ಇಮ್ರಾನ್ ಖಾನ್ ಖೈದಿ ಸಂಖ್ಯೆ 804ಕ್ಕೆ ಬೆಂಬಲ; ಪಾಕಿಸ್ತಾನ ಕ್ರಿಕೆಟಿಗ ಅಮೀರ್ ಜಮಾಲ್‌ಗೆ 4 ಲಕ್ಷ ರೂ ದಂಡ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಮ್ರಾನ್ ಖಾನ್ ಖೈದಿ ಸಂಖ್ಯೆ 804ಕ್ಕೆ ಬೆಂಬಲ; ಪಾಕಿಸ್ತಾನ ಕ್ರಿಕೆಟಿಗ ಅಮೀರ್ ಜಮಾಲ್‌ಗೆ 4 ಲಕ್ಷ ರೂ ದಂಡ

ಇಮ್ರಾನ್ ಖಾನ್ ಖೈದಿ ಸಂಖ್ಯೆ 804ಕ್ಕೆ ಬೆಂಬಲ; ಪಾಕಿಸ್ತಾನ ಕ್ರಿಕೆಟಿಗ ಅಮೀರ್ ಜಮಾಲ್‌ಗೆ 4 ಲಕ್ಷ ರೂ ದಂಡ

ಪಿಸಿಬಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಿಕೆಟಿಗ ಅಮೀರ್ ಜಮಾಲ್‌ಗೆ 4 ಲಕ್ಷ ರೂ. ದಂಡ ವಿಧಿಸಲಾಗಿದೆ. '804' ಸಂಖ್ಯೆಯು ಇಮ್ರಾನ್ ಖಾನ್ ಅವರ ಖೈದಿ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಇದನ್ನು ಜಮಾಲ್‌ ತಮ್ಮ ಟೆಸ್ಟ್‌ ಕ್ಯಾಪ್‌ನಲ್ಲಿ ಬರೆದಿದ್ದರು.

ಇಮ್ರಾನ್ ಖಾನ್ ಖೈದಿ ಸಂಖ್ಯೆಗೆ ಬೆಂಬಲ; ಪಾಕ್‌ ಕ್ರಿಕೆಟಿಗ ಅಮೀರ್ ಜಮಾಲ್‌ಗೆ 4 ಲಕ್ಷ ರೂ ದಂಡ
ಇಮ್ರಾನ್ ಖಾನ್ ಖೈದಿ ಸಂಖ್ಯೆಗೆ ಬೆಂಬಲ; ಪಾಕ್‌ ಕ್ರಿಕೆಟಿಗ ಅಮೀರ್ ಜಮಾಲ್‌ಗೆ 4 ಲಕ್ಷ ರೂ ದಂಡ (AP)

ಪಾಕಿಸ್ತಾನ ಕ್ರಿಕೆಟ್‌ ತಂಡದ ವೇಗದ ಬೌಲರ್ ಅಮೀರ್ ಜಮಾಲ್ ಅವರಿಗೆ ಪಿಸಿಬಿಯು 1.4 ಮಿಲಿಯನ್ (ಪಾಕಿಸ್ತಾನ ರೂಪಾಯಿ) ದಂಡ ವಿಧಿಸಿದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು ರೂ. 4,35,820. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟಗಾರನಿಗೆ ದಂಡದ ಬಿಸಿ ಮುಟ್ಟಿಸಿದೆ. ತಮ್ಮ ಟೆಸ್ಟ್ ಕ್ಯಾಪ್ ಮೇಲೆ '804' ಸಂಖ್ಯೆಯನ್ನು ಬರೆದ ಹಿನ್ನೆಲೆಯಲ್ಲಿ ಜಮಾಲ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ. ಈ ಸಂಖ್ಯೆಯು ಪ್ರಸ್ತುತ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬೆಂಬಲಿಸುವ ರಾಜಕೀಯ ಹೇಳಿಕೆ ಎಂದು ವ್ಯಾಖ್ಯಾನಿಸಲಾಗಿದೆ.

ಪಾಕಿಸ್ತಾನದ ಸಮಾ ಟಿವಿ ವರದಿಯಂತೆ, ಪಿಸಿಬಿಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅನೇಕ ಆಟಗಾರರಿಗೆ ದಂಡ ವಿಧಿಸಿದೆ. ಆದರೆ ಜಮಾಲ್ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾರೆ. '804' ಸಂಖ್ಯೆಯು ಇಮ್ರಾನ್ ಖಾನ್ ಅವರ ಖೈದಿ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗಿದೆ. ಆಟಗಾರರು ರಾಜಕೀಯ ವಿಚಾರಗಳನ್ನು ಆಟದ ಮೈದಾನಕ್ಕೆ ತರುವುದು ಸೂಕ್ತವಲ್ಲ ಎಂದು ಆಡಳಿತ ಮಂಡಳಿ ಹೇಳಿಕೊಂಡಿದೆ.

ಇತರ ಆಟಗಾರರಿಗೂ ದಂಡ

ಜಮಾಲ್ ಅವರ ಮೇಲಷ್ಟೇ ಶಿಸ್ತು ಕ್ರಮ ಕೈಗೊಂಡಿಲ್ಲ. ಕಳೆದ ವರ್ಷ ಪಾಕಿಸ್ತಾನ ತಂಡದ ಆಸ್ಟ್ರೇಲಿಯಾ ಪ್ರವಾಸದ ವೇಳೆ ತಡವಾಗಿ ಹಿಂದಿರುಗಿದ್ದಕ್ಕಾಗಿ ಸೈಮ್ ಅಯೂಬ್, ಸಲ್ಮಾನ್ ಅಲಿ ಆಘಾ ಮತ್ತು ಅಬ್ದುಲ್ಲಾ ಶಫೀಕ್ ಸೇರಿದಂತೆ ಹಲವಾರು ಆಟಗಾರರಿಗೆ ತಲಾ 500,000 ಪಾಕಿಸ್ತಾನ ರೂಪಾಯಿ ದಂಡ ವಿಧಿಸಲಾಗಿತ್ತು. ಇದಲ್ಲದೆ, ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ ತಂಡದ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸೂಫಿಯಾನ್ ಮುಖೀಮ್, ಅಬ್ಬಾಸ್ ಅಫ್ರಿದಿ ಮತ್ತು ಉಸ್ಮಾನ್ ಖಾನ್ ಅವರಿಗೆ ತಲಾ 200 ಡಾಲರ್ ದಂಡ ವಿಧಿಸಲಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತಂಡದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವ ಬಗ್ಗೆ ದೃಢವಾದ ನಿಲುವನ್ನು ತೆಗೆದುಕೊಂಡಿದೆ. ಕ್ರಿಕೆಟ್ ಎಂಬುದು ರಾಜಕೀಯದಿಂದ ಮುಕ್ತವಾಗಿರಬೇಕು ಎಂಬುದನ್ನು ಮತ್ತೆ ಹೇಳಿದೆ.

ಪಾಕಿಸ್ತಾನ ತಂಡಕ್ಕೆ ಸೋಲು

ಈ ನಡುವೆ ಪಾಕಿಸ್ತಾನ ತಂಡವು ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಕಿವೀಸ್ ವೇಗದ ದಾಳಿಯ ವಿರುದ್ಧ ಬ್ಯಾಟ್‌ ಬೀಸಲು ಪರದಾಡಿದ ಪಾಕಿಸ್ತಾನ 18.4 ಓವರ್‌ಗಳಲ್ಲಿ 91 ರನ್‌ಗಳಿಗೆ ಆಲೌಟ್ ಆಯ್ತು. ಇದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಂಡದ ಐದನೇ ಕನಿಷ್ಠ ಮೊತ್ತವಾಗಿದೆ. ಇದಕ್ಕೆ ಪ್ರತಿಯಾಗಿ ನ್ಯೂಜಿಲೆಂಡ್ 10.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿ ಗೆದ್ದು ಬೀಗಿತು.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner