ಭಾರತ-ಪಾಕಿಸ್ತಾನ ಪಂದ್ಯ: ಈ ಕಾರಣಕ್ಕೆ ತನಗೆ ನೀಡಿದ್ದ 95 ಲಕ್ಷ ಬೆಲೆಯ ವಿಐಪಿ ಟಿಕೆಟ್ಸ್ ಮಾರಿದ ಪಿಸಿಬಿ ಅಧ್ಯಕ್ಷ
PCB Chairman Mohsin Naqvi: ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ನೀಡಲಾದ 95 ಲಕ್ಷ ರೂ ಬೆಲೆಯ ಪ್ರೀಮಿಯಂ ಟಿಕೆಟ್ಗಳನ್ನು ಮಾರಿದ್ದು, ಭಾರತ-ಪಾಕಿಸ್ತಾನ ಪಂದ್ಯವನ್ನು ಸಾಮಾನ್ಯರಂತೆ ವೀಕ್ಷಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ನವದೆಹಲಿ, ಫೆ 18: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (ICC Champions Trophy 2025) ಫೆಬ್ರವರಿ 23ರ ಭಾನುವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ (India vs Pakistan ) ನಡುವಿನ ಬ್ಲಾಕ್ಬಸ್ಟರ್ ಪಂದ್ಯಕ್ಕಾಗಿ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 30 ಆಸನಗಳ ವಿಐಪಿ ಬಾಕ್ಸ್ ಟಿಕೆಟ್ಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು (PCB Chairman Mohsin Naqvi) ತ್ಯಾಗ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ತನಗೆ ನೀಡಿದ್ದ ವಿಐಪಿ ಬಾಕ್ಸ್ ಟಿಕೆಟ್ಸ್ ನಿರಾಕರಿಸಿದ ನಖ್ವಿ, ತಾನು ಸಾಮಾನ್ಯರಂತೆ ಪಂದ್ಯ ವೀಕ್ಷಿಸುವುದಾಗಿ ಹೇಳಿದ್ದಾರೆ.
ಪಾಕಿಸ್ತಾನದ ಮಾಧ್ಯಮಗಳ ವರದಿಯ ಪ್ರಕಾರ, ಇಂಡೋ-ಪಾಕ್ ನಡುವಿನ ಬಹುನಿರೀಕ್ಷಿತ ಪಂದ್ಯಕ್ಕೆ ದುಬೈ ಮೈದಾನದಲ್ಲಿ ಅತ್ಯುತ್ತಮ ಆಸನ, ಐಷಾರಾಮಿ ಸೌಲಭ್ಯಗಳುಳ್ಳ ಬಾಕ್ಸ್ನಲ್ಲಿ ತಮ್ಮ ಕುಟುಂಬ ಮತ್ತು ಆಪ್ತರೊಂದಿಗೆ ಪಂದ್ಯ ವೀಕ್ಷಿಸುವ ಸಲುವಾಗಿ ನಖ್ವಿ ಅವರಿಗೆ ಸುಮಾರು 4,00,000 ದಿರ್ಹ್ಯಾಮ್ (ಸುಮಾರು 95 ಲಕ್ಷ ರೂ) ಬೆಲೆಯ 30 ಪ್ರೀಮಿಯಂ ಟಿಕೆಟ್ಗಳನ್ನು ನೀಡಲಾಗಿತ್ತು. ಆದರೆ ಆ ಟಿಕೆಟ್ಗಳನ್ನು ಮಾರಿರುವ ಪಿಸಿಬಿ ಅಧ್ಯಕ್ಷ, ಫ್ಯಾನ್ಸ್ ಜೊತೆಗೆ ಪಂದ್ಯ ನೋಡುವುದಾಗಿ ಹೇಳಿದ್ದಾರೆ.
ಅಭಿಮಾನಿಗಳ ಜೊತೆ ಕೂತು ಪಂದ್ಯ ವೀಕ್ಷಣೆ
ಭಾರತ ಮತ್ತು ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಅಭಿಮಾನಿಗಳ ಜೊತೆ ಕೂತು ಅದರ ವಾತಾವರಣ ಅನುಭವಿಸಲು ಮತ್ತು ಪಂದ್ಯದ ದಿನಗಳಲ್ಲಿ ಫ್ಯಾನ್ಸ್ ಪಾಕಿಸ್ತಾನ ತಂಡವನ್ನು ಹೇಗೆ ಬೆಂಬಲಿಸುತ್ತಾರೆ ಎಂಬುದನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರ ಗ್ಯಾಲರಿಯಲ್ಲೇ ಆಟ ವೀಕ್ಷಿಸಲು ಬಯಸಿದ್ದಾರೆ. ಹೀಗಾಗಿ ಟಿಕೆಟ್ಗಳನ್ನು ಮಾರಾಟ ಮಾಡಿದ್ದಾರೆ. ಅವರು ಈಗಾಗಲೇ ಐಸಿಸಿ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ತಮ್ಮ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ 2025ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡ ಬುಧವಾರ (ಫೆ 19) ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಮತ್ತೊಂದೆಡೆ, ಭಾರತ ಗುರುವಾರ ತನ್ನ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಆದಾಗ್ಯೂ, ಭಾನುವಾರ (ಫೆ 23) ದುಬೈನಲ್ಲಿ ನಡೆಯಲಿರುವ ಎರಡು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯದತ್ತ ಎಲ್ಲರ ಕಣ್ಣು ನೆಟ್ಟಿದೆ.
ಭಾರತ ಪಾಕಿಸ್ತಾನ ಮುಖಾಮುಖಿ ದಾಖಲೆ
ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿರುವ ಪಾಕಿಸ್ತಾನ, ಭಾರತ ವಿರುದ್ಧ ಮೇಲುಗೈ ಸಾಧಿಸಿದೆ. ಎಂಟು ವರ್ಷಗಳ ಹಿಂದೆ ಅಂದರೆ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತ ತಂಡವು 180 ರನ್ಗಳ ಹೀನಾಯ ಸೋಲು ಅನುಭವಿಸಿತ್ತು. ಇದರೊಂದಿಗೆ ಪಾಕಿಸ್ತಾನ ಮೊದಲ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿತ್ತು. ಒಟ್ಟಾರೆಯಾಗಿ, ಪಾಕಿಸ್ತಾನವು ಎಲ್ಲಾ ಏಕದಿನ ಕ್ರಿಕೆಟ್ನಲ್ಲಿ ಮೆನ್ ಇನ್ ಬ್ಲೂ ವಿರುದ್ಧ 73-57 ಮುನ್ನಡೆ ಸಾಧಿಸಿದೆ.
ಆದಾಗ್ಯೂ, ಭಾರತ ತಂಡವು ಐಸಿಸಿ ಟೂರ್ನಿ ಸೇರಿದಂತೆ ಎಲ್ಲಾ ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ 18-8 ದಾಖಲೆ ಹೊಂದಿದೆ. 2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಾಕಿಸ್ತಾನ ವಿರುದ್ಧ ಏಕದಿನ ಪಂದ್ಯದಲ್ಲಿ ಭಾರತದ ಕೊನೆಯ ಸೋಲಾಗಿದ್ದರೂ, 2023 ರ ವಿಶ್ವಕಪ್ನಲ್ಲಿ ಅಹಮದಾಬಾದ್ನಲ್ಲಿ 117 ರನ್ಗಳ ಗೆಲುವು ಸೇರಿದಂತೆ ಸತತ ಐದು ಪಂದ್ಯಗಳನ್ನು ಗೆದ್ದಿದೆ.
