ರಣಬಿಸಿಲಿಗೆ ಕುಸಿದು ಬಿದ್ದು ಪಾಕಿಸ್ತಾನ ಮೂಲದ ಕ್ರಿಕೆಟಿಗ ದುರಂತ ಸಾವು; ಬಿಸಿಲಿನ ಹೊಡೆತಕ್ಕೆ ಮೃತಪಟ್ಟ ಆಟಗಾರರಿವರು!
Junaid Zafar Khan: ಅಡಿಲೇಡ್ನಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಅತಿಯಾದ ಶಾಖದಿಂದಾಗಿ ಪಾಕಿಸ್ತಾನ ಮೂಲದ ಆಸ್ಟ್ರೇಲಿಯಾದ ಕ್ರಿಕೆಟಿಗ ಜುನೈದ್ ಜಾಫರ್ ಖಾನ್ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಪಾಕಿಸ್ತಾನ ಮೂಲದ ಕ್ಲಬ್ ಕ್ರಿಕೆಟಿಗ ಜುನೈಲ್ ಜಾಫರ್ ಅವರು (Junaid Zafar Khan) ಸ್ಥಳೀಯ ಪಂದ್ಯದ ವೇಳೆ ಬಿಸಿಲಿನ ತಾಪಮಾನ ಹೆಚ್ಚಾಗಿ ಮೈದಾನದಲ್ಲೇ ಕುಸಿದು ಬಿದ್ದು ದುರಂತ ಅಂತ್ಯ ಕಂಡಿದ್ದಾರೆ. ಆಡುತ್ತಿರುವಾಗಲೇ ಕುಸಿದು ಮೃತಪಟ್ಟ ವರದಿ ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್ ವ್ಯಾಪ್ತಿಯ ಕಾನ್ಕಾರ್ಡಿಯಾ ಕಾಲೇಜ್ ಓವಲ್ನಲ್ಲಿ ಘಟನೆ ಜರುಗಿದೆ. 40 ವರ್ಷದ ಕ್ರಿಕೆಟಿಗ ತೀವ್ರ ಶಾಖದ ಹೊಡೆತಕ್ಕೆ ಮೃತಪಟ್ಟಿದ್ದಾರೆ. ಪಂದ್ಯ ಜರುಗುತ್ತಿದ್ದ ಅವಧಿಯಲ್ಲಿ ತಾಪಮಾನ 41.7 (107°F) ಡಿಗ್ರಿ ಸೆಲ್ಸಿಯಸ್ ಇತ್ತು ಎನ್ನಲಾಗಿದೆ. ಪಂದ್ಯದ ವೇಳೆ ಅವರು 4 ಬಾರಿ ಕುಸಿದು ಬಿದ್ದಿದ್ದರು.
ಆಸ್ಟ್ರೇಲಿಯಾದ news.com.au ಮಾಧ್ಯಮ ವರದಿ ಪ್ರಕಾರ, ಓಲ್ಡ್ ಕಾನ್ಕಾರ್ಡಿಯಾ ಕ್ರಿಕೆಟ್ ಕ್ಲಬ್ ಪರ ಆಟಗಾರ ಜುನೈಲ್ ಬ್ಯಾಟಿಂಗ್ ನಡೆಸುತ್ತಿದ್ದ ಅವಧಿಯಲ್ಲಿ ದುರಂತ ನಡೆದಿದೆ. ಆದರೆ ಬ್ಯಾಟಿಂಗ್ಗೂ ಮುನ್ನ ಇದೇ ತಾಪಮಾನದಲ್ಲಿ 40 ಓವರ್‌ಗಳ ಕಾಲ ಫೀಲ್ಡಿಂಗ್ ಮಾಡಿದ್ದರು. ಇದರ ಬೆನ್ನಲ್ಲೇ ಏಳು ಓವರ್ಗಳು ಬ್ಯಾಟಿಂಗ್ ಮಾಡಿದರು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಕೂಡಲೇ ಮೈದಾನದಲ್ಲಿ ಉಪಸ್ಥಿತರಿದ್ದ ವೈದ್ಯರು ತುರ್ತು ಚಿಕಿತ್ಸೆ ನೀಡಿದರು. ಆದರೆ ಪ್ರಯೋಜನವಾಗಲಿಲ್ಲ.
ಕ್ರಿಕೆಟ್ ಅಸೋಸಿಯೇಷನ್ ನಿಯಮ ಹೇಳುವುದೇನು?
ದಕ್ಷಿಣ ಆಸ್ಟ್ರೇಲಿಯಾದಲ್ಲಿ ಪ್ರಸ್ತುತ ಬಿಸಿಲಿನ ತಾಪಮಾನ ಹೆಚ್ಚಿದೆ. ಹವಾಮಾನ ಇಲಾಖೆ ಪ್ರಕಾರ, ಪಂದ್ಯದ ವೇಳೆ ತಾಪಮಾನವು 40 ಡಿಗ್ರಿಗಳಿಗಿಂತ ಹೆಚ್ಚಾಗಿದೆ. ಅಡಿಲೇಡ್ ಟರ್ಫ್ ಕ್ರಿಕೆಟ್ ಅಸೋಸಿಯೇಷನ್ ನಿಯಮಗಳ ಪ್ರಕಾರ, ತಾಪಮಾನವು 42 ಡಿಗ್ರಿಗಿಂತ ಹೆಚ್ಚಾದರೆ ಪಂದ್ಯವನ್ನು ರದ್ದುಗೊಳಿಸಬೇಕು. ಆದರೆ 41.7 ಡಿಗ್ರಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಪಂದ್ಯವನ್ನು ಮುಂದುವರೆಸಲಾಗಿತ್ತು. ಕುಸಿದು ಬಿದ್ದಿದ್ದ ಸಮಯದಲ್ಲಿ ಜುನೈಲ್, 37 ಎಸೆತಗಳಲ್ಲಿ 16 ರನ್ ಗಳಿಸಿ8ದ್ದರು.
ಜುನೈಲ್ ಅವರ ನಿಧನಕ್ಕೆ ಓಲ್ಡ್ ಕಾನ್ಕಾರ್ಡಿಯಾ ಕ್ರಿಕೆಟ್ ಕ್ಲಬ್ ಸಂತಾಪ ವ್ಯಕ್ತಪಡಿದೆ. ನಮ್ಮ ಕ್ಲಬ್ನ ಪ್ರಮುಖ ಸದಸ್ಯರೊಬ್ಬರ ನಿಧನದ ಬಗ್ಗೆ ತಿಳಿದು ನಮಗೆ ತೀವ್ರ ದುಃಖವಾಗಿದೆ. ಕಾನ್ಕಾರ್ಡಿಯಾ ಕಾಲೇಜ್ ಓವಲ್ನಲ್ಲಿ ಆಡುವಾಗ ಅವರ ಆರೋಗ್ಯವು ಹದಗೆಟ್ಟಿತು. ವೈದ್ಯರ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಅವರ ಕುಟುಂಬ, ಸ್ನೇಹಿತರು ಮತ್ತು ತಂಡಕ್ಕೆ ನಮ್ಮ ಸಂತಾಪಗಳು. ಐಟಿ ಉದ್ಯಮ ನಡೆಸುತ್ತಿದ್ದ ಖಾನ್ 2013ರಲ್ಲಿ ಪಾಕ್ನಿಂದ ಅಡಿಲೇಡ್ಗೆ ತೆರಳಿದರು.
ಸ್ನೇಹಿತ ಹಸನ್ ಅಂಜುಮ್, 'ಇದು ದೊಡ್ಡ ನಷ್ಟ ಎಂದಿದ್ದಾರೆ. ಮತ್ತೊಬ್ಬ ಆಪ್ತ ಸ್ನೇಹಿತ ನಜಾಮ್ ಹಸನ್ ಖಾನ್ ಅವರನ್ನು "ರತ್ನದಂತಹ ವ್ಯಕ್ತಿ" ಎಂದು ಬಣ್ಣಿಸಿದ್ದಾರೆ. ಸಿಡ್ನಿ ಮತ್ತು ವಿಕ್ಟೋರಿಯಾದಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ಗೆ ತಲುಪಿದಾಗ ದಕ್ಷಿಣ ಆಸ್ಟ್ರೇಲಿಯಾ ಮತ್ತು ಇತರ ಪ್ರದೇಶಗಳ ಮೇಲೆ ಪರಿಣಾಮ ಬೀರುವ ತೀವ್ರ ಶಾಖದ ಅಲೆಯ ಸಮಯದಲ್ಲಿ ಈ ಘಟನೆ ನಡೆದಿದೆ.
ಬಿಸಿಲಿನ ಹೊಡೆತಕ್ಕೆ ಮೃತಪಟ್ಟ ಆಟಗಾರರಿವರು
ಬಿಸಿಲಿನ ತಾಪಮಾನಕ್ಕೆ ನಿಧನ ಹೊಂದಿರುವುದು ಜುನೈಲ್ ಮಾತ್ರವಲ್ಲ, ಈ ಹಿಂದೆಯೂ ಅನೇಕ ಘಟನೆಗಳು ಸಂಭವಿಸಿವೆ. ಅವುಗಳ ವಿವರ ಈ ಮುಂದಿನಂತಿವೆ.
ಫಿಲಿಪ್ ಜೂನಿಯರ್: ಯುಎಸ್ನ ಮಿಸ್ಸಿಸ್ಸಿಪ್ಪಿಯ 17 ವರ್ಷದ ಫುಟ್ಬಾಲ್ ಆಟಗಾರ 2022ರ ಆಗಸ್ಟ್ನ ಪ್ರಾಕ್ಟೀಸ್ ವೇಳೆ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದರು.
ಒವೆಟ್ ಗೊಮೆಜ್-ರೆಗಾಲಾಡೊ: ಕಾನ್ಸಾಸ್‌ನ ಶಾನಿ ಮಿಷನ್ ಹೈಸ್ಕೂಲ್‌ನ 15 ವರ್ಷದ ಫುಟ್ಬಾಲ್ ಆಟಗಾರ 2024ರ ಆಗಸ್ಟ್ನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಕುಸಿದು ಬಿದ್ದು ದುರಂತ ಅಂತ್ಯ ಕಂಡಿದ್ದರು.
ಶೇನ್ ಥಾಮಸ್: 2021ರ ಆಗಸ್ಟ್ನಲ್ಲಿ ಕ್ಯಾಲಿಫೋರ್ನಿಯಾದ ಚಿನೋದಲ್ಲಿ ಕ್ಲಬ್ ಸಾಕರ್ ಪ್ರಾಕ್ಟೀಸ್ ಮಾಡುತ್ತಿದ್ದ ಸಂದರ್ಭದಲ್ಲಿ 17 ವರ್ಷದ ಫುಟ್ಬಾಲ್ ಆಟಗಾರ ಬಿಸಿಲಿನ ಝಳಕ್ಕೆ ಕುಸಿದು ಬಿದ್ದು ಮೃತಪಟ್ಟಿದ್ದರು.
ಕೋರೆ ಸ್ಟ್ರಿಂಗರ್: 2001ರ ವರ್ಷದಲ್ಲಿ ಪ್ರಾಕ್ಟೀಸ್ ಕ್ಯಾಂಪ್ನಲ್ಲಿ ಮಿನ್ನೇಸೋಟ ವೈಕಿಂಗ್ಸ್ ಆಟಗಾರ ಬಿಸಿಲಿನ ಶಾಖದ ಹೊಡೆತದಿಂದ ಅಸುನೀಗಿದ್ದರು.
