ಆಡಿದ್ದು 1 ಪಂದ್ಯ, ಖರ್ಚು ಮಾಡಿದ್ದು 869 ಕೋಟಿ ರೂ; ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿದ ಪಿಸಿಬಿಗೆ 85 ಶೇ. ನಷ್ಟ!
ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಿದ ಪಾಕಿಸ್ತಾನ ರಾವಲ್ಪಿಂಡಿ, ಲಾಹೋರ್ ಮತ್ತು ಕರಾಚಿ ಸ್ಟೇಡಿಯಂಗಳ ನವೀಕರಣಕ್ಕೆ ಸುಮಾರು 58 ಮಿಲಿಯನ್ ಡಾಲರ್ ಖರ್ಚು ಮಾಡಿತು. ತನ್ನ ಬಜೆಟ್‌ಗಿಂತ ಹೆಚ್ಚು ಖರ್ಚು ಮಾಡಿದ ಪಿಸಿಬಿ ಈಗ ಭಾರಿ ನಷ್ಟದಲ್ಲಿದೆ.

ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅದೃಷ್ಟ ಕೈಕೊಟ್ಟಿದ್ದರೆ, ಪಿಸಿಬಿ ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮುಟ್ಟಿದಲ್ಲೆಲ್ಲಾ ಕೈ ಸುಟ್ಟುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ (Champions Trophy 2025) ಪಂದ್ಯಾವಳಿ ನಡೆಯಿತು. ಅರ್ಧಕ್ಕಿಂತ ಹೆಚ್ಚಿನ ಪಂದ್ಯಗಳು ನಡೆದಿದ್ದೇ ದುಬೈನಲ್ಲಾದರೂ, ಆತಿಥ್ಯದ ಹೆಸರು ಮಾತ್ರ ಪಾಕಿಸ್ತಾನಕ್ಕೆ. ಕಳೆದ 29 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ನಡೆದ ಇದೇ ಮೊದಲ ಜಾಗತಿಕ ಕ್ರಿಕೆಟ್ ಪಂದ್ಯಾವಳಿ ಇದಾಗಿದ್ದು, ಪಾಕಿಸ್ತಾನಕ್ಕೆ ದೊರಕಿದ್ದು ಸೋಲಿನ ಕಹಿ ಮಾತ್ರ. ಅಷ್ಟೇ ಅಲ್ಲ. ಟೂರ್ನಿ ಆಯೋಜಿಸಿ ಪಿಸಿಬಿಯು ನಷ್ಟದ ಮೇಲೆ ನಷ್ಟ ಅನುಭವಿಸಿದೆ.
ಸಂಪೂರ್ಣ ಪಂದ್ಯಾವಳಿಯ ಸಮಯದಲ್ಲಿ ಪಾಕಿಸ್ತಾನ ತವರಿನಲ್ಲಿ ಆಡಿದ್ದು ಕೇವಲ ಒಂದು ಪೂರ್ಣ ಪಂದ್ಯವನ್ನು ಮಾತ್ರ. ಇಷ್ಟಕ್ಕೆ ಬರೋಬ್ಬರಿ 869 ಕೋಟಿ ರೂ.ಗಳನ್ನು ಖರ್ಚು ಮಾಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಶೇಕಡಾ 85 ರಷ್ಟು ನಷ್ಟವನ್ನು ಅನುಭವಿಸಿದೆ ಎಂದು ವರದಿಯಾಗಿದೆ.
ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಚಾಂಪಿಯನ್ಸ್ ಟ್ರೋಫಿಗಾಗಿ ಪಿಸಿಬಿಯು ರಾವಲ್ಪಿಂಡಿ, ಲಾಹೋರ್ ಮತ್ತು ಕರಾಚಿ ಸ್ಟೇಡಿಯಂಗಳನ್ನು ನವೀಕರಿಸಿತು. ಇದಕ್ಕಾಗಿ ಸುಮಾರು 58 ಮಿಲಿಯನ್ ಡಾಲರ್ (503 ಕೋಟಿ ರೂ.) ಖರ್ಚು ಮಾಡಿದೆ. ಇದು ಅವರ ಬಜೆಟ್‌ಗಿಂತ ಶೇಕಡಾ 50ರಷ್ಟು ಹೆಚ್ಚು. ಇದಲ್ಲದೆ, ಟೂರ್ನಿಯ ಈವೆಂಟ್ ಸಿದ್ಧತೆಗಳಿಗಾಗಿ ಹೆಚ್ಚುವರಿ 40 ಮಿಲಿಯನ್ ಡಾಲರ್ (347 ಕೋಟಿ ರೂ) ಖರ್ಚು ಮಾಡಿದೆ. ಆದರೆ, ಹೋಸ್ಟಿಂಗ್ ಶುಲ್ಕ ಮತ್ತು ಟಿಕೆಟ್ ಮಾರಾಟ ಮತ್ತು ಪ್ರಾಯೋಜಕತ್ವದಿಂದ ಪಿಸಿಬಿಇಗೆ ಬಂದಿದ್ದು ಕೇವಲ 6 ಮಿಲಿಯನ್ ಡಾಲರ್ (52 ಕೋಟಿ ರೂ.) ಮಾತ್ರ. ಅಂದರೆ, ಪಿಸಿಬಿಗೆ ಹೆಚ್ಚೂ ಕಡಿಮೆ 85 ಶೇ. ನಷ್ಟವಾಗಿದೆ.
ಆಡಿದ್ದು ಒಂದೇ ಪಂದ್ಯ, ಅದರಲ್ಲೂ ಸೋಲು
ಪಾಕಿಸ್ತಾನ ತಂಡವು ಟೂರ್ನಿಯುದ್ದಕ್ಕೂ ತವರು ನೆಲದಲ್ಲಿ ಆಡಿದ್ದು ಕೇವಲ ಒಂದೇ ಪಂದ್ಯ ಎಂಬುದು ಗಮನಾರ್ಹ. ಅದು ಕೂಡಾ ನ್ಯೂಜಿಲೆಂಡ್ ವಿರುದ್ಧ ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ರಿಜ್ವಾನ್ ಬಳಗ ಸೋಲು ಕಂಡಿತ್ತು. ರಾವಲ್ಪಿಂಡಿಯಲ್ಲಿ ನಡೆಯಬೇಕಿದ್ದ ಬಾಂಗ್ಲಾದೇಶ ವಿರುದ್ಧ ಪಂದ್ಯ ರದ್ದಾಗಿತ್ತು. ಹೀಗಾಗಿ ಪಾಕಿಸ್ತಾನ ತಂಡಕ್ಕೆ ಆತಿಥ್ಯ ಟೂರ್ನಿಯಲ್ಲಿ ಎಲ್ಲಾ ರೀತಿಯಲ್ಲೂ ಹಿನ್ನಡೆಯಾಗಿದೆ. ಟೂರ್ನಿಯಲ್ಲಿ ಒಂದೇ ಒಂದು ಪಂದ್ಯದಲ್ಲಿಯೂ ಗೆಲುವಿನ ರುಚಿ ನೋಡಲಾಗದೆ ಹೊರಬಿತ್ತು. ಕೊನೆಗೆ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಆಟಗಾರರ ಸಂಬಳಕ್ಕೂ ಕತ್ತರಿ
ಈ ನಡುವೆ ದೇಶದ ಆಟಗಾರರ ಸಂಬಳಕ್ಕೂ ಪಿಸಿಬಿ ಕತ್ತರಿ ಹಾಕಿದೆ ಎಂಬ ವರದಿ ಇದೆ. ರಾಷ್ಟ್ರೀಯ ಟಿ20 ಚಾಂಪಿಯನ್‌ಶಿಪ್‌ನಲ್ಲಿ ಪಂದ್ಯದ ಶುಲ್ಕವನ್ನು ಶೇಕಡಾ 90ರಷ್ಟು ಮತ್ತು ಮೀಸಲು ಆಟಗಾರರ ಪಾವತಿಗಾಗಿ ಶೇಕಡಾ 87.5 ರಷ್ಟು ಕಡಿಮೆ ಮಾಡಿರುವುದರಿಂದ ಆಟಗಾರರು ಆರ್ಥಿಕ ಪರಿಣಾಮಗಳನ್ನು ಎದುರಿಸಬೇಕಾಯಿತು ಎಂದು ವರದಿ ತಿಳಿಸಿದೆ. ಒಂದು ಕಾಲದಲ್ಲಿ ಪಂಚತಾರಾ ಹೋಟೆಲ್‌ಗಳಲ್ಲಿ ತಂಗಿದ್ದ ಈ ಕ್ರಿಕೆಟಿಗರು, ಈಗ ಸಾಧಾರಣ ಬಜೆಟ್‌ನ ವಸತಿಗಳಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಆದರೆ ಆಡಳಿತ ಹಂತದಲ್ಲಿರುವ ನಾಯಕರು ಮಾತ್ರ ಲಕ್ಷಾಂತರ ಸಂಬಳವನ್ನು ಪಡೆಯುತ್ತಲೇ ಇದ್ದಾರೆ ಎಂದು ವರದಿ ತಿಳಿಸಿದೆ.