ಹ್ಯಾರಿಸ್ ರೌಫ್‌ ಕಂಬ್ಯಾಕ್‌, ಹಸನ್‌ ಅಲಿಗೆ ಕೊಕ್; ಟಿ20 ವಿಶ್ವಕಪ್‌ಗೆ ತಡವಾಗಿ ತಂಡ ಪ್ರಕಟಿಸಿದ ಪಾಕಿಸ್ತಾನ
ಕನ್ನಡ ಸುದ್ದಿ  /  ಕ್ರಿಕೆಟ್  /  ಹ್ಯಾರಿಸ್ ರೌಫ್‌ ಕಂಬ್ಯಾಕ್‌, ಹಸನ್‌ ಅಲಿಗೆ ಕೊಕ್; ಟಿ20 ವಿಶ್ವಕಪ್‌ಗೆ ತಡವಾಗಿ ತಂಡ ಪ್ರಕಟಿಸಿದ ಪಾಕಿಸ್ತಾನ

ಹ್ಯಾರಿಸ್ ರೌಫ್‌ ಕಂಬ್ಯಾಕ್‌, ಹಸನ್‌ ಅಲಿಗೆ ಕೊಕ್; ಟಿ20 ವಿಶ್ವಕಪ್‌ಗೆ ತಡವಾಗಿ ತಂಡ ಪ್ರಕಟಿಸಿದ ಪಾಕಿಸ್ತಾನ

ಐಸಿಸಿ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡ ಪ್ರಕಟಗೊಂಡಿದೆ. ಎಲ್ಲಾ ತಂಡಗಳು ತಿಂಗಳ ಆರಂಭದಲ್ಲೇ ತಂಡ ಪ್ರಕಟಿಸಿದರೆ, ಪಾಕಿಸ್ತಾನ ಮಾತ್ರ ಶುಕ್ರವಾರ ಅಂತಿಮಗೊಳಿಸಿದೆ. ಬಾಬರ್‌ ಅಜಮ್‌ ತಂಡವನ್ನು ಮುನ್ನಡೆಸಿದರೆ, ಹ್ಯಾರಿಸ್‌ ರೌಫ್‌ ತಂಡಕ್ಕೆ ಮರಳಿದ್ದಾರೆ.

ಟಿ20 ವಿಶ್ವಕಪ್‌ಗೆ ತಡವಾಗಿ ತಂಡ ಪ್ರಕಟಿಸಿದ ಪಾಕಿಸ್ತಾನ
ಟಿ20 ವಿಶ್ವಕಪ್‌ಗೆ ತಡವಾಗಿ ತಂಡ ಪ್ರಕಟಿಸಿದ ಪಾಕಿಸ್ತಾನ (AP)

ಮುಂಬರುವ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಪಾಕಿಸ್ತಾನ ಕ್ರಿಕೆಟ್‌ ತಂಡವು ತಡವಾಗಿ ಪ್ರಕಟಗೊಂಡಿದೆ. ಬಾಬರ್ ಅಜಮ್ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ತಿಂಗಳ ಆರಂಭದಲ್ಲಿ ಶಾಹೀನ್ ಅಫ್ರಿದಿ ಬದಲಿಗೆ ವೈಟ್ ಬಾಲ್ ತಂಡದ ನಾಯಕನಾಗಿ ಬಾಬರ್ ಮರುನೇಮಕಗೊಂಡಿದ್ದರು. ಅತ್ತ ಗಾಯದಿಂದ ಚೇತರಿಸಿಕೊಂಡ ವೇಗದ ಬೌಲರ್ ಹ್ಯಾರಿಸ್ ರೌಫ್ ಹಲವು ತಿಂಗಳೂಗಳ ಬಳಿಕ ತಂಡಕ್ಕೆ ಮರಳಿದ್ದಾರೆ. ಜೂನ್ 1 ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಆರಂಭವಾಗುತ್ತಿರುವ ಟೂರ್ನಿಗೆ ಪಿಸಿಬಿ ತಂಡವನ್ನು ಅಂತಿಮಗೊಳಿಸಿದೆ. ಈ ವರ್ಷದ ಜನವರಿ ತಿಂಗಳಲ್ಲಿ ಕೊನೆಯ ಬಾರಿಗೆ ಪಾಕ್ ತಂಡದ ಪರ ಆಡಿದ್ದ ರೌಫ್‌, ಇದೀಗ ವೇಗದ ಚಾಕಚಕ್ಯತೆ ಪ್ರದರ್ಶಿಸಲು ಸಜ್ಜಾಗಿದ್ದಾರೆ.

ತಂಡಕ್ಕೆ ಅಬ್ರಾರ್ ಅಹ್ಮದ್, ಅಜಂ ಖಾನ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಸೈಮ್ ಅಯೂಬ್ ಮತ್ತು ಉಸ್ಮಾನ್ ಖಾನ್ ಅವರು ಇದೇ ಮೊದಲ ಬಾರಿಗೆ ಆಐಕೆಯಾಗಿದ್ದು, ಅನುಭವಿ ವೇಗಿ ಹಸನ್ ಅಲಿಗೆ ಕೊಕ್‌ ನೀಡಲಾಗಿದೆ.

"ಇದು ಅತ್ಯಂತ ಬಲಿಷ್ಠ ಮತ್ತು ಸಮತೋಲಿತ ತಂಡವಾಗಿದೆ. ಯುವ ಮತ್ತು ಅನುಭವಿ ಆಟಗಾರರ ಮಿಶ್ರಣವಾಗಿದೆ. ತಂಡದಲ್ಲಿರುವ ಆಟಗಾರರು ಕೆಲವು ಸಮಯದಿಂದ ಒಟ್ಟಿಗೆ ಆಡುತ್ತಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಟೂರ್ನಿಗೆ ಸಿದ್ಧರಾಗಿದ್ದಾರೆ" ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಒದಿ | ಎಸ್​ಆರ್​​ಹೆಚ್ ವಿರುದ್ಧ ಪವರ್​​ಪ್ಲೇನಲ್ಲಿ 3 ವಿಕೆಟ್ ಪಡೆದು 5 ದಾಖಲೆ ನಿರ್ಮಿಸಿದ ಟ್ರೆಂಟ್ ಬೋಲ್ಟ್

"ಹ್ಯಾರಿಸ್ ರೌಫ್ ಸಂಪೂರ್ಣ ಫಿಟ್ ಆಗಿದ್ದು, ನೆಟ್ಸ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಮುಂಬರುವ ಪಂದ್ಯಗಳಲ್ಲಿ ಅವರು ಮೇಲುಗೈ ಸಾಧಿಸಲಿದ್ದಾರೆ ಎಂದು ನಮಗೆ ವಿಶ್ವಾಸವಿದೆ" ಎಂದು ಹೇಳಿದ್ದಾರೆ.

ಕಳೆದ ಬಾರಿಯ ಫೈನಲಿಸ್ಟ್‌ ಪಾಕಿಸ್ತಾನ

ಯೂನಿಸ್ ಖಾನ್ ನಾಯಕತ್ವದಲ್ಲಿ 2009ರಲ್ಲಿ ಕೊನೆಯ ಬಾರಿ ಟಿ20 ವಿಶ್ವಕಪ್ ಗೆದ್ದಿದ್ದ ಪಾಕಿಸ್ತಾನ ತಂಡ, ಈ ಬಾರಿ ಕಪ್‌ ಗೆಲ್ಲುವ ಶಪಥ ಹಾಕಿಕೊಂಡಿದೆ. ಸದ್ಯ ಇಂಗ್ಲೆಂಡ್ ವಿರುದ್ಧ ದ್ವಿಪಕ್ಷೀಯ ಟಿ20 ಸರಣಿ ಆಡುವ ಸಲುವಾಗಿ ಆಂಗ್ಲರ ನಾಡಿನಲ್ಲಿ ಬೀಡುಬಿಟ್ಟಿದೆ. 2007ರಲ್ಲಿ ಶೋಯೆಬ್ ಮಲಿಕ್ ನಾಯಕತ್ವದಲ್ಲಿ ಹಾಗೂ 2022ರಲ್ಲಿ ಬಾಬರ್ ನಾಯಕತ್ವದಲ್ಲಿ ತಂಡವು ಫೈನಲ್ ತಲುಪಿತ್ತು. ಉಳಿದಂತೆ 2010, 2012 ಮತ್ತು 2021ರಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು.

ವಿಶ್ವಕಪ್‌ನಲ್ಲಿ ಬಾಬಾರ್‌ ಅಜಾಮ್‌ ಬಳಗವು 'ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದರೊಂದಿಗೆ ಸಾಂಪ್ರದಾಯಿಕ ಎದುರಾಳಿ ಭಾರತ, ಐರ್ಲೆಂಡ್, ಕೆನಡಾ ಮತ್ತು ಸಹ ಆತಿಥೇಯ ಅಮೆರಿಕ ಸ್ಥಾನ ಪಡೆದಿದೆ. ಜೂನ್ 6ರಂದು ಡಲ್ಲಾಸ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಪಾಕಿಸ್ತಾನವು ಆರಂಭಿಕ ಪಂದ್ಯ ಆಡಲಿದೆ. ಆ ಬಳಿಕ ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಹೈವೋಲ್ಟೇಜ್‌ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.

ಪಾಕಿಸ್ತಾನ ತಂಡ

ಬಾಬರ್ ಅಜಮ್ (ನಾಯಕ), ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಹ್ಯಾರಿಸ್ ರವೂಫ್, ಇಫ್ತಿಖರ್ ಅಹ್ಮದ್, ಇಮಾದ್ ವಾಸಿಮ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ಖಾನ್.

ಇದನ್ನೂ ಓದಿ | ಟಿ20 ವಿಶ್ವಕಪ್‌ಗೆ ಅಮೆರಿಕ ವಿಮಾನ ಹತ್ತಲಿದ್ದಾರೆ ದಿನೇಶ್‌ ಕಾರ್ತಿಕ್;‌ ಆದ್ರೆ ಆಟಗಾರನಾಗಿ ಅಲ್ಲ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner