್ನಟ್ಟಲು ಚೇಸಿಂಗ್‌ಗೆ ಇಳಿದ ಭಾರತ, ಉತ್ತಮ ಆರಂಭ ಪಡೆಯಿತು. ಮೇಲಿಂದ ಮೇಲೆ ಬೌಂಡರಿ ಬಾರಿಸಿದ ಆಯುಷ್ ಮಾತ್ರೆ 20 ರನ್ ಗಳಿಸಿ ಮೊದಲನೆಯವರಾಗಿ ಔಟಾದರು. ಇದರೊಂದಿಗೆ ತಂಡದ ವಿಕೆಟ್ ಪತನವಾಗುತ್ತಾ ಹೋಯ್ತು. ಇತ್ತೀಚೆಗೆ ಐಪಿಎಲ್‌ನಲ್ಲಿ ಹರಾಜಾಗಿ ಸಂಚಲನ ಮೂಡಿಸಿದ್ದ 13ರ ಹರೆಯದ ವೈಭವ್ ಸೂರ್ಯವಂಶಿ ನಿರಾಶೆ ಮೂಡಿಸಿದರು. ಕೇವಲ 1 ರನ್ ಗಳಿಸಿ ಔಟಾದರು.
ಸಿದ್ದಾರ್ಥ್ 15 ರನ್ ಗಳಿಸಿದರೆ, ನಾಯಕ ಅಮಾನ್ ಗಳಿಕೆ 16 ರನ್‌ಗಳಿಗೆ ಅಂತ್ಯವಾಯ್ತು. ಅಬ್ಬರದ ಆಟ ಪ್ರದರ್ಶಿಸಿದ ನಿಖಿಲ್ ಕುಮಾರ್ ಸ್ಫೋಟಕ 67 ರನ್ ಗಳಿಸಿ ಗೆಲುವಿನ ಭರವಸೆ ಮೂಡಿಸಿದರು. ಕಿರಣ್ 20, ಹರ್ವಂಶ್ 26, ಹಾರ್ದಿಕ್ ರಾಜ್ 10 ರನ್ ಗಳಿಸಿ ನಿರ್ಗಮಿಸಿದರು.
ಕೊನೆಯ ವಿಕೆಟ್‌ಗೆ 47 ರನ್‌ಗಳ ಜೊತೆಯಾಟ
ತಂಡ 9 ವಿಕೆಟ್ ಕಳೆದುಕೊಂಡಿದ್ದಾಗ, ಗುರಿ ಇನ್ನೂ ದೂರವಿತ್ತು. ಭಾರತ ಬೃಹತ್ ಅಂತರದಿಂದ ಸೋಲುವ ಭೀತಿಯಲ್ಲಿದ್ದಾಗ, ಮೊಹಮ್ಮದ್ ಇನಾಮ್ ಹಾಗೂ ಯುಧಜಿತ್ ಗುಹಾ ಆಕರ್ಷಕ ಜೊತೆಯಾಟವಾಡಿದರು. 10ನೇ ವಿಕೆಟ್‌ಗೆ 47 ರನ್‌ಗಳ ಜೊತೆಯಾಟವಾಡಿ ಮೆಚ್ಚುಗೆಗೆ ಪಾತ್ರರಾದರು. ಆದರೆ, ರನೌಟ್‌ನೊಂದಿಗೆ ಅವರ ಪ್ರಯತ್ನ ಅಂತ್ಯವಾಯ್ತು.
ಈ ಸೋಲಿನ ಬಳಿಕ ಎ ಗುಂಪಿನ ಅಂಕಪಟ್ಟಿಯಲ್ಲಿ ಭಾರತ ತಂಡ ಮೂರನೇ ಸ್ಥಾನಕ್ಕೆ ಕುಸಿದಿದೆ. ತಲಾ ಒಂದು ಗೆಲವುಗಳೊಂದಿಗೆ ಯುಎಇ ಹಾಗೂ ಪಾಕಿಸ್ತಾನ ಅಂಡರ್ 19 ತಂಡ ಮೊದಲ ಎರಡು ಸ್ಥಾನಗಳಲ್ಲಿವೆ. ಭಾರತ ಕಿರಿಯರ ತಂಡವು ಡಿಸೆಂಬರ್ 02ರಂದು ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಜಪಾನ್ ವಿರುದ್ಧ ಸೆಣಸಲಿದೆ.