ಈಗ ಹೇಳಿ, ಅಪಶಕುನ ಯಾರು; ಬಿಜೆಪಿ ಗೆದ್ದ ಬೆನ್ನಲ್ಲೇ ರಾಹುಲ್ ಗಾಂಧಿಯನ್ನು ಲೇವಡಿ ಮಾಡಿದ ಪಾಕ್ ಕ್ರಿಕೆಟಿಗ
Danish Kaneria on Rahul Gandhi: ನಾಲ್ಕು ರಾಜ್ಯ ವಿಧಾನಸಭಾ ಚುನಾವಣೆಗಳ ಪೈಕಿ ಮೂರರಲ್ಲಿ ಬಿಜೆಪಿ ಅಮೋಘ ಗೆಲುವು ಸಾಧಿಸಿದ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ, ಕಾಂಗ್ರೆಸ್ ನಾಯಕ ರಾಹುಲ್ ಗಾಧಿಯನ್ನು ಲೇವಡಿ ಮಾಡಿದ್ದಾರೆ.

ಐದು ರಾಜ್ಯ ವಿಧಾನಸಭಾ ಚುನಾವಣೆ ಪೈಕಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತೀಸ್ಗಡದಲ್ಲಿ ಅಮೋಘ ಗೆಲುವು ಸಾಧಿಸಿದ ಬಿಜೆಪಿ ಸಂಭ್ರಮದ ಅಲೆಯಲ್ಲಿ ತೇಲುತ್ತಿದೆ. ಲೋಕಸಭೆ ಚುನಾವಣೆಗೂ ಮುನ್ನ ಈ ಗೆಲುವು ಪಕ್ಷದ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದೆ. ಈ ಅಮೋಘ ಗೆಲುವು ಸಾಧಿಸಿದ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ (Danish Kaneria), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು (Rahul Gandhi) ಲೇವಡಿ ಮಾಡಿದ್ದಾರೆ.
ನವೆಂಬರ್ 19ರಂದು ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಿದ ಕಾರಣ ಭಾರತ ಸೋಲನುಭವಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್ ಗಾಂಧಿ ಅವರು ಟೀಕಿಸಿದ್ದರು. ಮೋದಿ ಹೋಗಿದ್ದೇ ಭಾರತದ ಸೋಲಿಗೆ ಕಾರಣ. ಮೋದಿ ಪನೌತಿ (ಅಪಶಕುನ) ಎಂದು ರಾಹುಲ್ ಗಾಂಧಿ, ಜರಿದಿದ್ದರು. ಈಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅದೇ ದಾಟಿಯಲ್ಲಿ ರಾಹುಲ್ ಗಾಂಧಿಗೆ ಚುಚ್ಚಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ರಾಗಾ ಟ್ರೋಲ್
ಕಾಂಗ್ರೆಸ್ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಸೋಲಿಗೆ ಪ್ರಮುಖ ಕಾರಣ ರಾಹುಲ್ ಗಾಂಧಿ ಎಂದು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಪಾಕಿಸ್ತಾನದ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮತ್ತು ಪಾಕಿಸ್ತಾನ ತಂಡದಲ್ಲಿ ಆಡಿದ 2ನೇ ಹಿಂದೂ ಕ್ರಿಕೆಟಿಗ ಎನಿಸಿಕೊಂಡ ಕನೇರಿಯಾ, ಕಾಂಗ್ರೆಸ್ ಸೋಲಿಗೆ ಟಾಂಗ್ ಕೊಟ್ಟಿದ್ದಾರೆ.
ಟ್ವೀಟ್ ವೈರಲ್
ನಾಲ್ಕು ರಾಜ್ಯಗಳ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ಮುನ್ನಡೆ ಪಡೆಯುತ್ತಿದ್ದಂತೆ ಕನೇರಿಯಾ ಪೋಸ್ಟ್ ಮಾಡಿದ್ದಾರೆ. ಆದರೆ ಯಾವ ಪಕ್ಷ, ಯಾರ ಹೆಸರನ್ನೂ ತೆಗೆದುಕೊಳ್ಳದೆ ತಮ್ಮ ಎಕ್ಸ್ ಖಾತೆಯಲ್ಲಿ 'ಪನೌತಿ ಕೌನ್..?' ಎಂದು ಪ್ರಶ್ನಿಸಿ ನಗುವ ಎಮೋಜಿಯೊಂದಿಗೆ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಮೋದಿಯನ್ನು ಪನೌತಿ ಎಂದಿದ್ದ ರಾಹುಲ್ ಗಾಂಧಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಪನೌತಿ ಎಂಬ ಪದದ ಅರ್ಥ, ಅಪಶಕುನ ಎಂದರ್ಥ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಕಮಲ ಅರಳಿದೆ. ಆದರೆ ಹಸ್ತ ನಿರಾಸೆ ಅನುಭವಿಸಿದೆ. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ನಾಯಕರು ಸಹ ಪನೌತಿ ಯಾರು ಎಂದು ಪೋಸ್ಟ್ಗಳನ್ನು ಹಾಕುವ ಮೂಲಕ ಕಾಂಗ್ರೆಸ್ ಅನ್ನು ಕೆಣಕಿದ್ದಾರೆ. ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಪ್ರಕ್ರಿಯೆ ನಂತರ 3-1 ಅಂತರದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.
ಚುನಾವಣಾ ಫಲಿತಾಂಶ ಹೀಗಿದೆ..
ಮಧ್ಯ ಪ್ರದೇಶ: ಒಟ್ಟು ಕ್ಷೇತ್ರಗಳು 230, ಬಿಜೆಪಿ 163 ಗೆಲುವು, ಕಾಂಗ್ರೆಸ್ 66 ಜಯ, ಇತರೆ 1 ಗೆಲುವು (ಮ್ಯಾಜಿಕ್ ನಂಬರ್ 116)
ರಾಜಸ್ಥಾನ: ಒಟ್ಟು ಕ್ಷೇತ್ರಗಳು 198, ಬಿಜೆಪಿ ಗೆಲುವು 115, ಕಾಂಗ್ರೆಸ್ 69 ಜಯ, ಇತರೆ 14 ಗೆಲುವು (ಮ್ಯಾಜಿಕ್ ನಂಬರ್ 100)
ಛತ್ತೀಸ್ಗಢ: ಒಟ್ಟು ಕ್ಷೇತ್ರಗಳು 90, ಬಿಜೆಪಿ ಗೆಲುವು 54, ಕಾಂಗ್ರೆಸ್ 35 ಗೆಲುವು, ಇತರೆ 1 ಜಯ (ಮ್ಯಾಜಿಕ್ ನಂಬರ್ 46)
ತೆಲಂಗಾಣ: ಒಟ್ಟು ಕ್ಷೇತ್ರಗಳು 119, ಕಾಂಗ್ರೆಸ್ ಗೆಲುವು 64, ಬಿಆರ್ಎಸ್ 39, ಬಿಜೆಪಿ 8, ಇತರೆ 8 ಜಯ (ಮ್ಯಾಜಿಕ್ ನಂಬರ್ 60)
ಪಾಕ್ ಪರ ಆಡಿದ 2ನೇ ಹಿಂದೂ ಆಟಗಾರ
ದಾನಿಶ್ ಕನೇರಿಯಾ ಅವರು ಪಾಕಿಸ್ತಾನ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದರು. ಅವರ ಸೋದರ ಸಂಬಂಧಿ ಅನಿಲ್ ದಲ್ಪತ್ ನಂತರ ಪಾಕಿಸ್ತಾನ ತಂಡಕ್ಕೆ ಆಡಿದ 2ನೇ ಹಿಂದೂ ಆಟಗಾರ. ಪಾಕಿಸ್ತಾನ ಪರ ಅದ್ಭುತ ಪ್ರದರ್ಶನ ನೀಡಿರುವ ಕನೇರಿಯಾ, 61 ಟೆಸ್ಟ್ ಪಂದ್ಯಗಳಲ್ಲಿ 261 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ 18 ಪಂದ್ಯಗಳನ್ನಾಡಿದ್ದು, 15 ವಿಕೆಟ್ ಪಡೆದಿದ್ದಾರೆ. ಟೆಸ್ಟ್ನಲ್ಲಿ 261 ವಿಕೆಟ್ಗಳೊಂದಿಗೆ ಪಾಕ್ ಪರ ಅತಿ ಹೆಚ್ಚು ವಿಕೆಟ್ ಪಡೆದ 4ನೇ ಬೌಲರ್ ಎನಿಸಿದ್ದಾರೆ.