ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ಕಠಿಣ ಕ್ರಮಕ್ಕೆ ಪಿಸಿಬಿ ಚಿಂತನೆ; ಬಾಬರ್, ರಿಜ್ವಾನ್ ಸೇರಿ ಪ್ರಮುಖ ಆಟಗಾರರ ವೇತನ ಕಡಿತ!

ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ಕಠಿಣ ಕ್ರಮಕ್ಕೆ ಪಿಸಿಬಿ ಚಿಂತನೆ; ಬಾಬರ್, ರಿಜ್ವಾನ್ ಸೇರಿ ಪ್ರಮುಖ ಆಟಗಾರರ ವೇತನ ಕಡಿತ!

ಟಿ20 ವಿಶ್ವಕಪ್‌ ಟೂರ್ನಿಯಿಂದ ಪಾಕಿಸ್ತಾನ ಕ್ರಿಕೆಟ್‌ ತಂಡ ಬೇಗನೆ ಹೊರಬಿತ್ತು. ಇದಾದ ಬೆನ್ನಲ್ಲೇ ಪಾಕಿಸ್ತಾನ ಆಟಗಾರರ ಕೇಂದ್ರೀಯ ಒಪ್ಪಂದಗಳನ್ನು ಪರಿಶೀಲಿಸಲು ಪಿಸಿಬಿ ಸಜ್ಜಾಗಿದೆ. ಇದು ನಿಜವಾದಲ್ಲಿ ಬಾಬರ್ ಅಜಾಮ್‌ ಸೇರಿದಂತೆ ಪ್ರಮುಖ ಆಟಗಾರರ ವೇತನ ಕಡಿತವಾಗಲಿದೆ.

ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ಕಠಿಣ ಕ್ರಮಕ್ಕೆ ಪಿಸಿಬಿ ಚಿಂತನೆ
ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ಕಠಿಣ ಕ್ರಮಕ್ಕೆ ಪಿಸಿಬಿ ಚಿಂತನೆ (REUTERS)

ಪಾಕಿಸ್ತಾನ ಕ್ರಿಕೆಟ್‌ ತಂಡವು 2024ರ ಟಿ20 ವಿಶ್ವಕಪ್‌ನಿಂದ ಗ್ರೂಪ್ ಹಂತದಲ್ಲೇ ಹೊರಬಿದ್ದಿದೆ.‌ ಸತತ ಎರಡು ಪಂದ್ಯಗಳಲ್ಲಿ ಸೋತ ತಂಡವು ಕಳಪೆ ಪ್ರದರ್ಶನದಿಂದಾಗಿ ಸೂಪರ್‌ 8 ಹಂತಕ್ಕೆ ಪ್ರವೇಶ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ತಂಡದ ಎಲ್ಲಾ ಆಟಗಾರರ ಕೇಂದ್ರೀಯ ಒಪ್ಪಂದಗಳನ್ನು ಮರುಪರಿಶೀಲಿಸಲು ಪಿಸಿಬಿ ಯೋಚಿಸುತ್ತಿದೆ ಎಂದು ತಿಳಿದುಬಂದಿದೆ. ಟೂರ್ನಿಯಿಂದ ಪಾಕ್‌ ತಂಡದ ನಿರ್ಗಮನದಿಂದ ಪಿಸಿಬಿ ಮಾತ್ರವಲ್ಲದೆ ದೇಶದ ಮಾಜಿ ಕ್ರಿಕೆಟಿಗರು ಕೂಡಾ ಆಕ್ರೋಶಗೊಂಡಿದ್ದಾರೆ. ಹೀಗಾಗಿ ತಂಡದ ನಾಯಕ ಬಾಬರ್ ಅಜಮ್ ಸೇರಿದಂತೆ ಸ್ಟಾರ್ ಆಟಗಾರರಾದ ಮೊಹಮ್ಮದ್ ರಿಜ್ವಾನ್, ಶಾಹೀನ್ ಶಾ ಅಫ್ರಿದಿ ಸೇರಿದಂತೆ ಕ್ರಿಕೆಟಿಗರ ವೇತನ ಕಡಿತ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಕನಿಷ್ಠ ಸೆಮಿಫೈನಲ್‌ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದ ತಂಡವು, ಅಚ್ಚರಿಯ ರೀತಿಯಲ್ಲಿ ಗ್ರೂಪ್‌ ಹಂತದಲ್ಲೇ ಹೊರಬಿದ್ದಿದೆ. ತಂಡವು ಮುಂದೆ ಭಾನುವಾರ ಐರ್ಲೆಂಡ್ ವಿರುದ್ಧ ಪಂದ್ಯವನ್ನು ಆಡಲಿದೆ. ಆದರೆ, ಈ ಪಂದ್ಯ ಔಪಚಾರಿಕ ಅಷ್ಟೇ. ಶುಕ್ರವಾರ ನಡೆಯಬೇಕಿದ್ದ ಐರ್ಲೆಂಡ್ ಹಾಗೂ ಯುಎಸ್‌ಎ ನಡುವಿನ ಪಂದ್ಯವು ಮಳೆಯಿಂದ ರದ್ದಾದ ಬಳಿಕ, ಆತಿಥೇಯ ಯುಎಸ್ಎ ಸೂಪರ್ ಎಂಟಕ್ಕೆ ಲಗ್ಗೆ ಹಾಕಿತು. ಅದರೊಂದಿಗೆ ಪಾಕ್‌ ಅಧಿಕೃತವಾಗಿ ಟೂರ್ನಿಯಿಂದ ಎಲಿಮನೇಟ್‌ ಆಯ್ತು.

ಮರುಪರಿಶೀಲನೆಗೆ ಒತ್ತಾಯ

ಕೆಲವು ಅಧಿಕಾರಿಗಳು ಮತ್ತು ಮಾಜಿ ಆಟಗಾರರು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ, ಈ ಹಿಂದೆ ಝಾಕಾ ಅಶ್ರಫ್ ಅವರ ಅಧಿಕಾರಾವಧಿಯಲ್ಲಿ ಆಟಗಾರರಿಗೆ ನೀಡಲಾದ ಕೇಂದ್ರ ಒಪ್ಪಂದಗಳನ್ನು ಮರುಪರಿಶೀಲಿಸುವಂತೆ ಸಲಹೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

“ಪಿಸಿಬಿ ಕೇಂದ್ರೀಯ ಒಪ್ಪಂದಗಳ ಮರು ಮೌಲ್ಯಮಾಪನ ನಡೆಯಬಹುದು. ತಂಡದ ಇತ್ತೀಚಿನ ಕಳಪೆ ಪ್ರದರ್ಶನಗಳಿಗೆ ಅಧ್ಯಕ್ಷರು ಕಟುವಾಗಿ ಪ್ರತಿಕ್ರಿಯಿಸಲು ನಿರ್ಧರಿಸಿದರೆ; ಆಟಗಾರರ ಸಂಬಳ, ಶುಲ್ಕವನ್ನು ಕಡಿತಗೊಳಿಸಬಹುದು” ಎಂದು ವಿಶ್ವಾಸಾರ್ಹ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ. ಇದು ಆಟಗಾರರನ್ನು ಆತಂಕಕ್ಕೆ ದೂಡಿದೆ.

“ಸದ್ಯ ಯಾವ ನಿರ್ಧಾರವೂ ಅಂತಿಮವಾಗಿಲ್ಲ. ಆದರೆ ಶುಲ್ಕ ಕಡಿತ ಕುರಿತ ಬಲವಾದ ಕ್ರಮವನ್ನು ಮಂಡಳಿಯೊಳಗೆ ಅಧ್ಯಕ್ಷರೊಂದಿಗೆ ಚರ್ಚಿಸಲಾಗಿದೆ” ಎಂದು ಮೂಲಗಳು ತಿಳಿಸಿವೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನವು ಯುಎಸ್‌ಎ ವಿರುದ್ಧ ಅರಗಿಸಿಕೊಳ್ಳಲಾಗದ ಸೋಲು ಕಂಡಿತು. 'ಎ' ಗುಂಪಿನ ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಸೂಪರ್ ಓವರ್‌ನಲ್ಲಿ ಸೋತ ತಂಡವು, ಆ ಬಳಿಕ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧವೂ ಮುಗ್ಗರಿಸಿತು. ಕೇವಲ 120 ರನ್‌ಗಳನ್ನು ಬೆನ್ನಟ್ಟಲು ವಿಫಲವಾಯಿತು.

ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಸಾಧನೆ

ಒಟ್ಟು ಒಂಬತ್ತು ಆವೃತ್ತಿಗಳಲ್ಲಿ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲೇ ಹೊರಬಿದ್ದಿರುವುದು ಇದು ಮೂರನೇ ಬಾರಿ. ಯೂನಿಸ್ ಖಾನ್ ನಾಯಕತ್ವದಲ್ಲಿ 2009ರಲ್ಲಿ ವಿಶ್ವಕಪ್ ಗೆದ್ದಿದ್ದ ಪಾಕ್‌, ಆ ನಂತರ ಚಾಂಪಿಯನ್‌ ಪಟ್ಟ ಅಲಂಕರಿಸಿಲ್ಲ. ಶೋಯೆಬ್ ಮಲಿಕ್ (2007) ಹಾಗೂ ಬಾಬರ್ ಅಜಮ್ (2022) ನಾಯಕತ್ವದಲ್ಲಿ ಎರಡು ಬಾರಿ ತಂಡ ಫೈನಲ್ ತಲುಪಿತ್ತು. ಅದನ್ನು ಹೊರತುಪಡಿಸಿ 2010, 2012 ಮತ್ತು 2021 ರಲ್ಲಿ ಸೆಮಿಫೈನಲ್ ತಲುಪಿತ್ತು.

ಬಾಬರ್ ಅಜಮ್ ನೇತೃತ್ವದಲ್ಲಿ ಪಾಕ್‌ ತಂಡವು ಕಳೆದ ವರ್ಷ ನಡೆದ ಏಷ್ಯಾಕಪ್ ಮತ್ತು ವಿಶ್ವಕಪ್‌ನಲ್ಲಿಯೂ ಕಳಪೆ ಪ್ರದರ್ಶನ ನೀಡಿತ್ತು. ಈ ಬಾರಿಯ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ನಡೆದ ನ್ಯೂಜಿಲೆಂಡ್‌ ಬಿ ತಂಡದ ವಿರುದ್ಧ ತವರಿನ ಸರಣಿಯಲ್ಲಿ 2-2ರಿಂದ ಡ್ರಾ ಸಾಧಿಸಿತು. ಆ ಬಳಿಕ ಐರ್ಲೆಂಡ್ ವಿರುದ್ಧ ಟಿ20 ಪಂದ್ಯ ಸೋತರೆ, ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲೂ ಮುಗ್ಗರಿಸಿತು.

ಈ ಬಾರಿಯ ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮೊದಲು, ಪಂದ್ಯಾವಳಿಯಲ್ಲಿ ಗೆದ್ದರೆ ಪಾಕ್‌ ತಂಡದ ಪ್ರತಿ ಆಟಗಾರನಿಗೆ ತಲಾ 1 ಲಕ್ಷ ಯುಎಸ್‌ ಡಾಲರ್‌ ಬೋನಸ್ ಪಾವತಿ ಮಾಡಲಾಗುವುದು ಎಂದು ಪಿಸಿಬಿ ಅಧ್ಯಕ್ಷ ನಖ್ವಿ ಘೋಷಿಸಿದ್ದರು. ಇದೀಗ ತಂಡ ತಂಡ ಹೊರಬಿದ್ದಿದೆ. ಈಗ ಇರುವ ಸಂಬಳವನ್ನೇ ಕಡಿತ ಮಾಡುವ ಸುಳಿವು ಸಿಕ್ಕಿದೆ.