ಪಿಎಸ್ಎಲ್‌ನಿಂದ ಹಿಂದೆ ಸರಿದು ಇತರ ಫ್ರಾಂಚೈಸಿ ಲೀಗ್ ಆಯ್ಕೆ ಮಾಡಿಕೊಂಡ ವಿದೇಶಿ ಕ್ರಿಕೆಟಿಗರು; ಚಿಂತೆಯಲ್ಲಿ ಪಿಸಿಬಿ
Pakistan Super League: ಫೆಬ್ರವರಿ 17ರಿಂದ ಪಿಎಸ್ಎಲ್ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನವೇ ಹಲವಾರು ಆಟಗಾರರು ಬಿಪಿಎಲ್, ಐಎಲ್‌ಟಿ20 ಮತ್ತು ಎಸ್ಎ 20 ಲೀಗ್‌ಗಳಲ್ಲಿ ಆಡುವ ಸಲುವಾಗಿ ಪಾಕಿಸ್ತಾನ ಸೂಪರ್ ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಇದರಿಂದ ಪಿಸಿಬಿ ಮತ್ತು ಫ್ರಾಂಚೈಸಿಗಳಿಗೆ ತೀವ್ರ ಹೊಡೆತ ಬಿದ್ದಿದೆ.
ಘಟಾನುಘಟಿ ಅಂತಾರಾಷ್ಟ್ರೀಯ ಕ್ರಿಕೆಟಿಗರು ಪಾಕಿಸ್ತಾನ ಸೂಪರ್ ಲೀಗ್ (Pakistan Super League -PSL) ನಿಂದ ಹಿಂದೆ ಸರಿದಿದ್ದಾರೆ. ಇತರ ಫ್ರಾಂಚೈಸಿ ಆಧಾರಿತ ಪಂದ್ಯಾವಳಿಗಳು ಕೂಡಾ ಏಕಕಾಲದಲ್ಲಿ ನಡೆಯುತ್ತಿದ್ದು, ಅನೇಕ ಕ್ರಿಕೆಟ್ ಮಂಡಳಿಗಳು ಕೂಡಾ ತಮ್ಮ ಆಟಗಾರರಿಗೆ ದೇಶೀಯ ಟಿ20 ಲೀಗ್‌ಗಳಲ್ಲಿ ಸ್ಪರ್ಧಿಸಲು ಅನುಮತಿ ನಿರಾಕರಿಸಿವೆ. ಇದು ಪಿಎಸ್‌ಎಲ್ ಫ್ರಾಂಚೈಸಿಗಳ ನಿದ್ದೆಗೆಡಿಸಿವೆ. ಅಲ್ಲದೆ ಪಿಸಿಬಿಗೂ ಚಿಂತೆ ಮೂಡಿಸಿದೆ.
ಪಾಕಿಸ್ತಾನದ ಜನಪ್ರಿಯ ಕ್ರಿಕೆಟ್ ಲೀಗ್ ಪಿಎಸ್ಎಲ್ ಟೂರ್ನಿಯು ಫೆಬ್ರವರಿ 17ರಂದು ಆರಂಭಗೊಳ್ಳಲಿದೆ. ಲಾಹೋರ್‌ನಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ. ಈ ನಡುವೆ ಹಲವು ವಿದೇಶಿ ಆಟಗಾರರು ಬಾಂಗ್ಲಾದೇಶ ಪ್ರೀಮಿಯರ್ ಲೀಗ್, ಐಎಲ್‌ಟಿ 20 ಮತ್ತು ಎಸ್ಎ 20 ಲೀಗ್‌ಗಳಲ್ಲಿ ಆಡುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಪಿಎಸ್‌ಎಲ್‌ನ ಎಲ್ಲಾ ಆರು ಫ್ರಾಂಚೈಸಿಗಳಿಗೆ ತೀವ್ರ ಹೊಡೆತ ಬಿದ್ದಿದೆ.
ಮುಲ್ತಾನ್ ಸುಲ್ತಾನ್ಸ್ ತಂಡಕ್ಕೆ ಆರಂಭದಲ್ಲಿ ಸೇರಿಕೊಂಡಿದ್ದ ಹಲವಾರು ಆಟಗಾರರು ಈ ಬಾರಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇಂಗ್ಲೆಂಡ್ ವೇಗದ ಬೌಲರ್ ರೀಸ್ ಟಾಪ್ಲೆ ಗಾಯದಿಂದಾಗಿ ಹಿಂದೆ ಸರಿದಿದ್ದಾರೆ. ಪಿಎಸ್ಎಲ್‌ನಲ್ಲಿ ಆಡಲು ಟಾಪ್ಲೆಗೆ ನಿರಾಕ್ಷೇಪಣಾ ಪ್ರಮಾಣಪತ್ರ (NOC) ನೀಡಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹೇಳಿದೆ.
ಇದನ್ನೂ ಓದಿ | ಅತ್ತಿಗೆ ದಪ್ಪ ಆಗಿದ್ದಾರೆ ಎಂದ ನೆಟ್ಟಿಗನ ಬಾಯಿ ಮುಚ್ಚಿಸಿದ ಬುಮ್ರಾ ಪತ್ನಿ; ನಡಿ ಇಲ್ಲಿಂದ ಎಂದ ಸಂಜನಾ ಗಣೇಶನ್
ಇದೇ ವೇಳೆ ಪಿಎಸ್ಎಲ್‌ಗೆ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ನೀಡುವ ಬಗ್ಗೆ ಇತರ ಕೆಲವು ಮಂಡಳಿಗಳು ಕೂಡಾ ಆಲೋಚಿಸುತ್ತಿವೆ. ಕಳೆದ ವರ್ಷ ಮೊಣಕೈ ಶಸ್ತ್ರಚಿಕಿತ್ಸೆಯಿಂದ ಇನ್ನೂ ಚೇತರಿಸಿಕೊಳ್ಳದ ಪಾಕಿಸ್ತಾನದ ವೇಗದ ಬೌಲರ್ ಎಹ್ಸಾನುಲ್ಲಾ ಅವರನ್ನು, ಈ ಬಾರಿ ಮುಲ್ತಾನ್ ತಂಡ ಮಿಸ್ ಮಾಡಿಕೊಳ್ಳಲಿದೆ.
ಪೇಶಾವರ್ ಝಲ್ಮಿ ತಂಡದಿಂದ ದಕ್ಷಿಣ ಆಫ್ರಿಕಾದ ಲುಂಗಿ ಎನ್ಗಿಡಿ ಹೊರಬಂದಿದ್ದರೆ, ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು ಶ್ರೀಲಂಕಾದ ವನಿಂದು ಹಸರಂಗ ಸೇವೆಯನ್ನು ಕಳೆದುಕೊಂಡಿದೆ.
ಪ್ರಮುಖ ಆಟಗಾರರೇ ಅಲಭ್ಯ
ವೆಸ್ಟ್ ಇಂಡೀಸ್ ಕ್ರಿಕೆಟಿಗರಾದ ಶಾಯ್ ಹೋಪ್, ಮ್ಯಾಥ್ಯೂ ಫೋರ್ಡ್ ಮತ್ತು ಅಕೆಲ್ ಹೊಸೈನ್, ದಕ್ಷಿಣ ಆಫ್ರಿಕಾದ ತಬ್ರೈಜ್ ಶಂಶಿ ಮತ್ತು ರಾಸ್ಸಿ ವಾನ್ ಡೆರ್ ಡಸ್ಸೆನ್, ಇಂಗ್ಲೆಂಡ್‌ನ ಜೇಮ್ಸ್ ವಿನ್ಸ್, ಅಫ್ಘಾನಿಸ್ತಾನದ ನೂರ್ ಅಹ್ಮದ್ ಮತ್ತು ನವೀನ್ ಉಲ್ ಹಕ್ ಕೂಡ ಸಂಪೂರ್ಣ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ.
ಪಿಸಿಬಿಗೆ ಫ್ರಾಂಚೈಸಿ ಮಾಲೀಕರ ಮನವಿ
ಮೂರು ಲೀಗ್‌ಗಳು ಒಂದರ ನಂತರ ಒಂದರಂತೆ ನಡೆಯುತ್ತಿರುವುದರಿಂದ ಪಿಎಸ್‌ಲ್‌ಗೆ ಸಂಕಷ್ಟ ಎದುರಾಗಿದೆ. ಪ್ರಮುಖ ಆಟಗಾರರು ಬೇರೆ ಬೇರೆ ಪಂದ್ಯಾವಳಿಯಲ್ಲಿ ಆಡುತ್ತಿರುವುದರಿಂದ ಪಿಎಸ್‌ಎಲ್ ವೇಳಾಪಟ್ಟಿಯನ್ನು ಮರುಪರಿಶೀಲಿಸುವಂತೆ ಫ್ರಾಂಚೈಸಿ ಮಾಲೀಕರು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ | Sarfaraz Khan: ಕೆಎಲ್ ರಾಹುಲ್ ಅಲಭ್ಯ; ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ಗೆ ಸರ್ಫರಾಜ್ ಖಾನ್ ಪದಾರ್ಪಣೆ
“ಎಸ್ಎ20 ಇತ್ತೀಚೆಗಷ್ಟೇ ಮುಕ್ತಾಯಗೊಂಡಿತು. ಪಿಎಸ್ಎಲ್ ಪ್ರಾರಂಭವಾಗುವ ದಿನದಂದು ಐಎಲ್‌ಟಿ 20 ಕೊನೆಗೊಳ್ಳುತ್ತದೆ. ಹೀಗಾಗಿ ಬಲಿಷ್ಠ ಆಟಗಾರರನ್ನು ತಂಡಕ್ಕೆ ಕರೆಸಿಕೊಳ್ಳುವುದು ಕಷ್ಟವಾಗುತ್ತಿದೆ” ಎಂದು ಫ್ರಾಂಚೈಸಿಗಳು ಹೇಳಿವೆ.
“ಪಿಎಸ್ಎಲ್ ವೇಳಾಪಟ್ಟಿಯನ್ನು ಬದಲಾಯಿಸುವ ಅವಶ್ಯಕತೆಯಿದೆ. ಇಲ್ಲದಿದ್ದರೆ ಪ್ರಮುಖ ವಿದೇಶಿ ಆಟಗಾರರನ್ನು ಕಳೆದುಕೊಳ್ಳುತ್ತೇವೆ. ಹೀಗಾದರೆ ಪಿಎಸ್‌ಎಲ್ ತನ್ನ ಮೋಡಿಯನ್ನು ಕಳೆದುಕೊಳ್ಳುತ್ತದೆ” ಎಂದು ವಿವಿಧ ಫ್ರಾಂಚೈಸಿಗಳ ಮಾಲೀಕರು ಹೇಳಿದ್ದಾರೆ.
ಇದನ್ನೂ ಓದಿ | ಕೆಎಸ್ ಭರತ್ ಬದಲಿಗೆ ಯುವ ಆಟಗಾರನಿಗೆ ಅವಕಾಶ; ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ಗೆ ಧ್ರುವ್ ಜುರೆಲ್ ಪದಾರ್ಪಣೆ ಸಾಧ್ಯತೆ
(This copy first appeared in Hindustan Times Kannada website. To read more like this please logon to kannada.hindustantimes.com)