Asia Cup 2023: ಏಷ್ಯಾಕಪ್ ಉದ್ಘಾಟನಾ ಪಂದ್ಯ ವೀಕ್ಷಿಸಲು ಪಾಕಿಸ್ತಾನಕ್ಕೆ ಜಯ್ ಶಾ ಆಹ್ವಾನಿಸಿದ ಪಿಸಿಬಿ
ಕನ್ನಡ ಸುದ್ದಿ  /  ಕ್ರಿಕೆಟ್  /  Asia Cup 2023: ಏಷ್ಯಾಕಪ್ ಉದ್ಘಾಟನಾ ಪಂದ್ಯ ವೀಕ್ಷಿಸಲು ಪಾಕಿಸ್ತಾನಕ್ಕೆ ಜಯ್ ಶಾ ಆಹ್ವಾನಿಸಿದ ಪಿಸಿಬಿ

Asia Cup 2023: ಏಷ್ಯಾಕಪ್ ಉದ್ಘಾಟನಾ ಪಂದ್ಯ ವೀಕ್ಷಿಸಲು ಪಾಕಿಸ್ತಾನಕ್ಕೆ ಜಯ್ ಶಾ ಆಹ್ವಾನಿಸಿದ ಪಿಸಿಬಿ

PCB Invites Jay Shah: ಎಸಿಸಿ ಅಧ್ಯಕ್ಷ ಜಯ್ ಶಾ ಅವರನ್ನು ಪಾಕಿಸ್ತಾನ ಮತ್ತು ನೇಪಾಳ ನಡುವಿನ‌ ಏಷ್ಯಾಕಪ್ ಪಂದ್ಯಕ್ಕೆ ಹಾಜರಾಗುವಂತೆ ಪಿಸಿಬಿ ಆಹ್ವಾನಿಸಿದೆ.

ಏಷ್ಯಾಕಪ್‌ ಪಂದ್ಯಕ್ಕೆ ಜಯ್‌ ಶಾಗೆ ಆಹ್ವಾನ
ಏಷ್ಯಾಕಪ್‌ ಪಂದ್ಯಕ್ಕೆ ಜಯ್‌ ಶಾಗೆ ಆಹ್ವಾನ

2023ರ ಏಷ್ಯಾಕಪ್ (2023 Asia Cup) ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಪಾಕಿಸ್ತಾನದಲ್ಲಿ ಆಗಸ್ಟ್ 30ರಿಂದ ಏಷ್ಯಾದ ಬಲಿಷ್ಠ ತಂಡಗಳ ನಡುವಣ ಟೂರ್ನಿ ಪ್ರಾರಂಭವಾಗುತ್ತಿದೆ. ನೆರೆಹೊರೆಯ ಎರಡು ರಾಷ್ಟ್ರಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಬಿಸಿಸಿಐ ಹಾಗೂ ಪಿಸಿಬಿಯು ಏಷ್ಯಾ ರಾಷ್ಟ್ರಗಳ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಒಪ್ಪಿಕೊಂಡಿವೆ.

ಟೂರ್ನಿಯ ಪ್ರಾಥಮಿಕ ಆತಿಥ್ಯ ಹಕ್ಕನ್ನು ಪಾಕಿಸ್ತಾನ ಪಡೆದಿರುವ ಕಾರಣದಿಂದ, ಭಾರತವು ತಮ್ಮ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಒಪ್ಪಿಕೊಂಡಿಲ್ಲ. ಹೀಗಾಗಿ ಶ್ರೀಲಂಕಾವನ್ನು ಪರ್ಯಾಯ ಆತಿಥ್ಯ ಸ್ಥಳವಾಗಿ ಆಯ್ಕೆ ಮಾಡಲಾಯಿತು. ಪರಿಣಾಮವಾಗಿ ಪಾಕಿಸ್ತಾನದ ಲಾಹೋರ್ ಮತ್ತು ಮುಲ್ತಾನ್ ನಗರಗಳಲ್ಲಿ ನಾಲ್ಕು ಪಂದ್ಯಗಳು ನಡೆಯಲಿದೆ. ಉಳಿದ ಪಂದ್ಯಗಳನ್ನು ದ್ವೀಪರಾಷ್ಟ್ರದಲ್ಲಿ ಆಡಿಸಲಾಗುತ್ತದೆ.

ಜಯ್‌ ಶಾಗೆ ಪಾಕಿಸ್ತಾನದ ಆಹ್ವಾನ

ಮುಲ್ತಾನ್‌ನಲ್ಲಿ ಟೂರ್ನಮೆಂಟ್‌ನ ಉದ್ಘಾಟನಾ ಪಂದ್ಯ ನಡೆಯಲು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ನಡುವೆ ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಜಯ್ ಶಾ ಅವರನ್ನು ಪಾಕಿಸ್ತಾನ ಮತ್ತು ನೇಪಾಳ ನಡುವಿನ ಆರಂಭಿಕ ಪಂದ್ಯಕ್ಕೆ ಹಾಜರಾಗುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಹ್ವಾನಿಸಿದೆ.

ಪಿಟಿಐ ವರದಿಯ ಪ್ರಕಾರ, ಜಯ್ ಶಾ ಮಾತ್ರವಲ್ಲದೆ ಎಸಿಸಿ ಅಡಿಯಲ್ಲಿ ಬರುವ ಇತರ ರಾಷ್ಟ್ರಗಳ ಕ್ರಿಕೆಟ್ ಸಂಸ್ಥೆಗಳ ಮುಖ್ಯಸ್ಥರನ್ನು ಕೂಡಾ ಪಂದ್ಯಕ್ಕೆ ಆಹ್ವಾನಿಸಲಾಗಿದೆ ಎಂದು ಪಿಸಿಬಿ ಬಹಿರಂಗಪಡಿಸಿದೆ. “ಐಸಿಸಿ ಸಭೆಯ ವೇಳೆ ಉಭಯ ರಾಷ್ಟ್ರಗಳ ಮುಖ್ಯಸ್ಥರು ಡರ್ಬನ್‌ನಲ್ಲಿ ಭೇಟಿಯಾದ ಸಂದರ್ಭದಲ್ಲಿ ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಅವರು ಜಯ್ ಶಾಗೆ ಮೌಖಿಕವಾಗಿ ನೀಡಿದ ಆಹ್ವಾನವನ್ನು ಪಿಸಿಬಿ ಮೂಲಭೂತವಾಗಿ ಅನುಸರಿಸಿದೆ” ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಮಾಧ್ಯಮಗಳು ಮಾಡಿದ ಹೇಳಿಕೆಗಳಿಗೆ ವಿರುದ್ಧವಾಗಿ ಜಯ್‌ ಶಾ ಅವರು ಪಾಕಿಸ್ತಾನದ ಆಹ್ವಾನವನ್ನು ಸ್ವೀಕರಿಸಿದ್ದಾರೆ ಎಂದು ಖುದ್ದು ಅವರೇ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಪಿಸಿಬಿ ಮುಖ್ಯಸ್ಥರು ಮುಖ ಕೆಂಪಗಾಗಿದೆ ಎಂದು ವರದಿ ಹೇಳಿದೆ.

ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯಗಳು

2023ರ ಏಷ್ಯಾಕಪ್ ಪಂದ್ಯಾವಳಿಯು ಆಗಸ್ಟ್ 30ರಿಂದ ಸೆಪ್ಟೆಂಬರ್ 17ರವರೆಗೆ ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ. ಪಾಕಿಸ್ತಾನದಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಮುಲ್ತಾನ್‌ನಲ್ಲಿ ಒಂದು ಪಂದ್ಯ ಮತ್ತು ಇತರ ಮೂರು ಪಂದ್ಯಗಳು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಶ್ರೀಲಂಕಾದಲ್ಲಿ ನಡೆಯುವ ಇತರ ಪಂದ್ಯಗಳಿಗೆ ಪಲ್ಲೆಕೆಲೆ ಮತ್ತು ಕೊಲಂಬೊ ಆತಿಥ್ಯ ವಹಿಸಲಿವೆ.

ಸೆಪ್ಟೆಂಬರ್ 2ರಂದು ಇಂಡೋ ಪಾಕ್‌ ಕದನ

ಭಾರತವು ತನ್ನ ಏಷ್ಯಾಕಪ್‌ ಅಭಿಯಾನವನ್ನು ಸೆಪ್ಟೆಂಬರ್ 2ರಿಂದ ಆರಂಭಿಸಲಿದೆ. ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯ ನಡೆಯಲಿದೆ. ಎರಡು ದಿನಗಳ ನಂತರ ಅದೇ ಮೈದಾನದಲ್ಲಿ ನೇಪಾಳ ವಿರುದ್ಧ ಎರಡನೇ ಪಂದ್ಯವನ್ನು ಭಾರತ ಆಡಲಿದೆ.

ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂ ಸೆಪ್ಟೆಂಬರ್ 9ರಿಂದ 14ರವರೆಗೆ ಒಟ್ಟು ಐದು ಸೂಪರ್ ಫೋರ್ ಪಂದ್ಯಗಳನ್ನು ಆಯೋಜಿಸಲಿದ್ದು, ಸೆಪ್ಟೆಂಬರ್ 17ರಂದು ಫೈನಲ್ ಪಂದ್ಯ ನಡೆಯಲಿದೆ.

Whats_app_banner