ತವರಿನಲ್ಲಿ ಸತತ 11 ಪಂದ್ಯಗಳ ಬಳಿಕ ಗೆಲುವಿನ ರುಚಿ ನೋಡಿದ ಪಾಕಿಸ್ತಾನ; ಇಂಗ್ಲೆಂಡ್ ವಿರುದ್ಧ 152 ರನ್‌ ಜಯ
ಕನ್ನಡ ಸುದ್ದಿ  /  ಕ್ರಿಕೆಟ್  /  ತವರಿನಲ್ಲಿ ಸತತ 11 ಪಂದ್ಯಗಳ ಬಳಿಕ ಗೆಲುವಿನ ರುಚಿ ನೋಡಿದ ಪಾಕಿಸ್ತಾನ; ಇಂಗ್ಲೆಂಡ್ ವಿರುದ್ಧ 152 ರನ್‌ ಜಯ

ತವರಿನಲ್ಲಿ ಸತತ 11 ಪಂದ್ಯಗಳ ಬಳಿಕ ಗೆಲುವಿನ ರುಚಿ ನೋಡಿದ ಪಾಕಿಸ್ತಾನ; ಇಂಗ್ಲೆಂಡ್ ವಿರುದ್ಧ 152 ರನ್‌ ಜಯ

ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ತವರಿನಲ್ಲಿ ಮರೀಚಿಕೆಯಾಗಿದ್ದ ಗೆಲವು ಒಲಿಸಿಕೊಂಡಿದೆ. ಸ್ಪಿನ್ನರ್‌ ನೋಮನ್ ಅಲಿ, ಬರೋಬ್ಬರಿ ಎಂಟು ವಿಕೆಟ್‌ ಕಬಳಿಸುವ ಮೂಲಕ ದಾಖಲೆ ಬರೆದರು.

ತವರಿನಲ್ಲಿ ಸತತ 11 ಪಂದ್ಯಗಳ ಬಳಿಕ ಗೆಲುವಿನ ರುಚಿ ನೋಡಿದ ಪಾಕಿಸ್ತಾನ
ತವರಿನಲ್ಲಿ ಸತತ 11 ಪಂದ್ಯಗಳ ಬಳಿಕ ಗೆಲುವಿನ ರುಚಿ ನೋಡಿದ ಪಾಕಿಸ್ತಾನ (AP)

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಆತಿಥೇಯ ಪಾಕಿಸ್ತಾನ (Pakistan vs England), ಎರಡನೇ ಟೆಸ್ಟ್‌ನಲ್ಲಿ 152 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ತವರು ನೆಲದಲ್ಲಿ ಸತತ 11 ಪಂದ್ಯಗಳಲ್ಲಿ ಜಯ ಕಾಣದೆ ಕಂಗೆಟ್ಟಿದ್ದ ತಂಡ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಮುಲ್ತಾನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಸ್ಪಿನ್ನರ್‌ ನೋಮನ್ ಅಲಿ ಬರೋಬ್ಬರಿ ಎಂಟು ವಿಕೆಟ್‌ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯು ಸದ್ಯ 1-1 ಅಂತರದಲ್ಲಿ ಸಮಬಲಗೊಂಡಿದೆ.

ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ 366 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್‌ 291 ರನ್‌ ಕಲೆ ಹಾಕಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಪಾಕ್‌ 221 ರನ್‌ ಕಲೆ ಹಾಕಿತ್ತು. ಹೀಗಾಗಿ ಕೊನೆಯ ಇನ್ನಿಂಗ್ಸ್‌ನಲ್ಲಿ ಗೆಲ್ಲಲು 297 ರನ್‌ಗಳ ಬೃಹತ್‌ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 144 ರನ್‌ಗಳಿಗೆ ಆಲೌಟ್ ಆಯ್ತು. ಆಂಗ್ಲರ ಬಳಗದ ನಾಯಕ ಬೆನ್ ಸ್ಟೋಕ್ಸ್ 37 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ಪಾಕಿಸ್ತಾನದ ಪರ ನೋಮನ್ 46 ರನ್‌ ಬಿಟ್ಟುಕೊಟ್ಟು 8 ವಿಕೆಟ್ ಪಡೆದು ಮಿಂಚಿದರು. ಇಂಗ್ಲೆಂಡ್ ತಂಡವು 36 ರನ್‌ ವೇಳೆಗೆ 2 ವಿಕೆಟ್ ಕಳೆದುಕೊಂಡಾಗಲೇ, ಪಾಕಿಸ್ತಾನ ಮೇಲುಗೈ ಸಾಧಿಸಿತು. ಬೃಹತ್ ಗುರಿ‌ ತಲುಪಲು ಆಂಗ್ಲರು ಅಸಾಧಾರಣ ಬ್ಯಾಟಿಂಗ್ ಪ್ರದರ್ಶನ ತೋರುವ ಅಗತ್ಯವಿತ್ತು.

ಉಪನಾಯಕ ಒಲ್ಲಿ ಪೋಪ್ 22 ರನ್‌ ಗಳಿಸಿದರೆ, ಜೋ ರೂಟ್ 18 ರನ್‌ ಗಳಿಸಿದ್ದಾಗ ನೋಮನ್ ಕಟ್ಟಿಹಾಕಿದರು. ಇದು ಪ್ರವಾಸಿ ತಂಡಕ್ಕೆ ದೊಡ್ಡ ಹೊಡೆತ ನೀಡಿತು. 16 ರನ್‌ ಗಳಿಸಿದ್ದ ಹ್ಯಾರಿ ಬ್ರೂಕ್ ಕೂಡಾ ನೊಮನ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಒಂದು ಹಂತದಲ್ಲಿ ಇಂಗ್ಲೆಂಡ್‌ 88 ರನ್‌ ವೇಳೆಗೆ 6 ವಿಕೆಟ್‌ ನಷ್ಟಕ್ಕೆ ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡಿತು.

ನಾಯಕ ಸ್ಟೋಕ್ಸ್‌ ಪ್ರಯತ್ನವೂ ವಿಫಲ

ನಾಯಕ ಸ್ಟೋಕ್ಸ್‌ ಅವರಿಂದ ನಿರ್ಣಾಯಕ ಪ್ರದರ್ಶನದ ಅಗತ್ಯವಿತ್ತು. ಕೆಲಕಾಲ ಉತ್ತಮ ಹೊಡೆತಗಳನ್ನಾಡಿದ ಅವರು, ನೋಮನ್ ಬೌಲಿಂಗ್‌ ಎದುರಿಸುವಲ್ಲಿ ವಿಫಲರಾದರು. ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಸ್ಟಂಪಿಂಗ್‌ ಮಾಡಿ ಬಲಿ ಪಡೆದರು. ತವರು ನೆಲದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಪಾಕಿಸ್ತಾನ ಕೊನೆಗೂ ಗೆಲುವಿನ ರುಚಿ ನೋಡಿದೆ. ಆಂಗ್ಲರ ವಿರುದ್ಧದ ಈ ಬೃಹತ್ ಗೆಲುವು ತಂಡದ ವಿಶ್ವಾಸ ಹೆಚ್ಚಿಸಲಿದೆ.

ಮೂರನೇ ಮತ್ತು ಅಂತಿಮ ಟೆಸ್ಟ್ ಗುರುವಾರ ರಾವಲ್ಪಿಂಡಿಯಲ್ಲಿ ಪ್ರಾರಂಭವಾಗಲಿದೆ.

Whats_app_banner