ಜಿನ್ನಾ-ಗಾಂಧಿ ಟ್ರೋಫಿ; ಭಾರತ, ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿಗೆ ಪಿಸಿಬಿ ಪ್ರಸ್ತಾಪ
ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಕ್ರಿಕೆಟ್ ಸಂಬಂಧವನ್ನು ಮತ್ತೆ ಪುನರುಜ್ಜೀವನಗೊಳಿಸುವ ಪ್ರಯತ್ನಕ್ಕೆ ಪಿಸಿಬಿ ಕೈ ಹಾಕಿದೆ. ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆಸುವ ಕುರಿತಾಗಿ ಬಿಸಿಸಿಐ ಮುಂದೆ ಪ್ರಸ್ತಾಪವಿಟ್ಟಿದೆ.
ನೆರೆಹೊರೆಯ ಎರಡು ದೇಶಗಳಾದ ಭಾರತ ಹಾಗೂ ಪಾಕಿಸ್ತಾನಗಳ ನಡುವೆ ರಾಜಕೀಯ ಉದ್ವಿಗ್ನತೆಗೆ ಸುದೀರ್ಘ ವರ್ಷಗಳ ಇತಿಹಾಸವಿದೆ. ಈ ರಾಜಕೀಯ ಉದ್ವಿಗ್ನತೆಯು ಕ್ರೀಡಾಕ್ಷೇತ್ರಕ್ಕೂ ವ್ಯಾಪಿಸಿರುವುದು ಹಳೆಯ ಮಾತು. ಈ ನಡುವೆ ಉಭಯ ರಾಷ್ಟ್ರಗಳ ಕ್ರಿಕೆಟ್ ತಂಡಗಳ ನಡುವೆ ಪಂದ್ಯಗಳು ನಡೆಯುತ್ತಿವೆಯಾದರೂ, ದ್ವಿಪಕ್ಷೀಯ ಸರಣಿ ನಡೆಯದೇ ಸರಿಸುಮಾರು 10 ವರ್ಷಗಳು ಕಳೆದಿವೆ. ಆದರೆ, ಸದ್ಯ ಈ ಕುರಿತು ಚರ್ಚೆ ನಡೆಯುತ್ತಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಯ ನಿರ್ವಹಣಾ ಸಮಿತಿಯ ಅಧ್ಯಕ್ಷ ಝಾಕಾ ಅಶ್ರಫ್ (Zaka Ashraf) ಅವರು, ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಕ್ರಿಕೆಟ್ ಸಂಬಂಧವನ್ನು ಮತ್ತೆ ಪುನರುಜ್ಜೀವನಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆಸುವ ಕುರಿತಾಗಿ ಅವರು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಒಂದು ಹೆಸರನ್ನು ಕೂಡಾ ಅಶ್ರಫ್ ಪ್ರಸ್ತಾಪಿಸಿದ್ದು, ‘ಜಿನ್ನಾ-ಗಾಂಧಿ ಟ್ರೋಫಿ’ಯನ್ನು ಜಂಟಿಯಾಗಿ ನಡೆಸುವ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI)ಗೆ ಪ್ರಸ್ತಾಪಿಸಿದ್ದಾರೆ. ಈ ಕುರಿತು ಪಾಕಿಸ್ತಾನದ ಮಾಧ್ಯಮ ಸಂಸ್ಥೆ ARY ನ್ಯೂಸ್ ವರದಿ ಮಾಡಿದೆ.
“ನಾವು ಜಿನ್ನಾ-ಗಾಂಧಿ ಟ್ರೋಫಿಯನ್ನು(Jinnah-Gandhi trophy) ನಡೆಸಬೇಕೆಂದು ನಾನು ಬಿಸಿಸಿಐಗೆ ಸಲಹೆ ನೀಡಿದ್ದೇನೆ” ಎಂದು ARY ನ್ಯೂಸ್ ಮಾಧ್ಯಮವು 'ಬೌನ್ಸರ್' ಕಾರ್ಯಕ್ರಮಲ್ಲಿ ಅಶ್ರಫ್ ಹೇಳಿಕೆಯನ್ನು ಉಲ್ಲೇಖಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳು ಜಗತ್ತಿನ ಅತಿದೊಡ್ಡ ಕ್ರಿಕೆಟ್ ಮುಖಾಮುಖಿಗಳಾಗಿವೆ ಎಂದು ಅಶ್ರಫ್ ಹೇಳಿದ್ದಾರೆ. ಆದರೆ ಭಾರತ ತಂಡದ ಪಾಕಿಸ್ತಾನ ಪ್ರವಾಸವು ಸಾಕಾರಗೊಳ್ಳದಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2013ರ ಬಳಿಕ ನಡೆದಿಲ್ಲ ದ್ವಿಪಕ್ಷೀಯ ಸರಣಿ
ಸಾಂಪ್ರದಾಯಿಕ ಎದುರಾಳಿಗಳಾದ ಇಂಡೋ-ಪಾಕ್ ತಂಡಗಳು 2012-13ರ ನಂತರ ದ್ವಿಪಕ್ಷೀಯ ಸರಣಿಯಲ್ಲಿ ಆಡಿಲ್ಲ. ಆ ಸಮಯದಲ್ಲಿ ಭಾರತವು ಮೂರು ಏಕದಿನ ಹಾಗೂ ಎರಡು ಟಿ20 ಪಂದ್ಯಗಳ ಸರಣಿಗೆ ಆತಿಥ್ಯ ವಹಿಸಿತ್ತು. ಆದರೆ, ಉಭಯ ರಾಷ್ಟ್ರಗಳು ಐಸಿಸಿ ನಡೆಸುವ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿವೆ. ಇತ್ತೀಚೆಗೆ ಏಷ್ಯಾಕಪ್‌ನಲ್ಲಿ ರೋಹಿತ್ ಶರ್ಮಾ ಹಾಗೂ ಬಾಬರ್ ಅಜಾಮ್ ಬಳಗ ಮುಖಾಮುಖಿಯಾಗಿತ್ತು.
ಸದ್ಯ ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನ ತಂಡವು 7 ವರ್ಷಗಳ ಬಳಿಕ ಭಾರತಕ್ಕೆ ಬಂದಿದೆ. ಅಹಮದಾಬಾದ್‌ನಲ್ಲಿ ನಡೆಯುವ ವಿಶ್ವಕಪ್ ಪಂದ್ಯದಲ್ಲಿ ಅಕ್ಟೋಬರ್ 14ರಂದು ಮತ್ತೊಮ್ಮೆ ಮುಖಾಮುಖಿಯಾಗಲಿವೆ.
ಏಷ್ಯಾಕಪ್ ಸಮಯದಲ್ಲಿ ಉಭಯ ರಾಷ್ಟ್ರಗಳ ನಡುವೆ ಸಂಬಂಧ ಹಳಸಿತ್ತು. ಟೂರ್ನಿಗೆ ಆತಿಥ್ಯ ವಹಿಬೇಕಿದ್ದ ಪಾಕಿಸ್ತಾನಕ್ಕೆ ಭಾರತ ತಂಡ ಪ್ರವಾಸ ಮಾಡುವುದಿಲ್ಲ ಎಂದು ಖಡಕ್ ಆಗಿ ಹೇಳಿತ್ತು. ಇದಕ್ಕೆ ಪ್ರತಿಯಾಗಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸುವುದಾಗಿ ಪಿಸಿಬಿ ಬೆದರಿಕೆ ಹಾಕಿತ್ತು. ಆದರೆ, ಅಂತಿಮವಾಗಿ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಯಿತು. ಇದೀಗ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಭಾರತಕ್ಕೆ ಬಂದಿಳಿದಿದೆ.
ಕ್ರಿಕೆಟ್ ಕುರಿತಾಗಿಯೂ ಭಾರತದ ಬಿಸಿಸಿಐ ಹಾಗೂ ಪಾಕಿಸ್ತಾನದ ಪಿಸಿಬಿ ನಡುವೆ ಮುಕ್ತ ಮಾತುಕತೆ ನಡೆಯುತ್ತಿಲ್ಲ. ಮೇಲ್ನೋಟಕ್ಕೆ ಹಲವು ದಶಕಗಳಿಂದ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸ್ನೇಹ ಸಂಬಂಧ ಉತ್ತಮವಾಗಿಲ್ಲ. ಆದರೆ, ನೆರೆಹೊರೆಯ ದೇಶಗಳ ನಡುವೆ ಉತ್ತಮ ಸಂಬಂಧ ಕಾಪಾಡುವುದು ಆಯಾ ದೇಶಗಳ ಪ್ರಬುದ್ಧ ನಡೆಯನ್ನು ಸೂಚಿಸುತ್ತದೆ. ಯಾವುದೇ ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕ್ಷೇತ್ರವೇ ಕ್ರೀಡೆ. ಸದ್ಯ ಪಾಕಿಸ್ತಾನವು ದ್ವಿಪಕ್ಷೀಯ ಸರಣಿಯ ಪ್ರಸ್ತಾಪವಿಟ್ಟಿದೆ. ಇದಕ್ಕೆ ಬಿಸಿಸಿಐ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ. ಒಂದು ವೇಳೆ ಉಭಯ ತಂಡಗಳ ನಡುವೆ ಸರಣಿಗೆ ಬಿಸಿಸಿಐ ಒಪ್ಪಿಗೆ ಸೂಚಿಸಿದರೆ, ಅದು ಐತಿಹಾಸಿಕ ನಿರ್ಧಾರವಾಗಲಿದೆ.